ನುಡಿದಂತೆ ನಡೆದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ; ಸರ್ಕಾರಿ ಶಾಲೆಯ 180 ವಿದ್ಯಾರ್ಥಿಗಳಿಗೆ ಆಸರೆಯಾದ ಸ್ಟಾರ್ ಜೋಡಿ
ಸಾಮಾನ್ಯವಾಗಿ ಜನ ಸಾಮಾನ್ಯರ ಕಷ್ಟಕ್ಕೆ ಚಿತ್ರರಂಗದವರು ಸ್ಪಂದಿಸುವುದಿಲ್ಲ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ. ಸದಾ ಕಾಲ ಬಾಡಿಗಾರ್ಡ್‌ಗಳಿಂದ ಸುತ್ತುವರೆಯುವ ಇವರಿಗೆ ಬಡವರ ಕಷ್ಟ-ನಷ್ಟ ಕಣ್ಣಿಗೆ ಕಾಣಿಸುವುದೇ ಇಲ್ಲ. ಈ ಕಾರಣದಿಂದ ಬಣ್ಣದ ಪ್ರಪಂಚದಲ್ಲಿ ಮಾನವೀಯತೆ ಸತ್ತು ಹೋಗಿದೆ ಎಂದೇ ಹಲವರು ಅಂದುಕೊಂಡಿದ್ದಾರೆ.
ಇನ್ನು ಕೆಲವರು ಇಲ್ಲಿ ಪ್ರಚಾರ ಪ್ರಿಯರು. ಪ್ರಚಾರಕ್ಕೆ ಮಾತ್ರ ಚಿಕ್ಕ ಪುಟ್ಟ ಸಹಾಯ ಮಾಡಿದಂತೆ ಮಾಡಿ ಕೆಲಸ ಆದ ನಂತರ ಸದ್ದಿಲ್ಲದೇ ಕೈತೊಳೆದುಕೊಂಡು ಇಲ್ಲಿ ಎದ್ದು ನಡೆಯುತ್ತಾರೆ. ಈ ಹಿನ್ನೆಲೆ ತೆರೆಯ ಮೇಲಷ್ಟೇ ಇವರೆಲ್ಲಾ ಹೀರೋ ತೆರೆಯ ಹಿಂದೆ ಅಲ್ಲ ಎಂಬ ಮಾತುಗಳನ್ನು ಜನಸಾಮಾನ್ಯರು ಆಡುತ್ತಾರೆ.

ಆದರೆ, ಈ ಮಾತುಗಳಿಗೆ ಅಪವಾದ ಎಂಬಂತೆ ಅಲ್ಲೊಬ್ಬರು, ಇಲ್ಲೊಬ್ಬರು ತಮ್ಮ ಹತ್ತಿರ ಇರುವ ಕೋಟ್ಯಂತರ ರೂಪಾಯಿ ಸಂಪತ್ತು ಮತ್ತು ಪ್ರಭಾವವನ್ನು ಸಮಾಜದ ಏಳಿಗೆಗಾಗಿ, ಬಡ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉಪಯೋಗ ಮಾಡುತ್ತಾರೆ. ಸಮಾಜಮುಖಿ ಕೆಲಸ ಮಾಡುತ್ತಾರೆ. ಉದಾಹರಣೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದೇವರಕೊಂಡ.
ಹೌದು, ಅಸಲಿಗೆ ಈ ವರ್ಷದ ಆರಂಭದಲ್ಲಿ ಅಂದರೆ ಮದುವೆಯಾದ ತಕ್ಷಣವೇ, ವಿಜಯ್ ದೇವರಕೊಂಡ ತಮ್ಮ ಸ್ವಂತ ಊರಾದ ನಾಗರ್ ಕರ್ನೂಲ್ ಜಿಲ್ಲೆಯ ತುಮ್ಮನ್‌ಪೇಟೆ ಗ್ರಾಮಕ್ಕೆ ಭೇಟಿ ನೀಡಿದ್ದರು.
ಅಚ್ಚಂಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಒದಗಿಸುವ ಮಾತುಗಳನ್ನಾಡಿದ್ದರು. ತಮ್ಮ ವೃತ್ತಿಜೀವನದಲ್ಲಿ ತಮಗೆ ಇಷ್ಟೊಂದು ಪ್ರೀತಿ ಮತ್ತು ಬೆಂಬಲ ನೀಡಿದ ಜನರಿಗೆ ಮರಳಿ ಏನನ್ನಾದರೂ ಕೊಡುಗೆಯಾಗಿ ನೀಡಲು ಬಯಸುವುದಾಗಿ ಹೇಳಿದ್ದರು. ಇದೀಗ ತಾವು ನುಡಿದಂತೆ ವಿಜಯ್ ದೇವರಕೊಂಡ ನಡೆದಿದ್ದಾರೆ. 180 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವಾಗಿದ್ಧಾರೆ.
ಅಚ್ಚಂಪೇಟೆಯ 44 ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಇಂದು (ಜೂನ್ 14) ಭೇಟಿ ಮಾಡಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಶಾಲೆಗೆ ಮತ್ತು ತಮ್ಮ ತಂದೆ ತಾಯಿಗೆ ಕೀರ್ತಿ ತಂದ 180 ವಿದ್ಯಾರ್ಥಿಗಳನ್ನು ಗೌರವಿಸಿದ್ದಾರೆ. ತಮ್ಮ ''ದಿ ದೇವರಕೊಂಡ'' ಫೌಂಡೇಶನ್ ಮೂಲಕ ಈ ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ಭರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ದೇವರಕೊಂಡ, ನಾವು ನೀಡುತ್ತಿರುವ ಈ ಸಹಾಯ ಚಿಕ್ಕದಾಗಿರಬಹುದು, ಆದರೆ ಇದು ನಮ್ಮ ಹೃದಯಕ್ಕೆ ಹತ್ತಿರವಾದದ್ದು ಎಂದು ಹೇಳಿದ್ಧಾರೆ. ವಿದ್ಯಾರ್ಥಿಗಳಲ್ಲಿನ ಶಿಸ್ತು ಮತ್ತು ಏಕಾಗ್ರತೆಯನ್ನು ನಾವು ಗೌರವಿಸುತ್ತೇವೆ ಎಂದ ದೇವರಕೊಂಡ ಸದ್ಯಕ್ಕೆ ನನ್ನ ತಂದೆಯ ಹಳ್ಳಿಯಿಂದ ಆರಂಭವಾಗಿರುವ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಇಡೀ ತೆಲಂಗಾಣ ರಾಜ್ಯದಾದ್ಯಂತ ವಿಸ್ತರಿಸುವುದು ನನ್ನ ಜೀವಮಾನದ ಕನಸು ಎಂದಿದ್ದಾರೆ.
ಇನ್ನು ಇದೇ ಸಮಯದಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ಇಂದು ನಾವು ''ದಿ ದೇವರಕೊಂಡ ಫೌಂಡೇಶನ್'' ಮೂಲಕ ಒಂದು ಅತ್ಯುತ್ತಮವಾದ ಕೆಲಸಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ ಎಂದು ಹೇಳಿದ್ಧಾರೆ. ನಮ್ಮ ಮಾವನವರ ಹುಟ್ಟೂರಲ್ಲಿ ಈ ಉತ್ತಮ ಕಾರ್ಯಕ್ರಮವನ್ನು ಆರಂಭಿಸುತ್ತಿರುವುದಕ್ಕೆ ತುಂಬಾನೇ ಹೆಮ್ಮೆ ಇದೆ ಎಂದು ಹೇಳಿದ ರಶ್ಮಿಕಾ ಇದೇ ವೇಳೆ ಇದೇ ಮೊದಲ ಬಾರಿ ವೇದಿಕೆಯೊಂದರಲ್ಲಿ ತಮ್ಮನ್ನು ತಾವು ರಶ್ಮಿಕಾ ಮಂದಣ್ಣ ದೇವರಕೊಂಡ ಎಂದು ಹೆಮ್ಮೆಯಿಂದ ಪರಿಚಯಿಸಿಕೊಂಡಿದ್ದಾರೆ. ರಶ್ಮಿಕಾ ಅವರಾಡಿದ ಈ ಮಾತಿಗೆ ಇಡೀ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಪತಿದೈವ ವಿಜಯ್ ದೇವರಕೊಂಡ ಮುಖದ ಮೇಲಿನ ಬೆವರನ್ನು ಪ್ರೀತಿಯಿಂದ ಒರೆಸಿದ್ದು, ಇವರ ಈ ಕಾರ್ಯಕ್ರಮದ ವಿಡಿಯೋ ಮತ್ತು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಜೋಡಿಯ ಸರಳತೆ ಹಾಗೂ ಸಮಾಜಸೇವೆಯನ್ನು ಮುಕ್ತಕಂಠದಿಂದ ಹಲವರು ಶ್ಲಾಫಿಸುತ್ತಿದ್ದು, ನಿಜ ಜೀವನದಲ್ಲಿ ಹಳ್ಳಿಯ ನೂರಾರು ಮಕ್ಕಳ ಕನಸಿಗೆ ರೆಕ್ಕೆ ಕಟ್ಟುವ ಮೂಲಕ ಇಬ್ಬರು ರಿಯಲ್ ಹೀರೋಗಳಾಗಿದ್ದಾರೆ.


Click it and Unblock the Notifications