ಆ ನಟ ಟ್ರೋಲಿಗರಿಗೆ ದುಡ್ಡು ಕೊಟ್ಟು ನನ್ನನ್ನು ಕೆಟ್ಟದಾಗಿ ಬೈಯ್ಯಲು ಹೇಳಿದ್ದ; ಸ್ಟಾರ್ ವಿರುದ್ಧ ಅನಸೂಯ ಆರೋಪ!
ತೆಲುಗು ಚಿತ್ರರಂಗದಲ್ಲಿ ನಟಿಯರು ನಟರ ನಡೆಯ ವಿರುದ್ಧ ಹೇಳಿಕೆಗಳನ್ನು ನೀಡಿ ಅವರ ಅಭಿಮಾನಿಗಳಿಂದ ನಿಂದನೆಗೆ ಒಳಗಾದ ಅಹಿತಕರ ಘಟನೆಗಳು ಹಲವಾರು ಬಾರಿ ನಡೆದಿವೆ. ಈ ಹಿಂದೆ ಸಮಂತಾ ರುತ್ ಪ್ರಭು ಮಹೇಶ್ ಬಾಬು ನಟನೆಯ ನೇನೊಕ್ಕಡಿನೆ ಚಿತ್ರದ ಪೋಸ್ಟರ್ ಒಂದರಲ್ಲಿ ನಟಿಯನ್ನು ಕೀಳಾಗಿ ತೋರಿಸಲಾಗಿದೆ ಎಂದು ಕಾಮೆಂಟ್ ಮಾಡಿ ಸೂಪರ್ ಸ್ಟಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇಂದಿಗೂ ಸಹ ಮಹೇಶ್ ಬಾಬು ಅಭಿಮಾನಿಗಳಿಗೆ ಸಮಂತಾ ಎಂದರೆ ಅಷ್ಟಕ್ಕಷ್ಟೇ.
ಅದೇ ರೀತಿ ಇದೀಗ ತೆಲುಗು ಚಿತ್ರರಂಗದ ಮತ್ತೋರ್ವ ನಟಿ ತೆಲುಗಿನ ನಟನ ವಿರುದ್ಧ ಮಾತನಾಡಿ ಆ ನಟನ ಅಭಿಮಾನಿಗಳ ವೈರತ್ವವನ್ನು ಕಟ್ಟಿಕೊಂಡಿದ್ದಾರೆ. ಹೌದು, ಅರ್ಜುನ್ ರೆಡ್ಡಿ ಚಿತ್ರದ ಸಮಯದಲ್ಲಿ ಅದರಲ್ಲಿನ ಕೆಲ ಡೈಲಾಗ್‌ನಲ್ಲಿನ ಅಸಭ್ಯ ಪದಗಳ ಬಗ್ಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದ ರೀತಿಗೆ ಅನಸೂಯ ಕಿಡಿಕಾರಿದ್ದಾಗಿನಿಂದ ಈ ವೈರತ್ವ ನಿರಂತರವಾಗಿ ನಡೆಯುತ್ತಾ ಬಂದಿದೆ.

ಇನ್ನು ಅನಸೂಯ ಕಾಮೆಂಟ್ ಕುರಿತಾಗಿ ವಿಜಯ್ ದೇವರಕೊಂಡ ಎಲ್ಲಿಯೂ ಮಾತನಾಡದೇ ಇದ್ದರೂ ಅನಸೂಯ ಮಾತ್ರ ವಿಜಯ್ ದೇವರಕೊಂಡ ಬಳಗದಿಂದ ತನ್ನ ವಿರುದ್ಧ ಪಿತೂರಿ ನಡೆದಿದೆ ಎಂಬಂತೆ ಮಾತನಾಡಿದ್ದಾರೆ. ಹೌದು, ಇಂಡಿಯಾ ಟುಡೇ ಜತೆ ಮಾತನಾಡಿದ ಅನಸೂಯ ಭಾರದ್ವಾಜ್ ವಿಜಯ್ ದೇವರಕೊಂಡ ಜತೆಗಿನ ತಮ್ಮ ಮನಸ್ತಾಪಕ್ಕೆ ಕಾರಣವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ ಹಾಗೂ ವಿಜಯ್ ತಂಡ ತನ್ನ ವಿರುದ್ಧ ಮಾಡಿದ ಪಿತೂರಿಯೊಂದರ ಬಗ್ಗೆ ಸಹ ಹಂಚಿಕೊಂಡಿದ್ದಾರೆ.
"ಮೊದಲಿಗೆ ನಾನು ಹಾಗೂ ವಿಜಯ್ ದೇವರಕೊಂಡ ಒಳ್ಳೆಯ ಸ್ನೇಹಿತರಾಗಿಯೇ ಇದ್ದೆವು. ಅರ್ಜುನ್ ರೆಡ್ಡಿ ಬಿಡುಗಡೆಯಾದಾಗ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಿದ್ದ ದೇವರಕೊಂಡ ಅಲ್ಲಿನ ವೀಕ್ಷಕರಿಗೆ ಸೆನ್ಸಾರ್ ಮಂಡಳಿ ಮ್ಯೂಟ್ ಮಾಡಿದ್ದ ಡೈಲಾಗ್‌ಗಳ ದೃಶ್ಯ ಬಂದಾಗ ನೀವೇ ಡಬ್ ಮಾಡಿ ಎಂದು ಹೇಳಿದ್ದರು. ಚಿತ್ರದಲ್ಲಿ ವಿಜಯ್ ಕೆಟ್ಟ ಬೈಗುಳ ಬಯ್ಯುವ ನಟನ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ನಿಜ ಜೀವನದಲ್ಲಿಯೂ ಯಾಕೆ ಆತ ಇದನ್ನು ಬೆಂಬಲಿಸಬೇಕು? ಓರ್ವ ತಾಯಿಯಾಗಿ ಇದರಿಂದ ನಾನು ತೀವ್ರ ಬೇಸರಗೊಂಡಿದ್ದೆ. ಇದರ ಬಗ್ಗೆ ವಿಜಯ್ ಜತೆಗೂ ಮಾತನಾಡಿ ಇಂಥದ್ದನ್ನೆಲ್ಲಾ ಬೆಂಬಲಿಸಬೇಡ ಎಂದು ಮಾತನಾಡಿದ್ದೆ" ಎಂದರು.
ಹೀಗೆ ಅರ್ಜುನ್ ರೆಡ್ಡಿ ಸಮಯದಲ್ಲಿ ವಿಜಯ್ ಬಗ್ಗೆ ಕಾಮೆಂಟ್ ಮಾಡಿದ್ದ ಅನಸೂಯ ಭಾರದ್ವಾಜ್ ಹೀನಾಯವಾಗಿ ಟ್ರೋಲ್ ಆಗಿದ್ದರು. ಬಳಿಕ ವಿಜಯ್ ದೇವರಕೊಂಡ ತಂದೆ ನಿರ್ಮಿಸಿದ್ದ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದ ಅನಸೂಯ ಆ ಸಂದರ್ಭದಲ್ಲಿ ತನಗೆ ಆಶ್ಚರ್ಯವೆನಿಸುವ ವಿಷಯವೊಂದು ತಿಳಿಯಿತು ಎಂದು ಹೇಳಿಕೆ ನೀಡಿದರು.
"ಹೀಗೆ ಆನ್‌ಲೈನ್‌ನಲ್ಲಿ ಹೀನಾಯ ಪದಗಳಿಂದ ನಿಂದನೆಗೊಳಗಾದ ನಾನು ಇದನ್ನು ಮರೆತು ಮುನ್ನಡೆದಿದ್ದೆ. ಬಳಿಕ 2019ರಲ್ಲಿ ವಿಜಯ್ ದೇವರಕೊಂಡ ಅವರ ತಂದೆ ನಿರ್ಮಿಸಿದ್ದ ಮೀಕು ಮಾತ್ರಮೇ ಚೆಪ್ತಾ ಚಿತ್ರದಲ್ಲಿ ನಟಿಸುವ ಆಫರ್ ಬಂತು. ಎಲ್ಲವೂ ಚೆನ್ನಾಗಿಯೇ ಇತ್ತು" ಎಂದು ಅನಸೂಯ ಹೇಳಿದರು.
ಮುಂದುವರಿದು ಮಾತನಾಡಿದ ಅನಸೂಯ ಭಾರದ್ವಾಜ್ "ಹೀಗೆ ಕೆಲ ಸಮಯ ಕಳೆದ ಬಳಿಕ ವಿಜಯ್ ದೇವರಕೊಂಡ ತಂಡದ ಸದಸ್ಯರೊಬ್ಬರು ವಿಜಯ್‌ನ ಪ್ರಚಾರಕ ನನ್ನ ವಿರುದ್ಧ ಟ್ರೋಲ್ ಮಾಡಲು ನೆಟ್ಟಿಗರಿಗೆ ದುಡ್ಡು ಕೊಟ್ಟಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ. ನನಗೆ ಶಾಕ್ ಆಯಿತು. ಪ್ರಚಾರಕ ಟ್ರೋಲಿಗರಿಗೆ ದುಡ್ಡು ಕೊಟ್ಟಿದ್ದಾರೆಂದರೆ ಆ ವಿಷಯ ವಿಜಯ್‌ಗೆ ತಿಳಿದಿರಬೇಕು ಅಲ್ವಾ? ವಿಜಯ್ ಗಮನಕ್ಕೆ ಬಾರದೇ ಇಷ್ಟೆಲ್ಲಾ ನಡೆಯುವುದಿಲ್ಲ ಅಲ್ವಾ?" ಎಂದು ಹೇಳಿಕೊಂಡು ಪರೋಕ್ಷವಾಗಿ ವಿಜಯ್ ದೇವರಕೊಂಡ ತನ್ನ ವಿರುದ್ಧ ಟ್ರೋಲ್ ಮಾಡಲು ದುಡ್ಡು ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ.


Click it and Unblock the Notifications











