ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದುವೆ; ಭಾವೋದ್ವೇಗದಿಂದ ಮಹಿಳಾ ಅಭಿಮಾನಿ ಕಣ್ಣೀರು
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ ಮುಂದುವರೆದಿದೆ. ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಕಲರ್‌ಫುಲ್ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಸೇರಿ ಗಣ್ಯಾತಿಗಣ್ಯರು ಭಾಗಿ ಆಗಿ ನವ ದಂಪತಿಗೆ ಶುಭ ಕೋರಲಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಬಿಗಿ ಭದ್ರತೆ ನಡುವೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಅಭಿಮಾನಿಗಳಿಗೆ ಪ್ರವೇಶವಿಲ್ಲ.
"ನಿಮ್ಮ ಸುರಕ್ಷತೆ ಮತ್ತು ಸಂತೋಷ ನಮಗೆ ಮುಖ್ಯ. ನಿಮ್ಮ ಆಶೀರ್ವಾದ ಮತ್ತು ಬೆಂಬಲಕ್ಕೆ ನಾವು ತುಂಬಾ ಕೃತಜ್ಞ. ಈ ಆಚರಣೆಯನ್ನು ಎಲ್ಲರಿಗೂ ಸುರಕ್ಷಿತವಾಗಿ ಮತ್ತು ಸಂತೋಷದಿಂದ ಇರಿಸಲು ನಮಗೆ ಸಹಾಯ ಮಾಡುವಲ್ಲಿ ನಿಮ್ಮ ಸಹಕಾರ ಬೇಕು" ಎಂದು ವಿಜಯ್- ರಶ್ಮಿಕಾ ಕೋರಿದ್ದಾರೆ. ವಿಜಯ್- ರಶ್ಮಿಕಾ ಮದುವೆ ವಿಚಾರ ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ನಟ ವಿಜಯ್ ದೇವರಕೊಂಡ ಅವರ ಕೆಲ ಮಹಿಳಾ ಅಭಿಮಾನಿಗಳ ಹೃದಯ ನುಚ್ಚುನೂರಾಗಿದೆ.

ತಮ್ಮ ವಿಭಿನ್ನ ಆಟಿಟ್ಯೂಡ್ ಕಾರಣಕ್ಕೆ ನಟ ವಿಜಯ್ ದೇವರಕೊಂಡ ಸದಾ ಗಮನ ಸೆಳೆಯುತ್ತಾರೆ. ಸಿನಿಮಾಗಳಲ್ಲಿ ಕೂಡ ಅದೇ ಆಟಿಟ್ಯೂಡ್ ಅವರ ಪಾತ್ರಗಳಲ್ಲಿ ನೋಡಬಹುದು. ರೌಡಿ ಬಾಯ್ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಅದೆಷ್ಟೋ ಹೆಣ್ಣುಮಕ್ಕಳ ಹೃದಯ ಕದ್ದ ಚೋರ ಈಗ ರಶ್ಮಿಕಾ ಜೊತೆ ಹಸೆಮಣೆ ಏರಿದ್ದಾರೆ. ವಿಜಯ್ ಮದುವೆ ವಿಷಯ ಗೊತ್ತಾಗಿ ಮಹಿಳಾ ಅಭಿಮಾನಿಯೊಬ್ಬರು ಭಾವೋದ್ವೇಗದಿಂದ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಕೆಗೆ ವಿಜಯ್ ಮೇಲೆ ಎಷ್ಟು ಅಭಿಮಾನ ಅಂದ್ರೆ ತನ್ನ ಕೋಣೆಯ ತುಂಬಾ ಆತನ ಫೋಟೊಗಳೇ. ವಿಜಯ್ ಫೋಟೊಗಳು, ಮ್ಯಾಗಜೀನ್ ಕಟ್ಟಿಂಗ್ಸ್, ಸಿನಿಮಾ ಪೇಪರ್ ಕಟ್ಟಿಂಗ್ಸ್ ಎಲ್ಲವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಅದನ್ನೆಲ್ಲಾ ತೋರಿಸುತ್ತಾ ತನ್ನ ಅಭಿಮಾನ ಪ್ರದರ್ಶಿಸಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಮದುವೆ ಫೋಟೊವನ್ನು ಫೋನ್‌ನಲ್ಲಿ ನೋಡಿ ಭಾವುಕರಾಗಿದ್ದಾರೆ. "ಆತ ಸಂತೋಷವಾಗಿರಬೇಕು... ಆದರೆ ನನ್ನ ನೆಚ್ಚಿನ ಹೀರೊ ಮದುವೆಯಾಗಿದ್ದು ಸ್ವಲ್ಪ ಎಮೋಷನಲ್ ಆಗುವಂತೆ ಮಾಡಿದೆ" ಎಂದು ಮಹಿಳಾ ಅಭಿಮಾನಿ ಹೇಳಿರುವುದನ್ನು ನೋಡಬಹುದು.
ಸಿನಿಮಾ ನಟರನ್ನು ಮಹಿಳಾ ಅಭಿಮಾನಿಗಳು ಆರಾಧಿಸುವುದು ಹೊಸದೇನು ಅಲ್ಲ. ನೆಚ್ಚಿನ ನಟನ ಬಗ್ಗೆ ಅಪಾರವಾರ ಅಭಿಮಾನ ಬೆಳೆಸಿಕೊಂಡಿರುವುದನ್ನು ನೋಡಿದ್ದೇವೆ. ವಿಜಯ್ ದೇವರಕೊಂಡಗೆ ಕೂಡ ಮಹಿಳಾ ಅಭಿಮಾನಿಗಳ ಫಾಲೋಯಿಂಗ್ ಜಾಸ್ತಿಯಿದೆ. ಈ ಹಿಂದೆ 'ಲೈಗರ್' ಸಿನಿಮಾ ಪ್ರಚಾರಕ್ಕಾಗಿ ವಿಜಯ್ ದೇವರಕೊಂಡ ಬೆಂಗಳೂರಿಗೆ ಬಂದಿದ್ದರು. ತೇಜು ಎಂಬ ಮಹಿಳಾ ಅಭಿಮಾನಿಯೊಬ್ಬರು ನೆಚ್ಚಿನ ನಟನಿಗೆ ಏಕಾಏಕಿ ಪ್ರಪೋಸ್ ಮಾಡಿಬಿಟ್ಟಿದ್ದರು. ವಿಯ್ ಕೈಗೆ ಉಂಗುರ ತೊಡಿಸಿ ಅಪ್ಪಿಕೊಡಿದ್ದರು. ವಿಜಯ್ ದೇವರಕೊಂಡಗೆ ಯಾವುದೇ ದೃಷ್ಟಿ ತಾಗಬಾರದು ಎಂದು ಉಂಗುರ ತೊಡಿಸಿದ್ದಾಗಿ ಅಭಿಮಾನಿ ತೇಜು ಹೇಳಿದ್ದರು.
'ಗೀತಾ ಗೋವಿಂದಂ' ಚಿತ್ರದಲ್ಲಿ ವಿಜಯ್- ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಬಳಿಕ 'ಡಿಯರ್ ಕಾಮ್ರೇಡ್' ಚಿತ್ರಕ್ಕಾಗಿ ಜೊತೆಯಾಗಿದ್ದರು. ಅಷ್ಟರಲ್ಲಾಗಲೇ ಸ್ನೇಹ ಪ್ರೀತಿಗೆ ತಿರುಗಿತ್ತು. ರಶ್ಮಿಕಾ ಮೊದಲು ಪ್ರಪೋಸ್ ಮಾಡಿದ್ದರಂತೆ. ಇದೀಗ 'ರಣಬಾಲಿ' ಚಿತ್ರದಲ್ಲಿ ಮತ್ತೆ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಅದಕ್ಕೂ ಮುನ್ನ ಮದುವೆ ಆಗಿದ್ದಾರೆ. ಮೊನ್ನೆ (ಮಾರ್ಚ್ 2)ವಿಜಯ್ ತಮ್ಮ ಹುಟ್ಟೂರಿನ ಜನರಿಗೆ ಮದುವೆ ಊಟ ಹಾಕಿಸಿದ್ದರು. ನಿನ್ನೆ ಕೆಲ ಅಭಿಮಾನಿಗಳನ್ನು ಭೇಟಿ ಮಾಡಿ ಮದುವೆ ಸಂಭ್ರಮ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಅಭಿಮಾನಿಗಳ ಜೊತೆಗೆ ಊಟ ಮಾಡಿ ಖುಷಿಪಟ್ಟಿದ್ದಾರೆ.


Click it and Unblock the Notifications











