"ತೆಲುಗು ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆ, ಚೆನ್ನಾಗಿ ನೋಡ್ಕೊಳ್ಳಿ"; ವಿಜಯ್ ದೇವರಕೊಂಡ
ಮದುವೆ ಬಳಿಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಮಾಧ್ಯಮಗಳ ಮುಂದೆ ಹಾಜರಾಗಿದ್ದಾರೆ. ಅದ್ಧೂರಿ ರಿಸೆಪ್ಷನ್ ಪಾರ್ಟಿಗೂ ಮುನ್ನ ಜೋಡಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದೆ. ನಿಮ್ಮೆಲ್ಲರ ಸಹಕಾರ ನಮಗೆ ಬೇಕು ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್‌ನಲ್ಲಿ 'ವಿರೋಷ್' ಜೋಡಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅಭಿಮಾನಿಗಳಿಗೆ, ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಸೇರಿ ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ಭದ್ರತೆ ದೃಷ್ಟಿಯಿಂದ ಅಭಿಮಾನಿಗಳು ಬರುವುದು ಬೇಡ ಎಂದು ವಿಜಯ್, ರಶ್ಮಿಕಾ ಮನವಿ ಮಾಡಿದ್ದಾರೆ.

ಮಾಧ್ಯಮಗಳನ್ನು ಉದ್ದೇಶಿಸಿ ನಟ ವಿಜಯ್ ದೇವರಕೊಂಡ ಮಾತನಾಡಿದ್ದಾರೆ. "ಚಿಕ್ಕಂದಿನಿಂದ ನಿಮ್ಮನ್ನು ನೋಡ್ತಿದ್ದೀನಿ. ನನ್ನ ಸಂದರ್ಶನ ಮಾಡಿದ್ದೀರಾ, ಹೀಗೆ ಪೋಸ್ ಕೊಡಿ ಹಾಗೆ ಪೋಸ್ ಕೊಡಿ ಎಂದು ಫೋಟೊಗಳನ್ನು ಕ್ಲಿಕ್ಕಿಸಿದ್ದೀರಾ. ಅದೆಲ್ಲ ನನಗೆ ಬಹಳ ಸಹಾಯವಾಯಿತು. ನೀವು ನನ್ನ ಜರ್ನಿಯ ಭಾಗವಾಗಿದ್ದೀರಾ. ಈಗ ನಾನು ರಶ್ಮಿಕಾ ಮದುವೆ ಆಗಿ ನಿಮ್ಮ ಮುಂದೆ ಬಂದಿದ್ದೀವಿ. ಜೀವನ ಸಾಗುತ್ತಿದೆ. ಹೊಸ ಬದಲಾವಣೆ ಆಗಿದೆ. ವಯಸ್ಸಾಗುತ್ತಿದೆ. ಹೊಸ ಹೊಸ ಹಂತಕ್ಕೆ ಏರುತ್ತಿದ್ದೇವೆ. ಆದರೆ ನೀವು ನನ್ನ ಮನೆಯವರು ಇದ್ದಂತೆ" ಎಂದಿದ್ದಾರೆ.
ನಿಮ್ಮೆಲ್ಲರ ಆಶೀರ್ವಾದ ಪಡೆಯಲು ನಾವು ಇವತ್ತು ನಿಮ್ಮ ಮುಂದೆ ಬಂದಿದ್ದೇನೆ. "ತೆಲುಗು ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆ, ಚೆನ್ನಾಗಿ ನೋಡ್ಕೊಳ್ಳಿ" ಎಂದು ವಿಜಯ್ ಹೇಳಿದ್ದಾರೆ. ಬಳಿಕ ರಶ್ಮಿಕಾ ಮಾತನಾಡಿ "ಜೀವನದಲ್ಲಿ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದೀವಿ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು, ನಿಮ್ಮ ಜೊತೆ ಮಾತನಾಡಬೇಕು ಎಂದು ಇಲ್ಲಿಗೆ ಬಂದಿದ್ದೀವಿ. ಹೊಸ ಜೀವನ ಸಾಗಿಸುತ್ತಿದ್ದೀನಿ. ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದ" ಎಂದು ತಿಳಿಸಿದ್ದಾರೆ.
ಕಳೆದೊಂದು ವಾರದಿಂದ ರಶ್ಮಿಕಾ ಹಾಗೂ ವಿಜಯ್ ಮದುವೆ ಸಂಭ್ರಮ ಜೋರಾಗಿದೆ. ಅದ್ಧೂರಿಯಾಗಿ ಮಾತ್ರವಲ್ಲದೇ ಬಹಳ ಅರ್ಥಪೂರ್ಣವಾಗಿ ಜೋಡಿ ಮದುವೆ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿತ್ತು. ಕೆಲವೇ ಆಪ್ತರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದರು. ಬಳಿಕ ಮದುವೆ ಫೋಟೊಗಳನ್ನು ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಅದು ಸಿಕ್ಕಾಪಟ್ಟೆ ವೈರಲ್ ಆಗಿ ದಾಖಲೆ ಬರೆದಿದೆ.
ಚಂದನವನದಿಂದ ನಟಿ ಆಶಿಕಾ ರಂಗನಾಥ್ ಮಾತ್ರ ವಿರೋಷ್ ಮದುವೆ ಸಂಭ್ರಮಕ್ಕೆ ಸಾಕ್ಷಿ ಆಗಿದ್ದರು. ಶಿವಣ್ಣ, ಯಶ್, ರವಿಚಂದ್ರನ್ ಸೇರಿ ಕನ್ನಡ ಚಿತ್ರರಂಗದ ಕೆಲವರಿಗೆ ಮಾತ್ರ ರಶ್ಮಿಕಾ, ವಿಜಯ್ ಮದುವೆ ಆಮಂತ್ರಣ ತಲುಪಿದೆ. ಹೈದರಾಬಾದ್‌ನಲ್ಲಿ ನಡೆಯುವ ಆರತಕ್ಷತೆ ಕಾರ್ಯಕ್ರಮಕ್ಕೆ ಯಾರಾದರೂ ಕನ್ನಡ ಸಿನಿಮಾ ತಾರೆಯರು ಸಾಕ್ಷಿ ಆಗುತ್ತಾರಾ ಕಾದು ನೋಡಬೇಕಿದೆ.
ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಕೊಡಗಿನ ಚೆಲುವೆ ಈಗ ತೆಲಂಗಾಣದ ಸೊಸೆಯಾಗಿದ್ದಾರೆ. ಅಭಿಮಾನಿ ಬಹಳ ವಿರೋಷ್ ಜೋಡಿ ಮದುವೆಗೆ ಸಂಭ್ರಮಿಸುತ್ತಿದೆ. ಮದುವೆ ಬಳಿಕ ತಿರುಪತಿ ಸೇರಿ ವಿವಿಧ ದೇವಸ್ಥಾನಗಳಿಗೆ ವಿಜಯ್-ರಶ್ಮಿಕಾ ಭೇಟಿ ನೀಡಿದ್ದರು. ದೇಶಾದ್ಯಂತ ಸಿಹಿ ಹಂಚಿ, ಅನ್ನದಾನ ಮಾಡಿ ತಮ್ಮ ಮದುವೆಯನ್ನು ಸಂಭ್ರಮಿಸಿದ್ದರು.
ಎರಡು ದಿನಗಳ ಹಿಂದೆ ವಿಜಯ್ ತಮ್ಮ ಹುಟ್ಟೂರಿನ ಜನರ ಜೊತೆ ಮದುವೆ ಸಂಭ್ರಮಾಚರಣೆ ಮಾಡಿದ್ದರು. ತಂದೆ ಆಸೆಯಂತೆ ಊರಿನ ಜನರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಿದ್ದರು. ಹುಟ್ಟೂರಿನ ಸುತ್ತಮುತ್ತ 40ಕ್ಕೂ ಅಧಿಕ ಶಾಲೆಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಆರಂಭಿಸುವುದಾಗಿ ವಿಜಯ್ ಘೋಷಿಸಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಕೆಲ ಅಭಿಮಾನಿಗಳನ್ನು ಭೇಟಿ ಮಾಡಿ ಮದುವೆ ಸಂಭ್ರಮ ಹಂಚಿಕೊಂಡಿದ್ದರು. ಅಭಿಮಾನಿಗಳಿಗೆ ತಾವೇ ಊಟ ಬಡಿಸಿದ್ದರು. ಈಗ ಆತಕ್ಷತೆಗೂ ಮುನ್ನ ಮಾಧ್ಯಮದವರನ್ನು ಭೇಟಿ ಮಾಡಿದ್ದಾರೆ.


Click it and Unblock the Notifications











