'ಪುಷ್ಪ-3' ಚಿತ್ರದಲ್ಲಿ ವಿಜಯ್ ದೇವರಕೊಂಡ ಪಾತ್ರ ಏನು? ಆ ಟೀಸರ್ ವೈರಲ್
'ಪುಷ್ಪ'-2 ಸಿನಿಮಾ ತೆರೆಗೆ ಬಂದು ಸದ್ದು ಮಾಡ್ತಿದೆ. ಮತ್ತೊಮ್ಮೆ ಪುಷ್ಪರಾಜ್ ದರ್ಬಾರ್ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಆದರೆ ಚಿತ್ರದ ಮೈನಸ್ ಪಾಯಿಂಟ್ಸ್ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಇದೆಲ್ಲದರ ನಡುವೆ 'ಪುಷ್ಪ'-3 ಕಥೆಯೇನು? ಎನ್ನುವ ಚರ್ಚೆ ಕೂಡ ಶುರುವಾಗಿದೆ.
ನಿರ್ದೇಶಕ ಸುಕುಮಾರ್ ವೆಬ್ ಸೀರಿಸ್ ಮಾಡಲು ಬರೆದಿದ್ದ ಕಥೆ ಸಿನಿಮಾ ಆಗುವಂತಾಯಿತು. ಮೊದಲ ಭಾಗ ಸಕ್ಸಸ್ ಆಗಿ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಿಗಿತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬಂದಿಲ್ಲ ಎನ್ನುವುದು ಕೆಲವರ ವಾದ. ಚಿತ್ರದ ಎಲ್ಲಾ ಲೋಪಗಳನ್ನು ಮರೆಸುವಂತೆ ಅಲ್ಲು ಅರ್ಜುನ್ ಇಡೀ ಸಿನಿಮಾ ಆವರಿಸಿಕೊಂಡು ಇಷ್ವವಾಗುತ್ತಾರೆ. ರಶ್ಮಿಕಾ ಮಂದಣ್ಣ ಒಂದಷ್ಟು ಸನ್ನಿವೇಶಗಳಲ್ಲಿ ಇಷ್ಟವಾಗುತ್ತಾರೆ. ಕೆಲ ಸನ್ನಿವೇಶಗಳಲ್ಲಿ ಆಕೆಯನ್ನು ನೋಡುವುದು ಕಷ್ಟ ಎನಿಸುತ್ತದೆ.

ಎಲ್ಲೋ ಶುರುವಾಗುವ ಸನ್ನಿವೇಶಗಳು ಅಲ್ಲಲ್ಲೇ ನಿಂತು ಬಿಡುತ್ತದೆ. ಸರಿಯಾದ ಕಥೆ ಇಲ್ಲದೇ ಒಂದಷ್ಟು ಸನ್ನಿವೇಶಗಳನ್ನು ಮಾತ್ರ ಕಟ್ಟಿ ಸುಕುಮಾರ್ ಮಾಸ್ ಮನರಂಜನೆ ಉಣಬಡಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಅಷ್ಟೇನು ಸಕ್ಸಸ್ ಕಂಡಿಲ್ಲ. ಅದೆನ್ನೆಲ್ಲಾ ಪಕ್ಕಕ್ಕಿಟ್ಟರೆ ಪಾರ್ಟ್-2 ಮಾಡುವುದಕ್ಕೆ ಸರಿಯಾದ ಕಥೆ ಇರಲಿಲ್ಲ. ಇನ್ನು ಪಾರ್ಟ್-3 ಏನು ಮಾಡುತ್ತಾರೆ? ಎನ್ನುವ ಕಾಮೆಂಟ್ ಸಹ ಬರ್ತಿದೆ.
ಸರಿಯಾದ ಡ್ರಾಮಾ ಇಲ್ಲದೇ ಎಲ್ಲಿ ಶುರುವಾಗುವ ಪಾತ್ರಗಳು ಅಲ್ಲಲ್ಲೇ ಇದ್ದು ಒಂದಷ್ಟು ಸನ್ನಿವೇಶಗಳಲ್ಲಿ ಬಂದು ಹೋಗುತ್ತದೆ. ಇನ್ನು ಮತ್ತೊಂದು ಸೀಕ್ವೆಲ್ ಅಲ್ಲಿ ಏನಿರುತ್ತೆ? ಇದನ್ನೇ ನೋಡೋಕೆ ಆಗಲಿಲ್ಲ ಎಂದು ಕೆಲವರು ಪೇಚಾಡುತ್ತಿದ್ದಾರೆ. ಇನ್ನು 3ನೇ ಭಾಗಕ್ಕೆ ' ಪುಷ್ಪ-3' rampage ಎಂದು ಟೈಟಲ್ ಕೂಡ ಇಟ್ಟಿದ್ದಾರೆ. ವಿಜಯ್ ದೇವರಕೊಂಡ ಹೀರೊ ಆಗಿ ನಟಿಸುತ್ತಾರಾ? ಎನ್ನುವ ಊಹಾಪೋಹ ಸಹ ಶುರುವಾಗಿದೆ.

ಅಲ್ಲು ಅರ್ಜುನ್ ಮತ್ತೊಂದು ಭಾಗದಲ್ಲಿ ನಟಿಸೋದು ಸದ್ಯಕ್ಕೆ ಕಷ್ಟ ಎನ್ನಲಾಗ್ತಿದೆ. ಕಳೆದ ಐದಾರು ವರ್ಷಗಳಿಂದ ಪುಷ್ಪರಾಜ್ ಪಾತ್ರದಲ್ಲೇ ಉಳಿದುಬಿಟ್ಟಿದ್ದಾರೆ. ಹಾಗಾಗಿ ಬೇರೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇದೇ ಕಾರಣಕ್ಕೆ ಅಲ್ಲು ಅರ್ಜುನ್ ಬದಲು ವಿಜಯ್ ದೇವರಕೊಂಡ ಹೀರೊ ಆಗಿ ನಟಿಸ್ತಾರಾ? ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ. ಬಹಳ ಹಿಂದೆ ದೇವರಕೊಂಡ ಮಾಡಿದ್ದ ಒಂದು ಪೋಸ್ಟರ್ ಕೂಡ ಇದಕ್ಕೆ ಇಂಬು ಕೊಡ್ತಿದೆ.
'ಪುಷ್ಪ'-2 ಕ್ಲೈಮ್ಯಾಕ್ಸ್‌ನಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಹಾಗಾಗಿ ಮೂರನೇ ಭಾಗದಲ್ಲಿ ಅಲ್ಲು ಅರ್ಜುನ್ ಇರ್ತಾರಾ? ಇಲ್ವಾ? ಎನ್ನುವ ಗೊಂದಲ ಮೂಡಿದೆ. 'ಪುಷ್ಪ-2' ಚಿತ್ರದಲ್ಲಿ ಬಲವಾದ ನೆಗೆಟಿವ್ ರೋಲ್ ಇರಲಿಲ್ಲ. ಅದೇ ಚಿತ್ರದ ಹಿನ್ನೆಲೆ ದೊಡ್ಡ ಕಾರಣ. ಹಾಗಾಗಿ ವಿಜಯ್ ದೇವರಕೊಂಡ ಮುಂದೆ ವಿಲನ್ ಆಗಿ ಅಬ್ಬರಿಸುತ್ತಾರಾ? ಎನ್ನುವ ಕುತೂಹಲ ಮೂಡಿದೆ.
ಇಷ್ಟೆಲ್ಲಾ ಚರ್ಚೆ ನಡುವೆ 'ಪುಷ್ಪ'-3 ಟೀಸರ್ ವೈರಲ್ ಆಗ್ತಿದೆ. ಕನ್‌ಫ್ಯೂಸ್ ಆಗಬೇಡಿ ಹೊಸದಾಗಿ ಯಾವುದೇ ಟೀಸರ್ ಬಿಟ್ಟಿಲ್ಲ. ಆದರೆ ಹಿಂದೆ ಬಂದಿದ್ದ ಝಲಕ್ ಪಾರ್ಟ್-3 ಚಿತ್ರದ್ದು ಎನ್ನುವ ಲೆಕ್ಕಾಚಾರ ಕೆಲವರದ್ದು. ಬಹಳ ಹಿಂದೆ 'ಪುಷ್ಪ ಎಲ್ಲಿ?' ಎನ್ನುವ ಕುತೂಹಲಕಾರಿ ಟೀಸರ್ ಬಂದಿತ್ತು. ಆದರೆ ಆ ಟೀಸರ್‌ನಲ್ಲಿದ್ದ ಸನ್ನಿವೇಶ ಪಾರ್ಟ್-2ನಲ್ಲಿ ಇಲ್ಲ. ಅದು ಮುಂದಿನ ಭಾಗದಲ್ಲಿ ಇರಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.
ಪಾರ್ಟ್-3 ಟೀಸರ್ ಬಿಟ್ಟು ಪಾರ್ಟ್-2 ಟೀಸರ್ ಎಂದು ಸುಕುಮಾರ್ ಹೇಳಿದ್ದಾರೆ. ಅಸಲಿ ಕಥೆ ಮುಂದಿನ ಭಾಗದಲ್ಲಿದೆ ಎನ್ನುವುದು ಕೆಲವರ ಊಹೆ. 'ಪುಷ್ಪ'ರಾಜ್ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಶೇಷಾಚಲ ಅರಣ್ಯ ಸೇರುವುದು ಯಾಕೆ? ಆ ಕಥೆ ಏನು? ಎಂದು ಯಾವಾಗ ಹೇಳ್ತಾರೆ? ಅಥವಾ ಆ ಕಥೆ ಬಿಟ್ಟು ಹೊಸ ಕಥೆಯನ್ನು 2ನೇ ಭಾಗದಲ್ಲಿ ಹೇಳಿದ್ರಾ? ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ.


Click it and Unblock the Notifications











