ಪ್ರವಾಸಿಗರ ಸ್ವರ್ಗದಲ್ಲಿ ವಿಜಯ್-ರಶ್ಮಿಕಾ ದೇವರಕೊಂಡ ಜಾಲಿ ಜಾಲಿ; ಹನಿಮೂನ್ ಫೋಟೊ ವೈರಲ್
ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಈಗ ಹನಿಮೂನ್ ಮೂಡ್‌ನಲ್ಲಿದ್ದಾರೆ. ಇಬ್ಬರೂ ಸದ್ಯ ಥಾಯ್ಲೆಂಡ್‌ನಲ್ಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಇಬ್ಬರೂ ರೊಮ್ಯಾಂಟಿಕ್ ಮೂಡ್‌ನಲ್ಲಿ ಚಿಲ್ ಮಾಡುತ್ತಿರುವ ಫೋಟೊವೊಂದು ಸಖತ್ ವೈರಲ್ ಆಗುತ್ತಿದೆ.
ಮೊನ್ನೆ(ಮಾರ್ಚ್ 19) ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ತೆ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. 'ದಿ ಗಲ್‌ಫ್ರೆಂಡ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ತೆಲಂಗಾಣ ರಾಜ್ಯಪ್ರಶಸ್ತಿ ಸ್ವೀಕರಿಸಿದ್ದರು. ಅತ್ತೆ ಜೊತೆ ಪಾರ್ಟಿ ಮಾಡೋಣ ಎಂದಿದ್ದರು. ಇದೀಗ ಥಾಯ್ಲೆಂಡ್‌ನಲ್ಲಿ ಹನಿಮೂನ್ ಗುಂಗಿನಲ್ಲಿದ್ದಾರೆ ಎಂದು ಹೇಳಲಾಗ್ತಿದೆ. ಕ್ಯಾಷ್ಯುವಲ್ ಡ್ರೆಸ್‌ನಲ್ಲಿ ವಿಜಯ್ ಹಾಗೂ ರಶ್ಮಿಕಾ ತಬ್ಬಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಫೋಟೊ ಅಭಿಮಾನಿಗಳ ಗಮನ ಸೆಳೆದಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ವಿಜಯ್ ಮತ್ತು ರಶ್ಮಿಕಾ ಖಾಸಗಿ ಏರ್‌ಬಿಎನ್‌ಬಿ ವಿಲ್ಲಾದಲ್ಲಿ ತಂಗಿದ್ದರು ಎನ್ನಲಾಗಿದೆ. ಆಗ್ನೇಯ ಏಷ್ಯಾದ ಮಧ್ಯಭಾಗದಲ್ಲಿರುವ ಥಾಯ್ಲೆಂಡ್ ಬೀಚ್‌ಗಳು, ಸಾಂಸ್ಕೃತಿಕ ದೇವಾಲಯಗು, ಹಚ್ಚ ಹಸುರಿನ ಕಾಡು ಹಾಗೂ ರುಚಿಕರ ತಿನಿಸುಗಳಿಗೆ ಪ್ರಸಿದ್ಧಿ. ಪ್ರವಾಸಿಗಳ ಸ್ವರ್ಗ ಎಂದೇ ಕರೆಯುವ ಥಾಯ್ಲೆಂಡ್‌ಗೆ ಸಾಕಷ್ಟು ಜನ ಹನಿಮೂನ್‌ಗಾಗಿ ತೆರಳುತ್ತಾರೆ. ರಶ್ಮಿಕಾ ಹಾಗೂ ವಿಜಯ್ ಒಟ್ಟಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ವಿಜಯ್ ಹಾಗೂ ಸ್ನೇಹಿತರ ಜೊತೆಗೆ ರಶ್ಮಿಕಾ ಪ್ರವಾಸಗಳಿಗೆ ಹೋಗುತ್ತಿದ್ದರು. ಒಮ್ಮೆ ವಿಜಯ್ ಕುಟುಂಬ ಸದಸ್ಯರ ಜೊತೆ ದುಬೈ ಪ್ರವಾಸಕ್ಕೆ ರಶ್ಮಿಕಾ ಹೋಗಿದ್ದಾಗಿ ಸುದ್ದಿ ಆಗಿತ್ತು.
ತಮ್ಮ ಕನಸಿನಂತೆ ಬಹಳ ಅದ್ಧೂರಿಯಾಗಿ ವಿಜಯ್ ಹಾಗೂ ರಶ್ಮಿಕಾ ಕಲ್ಯಾಣೋತ್ಸವ ನಡೆದಿತ್ತು. ಉದಯ್‌ಪುರದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ತೆಲಂಗಾಣ ಹಾಗೂ ಕೊಡವ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ನಡೆದಿತ್ತು. ಫೆಬ್ರವರಿ 26ರಂದು ಹಸೆಮಣೆ ಏರಿದ್ದ ಜೋಡಿ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಆಪ್ತರಿಗೆ ರಿಸೆಪ್ಷನ್ ಪಾರ್ಟಿ ಆಯೋಜಿಸಿದ್ದರು. ಸಾಕಷ್ಟು ತಾರೆಯರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದರು.
ಅದ್ಧೂರಿ ಮಾತ್ರವಲ್ಲ ಅರ್ಥಪೂರ್ಣವಾಗಿ ವಿಜಯ್-ರಶ್ಮಿಕಾ ತಮ್ಮ ಮದುವೆಯನ್ನು ಸಂಭ್ರಮಿಸಿದ್ದರು. ದೇಶಾದ್ಯಂತ ಅಭಿಮಾನಿಗಳಿಗೆ ಸಿಹಿ ಹಂಚಿದ್ದರು. ದೇವಾಲಯಗಳಿಗೆ ದೇಣಿಗೆ ನೀಡಿ ಅನ್ನದಾನಕ್ಕೂ ಕೈ ಜೋಡಿಸಿದ್ದರು. ವಿಜಯ್ ತಮ್ಮ ಹುಟ್ಟೂರಿನ ಜನರಿಗೆ ಮದುವೆ ಊಟ ಹಾಕಿಸಿದ್ದರು. ಬಳಿಕ ಹೈದರಾಬಾದ್‌ನಲ್ಲಿ ಕೆಲ ಅಭಿಮಾನಿಗಳನ್ನು ಕರೆದು ಊಟ ಹಾಕಿಸಿ ಕೆಲ ಸಮಯ ಕಳೆದಿದ್ದರು. ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಂದಿದ್ದರು. ನನ್ನನ್ನು ಮದುವೆಗೆ ಯಾಕೆ ಕರೆಯಲಿಲ್ಲ ಎಂದು ಪುಟಾಣಿ ಅಭಿಮಾನಿಯೊಬ್ಬಳು ಮುನಿಸಿಕೊಂಡಿದ್ದಳು. ಆಕೆಯನ್ನು ಮನೆಗೆ ಕರೆಸಿ ಊಟ ಹಾಕಿಸಿ ವಿರೋಷ್ ಜೋಡಿ ಸಂಭ್ರಮಿಸಿತ್ತು. ಮದುವೆ ಬಳಿಕ ತಮ್ಮ ಸಿನಿಮಾ ಕೆಲಸಗಳ ರಶ್ಮಿಕಾ, ವಿಜಯ್ ಬ್ಯುಸಿಯಾಗುತ್ತಿದ್ದಾರೆ. ಅದಕ್ಕೂ ಮುನ್ನ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.
'ಗೀತಗೋವಿಂದಂ' ಹಾಗೂ 'ಡಿಯರ್ ಕಾಮ್ರೆಡ್' ಬಳಿಕ 'ರಣಬಾಲಿ' ಎಂಬ ಚಿತ್ರದಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಿಗೆ ನಟಿಸುತ್ತಿದ್ದಾರೆ. ಮದುವೆ ಬಳಿಕ ಇದೇ ಸಿನಿಮಾ ಚಿತ್ರೀಕರಣದಲ್ಲಿ ಇಬ್ಬರೂ ಭಾಗವಹಿಸಲಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ವಿಜಯ್ ಈ ಬಾರಿ ಪತ್ನಿ ಜೊತೆ ಸೇರಿ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದ್ದಾರೆ. ಇನ್ನುಳಿದಂತೆ ಬಾಲಿವುಡ್ 'ಕಾಕ್ಟೇಲ್'-2 ಸಿನಿಮಾ ಕೆಲಸಗಳನ್ನು ರಶ್ಮಿಕಾ ಮುಗಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಮತ್ತಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತದೆ.


Click it and Unblock the Notifications











