ಮೊದಲ ಬಾರಿ ರಶ್ಮಿಕಾ ಕೊರಳಿಗೆ ತಾಳಿ ಕಟ್ಟಲು ವಿಜಯ್ ದೇವರಕೊಂಡ ಗಾಬರಿ ಆಗಿದ್ದೇಕೆ?
ಅದ್ಧೂರಿ ಕಲ್ಯಾಣ್ಸೋತ್ಸವದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ನೆರವೇರಿದೆ. ರಾಜಸ್ಥಾನದ ಉದಯ್‌ಪುರದ ರೆಸಾರ್ಟ್‌ನಲ್ಲಿ ಇಂದು (ಫೆಬ್ರವರಿ 26) ತೆಲುಗು ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ಜರುಗಿವೆ. ಕೆಲವೇ ಆಪ್ತರ ಸಮ್ಮುಖದಲ್ಲಿ ವಿರೋಷ್ ಜೋಡಿ ಮದುವೆ ಸಂಭ್ರಮದಲ್ಲಿ ಮಿಂದೆದ್ದಿದೆ.
'ಗೀತಗೋವಿಂದಂ' ಚಿತ್ರದಲ್ಲಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದರು. ಆಗ ಶುರುವಾದ ಪರಿಚಯ ಬಳಿಕ ಸ್ನೇಹವಾಗಿ ಮಾರ್ಪಟ್ಟಿತ್ತು. ಬಳಿಕ ಇಬ್ಬರೂ ಪ್ರೀತಿಸಲು ಆರಂಭಿಸಿದರು.ಡ 'ಡಿಯರ್ ಕಾಮ್ರೆಡ್' ಮತ್ತೆ ಒಟ್ಟಿಗೆ ನಟಿಸಿದ್ದರು. ಅಂದಹಾಗೆ 'ಗೀತಗೋವಿಂದಂ' ಚಿತ್ರದಲ್ಲಿ ವಿಜಯ್- ರಶ್ಮಿಕಾ ಮದುವೆ ಆಗುವ ಸನ್ನಿವೇಶ ಕೂಡ ಇತ್ತು.

ಅಂದು ರಶ್ಮಿಕಾ ಕೊರಳಿಗೆ ತಾಳಿ ಕಟ್ಟಲು ವಿಜಯ್ ದೇವರಕೊಂಡ ನಡುಗಿಬಿಟ್ಟಿದ್ದರಂತೆ. ಮದುವೆ ಅನ್ನುವುದು ಬಹಳ ವಿಶೇಷ. ಮದುವೆ ಸೆಟಪ್ ಎಲ್ಲಾ ಆಗಿತ್ತು. ಸಿನಿಮಾ ನಟನೆ ಆಗಿದ್ದರೂ ಒಂದು ಕ್ಷಣ ಆ ದೃಶ್ಯದಲ್ಲಿ ನಟಿಸಲು ಗಾಬರಿಯಾಯಿತು ಎಂದು ವಿಜಯ್ ದೇವರಕೊಂಡ ಹಳೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದೀಗ ಇಬ್ಬರೂ ನಿಜ ಜೀವನದಲ್ಲಿ ಮದುವೆ ಆಗುತ್ತಿದ್ದಂತೆ ಅಂದು ವಿಜಯ್ ಮಾತನಾಡಿದ್ದ ವಿಡಿಯೋವನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
'ಗೀತಗೋವಿಂದಂ' ಚಿತ್ರದ ಪ್ರಚಾರದ ಭಾಗವಾಗಿ Ntv Telugu ವಾಹಿನಿ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಮಾತನಾಡಿದ್ದರು. ಚಿತ್ರದಲ್ಲಿದ್ದ ಮದುವೆ ಸನ್ನಿವೇಶದ ಚಿತ್ರೀಕರಣದ ಬಗ್ಗೆ ನೆನಪು ಮಾಡಿಕೊಂಡಿದ್ದರು. "ಈ ಚಿತ್ರದಲ್ಲಿ ನನ್ನ ಮೊದಲ ಮದುವೆ ಸನ್ನಿವೇಶ ನಡೀತು. ಶೂಟಿಂಗ್ ವೇಳೆ ಮದುವೆ ಮಂಟಪದಲ್ಲಿ ಕೂರುವುದು ಪರವಾಗಿಲ್ಲ. ಆದರೆ ಮೂರು ಗಂಟು ಹಾಕುವ ದೃಶ್ಯದ ವೇಳೆ ಭಯವಾಗಿತ್ತು. ಬಹಳ ಗಾಬರಿ ಆಗಿಬಿಟ್ಟಿದ್ದೆ" ಎಂದಿದ್ದರು.
ಅದು ಸಿನಿಮಾ ಚಿತ್ರೀಕರಣ ಎಂದು ಗೊತ್ತಿತ್ತು. ಆದರೂ ಅಲ್ಲಿ ಹುಡುಗಿ ರೇಷ್ಮೆ ಸೀರೆ ಉಟ್ಟು ಮದುಮಗಳ ರೀತಿ ಕೂತಿದ್ದಾಳೆ. ನಾನು ಪಂಚೆ, ಶರ್ಟು, ಬಾಸಿಂಗ ಧರಿಸಿ ರೆಡಿಯಾಗಿದ್ದೆ ಹಾಗಾಗಿ ಒಂದು ಆತಂಕವಾಗಿತ್ತು ಎಂದು ವಿಜಯ್ ಹೇಳಿದ್ದರು. "ಆ ಸನ್ನಿವೇಶಕ್ಕೆ ಹೂವು, ಹಣ್ಣು ಎಲ್ಲಾ ಇಟ್ಟು ಸಿಂಗಾರ ಮಾಡಿ ಥೇಟ್ ಮದುವೆ ಸೆಟಪ್ ರೆಡಿ ಮಾಡಿದ್ರು. ನಿರ್ದೇಶಕರು ಈ ಶಾಟ್‌ನಲ್ಲಿ ಮೂರು ಗಂಟು ಹಾಕಿಬಿಡು ಅಂದಾಗ ಗಾಬರಿಯಾಗಿದ್ದೆ. ಅಯ್ಯೋ ಇದೆಲ್ಲಾ ಯಾವತ್ತು ಮಾಡ್ಲಿಲ್ಲ. ಅದು ಹೀರೊಯಿನ್ ಜೊತೆ ಬಹಳ ವಿಚಿತ್ರವಾಗಿದೆ ಅಲ್ವಾ ಎಂದುಕೊಂಡಿದ್ದೆ" ಎಂದು ಹೇಳಿ ನಕ್ಕಿದ್ದರು.
ಸಿನಿಮಾ ಮದುವೆ ಸನ್ನಿವೇಶದಲ್ಲೇ ಹೀಗೆ, ಇನ್ನು ನಿಜವಾದ ಮದುವೆ ದಿನ ಹೇಗೆ ಎಂದು ನಿರೂಪಕಿ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ವಿಜಯ್ ದೇವರಕೊಂಡ "ಅಯ್ಯಯ್ಯಪ್ಪ.. ಅದಕ್ಕೆ ಫುಲ್ ಪ್ರಿಪೇರ್ ಆಗಿರಬೇಕು. ಅದೆಲ್ಲ ಏನೇ ಇದ್ರು, ಅವತ್ತು ಕೊಂಚ ಭಯ ಆಗಿದ್ದು ನಿಜ. ರಶ್ಮಿಕಾಗೆ ಅದು 3ನೇ ಸಿನಿಮಾ ಮದುವೆ ಸನ್ನಿವೇಶ ಅಂತೆ. ಹಾಗಾಗಿ ಆಕೆಗೆ ಅಷ್ಟೇನು ಭಯ ಇರಲಿಲ್ಲವಂತೆ. ನಾನು ಅದೇ ಮೊದಲು ಅಂತ ಸನ್ನಿವೇಶದಲ್ಲಿ ನಟಿಸಿದ್ದು" ಎಂದು ವಿಜಯ್ ಆ ಸಿನಿಮಾ ಶೂಟಿಂಗ್ ಬಗ್ಗೆ ಮಾತನಾಡಿದ್ದರು.
ವಿಜಯ್ ಮಾತು ಕೇಳಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅಂತೂ ಎರಡನೇ ಬಾರಿ ಅದೇ ಹುಡುಗಿ ಕೊರಳಿಗೆ ತಾಳಿ ಕಟ್ಟಿಬಿಟ್ರಲ್ಲ. ಅವತ್ತೇ ನಿಮ್ಮಿಬ್ಬರ ಮದುವೆ ನಿಶ್ಚಿಯ ಆಗಿಬಿಟ್ಟಿತ್ತು ಅನ್ನಿಸುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಉದಯ್‌ಪುರದಲ್ಲಿ ಮದುವೆ ವಿಜಯ್, ರಶ್ಮಿಕಾ ಮದುವೆ ಶಾಸ್ತ್ರಗಳು ನಡೆದಿವೆ. ಕೊಡವ ಸಂಪ್ರದಾಯದಂತೆ ಕೂಡ ಮದುವೆ ನಡೆಯಲಿದೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಆಪ್ತರಿಗೆ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ.


Click it and Unblock the Notifications











