ವಿರೋಷ್ ಸಂಗೀತ್ ಪಾರ್ಟಿ ಜೋರು; ಮದುವೆಗೂ ಮುನ್ನವೇ ರಶ್ಮಿಕಾ ಕೈಗೆ ಬಂತು ಬೆಲೆಬಾಳುವ ಆಭರಣ
ಬಣ್ಣದ ಲೋಕದ ಮೋಸ್ಟ್ ಹ್ಯಾಪನಿಂಗ್ ಜೋಡಿ ಅಂದ್ರೆ ಅದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಇವರಿಬ್ಬರ ಪ್ರೀತಿಯ ವಿಚಾರದ ಬಗ್ಗೆ ಕಳೆದ ಹಲವು ವರ್ಷಗಳಿಂದ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೂ ದೊಡ್ಡ ಚರ್ಚೆಯಾಗಿತ್ತು. ಅಭಿಮಾನಿಗಳು ಇವರಿಬ್ಬರು ಯಾವಾಗ ಒಂದಾಗುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಈಗ ಆ ಕ್ಷಣ ಹತ್ತಿರ ಬಂದಿದ್ದು, ಇಡೀ ಚಿತ್ರರಂಗವೇ ಇತ್ತ ತಿರುಗಿ ನೋಡುತ್ತಿದೆ.
ಸದ್ಯ ಈ ಜೋಡಿಯ ಮದುವೆ ಸಂಭ್ರಮ ಅದ್ಧೂರಿಯಾಗಿ ಶುರುವಾಗಿದೆ. ರಶ್ಮಿಕಾ ಮತ್ತು ವಿಜಯ್ ತಮ್ಮ ಈ ಸುಂದರ ಬಂಧನಕ್ಕೆ 'ವಿರೋಷ್' ಎಂದು ಹೆಸರಿಟ್ಟುಕೊಂಡಿದ್ದಾರೆ. ರಾಜಸ್ಥಾನದ ಸುಂದರ ನಗರಿ ಉದಯಪುರದಲ್ಲಿ ಈಗ ಸಂಭ್ರಮದ ಅಲೆ ಎದ್ದಿದೆ.

ಉದಯಪುರದ ಐಷಾರಾಮಿ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ಕಲ್ಯಾಣೋತ್ಸವ ಸಂಭ್ರಮ ನಡೆಯುತ್ತಿದೆ. ಮದುವೆಗೂ ಮುನ್ನ ಈ ಜೋಡಿ 'ವಿರೋಶ್ ಪ್ರೀಮಿಯರ್ ಲೀಗ್' ಎಂಬ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿತ್ತು. ಆಟದ ಮೈದಾನದಲ್ಲಿ ಇಬ್ಬರೂ ಮಿಂದೆದ್ದ ನಂತರ, ಈಗ ಸಾಂಪ್ರದಾಯಿಕ ಕಾರ್ಯಕ್ರಮಗಳ ಸರದಿ ಬಂದಿದೆ. ಮದುವೆಯ ಪ್ರತಿ ಹಂತವೂ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅತ್ತೆಯ ವಿಶೇಷ ಉಡುಗೊರೆ...
ಸಂಗೀತ್ ಸಮಾರಂಭ ಅಂದಮೇಲೆ ಅಲ್ಲಿ ಹಾಡು, ಕುಣಿತ ಇರುವುದು ಸಾಮಾನ್ಯ. ಆದರೆ ವಿರೋಶ್ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ವರದಿಯ ಪ್ರಕಾರ, ಈ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ಅವರು ಪ್ರಮುಖ ಆಕರ್ಷಣೆಯಾಗಿದ್ದರು. ಅವರು ತಮ್ಮ ಭಾವಿ ಸೊಸೆ ರಶ್ಮಿಕಾ ಮೇಲೆ ತೋರಿದ ಪ್ರೀತಿ ಎಲ್ಲರ ಮನ ಗೆದ್ದಿದೆ.

ಸಂಗೀತ್ ಸಮಾರಂಭದ ವೇದಿಕೆಯ ಮೇಲೆ ಮಾಧವಿ ದೇವರಕೊಂಡ ಅವರು ರಶ್ಮಿಕಾ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಕುಟುಂಬದ ಪರಂಪರೆಯನ್ನು ಪ್ರತಿಬಿಂಬಿಸುವ ಅತ್ಯಂತ ಅಮೂಲ್ಯವಾದ ಚಿನ್ನದ ಬಳೆಗಳನ್ನು ರಶ್ಮಿಕಾ ಅವರಿಗೆ ತೊಡಿಸಿದ್ದಾರೆ. ಈ ಪಾರಂಪರಿಕ ಬಳೆಗಳು ದೇವರಕೊಂಡ ಕುಟುಂಬದ ಆಸ್ತಿಯಾಗಿದ್ದು, ಇದನ್ನು ಸೊಸೆಗೆ ನೀಡುವ ಮೂಲಕ ರಶ್ಮಿಕಾ ಅವರನ್ನು ಅಧಿಕೃತವಾಗಿ ಮನೆಗೆ ಬರಮಾಡಿಕೊಂಡಿದ್ದಾರೆ.
ಈ ಭಾವುಕ ಕ್ಷಣವನ್ನು ಕಂಡು ಅಲ್ಲಿದ್ದ ಅತಿಥಿಗಳೆಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ. ಅತ್ತೆಯ ಪ್ರೀತಿಗೆ ಕೊಡಗು ಬೆಡಗಿ ರಶ್ಮಿಕಾ ಮಂದಣ್ಣ ಫಿದಾ ಆಗಿದ್ದಾರೆ. ಕೇವಲ ಉಡುಗೊರೆಯಾಗಿ ಮಾತ್ರವಲ್ಲದೆ, ಒಂದು ಜವಾಬ್ದಾರಿಯ ಸಂಕೇತವಾಗಿ ರಶ್ಮಿಕಾ ಈ ಬಳೆಗಳನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಮಾಧವಿ ಅವರು ರಶ್ಮಿಕಾ ನನ್ನ ಮನೆಯ ಮಗಳೇ ಎಂದು ಜಗತ್ತಿಗೆ ಸಾರಿದ್ದಾರೆ.
ಮದುವೆ ದಿನಾಂಕ ಫಿಕ್ಸ್...
ರಶ್ಮಿಕಾ ಮತ್ತು ವಿಜಯ್ ಜೋಡಿ ನಾಳೆ ಅಂದರೆ ಫೆಬ್ರವರಿ 26, 2026 ರಂದು ಹಸೆಮಣೆ ಏರಲಿದ್ದಾರೆ. ಉದಯಪುರದ ಆಪ್ತ ವಲಯದಲ್ಲಿ ನಡೆಯುವ ಈ ಮದುವೆಗೆ ಸೀಮಿತ ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆದರೆ ಚಿತ್ರರಂಗದ ಗೆಳೆಯರಿಗಾಗಿ ಈ ಜೋಡಿ ಒಂದು ದೊಡ್ಡ ಪ್ಲಾನ್ ಮಾಡಿಕೊಂಡಿದೆ. ಮಾರ್ಚ್ 4, 2025 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ.
ಈ ಆರತಕ್ಷತೆಗೆ ದಕ್ಷಿಣ ಭಾರತದ ಖ್ಯಾತ ನಟರು ಮತ್ತು ಬಾಲಿವುಡ್ ಗಣ್ಯರು ಆಗಮಿಸುವ ನಿರೀಕ್ಷೆಯಿದೆ. 2018 ರಲ್ಲಿ 'ಗೀತ ಗೋವಿಂದಂ' ಮೂಲಕ ಶುರುವಾದ ಇವರ ಕೆಮಿಸ್ಟ್ರಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. 'ಡಿಯರ್ ಕಾಮ್ರೇಡ್' ಚಿತ್ರದ ಸಮಯದಲ್ಲಿ ಬೆಳೆದ ಸ್ನೇಹ ಈಗ ಪ್ರೀತಿಯಾಗಿ ಅಂತಿಮವಾಗಿ ಮದುವೆಯ ರೂಪ ಪಡೆಯುತ್ತಿದೆ.
ತೆರೆ ಮೇಲೂ ಒಂದಾಗಲಿದೆ ಜೋಡಿ
ಮದುವೆಯ ಸಂಭ್ರಮದ ನಡುವೆಯೂ ರಶ್ಮಿಕಾ ಮತ್ತು ವಿಜಯ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಇವರಿಬ್ಬರು ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ' ಚಿತ್ರದಲ್ಲಿ ಮತ್ತೆ ನಟಿಸುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ 'ತಮ್ಮಾ' ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡಿತ್ತು. ಸೆಪ್ಟೆಂಬರ್‌ನಲ್ಲಿ ಆಕೆ ನಟಿಸಿರುವ 'ಕಾಕ್ಟೇಲ್- 2' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.
ವಿಜಯ್ ದೇವರಕೊಂಡ ಕೂಡ 'ರೌಡಿ ಜನಾರ್ದನ' ಚಿತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ. ಒಟ್ಟಿನಲ್ಲಿ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಈ ಜೋಡಿ ಈಗ ಯಶಸ್ಸಿನ ಉತ್ತುಂಗದಲ್ಲಿದೆ.


Click it and Unblock the Notifications











