Kushi : 75 ಕೋಟಿ ರೂ. ಗಳಿಸುವತ್ತ ಸಮಂತಾ, ವಿಜಯ್ ದೇವರಕೊಂಡ ಅಭಿನಯದ 'ಖುಷಿ'
ವಿಜಯ್ ದೇವರಕೊಂಡ ಮತ್ತು ಸಮಂತಾ ಅಭಿನಯದ 'ಖುಷಿ' ಉತ್ತಮ ಓಪನಿಂಗ್ ಪಡೆದುಕೊಂಡ ನಂತರ ಥಿಯೇಟರ್‌ಗಳಲ್ಲಿ ಒಳ್ಳೆಯ ಗಳಿಕೆಯನ್ನು ಮಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ಭಾನುವಾರದಂದು (ಸೆಪ್ಟೆಂಬರ್ 3) ಈ ಚಿತ್ರವು ಭಾರತದಲ್ಲಿ 11 ಕೋಟಿ ನಿವ್ವಳ ಗಳಿಕೆ ದಾಖಲಿಸಿದೆ.
ವಿಶ್ವಾದ್ಯಂತ ಖುಷಿ ಚಿತ್ರ 75 ಕೋಟಿ ರೂಪಾಯಿ ಗಳಿಸುವತ್ತ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಈ ಮೈಲಿಗಲ್ಲು ಸಾಧಿಸುವ ಸಾಧ್ಯತೆ ಇದೆ. ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕಾದಲ್ಲಿ ಖುಷಿ ಸಿನಿಮಾ ಉತ್ತಮ ಪ್ರದರ್ಶನ ನೀಡುತ್ತಿದೆ ಎಂಬ ವರದಿಗಳಿವೆ. ನಟಿ ಸಮಂತಾ ಸದ್ಯ ಯುಎಸ್‌ನಲ್ಲಿಯೇ ಇದ್ದಾರೆ.

ವಿಶ್ವದಾದ್ಯಂತ 75 ಕೋಟಿ ಗಳಿಸುವತ್ತ ಖುಷಿ!
'ಖುಷಿ' ಸೆಪ್ಟೆಂಬರ್ 1 ರಂದು ಐದು ಭಾಷೆಗಳಲ್ಲಿ ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಶಿವ ನಿರ್ವಾಣ ಅವರ ನಿರ್ದೇಶನದ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಪ್ರಕಾರ, ಖುಷಿ ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದಿದೆ.
ಸಿನಿಮಾ ಬಿಡುಗಡೆಯಾದ ಮೂರನೇ ದಿನ (ಸೆಪ್ಟೆಂಬರ್ 3) ಬಾಕ್ಸ್ ಆಫೀಸ್‌ನಲ್ಲಿ ಖುಷಿ ಭಾರತದಲ್ಲಿ 11 ಕೋಟಿ ನಿವ್ವಳ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ಚಿತ್ರದ ಸೆಪ್ಟೆಂಬರ್ 2 ರ ಕಲೆಕ್ಷನ್‌ಗಿಂತ ಸ್ವಲ್ಪ ಹೆಚ್ಚಾಗಿದೆ. ಭಾರತದಲ್ಲಿ 3 ದಿನದ ಒಟ್ಟು ಕಲೆಕ್ಷನ್ ಈಗ 36.15 ಕೋಟಿ ರೂ. ಸೆಪ್ಟೆಂಬರ್ 3 ರಂದು, ಚಿತ್ರವು ಶೇಕಡಾ 51.46 ರಷ್ಟು ಥಿಯೇಟರ್ ಆಕ್ಯುಪೆನ್ಸಿ ದಾಖಲಿಸಿದೆ.
ಖುಷಿ ಎರಡನೇ ದಿನ ಕಲೆಕ್ಷನ್‌ನಲ್ಲಿ ಕೊಂಚ ಕುಸಿತ ಕಂಡಿತ್ತು. ಅಂದಾಜು 9 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎಂದು ವರದಿ ತಿಳಿಸಿತ್ತು. ಆದರೆ ಭಾನುವಾರ ಮತ್ತೆ ಖುಷಿ ಬಾಕ್ಸ್ ಆಫೀಸ್ ಕಲೆಕ್ಷನ್ ಏರಿಕೆಯಾಗಿದೆ. ವೀಕೆಂಡ್‌ಗಳು ಸಿನಿಮಾ ಕಲೆಕ್ಷನ್ ಮೇಲೆ ಹೆಚ್ಚು ಪ್ರಭಾವ ಬೀರುವ ಅಂಶಗಳು ಎಂಬುದು ಇದರಿಂದ ಮತ್ತೆ ಸಾಬೀತಾಗುತ್ತದೆ.

ಸಿನಿಮಾ ಉತ್ತಮ ಪ್ರದರ್ಶನ ತೋರುತ್ತಿದೆ ಎಂಬ ಬೆನ್ನಲ್ಲೇ ನಟ ವಿಜಯ್ ದೇವರಕೊಂಡ, ಸಿನಿಮಾ ತಂಡ ಮತ್ತು ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದರು. "ಖುಷಿ ಬ್ಲಾಕ್‌ಬಸ್ಟರ್ ಆದ ಬಳಿಕ ವಿಜಯ ದೇವರಕೊಂಡ ತಮ್ಮ ಕುಟುಂಬ ಮತ್ತು ತಂಡದೊಂದಿಗೆ ಯಾದಾದ್ರಿ ದೇವಸ್ಥಾನದಲ್ಲಿ ದೇವರ ಆಶೀರ್ವಾದ ಪಡೆದರು" ಎಂದು ಮೈತ್ರಿ ಮೂವಿ ಮೇಕರ್ಸ್ ಫೋಟೋಗಳನ್ನು ಹಂಚಿಕೊಂಡಿತ್ತು.
ಇನ್ನು, ಖುಷಿ ಸಿನಿಮಾದ ಹಲವು ಎಓಮ್ಯಾಂಟಿಕ್, ಬೆಡ್ ರೂಮ್ ದೃಶ್ಯಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದವು. ಇದಕ್ಕೆ ಹಲವು ಮಂದಿ ಅರ್ಜುನ್ ರೆಡ್ಡಿ ಬ್ಯಾಕ್ ಎಂದು ಕಾಮೆಂಟ್ ಮಾಡಿದ್ದರು. ಸದ್ಯ ಈ ದೃಶ್ಯಗಳಿಗೆ ಕಾಪಿರೈಟ್ ನಿಬಂಧನೆ ಅಡಿಯಲ್ಲಿ ತಡೆ ಹಿಡಿಯಲಾಗಿದೆ. ಟ್ವಿಟರ್ ಹಲವು ಬಳಕೆದಾರರ ಖಾತೆಯಿಂದ ಸೀನ್‌ಗಳನ್ನು ತೆಗೆದುಹಾಕಿದೆ.
ಖುಷಿ, ಶಿವ ನಿರ್ವಾಣ ಬರೆದು ನಿರ್ದೇಶಿಸಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಚಿನ್ ಖೇಡೇಕರ್, ಶರಣ್ಯ ಪೊನ್ವಣ್ಣನ್, ಮುರಳಿ ಶರ್ಮಾ, ಲಕ್ಷ್ಮಿ ಮತ್ತು ರಾಹುಲ್ ರಾಮಕೃಷ್ಣ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











