ಪಾಕಿಸ್ತಾನದ ವಿರುದ್ಧ ಮಾತನಾಡುವಾಗ ವಿಜಯ್ ದೇವರಕೊಂಡ ಎಡವಟ್ಟು; ದೂರು ದಾಖಲು
ತೆಲುಗು ನಟ ವಿಜಯ್ ದೇವರಕೊಂಡ ಕೆಲವೊಮ್ಮೆ ವಿವಾದಗಳಿಂದಲೂ ಸುದ್ದಿ ಆಗುತ್ತಾರೆ. ಟಾಲಿವುಡ್‌ನಲ್ಲಿ ದಿಢೀರ್ ಕ್ರೇಜ್ ಹೆಚ್ಚಿಸಿಕೊಂಡು ಅಷ್ಟೇ ಬೇಗ ಸೈಲೆಂಟ್ ಆಗಿಬಿಟ್ಟಿದ್ದರು. ಪಹಲ್ಗಾಮ್ ಘಟನೆ ಖಂಡಿಸಿ ಮಾತನಾಡುವಾಗ ಬುಡಕಟ್ಟು ಜನರ ಬಗ್ಗೆ ಅಸಡ್ಡೆಯಿಂದ ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ಟಾಲಿವುಡ್ ಯಂಗ್ ಹೀರೊ ವಿಜಯ್ ದೇವರಕೊಂಡ ಮಾತಿನ ಶೈಲಿಯೇ ಬಹಳ ಭಿನ್ನವಾಗಿರುತ್ತದೆ. ಆತ ಯಾವುದೇ ಫಿಲ್ಟರ್ ಇಲ್ಲದೇ ಮಾತನಾಡುವುದು ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ 'ರೆಟ್ರೋ' ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ವಿಜಯ್ ದೇವರಕೊಂಡ ಭಾಗಿ ಆಗಿದ್ದರು. ವೇದಿಕೆಯಲ್ಲಿ 12 ನಿಮಿಷ ಮಾತನಾಡಿದ್ದರು. ಕೊನೆ ಕೊನೆಗೆ ಪಹಲ್ಗಾಮ್ ಘಟನೆ ಖಂಡಿಸಿ ಆಕ್ರೋಶ ಹೊರ ಹಾಕಿದ್ದರು. ಪಾಕಿಸ್ತಾನದ ಮೇಲೆ ನಾವು ಯುದ್ಧ ಮಾಡುವುದೇ ಬೇಡ, ಪಾಕ್ ಜನರೇ ಆದಷ್ಟು ಬೇಗ ಅಲ್ಲಿನ ಸರ್ಕಾರದ ವಿರುದ್ಧ ತಿರುಗಿಬೀಳುತ್ತಾರೆ ಎಂದಿದ್ದರು.

ಸೂರ್ಯ ನಟನೆಯ 'ರೆಟ್ರೋ' ಸಿನಿಮಾ ಈ ವಾರ ತೆರೆಗೆ ಬಂದಿದೆ. ತಮಿಳು ಸಿನಿಮಾ ತೆಲುಗಿಗೂ ಡಬ್ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಸೂರ್ಯ ಭರ್ಜರಿ ಪ್ರಚಾರ ಮಾಡಿದ್ದರು. 5 ದಿನಗಳ ಹಿಂದೆ ಹೈದರಾಬಾದ್ ಜೆಆರ್‌ಸಿ ಕನ್ವೆಂಷನ್ ಸೆಂಟರ್‌ನಲ್ಲಿ ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಮೈಕ್ ಹಿಡಿದು ಮಾತನಾಡಲು ಆರಂಭಿಸುತ್ತಿದ್ದಂತೆ ಪಹಲ್ಗಾಮ್ ದಾಳಿಯನ್ನು ಮೃತಪಟ್ಟವರು ಕುಟುಂಬಗಳಿಗೆ ವಿಜಯ್ ದೇವರಕೊಂಡ ಸಾಂತ್ವನ ಹೇಳಿದ್ದರು.
ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ದೇವರಕೊಂಡ "ನಾನು ಶಾಲೆಗಳಲ್ಲಿ ಓದಿದ ಸಾಕಷ್ಟು ವಿಚಾರ ಜೀವನದಲ್ಲಿ ಉಪಯೋಗವಾಗಲ್ಲ. ಆದರೆ ಕೆಲವು ಕೆಲಸಕ್ಕೆ ಬರುತ್ತದೆ. ಈ ಪಹಲ್ಗಾಮ್‌ನಲ್ಲಿ ನಡೆದ ಘಟನೆ ಕಾರಣ ಅವರಿಗೆ ಸರಿಯಾದ ವಿದ್ಯಾಭ್ಯಾಸ ಇಲ್ಲದೇ ಇರುವುದು. ಅವರಿಗೆ ವಿದ್ಯಾಭ್ಯಾಸ ನೀಡಿದ್ದರೆ ಬ್ರೈನ್‌ವಾಶ್ ಆಗದಂತೆ ತಡಯಬಹುದಿತ್ತು" ಎಂದು ವಿಜಯ್ ಹೇಳಿದ್ದಾರೆ.
"ಕಾಶ್ಮೀರ ನಮ್ಮದು. ಕಾಶ್ಮೀರಿ ಜನರು ನಮ್ಮವರು. ನಾನು 2 ವರ್ಷಗಳ ಹಿಂದೆ 'ಖುಷಿ' ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ಹೋಗಿದ್ದೆ. ಆ ನೆನಪುಗಳನ್ನು ಮರೆಯೋಕೆ ಸಾಧ್ಯವಿಲ್ಲ. ಆದರೆ ಈ ಪಾಕಿಸ್ತಾನದವರು ಅವರ ಜನರನ್ನು ನೋಡಿಕೊಳ್ಳೋಕೆ ಆಗದೇ, ಅಲ್ಲಿ ಕರೆಂಟ್ ಇಲ್ಲ, ನೀರಿಲ್ಲ, ಮನೆಗಳಿಲ್ಲ, ಅದು ಬಿಟ್ಟು ಇಲ್ಲಿ ಬಂದು ಏನ್ ಮಾಡಬೇಕು ಎಂದುಕೊಂಡಿದ್ದಾರೋ ಗೊತ್ತಿಲ್ಲ. ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಅವಶ್ಯಕತೆ ಇಲ್ಲ. ಪಾಕಿಸ್ತಾನದ ಜನರೇ ಬೇಸತ್ತು ಸರ್ಕಾರ ವಿರುದ್ಧ ದಾಳಿ ಮಾಡುತ್ತಾರೆ" ಎಂದು ವಿಜಯ್ ದೇವರಕೊಂಡ ತಿಳಿಸಿದ್ದಾರೆ.
ಅಲ್ಲಿವರೆಗೂ ವಿಜಯ್ ದೇವರಕೊಂಡ ಮಾತು ಸರಿಯಾಗಿಯೇ ಇತ್ತು. ಬಳಿಕ ಮಾತನಾಡಿ ತಪ್ಪು ಮಾಡಿದ್ದಾರೆ. "500 ವರ್ಷಗಳ ಹಿಂದೆ ಬುಡಕಟ್ಟು ಜನರು ಹೊಡೆದಾಡುತ್ತಿದ್ದಂತೆ ಇವರು ಬುದ್ಧಿ ಇಲ್ಲದೇ, ಕಾಮನ್ ಸೆನ್ಸ್ ಇಲ್ಲದಂತೆ ಆಡುತ್ತಿದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿ ನಿಲ್ಲಬೇಕು" ಎಂದು ವಿಜಯ್ ಹೇಳಿದ್ದಾರೆ. ಆದರೆ ವಿದ್ಯೆಬುದ್ದಿ ಇಲ್ಲದೇ ಬುಡಕಟ್ಟು ಜನ ಹೊಡೆದಾಡಿಕೊಳ್ಳುತ್ತಿದ್ದರು ಎಂದು ವಿಜಯ್ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬುಡಕಟ್ಟು ಜನ ಸಂಘದವರು ಬೇಸರ ವ್ಯಕ್ತಪಡಿಸಿದ್ದಾರೆ. ವಕೀಲ ಕಿಶನ್ ಲಾಲ್ ಎಂಬುವವರು ಎಸ್. ಆರ್. ನಗರ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ದೂರು ದಾಖಲಿಸಿದ್ದಾರೆ.
ನಟ ವಿಜಯ್ ದೇರವಕೊಂಡ ಈ ಪ್ರತಿಕ್ರಿಯಿಸುತ್ತಾರಾ? ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳುತ್ತಾರಾ? ಕಾದು ನೋಡಬೇಕಿದೆ. 'ಲೈಗರ್' ಸಿನಿಮಾ ಸೋಲಿನ ಬಳಿಕ ದೇವರಕೊಂಡ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸದ್ಯ 'ಕಿಂಗ್ಡಮ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮೇ 30ರಂದು ಈ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











