ವಿರೋಷ್ ಮದುವೆ ಸಂಭ್ರಮದ ಫೋಟೊಗಳು ರಿವೀಲ್; ಕೆಲವೇ ನಿಮಿಷಗಳಲ್ಲಿ ನಿರ್ಮಾಣವಾಯ್ತು ಹೊಸ ದಾಖಲೆ
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಮದುವೆ ಸಡಗರ ಸಂಭ್ರಮದಿಂದ ನೆರವೇರಿದೆ. ಇಂದು(ಫೆಬ್ರವರಿ 26) ರಾಜಸ್ಥಾನದ ಉದಯ್‌ಪುರದ ಐಷಾರಾಮಿ ರೆಸಾರ್ಟ್‌ನಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನೆರವೇರಿದೆ. ಮನೆ ಮನೆಯಲ್ಲಿ ಯಾರೊಬ್ಬರು ಫೋಟೊ, ವೀಡಿಯೋ ಹಂಚಿಕೊಳ್ಳದಂತೆ ಜೋಡಿ ಹೇಳಿತ್ತು. ಮಾಧ್ಯಮದವರಿಗೂ ರೆಸಾರ್ಟ್ ಒಳಗೆ ಪ್ರವೇಶ ಇರಲಿಲ್ಲ.
ಇದೀಗ ಸ್ವತಃ ನವ ವಧುವರರಾದ ವಿಜಯ್ ಹಾಗೂ ರಶ್ಮಿಕಾ ತಮ್ಮ ಮದುವೆಯ ಸುಂದರ ಕ್ಷಣಗಳ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ಲೈಕ್ಸ್ ಗಿಟ್ಟಿಸಿದೆ. ತೆಲುಗು ಸಂಪ್ರದಾಯದಂತೆ ಬೆಳಗ್ಗೆ ಮದುವೆ ಶಾಸ್ತ್ರಗಳು ನೆರವೇರಿದೆ. ಸಂಜೆ ಕೊಡವ ಸಂಪ್ರದಾಯದಂತೆ ಮದುವೆ ನಡೆದಿದೆ.

ಮದುವೆ ಮನೆಯಿಂದ ಯಾವುದೇ ಫೋಟೊ, ವೀಡಿಯೋ ಲೀಕ್ ಆಗದಂತೆ ರಶ್ಮಿಕಾ, ವಿಜಯ್ ತಂಡ ಎಚ್ಚರಿಕೆ ವಹಿಸಿತ್ತು. ಅಂತಿಮವಾಗಿ ವಿಜಯ್ ಹಾಗೂ ರಶ್ಮಿಕಾ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
"ಅವಳು ನನ್ನ ಜೊತೆ ಇದ್ದಿದ್ದರೆ ನನ್ನ ದಿನ ಚೆನ್ನಾಗಿರುತ್ತಿತ್ತು ಅಂತ ಅನಿಸುವಷ್ಟು ಅವಳನ್ನು ಮಿಸ್ ಮಾಡಿಕೊಂಡೆ. ಅವಳ ಜೊತೆ ಊಟ ಮಾಡಿದರೆ ಚೆನ್ನಾಗಿರುತ್ತಿತ್ತು. ಅವಳೊಟ್ಟಿಗೆ ವರ್ಕ್‌ಔಟ್ ಮಾಡಿದರೆ ಫನ್ ಎನಿಸುತ್ತಿತ್ತು. ನಾನು ಎಲ್ಲೇ ಇದ್ದರೂ ಮನೆಯ ವಾತಾವರಣ ಮತ್ತು ಶಾಂತತೆಯನ್ನು ಅನುಭವಿಸಲು ಅವಳು ನನಗೆ ಬೇಕಾಗಿದ್ದಳು. ಹಾಗಾಗಿ ನನ್ನ ಆಪ್ತ ಗೆಳತಿಯನ್ನು ನನ್ನ ಮಡದಿಯಾಗಿ ಬರಮಾಡಿಕೊಂಡೆ" ಎಂದು ವಿಜಯ್ ದೇವರಕೊಂಡ ಕ್ಯಾಪ್ಷನ್ ಕೊಟ್ಟಿದ್ದಾರೆ.
ಈಗ ನಿಮಗೆ "ನನ್ನ ಗಂಡ" ರನ್ನು ಪರಿಚಯಿಸುತ್ತಿದ್ದೇನೆ. ವಿಜಯ್ ದೇವರಕೊಂಡ. ನಿಜವಾದ ಪ್ರೀತಿ ಹೇಗಿರುತ್ತದೆ ಎಂದು ನನಗೆ ಕಲಿಸಿದ ವ್ಯಕ್ತಿ. ಯಾರೂ ನೋಡದ ಹಾಗೆ ನೃತ್ಯ ಮಾಡುವುದನ್ನು ಎಂದಿಗೂ ತಡೆಯದ ವ್ಯಕ್ತಿ. ವಿಜ್ಜು ನಿನ್ನ ಬಗ್ಗೆ ನನಗಿರುವ ಭಾವನೆಗಳನ್ನು ವಿವರಿಸಲು ನನಗೆ ಯಾವಾಗಲೂ ಪದಗಳ ಕೊರತೆಯಿದೆ. ನಾನು ಯಾವಾಗಲೂ ನಿನಗೆ ಅದನ್ನು ಹೇಳಿದ್ದೇನೆ. ನಿಮ್ಮ ಹೆಂಡತಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ನಿಮ್ಮ ಹೆಂಡತಿ ಎಂದು ಕರೆಸಿಕೊಳ್ಳಲು ಖುಷಿಯಾಗಿದೆ" ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ವಿಜಯ್ ಹಾಗೂ ರಶ್ಮಿಕಾ ಪೋಸ್ಟ್ ಕೇವಲ 30 ನಿಮಿಷಗಳಲ್ಲಿ ತಲಾ 1 ಮಿಲಿಯನ್ ಲೈಕ್ಸ್ ಗಿಟ್ಟಿಸಿಕೊಂಡಿತ್ತು. 60 ನಿಮಿಷದಲ್ಲಿ ವಿಜಯ್ ಪೋಸ್ಟ್‌ಗೆ 2.7 ಮಿಲಿಯನ್ ಲೈಕ್ಸ್ ಸಿಕ್ಕಿತ್ತು. ರಶ್ಮಿಕಾ ಪೋಸ್ಟ್‌ಗೆ 3 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಸಿಕ್ಕಿರೋದು ವಿಶೇಷ. ಅಭಿಮಾನಿಗಳು ಜೋಡಿಗೆ ಲೈಕ್ಸ್, ಕಾಮೆಂಟ್ಸ್ ಮೂಲಕ ಶುಭಾಶಯ ಕೋರುತ್ತಿದ್ದಾರೆ.
'ಗೀತಾಗೋವಿಂದಂ' ಚಿತ್ರದಲ್ಲಿ ಮೊದಲ ಬಾರಿಗೆ ವಿಜಯ್, ರಶ್ಮಿಕಾ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆಗ ಶುರುವಾದ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿತ್ತು. 'ಡಿಯರ್ ಕಾಮ್ರೆಡ್' ಸಿನಿಮಾದಲ್ಲಿ ಜೋಡಿ ಮತ್ತೆ ಜೊತೆಯಾಗಿತ್ತು. ಇಬ್ಬರ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿತ್ತು. ಇದೀಗ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಿದ್ದಾರೆ.
ಇಷ್ಟು ದಿನ ನಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಬರುತ್ತಿದ್ದರು. ಆದರೆ ಬಹಳ ದಿನಗಳಿಂದ ಇಬ್ಬರ ಡೇಟಿಂಗ್ ಬಗ್ಗೆ ಊಹಾಪೋಹ ಶುರುವಾಗಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಎಲ್ಲಾ ಸುಳ್ಳು ಎನ್ನುವಂತೆ ಉತ್ತರಿಸುತ್ತಿದ್ದರು. ಫೆಬ್ರವರಿ 26ರಂದು ಮದುವೆ ಎಂದು ಬಹಳ ಹಿಂದೆಯೇ ಗುಲ್ಲಾಗಿತ್ತು. ಆದರೂ ರಶ್ಮಿಕಾ ಇದನ್ನು ಒಪ್ಪಿಕೊಂಡಿರಲಿಲ್ಲ. 3 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಮದುವೆ ವಿಚಾರ ಖಚಿತಪಡಿಸಿದ್ದರು. ಕೆಲವೇ ಆಪ್ತರನ್ನು ಮದುವೆಗೆ ಜೋಡಿ ಆಹ್ವಾನಿಸಿದೆ. ಶಿವಣ್ಣ, ಯಶ್, ಸುದೀಪ್ ಸೇರಿ ಕನ್ನಡದಲ್ಲಿ ಕೆಲ ತಾರೆಯರಿಗೆ ಮದುವೆ ಆಮಂತ್ರಣ ತಲುಪಿದೆ.


Click it and Unblock the Notifications











