SC/ST ಕಾಯ್ದೆ ಅಡಿ ದೂರು ದಾಖಲಾಗಿ ವಿಜಯ್ ದೇವರಕೊಂಡಗೆ ಸಂಕಷ್ಟ
ವಿವಾದಾತ್ಮಕ ಹೇಳಿಕೆ ನೀಡಿ ತೆಲುಗು ನಟ ವಿಜಯ್ ದೇವರಕೊಂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡದವರ ಬಗ್ಗೆ 'ಅರ್ಜುನ್ ರೆಡ್ಡಿ' ನಟ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ನಟನ ವಿರುದ್ಧ ದೂರು ದಾಖಲಾಗಿದೆ.
ತಮಿಳು ನಟ ಸೂರ್ಯ ನಟನೆಯ 'ರೆಟ್ರೋ' ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ವಿಜಯ್ ದೇವರಕೊಂಡ ನಟಿಸಿದ್ದರು. ವೇದಿಕೆಯಲ್ಲಿ ಮಾತನಾಡುತ್ತಾ ಬಾಯ್ತಪ್ಪಿ ಎಡವಟ್ಟು ಮಾಡಿಕೊಂಡಿದ್ದರು. ವಿಜಯ್ ಹೇಳಿಕೆಯನ್ನು ಬುಡಕಟ್ಟು ಜನ ಸಂಘದವರು ಖಂಡಿಸಿದ್ದರು. ವಕೀಲ ಕಿಶನ್ ಲಾಲ್ ಎಂಬುವವರು ಎಸ್. ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಏಪ್ರಿಲ್‌ನಲ್ಲಿ ವಿಜಯ್ ದೇವರಕೊಂಡ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ನೀಡಿದ ದೂರಿನ ಆಧಾರದ ಮೇಲೆ ಜೂನ್ 17 ರಂದು ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಿನಿಮಾಗಳಲ್ಲಿ ರಫ್ ಅಂಡ್ ಟಫ್ ಪಾತ್ರಗಳಲ್ಲಿ ನಟಿಸಿ ಡೈಲಾಗ್ ಹೊಡೆಯುವ ವಿಜಯ್ ವೇದಿಕೆಗಳಲ್ಲಿ ಕೂಡ ಭಾವುಕರಾಗಿ ರೋಷಾವೇಶದ ಮಾತುಗಳನ್ನು ಆಡುತ್ತಿರುತ್ತಾರೆ. ಅದೇ ರೀತಿ ಮಾತನಾಡುವ ಭರದಲ್ಲಿ ಕೊಟ್ಟ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಏಪ್ರಿಲ್‌ನಲ್ಲಿ ಭಾರತ-ಪಾಕ್ ಗಡಿಯಲ್ಲಿ ಸಂಘರ್ಷ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ 'ರೆಟ್ರೊ' ಚಿತ್ರದ ಈವೆಂಟ್ ನಡೀತಿತ್ತು. ಸಿನಿಮಾ ಬಗ್ಗೆ ಮಾತನಾಡುತ್ತಲೇ ಮಧ್ಯೆ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ದೇವರಕೊಂಡ ಮಾತನಾಡಿದ್ದರು. "ಪಹಲ್ಗಾಮ್‌ನಲ್ಲಿ ನಡೆದ ಘಟನೆಗೆ ಕಾರಣ ಅವರಿಗೆ ಸರಿಯಾದ ವಿದ್ಯಾಭ್ಯಾಸ ಇಲ್ಲದೇ ಇರುವುದು. ಅವರಿಗೆ ವಿದ್ಯಾಭ್ಯಾಸ ನೀಡಿದ್ದರೆ ಬ್ರೈನ್‌ವಾಶ್ ಆಗದಂತೆ ತಡೆಯಬಹುದಿತ್ತು" ಎಂದಿದ್ದರು.
ಬಳಿಕ ಮಾತು ಮುಂದುವರೆಸಿದ್ದ ವಿಜಯ್ "ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡುವುದು ಬೇಡ, ಅಲ್ಲಿನ ಜನ ಅವರ ಸರ್ಕಾರದ ಆಡಳಿತದಿಂದ ಬೇಸತ್ತು ತಿರುಗಿಬೀಳುತ್ತಾರೆ" ಎಂದರು. ನಂತರ "500 ವರ್ಷಗಳ ಹಿಂದೆ ಬುಡಕಟ್ಟು ಜನರು ಹೊಡೆದಾಡುತ್ತಿದ್ದಂತೆ ಪಾಕಿಸ್ತಾನದವರು ಬುದ್ಧಿ ಇಲ್ಲದೇ, ಕಾಮನ್ ಸೆನ್ಸ್ ಇಲ್ಲದವರಂತೆ ಆಡುತ್ತಿದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿ ನಿಲ್ಲಬೇಕು" ಎಂದು ವಿಜಯ್ ಹೇಳಿಕೆ ನೀಡಿದ್ದರು.
ವಿದ್ಯೆಬುದ್ದಿ ಇಲ್ಲದೇ ಬುಡಕಟ್ಟು ಜನ ಹೊಡೆದಾಡಿಕೊಳ್ಳುತ್ತಿದ್ದರು ಎಂದಿದ್ದು ಮಾತ್ರವಲ್ಲದೇ ಬುಡಕಟ್ಟು ಜನರನ್ನು ಪಾಕಿಸ್ತಾನದ ಉಗ್ರರಿಗೆ ಹೋಲಿಸಿದ್ದು ವಿಜಯ್ ದೇವರಕೊಂಡಗೆ ಕಂಟಕವಾಗಿದೆ. ತಮ್ಮ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ನಟ ಟ್ವೀಟ್ ಮಾಡಿದ್ದರು. "ಯಾವುದೇ ಸಮುದಾಯವನ್ನು, ವಿಶೇಷವಾಗಿ ಪರಿಶಿಷ್ಟ ಪಂಗಡಗಳನ್ನು ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶ ನನಗಿರಲಿಲ್ಲ, ಅವರನ್ನು ಬಹಳ ಗೌರವಿಸುತ್ತೇನೆ, ದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತೇನೆ" ಎಂದು ಬರೆದುಕೊಂಡಿದ್ದರು.
ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ನೆನವತ್ ಅಶೋಕ್ ಕುಮಾರ್ ನಾಯಕ್ ಅಲಿಯಾಸ್ ಅಶೋಕ್ ರಾಥೋಡ್ ಇದೀಗ ನಟ ವಿಜಯ್ ದೇವರಕೊಂಡ ವಿರುದ್ಧ ದೂರು ದಾಖಲಿಸಿದ್ದಾರೆ. ಅದ್ಯಾಕೋ ವಿಜಯ್ ದೇವರಕೊಂಡ ಟೈಮೇ ಸರಿ ಇಲ್ಲ ಎನ್ನುವಂತಾಗಿದೆ. 'ಲೈಗರ್' ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಕನಸು ಕಂಡಿದ್ದ ನಟ ಮುಗ್ಗರಿಸಿದ್ದರು.
'ಲೈಗರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಬಳಿಕ 'ಖುಷಿ' ಎಂಬ ಚಿತ್ರದಲ್ಲಿ ನಟಿಸಿದ್ದರು. ಅದು ಕೂಡ ಅಷ್ಟಾಗಿ ಸದ್ದು ಮಾಡಲಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಆಸೆ ಇರಲಿ ಈಗ ಒಂದೇ ಒಂದು ಹಿಟ್ ಕೊಡುವುದು ಕಷ್ಟ ಎನ್ನುವಂತಾಗಿದೆ. 'ಗೀತಾಗೋವಿಂದಂ' ಸಿನಿಮಾದಿಂದ ಹುಟ್ಟಿದ್ದ ಕ್ರೇಜ್ 'ಲೈಗರ್' ಚಿತ್ರದಿಂದ ದಿಢೀರ್ ಕುಸಿದಿತ್ತು. 'ಕಿಂಗ್ಡಮ್' ಎಂಬ ಸಿನಿಮಾದಲ್ಲಿ ಈಗ ನಟಿಸುತ್ತಿದ್ದಾರೆ.
ಪದೇ ಪದೆ 'ಕಿಂಗ್ಡಮ್' ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತಿದೆ. ಜುಲೈ ಕೊನೆ ವಾರದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಅದೇ ವಾರ ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಕೂಡ ಬರ್ತಿದೆ.


Click it and Unblock the Notifications











