ಗುಡ್ ನ್ಯೂಸ್ ಯಾವಾಗ? ಅನಿರೀಕ್ಷಿತ ಪ್ರಶ್ನೆಗೆ ನಾಚಿ ನೀರಾದ ರಶ್ಮಿಕಾ ಮಂದಣ್ಣ- ವಿಡಿಯೋ
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದರು. ರಾಜಸ್ಥಾನದ ರೆಸಾರ್ಟ್‌ವೊಂದರಲ್ಲಿ ಫೆಬ್ರವರಿ 26ರಂದು ಅದ್ಧೂರಿಯಾಗಿ ಜೋಡಿ ಮದುವೆ ನಡೆದಿತ್ತು. ಇದೀಗ ಅಭಿಮಾನಿಗಳು ಗುಡ್ ನ್ಯೂಸ್ ಯಾವಾಗ? ಎಂದು ಇಬ್ಬರನ್ನು ಕೇಳಿರುವುದು ವೈರಲ್ ಆಗ್ತಿದೆ.
ಗೀತಗೋವಿಂದಂ ಚಿತ್ರದಲ್ಲಿ ವಿಜಯ್- ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಇಬ್ಬರ ಕೆಮೆಸ್ಟ್ರಿ ಸೂಪರ್ ಹಿಟ್ ಆಗಿತ್ತು. ಬಳಿಕ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ಇಬ್ಬರೂ ಮತ್ತೆ ಜೊತೆಯಾಗಿದ್ದರು. ಅದೇ ಸಮಯದಲ್ಲಿ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಬಳಿಕ ಗುಟ್ಟಾಗಿ ಡೇಟಿಂಗ್ ನಡೆಸಿದ ಜೋಡಿ ಪೋಷಕರ ಒಪ್ಪಿಗೆ ಪಡೆದು ಹೊಸ ಬಾಳಿಗೆ ಕಾಲಿಟ್ಟಿದ್ದರು. ಮದುವೆ ಬಳಿಕ ಕೂಡ ಇಬ್ಬರೂ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ನಟ ವಿಜಯ್ ದೇವರಕೊಂಡ ನಿನ್ನೆ(ಮೇ 9) ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಪ್ತರಿಂದ, ಅಭಿಮಾನಿಗಳಿಂದ ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಹೈದರಾಬಾದ್‌ನಲ್ಲಿರುವ ವಿಜಯ್ ನಿವಾಸದ ಮುಂದೆ ಸಾಕಷ್ಟು ಅಭಿಮಾನಿಗಳು ಜಮಾಯಿಸಿ ಶುಭಾಶಯ ಕೋರಿದ್ದರು. ಮನೆಯ ಗೇಟ್ ಹೊರಭಾಗದಲ್ಲಿ ಜಮಾಯಿಸಿದ್ದ ಅಭಿಮಾನಿಗಳನ್ನು ಬಾಲ್ಕನಿಯಲ್ಲಿ ನಿಂತು ವಿಜಯ್ ಮಾತನಾಡಿಸಿದ್ದಾರೆ. ಈ ವೇಳೆ ಪತ್ನಿ ರಶ್ಮಿಕಾ ಮಂದಣ್ಣ, ತಾಯಿ ಮಾಧವಿ ಜೊತೆಗಿದ್ದರು. ಈ ವೇಳೆ ಅಭಿಮಾನಿಯೊಬ್ಬ 'ಅಣ್ಣಾ ಗುಡ್ ನ್ಯೂಸ್ ಯಾವಾಗ?' ಎಂದು ಕೂಗಿ ಕೇಳಿದ್ದಾನೆ. 'ಏನ್ ಗುಡ್ ನ್ಯೂಸ್ ಕಣೋ ಲೇ' ಎಂದು ವಿಜಯ್ ಪ್ರತಿಕ್ರಿಯಿಸಿದ್ದಾರೆ. ಪಕ್ಕದಲ್ಲೇ ಇದ್ದ ರಶ್ಮಿಕಾ ನಾಚಿ ನೀರಾಗಿದ್ದಾರೆ. ಆ ಕ್ಯೂಟ್ ವೀಡಿಯೋ ಈಗ ವೈರಲ್ ಆಗ್ತಿದೆ.
ಸಿನಿಮಾ ಹಿನ್ನೆಲೆ ಇಲ್ಲದ ಮಧ್ಯಮ ವರ್ಗದ ಕುಟುಂಬದಿಂದ ಬಂದ ವಿಜಯ್ ಇವತ್ತು ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ನಟನಾಗಿ ಮಾತ್ರವಲ್ಲದೇ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಗಮನ ಸೆಳೆದಿದ್ದಾರೆ. ಉದ್ಯಮಿ ಆಗಿಯೂ ಗುರ್ತಿಸಿಕೊಂಡಿದ್ದಾರೆ. ಈ ಬಾರಿ ವಿಜಯ್ ಹುಟ್ಟುಹಬ್ಬಕ್ಕೆ 'ರಣಬಾಲಿ' ಹಾಗೂ 'ರೌಡಿ ಜನಾರ್ಧನ್' ಚಿತ್ರತಂಡಗಳಿಂದ ವಿಶೇಷ ಉಡುಗೊರೆ ಸಿಕ್ಕಿದೆ.
'ರಣಬಾಲಿ' ಚಿತ್ರದಲ್ಲಿ ವಿಜಯ್ ಜೋಡಿಯಾಗಿ ಪತ್ನಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ವಿಶೇಷ. ಇದು ಜೋಡಿಯ 3ನೇ ಸಿನಿಮಾ. ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ವಿಜಯ್ ಕುದುರೆ ಸವಾರಿ ಮಾಡುವ ಸನ್ನಿವೇಶಗಳಿವೆ. ಅದಕ್ಕಾಗಿ ಅವರ ತಯಾರಿ ಹೇಗಿತ್ತು ಎನ್ನುವ ಸಣ್ಣ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಕುದುರೆ ಸವಾರಿ ಕಲಿಯಲು ವಿಜಯ್ ಸಿಕ್ಕಾಪಟ್ಟೆ ಕಸರತ್ತು ಮಾಡಿದ್ದಾರೆ. ಬಿದ್ದು ಎದ್ದು ಕೊನೆಗೂ ಲಗಾಮು ಹಿಡಿದು ಸವಾರಿ ಮಾಡಿದ್ದಾರೆ. 'ರೌಡಿ ಜನಾರ್ಧನ್' ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಕೀರ್ತಿ ಸುರೇಶ್ ಈ ಚಿತ್ರದಲ್ಲಿ ವಿಜಯ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ವಿಜಯ್ ದೇವರಕೊಂಡ ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು ಎಂದು ರಶ್ಮಿಕಾ ಮಂದಣ್ಣ ಸ್ಪೆಷಲ್ ಫೋಟೊ, ವೀಡಿಯೋ ಹಂಚಿಕೊಂಡಿದ್ದಾರೆ. "ಇವತ್ತು ನನ್ನ ಗಂಡನ ಹುಟ್ಟುಹಬ್ಬ, ನನ್ನ ದಿನ ಹೀಗೆ ಹೀಗಿತ್ತು" ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಬೆಳಗ್ಗೆ ಜಿಮ್ ಮಾಡಿದ್ವಿ. ಬಳಿಕ ಅಭಿಮಾನಿಗಳನ್ನು ಭೇಟಿ ಆಗಿದ್ದೆವು. ಅತ್ತೆ, ಮಾವ ಎಲ್ಲರೂ ಜೊತೆಗಿದ್ದರು. ಹ್ಯಾಪಿಯೆಸ್ಟ್ ಬರ್ತ್‌ಡೇ ಮೈ ವಿಜ್ಜು" ಎಂದು ರಶ್ಮಿಕಾ ಪೋಸ್ಟ್ ಮಾಡಿದ್ದಾರೆ. ಸದ್ಯ ಸಹೋದರಿ ಕೂಡ ಹೈದರಾಬಾದ್‌ನಲ್ಲಿರುವ ರಶ್ಮಿಕಾ ಮನೆಯಲ್ಲೇ ಇದ್ದಾಳೆ.
ರಶ್ಮಿಕಾ ಹಾಗೂ ವಿಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ 'ಬಡ್ಡಿಮೂನ್'(ಹನಿಮೂನ್)ಗಾಗಿ ಥಾಯ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಬಳಿಕ ಬಂದು 'ರಣಬಾಲಿ' ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಸೆಪ್ಟೆಂಬರ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ವೈರಲ್ ಆಗಿದೆ.


Click it and Unblock the Notifications