Slum Dog Teaser: 'ಸ್ಲಮ್ ಡಾಗ್' ಸೇತುಪತಿಯನ್ನು ಕೆಣಕಿದ ದುನಿಯಾ ವಿಜಯ್
ಸತತ ಸೋಲುಗಳಿಂದ ಕಂಗೆಟ್ಟ ನಿರ್ದೇಶಕ ಪೂರಿ ಜಗನ್ನಾಥ್ ಹೊಸ ಪ್ರಯತ್ನ 'ಸ್ಲಮ್ ಡಾಗ್'. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಪವರ್‌ಪ್ಯಾಕ್ಡ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಭಿಕ್ಷುಕನ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಅವರನ್ನು ಎದುರಾಕಿಕೊಳ್ಳುವ ಪಾತ್ರದಲ್ಲಿ ಕನ್ನಡ ನಡ ದುನಿಯಾ ವಿಜಯ್ ದರ್ಶನ ಕೊಟ್ಟಿದ್ದಾರೆ.
ಪೂರಿ ಜಗನ್ನಾಥ್ ನಿರ್ಮಿಸಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. 'ಸ್ಲಮ್ ಡಾಗ್' ಚಿತ್ರಕ್ಕೆ '33 ಟೆಂಪಲ್ ರೋಡ್' ಎನ್ನುವ ಸಬ್ ಟೈಟಲ್ ಕೂಡ ಇದೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದ್ದು ಕನ್ನಡದಲ್ಲಿ ಕೂಡ ಟೀಸರ್ ರಿಲೀಸ್ ಆಗಿದೆ. ಇದು ಪಕ್ಕಾ ಪೂರಿ ಸ್ಟೈಲ್ ಸಿನಿಮಾ ಎನ್ನುವುದು ಟೀಸರ್ ನೋಡಿದರೆ ಅರ್ಥವಾಗುತ್ತದೆ. ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬಾಲಿವುಡ್ ನಟಿ ತಬು ಮಿಂಚಿದ್ದಾರೆ.

ಸಂಯುಕ್ತಾ ಮೆನನ್, ಜರೀನಾ ವಹಾಬ್, ವಿಟಿವಿ ಗಣೇಶ್ ಮತ್ತು ಬ್ರಹ್ಮಾಜಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆದರೆ ಟೀಸರ್‌ನಲ್ಲಿ ಸೇತುಪತಿ ಎದುರು ದುನಿಯಾ ವಿಜಯ್ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ವಿಜಿ ವಿಲನ್ ಆಗಿ ನಟಿಸಿರುವುದು ಗೊತ್ತಾಗುತ್ತಿದೆ. ವಿಭಿನ್ನ ಗೆಟಪ್ ಹಾಗೂ ಮ್ಯಾನರಿಸಂನಲ್ಲಿ ಅವರನ್ನು ನೋಡಬಹುದು.
ಕಣ್ಣು ಕಾಣದ ಭಿಕ್ಷುಕನ ರೀತಿ ವಿಜಯ್ ಸೇತುಪತಿ ಬಣ್ಣ ಹಚ್ಚಿದ್ದಾರೆ. ಇದು ಬರೀ ನಾಟಕನಾ ಎನ್ನುವುದು ನೋಡಬೇಕಿದೆ. "ಒಂದು ಮಳೆ ಬಂದ್ರೆ ಕಾಗೆ ತರ ಮರದ ಕೆಳಗೆ ಅಡಗಿ ಕೂರುವುದು ನಮ್ಮ ಜೀವನ, ಅಂತ ನಮ್ಮ ಜೀವನನಾ ಯಾರಾದ್ಉ ತುಳಿದ್ರೆ, ನಾನ್ ಹೇಗೆ ಸುಮ್ಮನಿರಲಿ" ಎನ್ನುವ ಡೈಲಾಗ್ ಹಿನ್ನೆಲೆಯಲ್ಲಿ ಟೀಸರ್ ಆರಂಭವಾಗುತ್ತದೆ. ಬಳಿಕ ಹರ್ಷವರ್ಧನ್ ರಾಮೇಶ್ವರಂ ಅವರ ಕಾಡುವ ಬಿಜಿಎಂ ಹಿನ್ನೆಲೆಯಲ್ಲಿ ಒಂದಷ್ಟು ಆಕ್ಷನ್ ಸೀಕ್ವೆನ್ಸ್ ಬಂದು ಹೋಗುತ್ತದೆ. ಭಿಕ್ಷುಕರ ದೊಡ್ಡ ಗುಂಪು, ಅವರನ್ನು ಕಾಡುವ ದುಷ್ಠರು, ಅವರ ವಿರುದ್ಧ ನಾಯಕನ ಹೋರಾಟದ ಕಥೆ ಚಿತ್ರದಲ್ಲಿದೆ ಎನ್ನುವುದು 'ಸ್ಲಮ್ ಡಾಗ್' ಟೀಸರ್ ನೋಡಿದರೆ ಅರ್ಥವಾಗುತ್ತದೆ.
ಸೇತುಪತಿಯನ್ನು ಕೆಣಕುವ, ಕಿರುಕುಳ ಕೊಡುವ ಪಾತ್ರದಲ್ಲಿ ದುನಿಯಾ ವಿಜಯ್ ನಟಿಸಿದ್ದಾರೆ. ಖಡಕ್ ಅವತಾರದಲ್ಲಿ ಅವರು ಸವಾಲು ಹಾಕಿದ್ದಾರೆ. ಹಾಗಾಗಿ ಚಿತ್ರದಲ್ಲಿ ವಿಜಯ್ ವರ್ಸಸ್ ವಿಜಯ್ ಎನ್ನುವಂತಹ ಪೈಪೋಟಿ ಇರುವುದು ಗೊತ್ತಾಗ್ತಿದೆ. ಚೆನ್ನೈನ ಹೋಟೆಲ್ ಗ್ರೀನ್ ಪಾರ್ಕ್‌ನಲ್ಲಿ 'ಸ್ಲಮ್ ಡಾಗ್' ಟೀಸರ್ ರಿಲೀಸ್ ಕಾರ್ಯಕ್ರಮ ನಡೆದಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ನಿರ್ಮಾಪಕ, ನಿರ್ದೇಶಕರಾಗಿ ಪೂರಿ ಜಗನ್ನಾಥ್ ಸೋತಿದ್ದಾರೆ. ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಅದರಿಂದ ಹೊರ ಬರಲು ಈ ಸಿನಿಮಾ ಗೆಲ್ಲಬೇಕಿದೆ.
ಚಾರ್ಮಿ ಕೌರ್ ಹಾಗೂ ನಾರಾಯಣ ರಾವ್ ಕೊಂಡ್ರೋಲಾ ಚಿತ್ರ ನಿರ್ಮಾಣಕ್ಕೆ ಪೂರಿ ಜಗನ್ನಾಥ್ ಜೊತೆ ಕೈ ಜೋಡಿಸಿದ್ದಾರೆ. ಸ್ಯಾಮ್ ನಾಯ್ಡು ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾ ಮೂಲಕ ವಿಜಯ್ ಸೇತುಪತಿ ಟಾಲಿವುಡ್ ಪ್ರವೇಶಿಸಿದ್ದಾರೆ. ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ದುನಿಯಾ ವಿಜಯ್ ವಿಲನ್ ಆಗಿ ನಟಿಸಿದ್ದರು. 'ಸ್ಲಮ್ ಡಾಗ್' ಅವರ 2ನೇ ತೆಲುಗು ಸಿನಿಮಾ.
ಕನ್ನಡದಲ್ಲಿ 'ಭೀಮ' ಬಳಿಕ 'ಲ್ಯಾಂಡ್‌ಲಾರ್ಡ್' ಸಿನಿಮಾ ಮೂಲಕ ದುನಿಯಾ ವಿಜಯ್ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ 'ಸಿಟಿಲೈಟ್ಸ್' ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 'ಮೂಕ್ಕುಟ್ಟಿ ಅಮ್ಮನ್'-2 ಎಂಬ ತಮಿಳು ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಮತ್ತೊಂದು ಸಿನಿಮಾ ನಿರ್ದೇಶಿಸಿ ನಟಿಸಲು ತಯಾರಿ ನಡೆಸಿದ್ದಾರೆ. ಇದೀಗ 'ಸ್ಲಮ್ ಡಾಗ್' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ಪ್ರಯತ್ನದಲ್ಲಿದ್ದಾರೆ.


Click it and Unblock the Notifications