Virosh Reception: ವಿಜಯ್-ರಶ್ಮಿಕಾ ರಿಸೆಪ್ಷನ್ ಪಾರ್ಟಿ; ಚಿರಂಜೀವಿ, ಡಿಕೆಶಿ ಸೇರಿ ಗಣ್ಯಾತಿಗಣ್ಯರು ಭಾಗಿ
ನವ ದಂಪತಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿದೆ ನೆರವೇರಿದೆ. ನಗರದ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಗಣ್ಯಾತಿಗಣ್ಯರು ಆಗಮಿಸಿ ನವ ವಧುವರರಿಗೆ ಶುಭ ಹಾರೈಸಿದ್ದಾರೆ. ತೆಲುಗು ನಟರಾದ ಚಿರಂಜೀವಿ, ರಾಮ್‌ಚರಣ್, ನಾಗಾರ್ಜುನಾ, ಅಲ್ಲುಅರ್ಜುನ್, ವೆಂಕಟೇಶ್, ನಟಿಯರಾದ ಮೃಣಾಲ್ ಠಾಕೂರ್, ರಾಧಿಕಾ ಶರತ್‌ಕುಮಾರ್ ಸೇರಿದಂತೆ ಸಾಕಷ್ಟು ತಾರೆಯರು ಆರಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ರಶ್ಮಿಕಾ ಕೆಂಪು ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ವಿಜಯ್ ದೇವರಕೊಂಡ ಬಿಳಿ ಪಂಚೆ ಹಾಗೂ ಶರ್ಟ್ ಧರಿಸಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ವಿರೋಷ್ ಆರತಕ್ಷತೆ ಕಾರ್ಯಕ್ರಮಕ್ಕೆ ಮಾಧ್ಯಮದವರು ಹಾಗೂ ಅಭಿಮಾನಿಗಳಿಗೆ ಪ್ರವೇಶ ಇರಲಿಲ್ಲ. ಬಿಗಿ ಭದ್ರತೆ ನಡುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಸಾಕಷ್ಟು ಗಣ್ಯರನ್ನು ಆರತಕ್ಷತೆ ಕಾರ್ಯಕ್ರಮದಲ್ಲಿ ವಿಜಯ್-ರಶ್ಮಿಕಾ ಜೋಡಿ ಆಮಂತ್ರಣ ನೀಡಿ ಆಹ್ವಾನಿಸಿತ್ತು.

ಕಳೆದೊಂದು ವಾರದಿಂದ ರಶ್ಮಿಕಾ- ವಿಜಯ್ ಮದುವೆ ಸಂಭ್ರಮ ನಡೀತಿದೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯ್‌ಪುರದ ಖಾಸಗಿ ಹೋಟೆಲ್ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಬಳಿಕ ನಾನಾ ರೀತಿಯಲ್ಲಿ ದಂಪತಿ ಸಂಭ್ರಮಾಚರಣೆ ಮಾಡುತ್ತಾ ಬಂದಿದ್ದರು. ಅದ್ಧೂರಿ ಆಗಿ ಮಾತ್ರವಲ್ಲದೇ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅಂತಿಮವಾಗಿ ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಅದಕ್ಕೂ ಮುನ್ನ ಮಾಧ್ಯಮದವರನ್ನು ಭೇಟಿ ಆಗಿ ದಂಪತಿ ಧನ್ಯಾವಾದ ತಿಳಿಸಿದ್ದರು. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಕೇಳಿದ್ದರು.
ವಿರೋಷ್ ದಂಪತಿ ಮದುವೆ ಆರತಕ್ಷತೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ "ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿ ವೈಯಕ್ತಿಕವಾಗಿ ದಂಪತಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸಲು ಸಂತೋಷವಾಗಿದೆ. ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸುತ್ತಿರುವಾಗ ಅವರಿಗೆ ಸಂತೋಷ ಮತ್ತು ಒಗ್ಗಟ್ಟಿನ ಜೀವನವನ್ನು ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್‌ನಿಂದ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ನಟಿ ಕೃತಿ ಸನೂನ್, ಹಿರಿಯ ನಟಿ ನೀನಾ ಗುಪ್ತಾ, ರಿಯಾ ಚಕ್ರವರ್ತಿ ಹೀಗೆ ಹಲವರು ರಿಸೆಪ್ಷನ್ ಪಾರ್ಟಿಗೆ ಸಾಕ್ಷಿ ಆಗಿದ್ದರು. ತಮಿಳು ಚಿತ್ರರಂಗದಲ್ಲಿ ನಟ ಕಾರ್ತಿ, ನಟ ಶರತ್‌ಕುಮಾರ್-ರಾಧಿಕಾ ದಂಪತಿ ಆಗಮಿಸಿ ನವ ದಂಪತಿಗೆ ಶುಭ ಹಾರೈಸಿದ್ದಾರೆ.
ಅಯ್ಯಪ್ಪ ಮಾಲೆ ದೀಕ್ಷೆಯಲ್ಲಿರುವ ನಟ ರಾಮ್‌ಚರಣ್ ಪತ್ನಿ ಉಪಾಸನಾ ಜೊತೆ ವಿರೋಷ್ ರಿಸೆಪ್ಷನ್‌ಗೆ ಹಾಜರಾಗಿದ್ದರು. ಇನ್ನುಳಿದಂತೆ ನಾನಿ, ರವಿತೇಜ, ರಾಣ ದಗ್ಗುಬಾಟಿ, ನಟಿ ಶ್ರೀಲೀಲಾ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪತ್ನಿ ಗೀತಾ, ಬಿಆರ್‌ಎಸ್ ಪಕ್ಷದ ಮುಖಂಡ ಕೆಟಿಆರ್ ಹೀಗೆ ಸಾಕಷ್ಟು ಗಣ್ಯರು ವೇದಿಕೆ ಏರಿ ನವ ದಂಪತಿಗೆ ಅಭಿನಂದನೆ ತಿಳಿಸಿದರು.
ತೆಲುಗು ಸಿನಿಮಾ ನಿರ್ಮಾಪಕರಾದ ಅಶ್ವಿನಿ ದತ್, ದಿಲ್ ರಾಜು, ನಾಗ್‌ವಂಶಿ ಹೀಗೆ ರಶ್ಮಿಕಾ, ವಿಜಯ್ ಆರತಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಚಿತ್ರರಂಗದ ಗಣ್ಯರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮುಂದಿನ ವಾರದಿಂದಲೇ ವಿಜಯ್ ಹಾಗೂ ರಶ್ಮಿಕಾ ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. 'ರಣಬಾಲಿ' ಚಿತ್ರದಲ್ಲಿ ರಶ್ಮಿಕಾ- ವಿಜಯ್ ಒಟ್ಟಿಗೆ ನಟಿಸುತ್ತಿದ್ದಾರೆ. ಮುಂದಿನ ಗುರುವಾರ ವಿಜಯ್ ಚಿತ್ರೀಕರಣಕ್ಕೆ ಹಾಜರಾಗುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











