ರಶ್ಮಿಕಾ- ವಿಜಯ್ ದೇವರಕೊಂಡ ಕನಸಿನ ಹನಿಮೂನ್; ವೀಡಿಯೋ ಹಂಚಿಕೊಂಡ ಜೋಡಿ
ನವದಂಪತಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಸದ್ಯ ಹನಿಮೂನ್ ಸಂಭ್ರಮದಲ್ಲಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಥಾಯ್ಲೆಂಡ್‌ನಲ್ಲಿ ದಂಪತಿ ಬೀಡುಬಿಟ್ಟಿದ್ದಾರೆ. ಆತ್ಮೀಯ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ವಿಜಯ್, ರಶ್ಮಿಕಾ ತಬ್ಬಿಕೊಂಡಿದ್ದ ಫೋಟೊವೊಂದು ವೈರಲ್ ಆಗಿತ್ತು. ಇದೀಗ ತಮ್ಮ ಕನಸಿನ ಹನಿಮೂನ್ ಬಗ್ಗೆ ಜೋಡಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ.
ಹನಿಮೂನ್‌ಗಾಗಿ ವಿಜಯ್, ರಶ್ಮಿಕಾ ಥಾಯ್ಲೆಂಡಿನ ಕೊಹ್ ಸಮುಯಿ ದ್ವೀಪಕ್ಕೆ ಹೋಗಿದ್ದಾರೆ. ಅಲ್ಲಿನ ರೆಸಾರ್ಟ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸ್ನೇಹಿತರು ಕೂಡ ಜೊತೆಗಿದ್ದಾರೆ. "ಮದುವೆ ಸಂಭ್ರಮದ ನಂತರ, ನಾವು ಒಂದೆರಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ಬಯಸಿದ್ದೆವು. ಶಾಂತವಾದ ಬೆಳಿಗ್ಗೆ, ಮಧ್ಯಾಹ್ನ ಈಜು, ಮತ್ತು ಸಂಜೆ ಟೇಬಲ್ ಟೆನ್ನಿಸ್, ಪೂಲ್ ಮತ್ತು ಸಿನಿಮಾ, ಹೆಚ್ಚು ಕಾಲ ಖುಷಿಖುಷಿಯಾಗಿದ್ದೆವು. ಕೊಹ್ ಸಮುಯಿಯಲ್ಲಿರುವ ಈ ರೆಸಾರ್ಟ್ ಮನೆಯಂತೆ ಭಾಸವಾಯಿತು. ಆ ದಿನಗಳ ಕೆಲವು ಕ್ಷಣಗಳು... ಸ್ನೇಹಿತರೊಂದಿಗೆ ಮತ್ತು ಮನೆ ನಗುವಿನಿಂದ ತುಂಬಿತ್ತು" ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ಫೆಬ್ರಚರಿ 26ರಂದು ಉದಯ್‌ಪುರದಲ್ಲಿ ವಿಜಯ್ ಹಾಗೂ ರಶ್ಮಿಕಾ ಮದುವೆ ನಡೆದಿತ್ತು. ಬಳಿಕ ಹೈದರಾಬಾದ್‌ನಲ್ಲಿ ರಿಸೆಪ್ಷನ್ ಪಾರ್ಟಿ ನಡೆದಿತ್ತು. ಮುಂದಿನ 5 ವರ್ಷ ಇದೇ ರೀತಿ ಮತ್ತಷ್ಟು ದೇಶಗಳನ್ನು ಸುತ್ತಾಡಲು ದಂಪತಿ ಬಯಸಿದ್ದಾರೆ. ಈ ಬಗ್ಗೆ ರೀಲ್‌ನಲ್ಲಿ ಇಬ್ಬರೂ ಮಾತನಾಡಿದ್ದಾರೆ. ಜೋಡಿ ಸುಂದರ ಕ್ಷಣಗಳ ಝಲಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಶೀಘ್ರದಲ್ಲೇ 'ರಣಬಾಲಿ' ಚಿತ್ರದ ಚಿತ್ರೀಕರಣದಲ್ಲಿ ಇಬ್ಬರೂ ಭಾಗಿ ಆಗಲಿದ್ದಾರೆ.
'ಗೀತಾಗೋವಿಂದಂ' ಚಿತ್ರದಲ್ಲಿ ಮೊದಲಿಗೆ ವಿಜಯ್, ರಶ್ಮಿಕಾ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಆ ಬಳಿಕ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಎಂಗೇಜ್‌ಮೆಂಟ್ ಮುರಿದುಬಿದ್ದಿತ್ತು. ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ರಶ್ಮಿಕಾ ನಟಿಸೋಕೆ ಆರಂಭಿಸಿದ್ದರು. ಅದೇ ಸಮಯದಲ್ಲಿ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ಮತ್ತೆ ಜೋಡಿ ಒಂದಾಗಿತ್ತು. ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿತ್ತು.
ಮೊದಲಿಗೆ ರಶ್ಮಿಕಾ ತಮ್ಮ ಪ್ರೀತಿ ವಿಚಾರವನ್ನು ವಿಜಯ್ ಬಳಿ ಹೇಳಿಕೊಂಡಿದ್ದರು ಎನ್ನಲಾಗ್ತಿದೆ. ಬಳಿಕ ಕದ್ದು ಮುಚ್ಚಿ ಡೇಟಿಂಗ್ ನಡೆಸುತ್ತಿದ್ದ ಜೋಡಿ ಮದುವೆಗೆ ತಯಾರಿ ನಡೆಸಿದ್ದರು. ಇಬ್ಬರೂ ಲವ್ ಮಾಡ್ತಿದ್ದೀರಾ? ಮದುವೆ ಆಗ್ತೀರಾ? ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರ ಕೊಡುತ್ತಿದ್ದರು. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಮಾತ್ರ ಹೇಳುತ್ತಿದ್ದರು. ಆದರೆ ಇಬ್ಬರೂ ಪ್ರತ್ಯೇಕವಾಗಿ ಹಂಚಿಕೊಳ್ಳುತ್ತಿದ್ದ ಫೋಟೊ, ವೀಡಿಯೋಗಳನ್ನು ನೋಡಿ ಅಭಿಮಾನಿಗಳು ಇಬ್ಬರ ಸೀಕ್ರೆಟ್ ಲವ್ ಬಗ್ಗೆ ಚರ್ಚಿಸುತ್ತಿದ್ದರು.
ವಿಜಯ್ ದೇವರಕೊಂಡ ಸ್ನೇಹಿತರ ಜೊತೆ ರಶ್ಮಿಕಾ ಈ ಹಿಂದೆ ಕೂಡ ಪ್ರವಾಸಕ್ಕೆ ಹೋಗಿ ಬಂದಿದ್ದರು. ವಿಜಯ್ ಫ್ಯಾಮಿಲಿ ಜೊತೆಗೆ ದುಬೈ ಪ್ರವಾಸ ಮಾಡಿ ಬಂದಿದ್ದಾಗಿ ಗುಲ್ಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಕೆಲ ದಿನಗಳ ಹಿಂದೆ ಇಬ್ಬರು ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆಗ ಕೂಡ ಜೋಡಿ ಮಾತನಾಡಲಿಲ್ಲ. ಮದುವೆಗೆ 2 ದಿನ ಬಾಕಿ ಇರುವಾಗ ವಿಷಯ ಬಹಿರಂಗಪಡಿಸಿದ್ದರು.


Click it and Unblock the Notifications











