'ಉಪ್ಪೆನ' ನಿರ್ದೇಶಕರ ಚಿತ್ರದಲ್ಲಿ ರಾಮ್ ಚರಣ್, ವಿಜಯ್ ಸೇತುಪತಿ ಮುಖಾಮುಖಿ!?
ಆರ್‌ಆರ್‌ಆರ್ ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ತೆಲುಗು ನಟ ರಾಮ್ ಚರಣ್ ಅವರ ಮುಂದಿನ ಚಿತ್ರ ಸೂಪರ್ ಹಿಟ್ 'ಉಪ್ಪೆನ' ಸಿನಿಮಾ ನೀಡಿದ್ದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರೊಂದಿಗೆ ಎಂಬುದು ಬೆಳಕಿಗೆ ಬಂದಿದೆ. ಈ ಹೊಸ ಸಿನಿಮಾದಲ್ಲಿ ರಾಮ್ ಚರಣ್ ಜೊತೆಗೆ ಯಾವ ಕಲಾವಿದರು ನಟಿಸಲಿದ್ದಾರೆ ಎಂಬ ಒಂದೊಂದೆ ವಿಷಯಗಳು ಹೊರ ಬರುತ್ತಿವೆ.
ಮುಂದಿನ ವರ್ಷ ಜನವರಿಯಲ್ಲಿ ಬುಚ್ಚಿ ಬಾಬು ಸನಾ ಮತ್ತು ರಾಮ್ ಚರಣ್ ತಮ್ಮ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಚಿತ್ರದ ತಾರಾಬಳಗಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಷಯಗಳು ಹೊರಬೀಳುತ್ತಿದೆ. ಅದರಲ್ಲಿ ಒಂದು ಸಿನಿಮಾದಲ್ಲಿ ರಾಮ್ ಚರಣ್‌ಗೆ ಎದುರಾಳಿಯಾಗಿ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು.

ವಿಜಯ್ ಸೇತುಪತಿ ಮತ್ತು ರಾಮ್ ಚರಣ್ ಜೋಡಿ!
ರಾಮ್ ಚರಣ್ ಎದುರು ಖಳನಾಯಕನಾಗಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ವಿಜಯ್ ಸೇತುಪತಿ ಈಗಾಗಲೇ ದೇಶದ ಪ್ರಮುಖ ಸ್ಟಾರ್ ನಟರ ಎದುರು ಖಳನಾಗಿ ಅಬ್ಬರಿಸಿದ್ದಾರೆ. ದಳಪತಿ ವಿಜಯ್‌ನಿಂದ ಶಾರುಖ್ ಖಾನ್, ಕಮಲ್ ಹಾಸನ್, ರಜನಿಕಾಂತ್ ಈ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆಗೆ ಕೆಲಸ ಮಾಡಿದ್ದಾರೆ.
ಈ ನಾಯಕ ನಟರ ಎದುರು ವಿಜಯ್ ಸೇತುಪತಿ ಖಳನಾಯಕನ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಪ್ರಬಲ ಪೈಪೋಟಿ ನೀಡಿದ್ದಾರೆ. ತಮ್ಮ ಎದುರು ಇರುವುದು ಯಾರು ಎಂಬುದನ್ನು ಲೆಕ್ಕಿಸದೆ ತಮ್ಮದೇ ಆದ ಪಾತ್ರವನ್ನು ವಿಶೇಷವಾಗಿ ಪ್ರೆಸೆಂಟ್ ಮಾಡಿರುವುದು ವಿಜಯ್ ಸೇತುಪತಿ ಅವರ ನಟನಾ ಕೌಶಲ್ಯಕ್ಕೆ ಸಲ್ಲಬೇಕಾಗ ಗೌರವ.

ಇನ್ನು, ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ವರದಿಗಳು ನಿಜವಾಗಿದ್ದರೆ, ದೊಡ್ಡ ಪರದೆಯ ಮೇಲೆ ನಾಯಕ ಮತ್ತು ಖಳನಾಯಕರಾಗಿ ರಾಮ್ ಚರಣ್ ಮತ್ತು ವಿಜಯ್ ಸೇತುಪತಿ ಅವರನ್ನು ನೋಡುವುದು ಸಕತ್ ಅನುಭವವೆ ಸರಿ. ಈ ಹೊಸ ಸಿನಿಮಾದ ಮತ್ತೊಂದು ಮಾಹಿತಿ ಎಂದರೆ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡುವ ನಿರೀಕ್ಷೆ ಇದೆ. ಸಿನಿಮಾಗೆ ಘಟಾನುಘಟಿಗಳ ದಂಡು ಒಂದಾಗುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.
ರಾಮ್ ಚರಣ್ ಮತ್ತು ಉಪ್ಪೆನ ನಿರ್ದೇಶಕ ಬುಚ್ಚಿ ಬಾಬು ಸನಾ ಸಿನಿಮಾ
ರಾಮ್ ಚರಣ್ ಮತ್ತು ಉಪ್ಪೆನ ನಿರ್ದೇಶಕ ಬುಚ್ಚಿ ಬಾಬು ಸನಾ ಸಿನಿಮಾದ ವರದಿಯ ಪ್ರಕಾರ, ಈ ಚಿತ್ರವನ್ನು ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ಅವರ ಸುಕುಮಾರ್ ರೈಟಿಂಗ್ಸ್ ಪ್ರೊಡಕ್ಷನ್ ಬ್ಯಾನರ್ ಜಂಟಿಯಾಗಿ ನಿರ್ಮಿಸಲು ನಿರ್ಧರಿಸಲಾಗಿದೆ. ಚಿತ್ರವು ಪ್ಯಾನ್ ಇಂಡಿಯಾ ಮಾಸ್ ಎಂಟರ್ಟೈನರ್ ಎಂದು ಹೇಳಲಾಗುತ್ತಿದೆ.
ಎಸ್ ಎಸ್ ರಾಜಮೌಳಿಯ ಆರ್‌ಆರ್‌ಆರ್ ಯಶಸ್ಸಿನ ನಂತರ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಇಬ್ಬರೂ ರಾಷ್ಟ್ರದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ದರಿಂದ, ಇಬ್ಬರು ನಟರ ಮುಂಬರುವ ಸಿನಿಮಾಗಳ ಮೇಲೆ ಹೆಚ್ಚು ನಿರೀಕ್ಷೆಯಿದೆ.
ಇನ್ನು, 2 ತಿಂಗಳ ಹಿಂದೆಯಷ್ಟೆ ಟಾಲಿವುಡ್ ಮೆಗಾ ಫ್ಯಾಮಿಲಿಗೆ ಹೊಸ ಅತಿಥಿಯ ಆಗಮನವಾಗಿದೆ. ರಾಮ್‌ಚರಣ್ ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ಕ್ಲೀಂ ಕಾರ ಎಂದು ನಾಮಕರಣ ಮಾಡಿದ್ದರು. ಆದರೆ ಮಗಳ ಫೋಟೊವನ್ನು ರಿವೀಲ್ ಮಾಡಿರಲಿಲ್ಲ. ಆದರೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ತಮ್ಮ ಮುದ್ದಿನ ಮಗಳು ಕ್ಲೀಂ ಕಾರಳ ಫೋಟೊವೊಂದನ್ನು ಉಪಾಸನಾ ಹಂಚಿಕೊಂಡಿದ್ದಾರೆ. ಇದರಿಂದ ಮೆಗಾ ಫ್ಯಾಮಿಲಿ ಫ್ಯಾನ್ಸ್ ಖುಷಿಯಿಂದ ಮಗುವನ್ನು ಹರಸಿದ್ದರು.


Click it and Unblock the Notifications











