Vijay Deverakonda: ಫಿಸಿಕ್ಸ್, ಮ್ಯಾಥ್ಸ್ ಬಿಟ್ಟು ಕನ್ನಡ ಕಲಿಬೇಕಿತ್ತು; ಕನ್ನಡ ಮಾತನಾಡಿ ಎಂದಿದ್ದಕ್ಕೆ ವಿಜಯ್ ಕೊಂಕು
ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ ಹಾಗೂ ಟ್ಯಾಕ್ಸಿವಾಲಾ ಚಿತ್ರಗಳ ಮೂಲಕ ಭರ್ಜರಿ ಗೆಲುವು ಕಂಡಿದ್ದ ತೆಲುಗಿನ ರೌಡಿ ಬಾಯ್ ವಿಜಯ್ ದೇವರಕೊಂಡ ಬಳಿಕ ತೆರೆಗೆ ಬಂದ ಚಿತ್ರಗಳಲ್ಲಿ ಸಾಲಾಗಿ ಸೋಲುಂಡು ಮಕಾಡೆ ಮಲಗಿದ್ದಾರೆ. ಹಾಗೆ ನೋಡುವುದಾದರೆ ಅರ್ಜುನ್ ರೆಡ್ಡಿ ಹಾಗೂ ಗೀತಾ ಗೋವಿಂದಂ ಮಟ್ಟಿಗಿನ ಯಶಸ್ಸನ್ನು ವಿಜಯ್ ದೇವರಕೊಂಡ ನಟಿಸಿದ ನಂತರದ ಯಾವ ಚಿತ್ರಗಳೂ ಸಹ ತಂದು ಕೊಡಲೇ ಇಲ್ಲ.
ತನ್ನ ಪ್ರತಿ ಸಿನಿಮಾ ಬಿಡುಗಡೆಯಾಗುವಾಗಲೂ ಚಿತ್ರದ ಪ್ರೆಸ್‌ಮೀಟ್‌ಗಳಲ್ಲಿ ಅವುಗಳ ಬಗ್ಗೆ ಅತಿಯಾದ ವಿಶ್ವಾಸವನ್ನು ವ್ಯಕ್ತಪಡಿಸಿ ತುಸು ಹೆಚ್ಚಿನ ಬಿಲ್ಡಪ್‌ಗಳನ್ನೇ ನೀಡುತ್ತಾ ಬಂದಿರುವ ವಿಜಯ್ ದೇವರಕೊಂಡ ಚಿತ್ರ ಸೋತ ಬಳಿಕ ಸೈಲೆಂಟ್ ಆಗಿದ್ದೇ ಹೆಚ್ಚು. ಹೌದು, ವಿಜಯ್ ದೇವರಕೊಂಡ ನಟನೆಯ ಡಿಯರ್ ಕಾಮ್ರೆಡ್, ವರ್ಲ್ಡ್ ಫೇಮಸ್ ಲವರ್ ಹಾಗೂ ಲೈಗರ್ ಚಿತ್ರಗಳು ಮಕಾಡೆ ಮಲಗಿವೆ.
ಇನ್ನು ಈ ವಿಜಯ್ ದೇವರಕೊಂಡ ನಟನೆಯ ಈ ಎಲ್ಲಾ ಚಿತ್ರಗಳನ್ನು ಕನ್ನಡಕ್ಕೂ ಸಹ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಈ ಪ್ರತಿ ಚಿತ್ರಗಳ ಬಿಡುಗಡೆ ದಿನ ಸಮೀಪವಿದ್ದಾಗ ನಟ ವಿಜಯ್ ದೇವರಕೊಂಡ ಚಿತ್ರ ತಂಡದ ಜತೆ ಕರ್ನಾಟಕಕ್ಕೆ ಆಗಮಿಸಿ ಚಿತ್ರಕ್ಕಾಗಿ ಪ್ರಚಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಅವರಿಗೆ ಹೆಚ್ಚಾಗಿ ಎದುರಾಗಿರುವ ಪ್ರಶ್ನೆ ಎಂದರೆ ಕನ್ನಡಕ್ಕೆ ಡಬ್ ಆಗುತ್ತಿರುವ ನಿಮ್ಮ ಪ್ರತಿ ಚಿತ್ರದಲ್ಲಿಯೂ ನಿಮ್ಮ ಪಾತ್ರಕ್ಕೆ ಬೇರೊಬ್ಬ ಡಬಿಂಗ್ ಕಲಾವಿದರ ಬಳಿ ದನಿ ನೀಡಿಸುತ್ತಾ ಇದ್ದೀರ, ಅದರ ಬದಲು ನೀವೇ ಯಾಕೆ ಕನ್ನಡದಲ್ಲಿ ಡಬ್ ಮಾಡಬಾರದು ಎಂಬ ಪ್ರಶ್ನೆ ಎದುರಾಯಿತು.
ಹೌದು, ಸುಮಾರೂ ಮೂರ್ನಾಲ್ಕು ಮಂದಿ ವಿಜಯ್ ದೇವರಕೊಂಡ ಬಳಿ ಏಕೆ ತಮ್ಮ ಕನ್ನಡ ಡಬಿಂಗ್ ಚಿತ್ರಗಳಿಗೆ ಅವರೇ ಡಬ್ ಮಾಡಬಾರದು ಎಂಬ ಪ್ರಶ್ನೆಯನ್ನು ಹಾಕಿದ್ದಾರೆ. ಮೊದಲಿಗೆ ಪತ್ರಕರ್ತರೊಬ್ಬರು ಇತ್ತೀಚೆಗೆ ಹಲವು ಚಿತ್ರಗಳು ಕನ್ನಡಕ್ಕೆ ಡಬ್ ಆದ್ವು, ಆರ್ ಆರ್ ಆರ್ ಸಹ ಡಬ್ ಆಯಿತು, ಕನ್ನಡ ವರ್ಷನ್‌ಗೆ ರಾಮ್ ಚರಣ್ ಹಾಗೂ ಎನ್ ಟಿ ಆರ್ ಅವರೇ ಡಬ್ ಮಾಡಿದ್ರು, ನೀವು ಏಕೆ ಈ ಚಿತ್ರಕ್ಕೆ ಡಬ್ ಮಾಡಲು ಪ್ರಯತ್ನ ಪಡಲಿಲ್ಲ ಎಂಬ ಪ್ರಶ್ನೆಯನ್ನು ಎಸೆದರು.

ಈ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ "ಡಬಿಂಗ್ ತುಂಬಾ ಕಷ್ಟ. ನಿಮಗೆ ಹೇಗೆ ಹೇಳಲಿ ಡಬಿಂಗ್ ಮಾಡುವುದು ತುಂಬಾ ಕಷ್ಟ. ನಾನೂ ಸಹ ಡಬಿಂಗ್ ಮಾಡಬಹುದು. ಆದರೆ ನನ್ನ ಕೆಟ್ಟ ಉಚ್ಛಾರಣೆಯಿಂದ ಹಾಳು ಮಾಡಲು ಇಷ್ಟಪಡಲ್ಲ. ಹೀಗಾಗಿ ಪರಿಪೂರ್ಣತೆ ಇಲ್ಲದ ನನ್ನ ದನಿಯಲ್ಲಿ ಚಿತ್ರವನ್ನು ನೋಡುವುದಕ್ಕಿಂತ ಕನ್ನಡ ಬರುವವರು ಡಬಿಂಗ್ ಮಾಡಿದ ಚಿತ್ರ ನೋಡುವುದು ಉತ್ತಮ" ಎಂದು ಹೇಳಿದರು. ಅಲ್ಲದೇ ನಿಮಗೆ ನನ್ನ ದನಿ ಇಷ್ಟ ಎಂದಮೇಲೆ ಭಾಷೆ ಕಲಿತ ಮೇಲೆ ಡಬ್ ಮಾಡುತ್ತೇನೆ ಎಂದೂ ಸಹ ಹೇಳಿದರು.
ಈ ಬಳಿಕ ಮತ್ತೊಬ್ಬರೂ ಸಹ ಡಬಿಂಗ್ ಕುರಿತು ಮಾತನಾಡಿದ್ದು, ಲೈಗರ್ ಚಿತ್ರದ ಪ್ರಮೋಷನ್ ವೇಳೆ ಮುಂದಿನ ಚಿತ್ರದಲ್ಲಿ ನಾನೇ ಕನ್ನಡ ಡಬಿಂಗ್ ಮಾಡುತ್ತೇನೆ ಎಂದು ಹೇಳಿದ್ರಿ ಈಗ ಮಾಡಿಲ್ಲ, ಯಾವಾಗ ಕನ್ನಡ ಡಬಿಂಗ್ ಮಾಡುತ್ತೀರ ಎಂಬ ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ "25 - 26 ನೇ ವಯಸ್ಸಿನಲ್ಲಿ ನನಗೆ ನಾನು ನಟನಾಗ್ತೀನಿ ಎಂಬ ವಿಷಯ ತಿಳಿದಿದ್ದರೆ ಫಿಸಿಕ್ಸ್, ಮ್ಯಾಥ್ಸ್, ಕೆಮಿಸ್ಟ್ರಿ ಇವೆಲ್ಲವನ್ನೂ ಬಿಟ್ಟು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳನ್ನು ಕಲಿಯುತ್ತಿದ್ದೆ. ಆದರೆ ನನಗೆ ಗೊತ್ತಿರಲಿಲ್ಲ, ಹೀಗಾಗಿ ಇಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ಈಗ ನಾನು ಡಬಿಂಗ್ ಮಾಡಬೇಕೆಂದರೆ ನಾನು ಮತ್ತೆ ಶಾಲೆಗಳಿಗೆ ಹೋಗಬೇಕು" ಎಂದು ಉತ್ತರಿಸಿದರು.


Click it and Unblock the Notifications










