ಮದುವೆ ಬೆನ್ನಲ್ಲೇ 40ಕ್ಕೂ ಅಧಿಕ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ತಮ್ಮ ಮದುವೆಯನ್ನು ಬಹಳ ವಿಭಿನ್ನವಾಗಿ ಸಂಭ್ರಮಿಸುತ್ತಾ ಬರ್ತಿದ್ದಾರೆ. ಉದಯ್‌ಪುರದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ ಜೋಡಿ ಸಾಕಷ್ಟು ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ತೊಡಗಿದೆ. ಮದುವೆ ಬೆನ್ನಲ್ಲೇ ತಿರುಪತಿ ಬೆಟ್ಟಕ್ಕೆ ದಂಪತಿ ಭೇಟಿ ನೀಡಿದ್ದರು.
ಮದುವೆ ಬಳಿಕ ವಿಜಯ್ ತಮ್ಮ ತಂದೆ ಹುಟ್ಟೂರಿಗೆ ಪತ್ನಿ ರಶ್ಮಿಕಾ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಲಂಗಾಣದ ಮೆಹಬೂಬ್ ನಗರ್ ಜಿಲ್ಲೆಯ ಬಲ್ಮೂರ್ ಮಂಡಲದ ತುಮ್ಮನ್‌ಪೇಟೆಯಲ್ಲಿ ಊರಿನ ಜನರಿಂದ ನವ ದಂಪತಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇತ್ತೀಚೆಗೆ ವಿಜಯ್ ಆ ಊರಿನಲ್ಲಿ ಫಾರ್ಮ್ ಹೌಸ್ ನಿರ್ಮಿಸಿದ್ದಾರೆ. ಮದುವೆ ನಂತರದ ಒಂದಷ್ಟು ಶಾಸ್ತ್ರಗಳನ್ನು ಅಲ್ಲಿ ನೆರವೇರಿಸಲಾಯಿತು. ದಂಪತಿ ತುಳಸಿ ಪೂಜೆ, ಸತ್ಯ ನಾರಾಯಣ ವ್ರತ ಮಾಡಿದ್ದಾರೆ. ಊರಿನ ಜನರಿಗೆ ಭರ್ಜರಿ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಕಾರ್ಯಕ್ರಮ ಮುಗಿದ ಬಳಿಕ ಊರಿನ ಜನರನ್ನು ಉದ್ದೇಶಿಸಿ ರಶ್ಮಿಕಾ ಹಾಗೂ ವಿಜಯ್ ಮಾತನಾಡಿದ್ದಾರೆ. ನನ್ನ ಮದುವೆಗೆ ಊರಿನ ಜನರಿಗೆ ಊಟ ಹಾಕಿಸಬೇಕು ಎನ್ನುವುದು ನನ್ನ ತಂದೆ ಆಸೆ ಆಗಿತ್ತು. ಅದನ್ನು ಈಗ ನೆರವೇರಿಸಲಾಗಿದೆ ಎಂದಿದ್ದಾರೆ. ಇನ್ನು ತಮ್ಮ ದೇವರಕೊಂಡ ಫೌಂಡೇಷನ್ ಮೂಲಕ ತಮ್ಮ 40 ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವುದಾಗಿ ಘೋಷಿಸಿದ್ದಾರೆ. ಮದುವೆ ಬಳಿಕ ಇದೇ ಮೊದಲ ಬಾರಿಗೆ ವಿಜಯ್, ರಶ್ಮಿಕಾ ಮಾತನಾಡಿದ್ದಾರೆ.
ವಿಜಯ್ ದೇವರಕೊಂಡ ಮಾತನಾಡಿ "ಇದು ನನ್ನ ಊರು. ನಾನು ಇಲ್ಲೇ ಹುಟ್ಟಿದ್ದು. ನನ್ನ ಮೊದಲ ಹುಟ್ಟುಹಬ್ಬ ಇಲ್ಲೇ ಆಚರಿಸಿದ್ದು. ಬಳಿಕ ಫ್ಯಾಮಿಲಿ ಸಮೇತ ಹೈದರಾಬಾದ್ ನಗರಕ್ಕೆ ಶಿಫ್ಟ್ ಆಗಿಬಿಟ್ಟೆವು. ನನಗೆ ಮದುವೆ ಅಂದಾಗ ತಂದೆ ಊರಿಗೆ ಬಂದು ಊರಿನ ಜನರಿಗೆ ಊಟ ಹಾಕಿಸಬೇಕು, ಇಲ್ಲ ಅಂದ್ರೆ ಅದು ಮದುವೆನೇ ಅಲ್ಲ ಎಂದುಬಿಟ್ರು. ಹಾಗಾಗಿ ಮದುವೆ ಬಳಿಕ ಇಲ್ಲಿಗೆ ಬಂದೆ" ಎಂದಿದ್ದಾರೆ.
ನಾನು ಆರಂಭದಲ್ಲಿ ಒಂದಷ್ಟು ಹಣ ಸಂಪಾದಿಸಿದಾಗ ಏನು ಬೇಕು ಅಮ್ಮ ಎಂದು ಹೇಳಿದ್ದೆ. ಒಂದು ಮನೆ ಕಟ್ಸೋ ಅಂದ್ರು ಕಟ್ಟಿಸ್ದೆ. ಅಪ್ಪನನ್ನು ಏನು ಬೇಕು ಅಂತ ಕೇಳಿದ್ದಕ್ಕೆ ಊರಿನಲ್ಲಿ ತೋಟ, ಮನೆ ಮಾಡಿಕೊಡೋ. ವ್ಯವಸಾಯ ಮಾಡ್ಕೊಂದು ಇರ್ತೀನಿ ಅಂದ್ರು. ಅದಕ್ಕೆ ಈ ಮನೆ ಕಟ್ಟಿಸ್ದೆ. ಪ್ರತಿ ವರ್ಷ ಊರಿಗೆ ಬರಬೇಕು ಅನ್ನಿಸುತ್ತೆ. ಬಹಳ ಖುಷಿಯಾಗುತ್ತದೆ. ಇನ್ಮೇಲೆ ಆಗಾಗ್ಗೆ ಬರ್ತೀವಿ. ತಮ್ಮ ಆನಂದ್ ಮದುವೆ ಇಲ್ಲೇ ಮಾಡೋಣ ಎಂದು ವಿಜಯ್ ಊರಿನ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಮದುವೆ ಬಳಿಕ ಏನಾದರೂ ಒಂದು ಒಳ್ಳೆ ಕೆಲಸ ಮಾಡಬೇಕು ಅನ್ನಿಸ್ತಿದೆ. "ಈ ವರ್ಷದಿಂದ ನಮ್ಮ ದೇವರಕೊಂಡ ಫೌಂಡೇಷನ್ ಮೂಲಕ ಅಚಾಂಪೆಟ್ ಸುತ್ತಾ ಮುತ್ತ ಇರುವ 40ಕ್ಕೂ ಅಧಿಕ ಶಾಲೆಗಳ 9 ಹಾಗೂ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೊಡುತ್ತೇವೆ. 9 ಹಾಗೂ 10ನೇ ತರಗತಿಯಲ್ಲಿ ಫಸ್ಟ್ ರ್ಯಾಂಕ್, ಸೆಕೆಂಡ್ ರ್ಯಾಂಕ್ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪ್ರಾರಂಭಿಸುತ್ತೇವೆ" ಎಂದು ವಿಜಯ್ ಮಾಹಿತಿ ನೀಡಿದ್ದಾರೆ.
ರಶ್ಮಿಕಾ ಮಾತನಾಡಿ "ನಿಮ್ಮನ್ನೆಲ್ಲಾ ಭೇಟಿ ಆಗಿದ್ದು ಬಹಳ ಖುಷಿ ತಂದಿದೆ" ಎಂದು ಊರಿನ ಜನರಿಗೆ ಹೇಳಿದ್ದಾರೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ರಶ್ಮಿಕಾ, ವಿಜಯ್ ಮದುವೆ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಕಷ್ಟು ಜನ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಿ ನವ ವಧುವರರನ್ನು ಹಾರೈಸಲಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಹಲವರಿಗೆ ಆಮಂತ್ರಣ ನೀಡಿದ್ದಾರೆ. ಭಾರೀ ಭದ್ರತೆ ನಡುವೆ ಕಾರ್ಯಕ್ರಮ ನಡೆಯಲಿದೆ. ಸಾಕಷ್ಟು ಸಿನಿಮಾ ತಾರೆಯರು ಈ ಸಂಭ್ರಮದಲ್ಲಿ ಭಾಗಿ ಆಗಲಿದ್ದಾರೆ.


Click it and Unblock the Notifications











