'ಗೀತಾ ಗೋವಿಂದಂ' ಕಾಂಬಿನೇಶನ್‌ನಿಂದ ಮತ್ತೊಂದು ಚಿತ್ರ; ಈ ಬಾರಿ ಇಲ್ಲ ರಶ್ಮಿಕಾ!
ತೆಲುಗು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಚಿತ್ರಗಳ ಪೈಕಿ ವಿಜಯ್ ದೇವರಕೊಂಡ ನಟನೆಯ ಗೀತಾ ಗೋವಿಂದಂ ಸಹ ಒಂದು. 2018ರ ಆಗಸ್ಟ್ 15ರ ದಿನದಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಗೀತಾ ಗೋವಿಂದಂ ಚಿತ್ರ ತೆರೆಗೆ ಬಂದಿತ್ತು.
ಬಿಡುಗಡೆಗೂ ಮುನ್ನ ಟೀಸರ್ ಹಾಗೂ ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಚಿತ್ರ ಲಿಪ್ ಕಿಸ್ ದೃಶ್ಯವೊಂದರ ಲೀಕ್‌ನಿಂದಾಗಿ ಮತ್ತಷ್ಟು ಹೈಪ್ ಪಡೆದುಕೊಂಡಿತು. ಅದೇ ಮೊದಲ ಬಾರಿಗೆ ಕ್ಯೂಟ್ ಬೆಡಗಿ ರಶ್ಮಿಕಾ ಮಂದಣ್ಣ ಹಾಟ್ ಆಗಿ ಕಾಣಿಸಿಕೊಂಡಿದ್ದರು.

ತನ್ನ ಚಿತ್ರಗಳಲ್ಲಿ ಡೀಸೆಂಟ್ ಆಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಇಷ್ಟು ಬೋಲ್ಡ್ ಆಗಿ ನಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹೀಗೆ ಚಿತ್ರದಲ್ಲಿನ ಕೆಲ ಹಾಟ್ ದೃಶ್ಯಗಳಿಂದಲೇ ದೊಡ್ಡ ಮಟ್ಟದ ಪ್ರಚಾರನ್ನು ಪಡೆದುಕೊಂಡ ಈ ಚಿತ್ರ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಸಹ ಕಂಡಿತು.
ಪರಿಣಾಮವಾಗಿ ಚಿತ್ರ 135 ಕೋಟಿ ಸಂಪಾದಿಸಿ ಸ್ಟಾರ್ ನಟರ ಚಿತ್ರಗಳನ್ನು ಹೊರತುಪಡಿಸಿದರೆ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನಿಸಿಕೊಂಡಿತು. ಇಂದಿಗೂ ಸಹ ತೆಲುಗಿನ ದೊಡ್ಡ ಸ್ಟಾರ್ ನಟರ ಚಿತ್ರಗಳನ್ನು ಹೊರತುಪಡಿಸಿ ಉಳಿದ ಯಾವ ನಟನ ಚಿತ್ರವೂ ಸಹ ಈ ಕಲೆಕ್ಷನ್ ಅನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿಲ್ಲ.
ಹೀಗೆ ದೊಡ್ಡ ಕಲೆಕ್ಷನ್ ಮಾಡಿ ದಾಖಲೆ ಮಾಡಿದ್ದ ಹೀರೊ ಹಾಗೂ ಡೈರೆಕ್ಟರ್ ಕಾಂಬಿನೇಶನ್ ಈಗ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಕೈಜೋಡಿಸಿದೆ. ಹೌದು, ನಟ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಪರಶುರಾಮ್ ಮತ್ತೊಮ್ಮೆ ಜತೆಗೆ ಕೆಲಸ ಮಾಡುತ್ತಿದ್ದು, ಇದು ವಿಜಯ್ ದೇವರಕೊಂಡ ನಟನೆಯ 13ನೇ ಚಿತ್ರವಾಗಿದೆ.
ಇನ್ನು ಗೀತಾ ಗೋವಿಂದಂ ಚಿತ್ರದಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದ ರಶ್ಮಿಕಾ ಮಂದಣ್ಣಗೆ ಈ ಬಾರಿ ಕೊಕ್ ನೀಡಲಾಗಿದೆ. ನಿರ್ದೇಶಕ ಹಾಗೂ ನಟ ಮಾತ್ರ ಚಿತ್ರದಲ್ಲಿದ್ದು, ರಶ್ಮಿಕಾ ಮಂದಣ್ಣ ಬದಲಾಗಿ ಸೆನ್ಸೇಷನಲ್ ನಟಿ ಮೃನಾಲ್ ಠಾಕೂರ್ ಚಿತ್ರತಂಡ ಸೇರಿದ್ದಾರೆ.
ಇನ್ನು ಈ ಚಿತ್ರದ ಮುಹೂರ್ತ ಇಂದು ( ಜೂನ್ 14 ) ಹೈದರಾಬಾದ್‌ನಲ್ಲಿ ನಡೆದಿದ್ದು, ಚಿತ್ರಕ್ಕೆ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಇಂದು ನಡೆದ ಮುಹೂರ್ತ ಕಾರ್ಯಕ್ರಮದ ಫೋಟೊಗಳನ್ನು ಚಿತ್ರತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
"ಪರಶುರಾಮ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರದ ಮುಹೂರ್ತ ಇಂದು ನಡೆದಿದೆ. ಪ್ರತಿಭಾವಂತ ನಟಿ ಮೃನಾಲ್ ಠಾಕೂರ್ ತಂಡ ಸೇರ್ಪಡೆಗೊಂಡಿದ್ದಾರೆ. ಚಿತ್ರೀಕರಣ ಆದಷ್ಟು ಬೇಗ ಶುರುವಾಗಲಿದೆ" ಎಂದು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಟ್ವೀಟ್ ಮಾಡಿದೆ.


Click it and Unblock the Notifications











