ವಿಜಯ್ ಜೊತೆ ಪೂರಿ ಹೊಸ ಸಿನಿಮಾ ಘೋಷಣೆ; ಮತ್ತೆ ಅದೇ ತಪ್ಪು ಮಾಡ್ತಿದ್ದಾರಾ?
ನಿರ್ದೇಶಕ ಪೂರಿ ಜಗನ್ನಾಥ್ ಸೋಲಿನ ಸುಳಿವು ಸಿಲುಕಿದ್ದಾರೆ. ಪದೇ ಪದೆ ಎದ್ದು ಬರುವ ಪ್ರಯತ್ನ ಮಾಡಿದರೂ ಪ್ರಯೋಜನವಾಗ್ತಿಲ್ಲ. ಈ ಬಾರಿ ತೆಲುಗು ಬಿಟ್ಟು ತಮಿಳು ನಟನ ಜೊತೆ ಕೈ ಜೋಡಿಸಿದ್ದಾರೆ. ವಿಜಯ್ ಸೇತುಪತಿ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಯುಗಾದಿ ಹಬ್ಬದ ಸಂಭ್ರಮದಲ್ಲಿ ಪೂರಿ ಜಗನ್ನಾಥ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇನ್ನೆರಡು ತಿಂಗಳ ಬಳಿ ಚಿತ್ರೀಕರಣ ಆರಂಭಿಸುವುದಾಗಿಯೂ ತಿಳಿಸಿದ್ದಾರೆ. 'ಬೆಗ್ಗರ್' ಎಂಬ ಟೈಟನ್‌ನಲ್ಲಿ ವಿಜಯ್ ಸೇತುಪತಿ ಜೊತೆ ಪೂರಿ ಜಗನ್ನಾಥ್ ಸಿನಿಮಾ ಮಾಡ್ತಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿ ಬಂದಿತ್ತು. ಆದರೆ ಟೈಟಲ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಒಂದ್ಕಾಲದಲ್ಲಿ ಟಾಪ್ ಡೈರೆಕ್ಟರ್ ಎನಿಸಿಕೊಂಡಿದ್ದ ಪೂರಿ ಜಗನ್ನಾಥ್ ಈಗ ಒಂದೇ ಒಂದು ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಬಹಳ ನಿರೀಕ್ಷೆಯಿಂದ ಮಾಡಿದ 'ಲೈಗರ್' ಸಿನಿಮಾ ಸೋತು ಪೂರಿ ಸಂಕಷ್ಟಕ್ಕೆ ಸಿಲುಕಿದರು. ಬಳಿಕ 'ಡಬಲ್ ಇಸ್ಮಾರ್ಟ್ ಶಂಕರ್' ಸಿನಿಮಾ ಮಾಡಿ ಮತ್ತೆ ಸೋಲುವಂತಾಗಿತ್ತು. ಬರೀ ನಿರ್ದೇಶಕನಾಗಿ ಸೋತಿದ್ದರೆ ಪರವಾಗಿಲ್ಲ, ನಿರ್ಮಾಪಕರಾಗಿಯೂ ಸೋತು ಸಾಲದ ಸುಳಿಗೆ ಸಿಲುಕಿದ್ದಾರೆ.
'ಲೈಗರ್' ಚಿತ್ರದಿಂದ ನಷ್ಟವಾಗಿದೆ ಎಂದು ವಿತರಕರು, ಪ್ರದರ್ಶಕರು ಪೂರಿ ಜಗನ್ನಾಥ್ ಆಫೀಸ್ ಮುಂದೆ ಗಲಾಟೆ ಮಾಡಿದ್ದ ಘಟನೆ ಕೂಡ ನಡೆದಿತ್ತು. ಪೂರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ ಬಹುತೇಕ ಸಿನಿಮಾಗಳು ಸೋತಿವೆ. ಹಾಗಾಗಿ ಇನ್ನುಮುಂದೆ ಪೂರಿ ಹಾಗೂ ಚಾರ್ಮಿ ಸಿನಿಮಾ ನಿರ್ಮಾಣ ಮಾಡದೇ ಇರುವುದು ಉತ್ತಮ ಎಂದು ಕೆಲವರು ಸಲಹೆ ನೀಡಿದ್ದರು. ಹೊಸ ಚಿತ್ರವನ್ನು ನಿರ್ಮಾಣ ಮಾಡಲ್ಲ, ಬರೀ ನಿರ್ದೇಶನ ಮಾಡುತ್ತಾರೆ ಎಂದು ಕೆಲವರು ಭಾವಿಸಿದ್ದರು.
ಸದ್ಯ ಪೂರಿ ಕನೆಕ್ಸ್ಟ್ ಬ್ಯಾನರ್‌ನಲ್ಲೇ ಹೊಸ ಸಿನಿಮಾ ಘೋಷಣೆ ಆಗಿದೆ. ಎಂದಿನಂತೆ ಪೂರಿ ಜಗನ್ನಾಥ್ ತಂಡವೇ ಚಿತ್ರಕ್ಕೆ ಕೆಲಸ ಮಾಡಲಿದೆ. ಚಾರ್ಮಿ ಕೌರ್ ಕೂಡ ಜೊತೆ ನಿಲ್ಲಲಿದ್ದಾರೆ. ಕನ್ನಡದಲ್ಲಿ 'ಯುವರಾಜ' ಹಾಗೂ 'ಅಪ್ಪು' ರೀತಿಯ ಹಿಟ್ ಸಿನಿಮಾಗಳನ್ನು ಪೂರಿ ಜಗನ್ನಾಥ್ ಕಟ್ಟಿಕೊಟ್ಟಿದ್ದರು.
ಪೂರಿ ಜಗನ್ನಾಥ್ ನಿರ್ದೇಶನದ ತೆಲುಗು ಚಿತ್ರಗಳು ಬೇರೆ ಭಾಷೆಗಳಿಕೆ ರೀಮೆಕ್ ಆಗಿದೆ. 'ಅಮ್ಮ ನಾನ್ನ ಓ ತಮಿಳ್ ಅಮ್ಮಾಯಿ', 'ಪೋಕಿರಿ' ರೀತಿಯ ಸಿನಿಮಾ ಕನ್ನಡ, ತಮಿಳಿಗೂ ರೀಮೆಕ್ ಆಗಿತ್ತು. ಅಮಿತಾಬ್ ಬಚ್ಚನ್ ನಟನೆಯ 'ಬುದ್ದಾ ಹೋಗಾ ತೇರಾಬಾಪ್' ರೀತಿಯ ಸಿನಿಮಾಗಳನ್ನು ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ತಮ್ಮದೇ ವಿಭಿನ್ನ ಶೈಲಿಯ ಸಿನಿಮಾಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದರು. ಮುಖ್ಯವಾಗಿ ನಾಯಕನ ಪಾತ್ರವನ್ನು ಬಹಳ ವಿಭಿನ್ನವಾಗಿ ತಿದ್ದಿ ತೀಡಿ ಗೆದ್ದವರು, ಸ್ಟಾರ್ ನಟರಿಗೆ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟವರು ಪೂರಿ ಜಗನ್ನಾಥ್.
ಸದ್ಯ ತಮ್ಮ ಹೊಸ ಚಿತ್ರದಲ್ಲಿ ವಿಜಯ ಸೇತುಪತಿ ಅವರನ್ನು ವಿಭಿನ್ನವಾಗಿ ತೋರಿಸಲು ಪೂರಿ ಮುಂದಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ಅದ್ಭುತ ಪಾತ್ರಗಳನ್ನು ಮಾಡಿ ಗೆದ್ದವರು ಸೇತುಪತಿ. ಕಳೆದ ವರ್ಷ 'ಮಹಾರಾಜ' ಚಿತ್ರದಲ್ಲಿ ನಟಿಸಿ ಸಕ್ಸಸ್ ಕಂಡಿದ್ದರು. ಇದೀಗ ಪೂರಿ ಜಗನ್ನಾಥ್ ಜೊತೆ ಕೈ ಜೋಡಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಈ ಕ್ರೇಜಿ ಕಾಂಬಿನೇಷನ್ ಸಿನಿಮಾ ತೆರೆಗೆ ಬರಲಿದೆ.
ಜ್ಯೂ. ಎನ್‌ಟಿಆರ್ ನಟನೆಯ 'ಟೆಂಪರ್' ಬಳಿಕ ನಿರ್ದೇಶಕ ಪೂರಿ ಜಗನ್ನಾಥ್ ಹೇಳಿಕೊಳ್ಳುವಂತಹ ಹಿಟ್ ಕೊಟ್ಟಿರಲಿಲ್ಲ. ಅಂತೂ ಇಂತೂ ಇಸ್ಮಾರ್ಟ್ ಶಂಕರ್ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದರು. ಆದರೆ 'ಲೈಗರ್' ಹಾಗೂ 'ಡಬಲ್ ಇಸ್ಮಾರ್ಟ್ ಶಂಕರ್' ಮತ್ತೆ ಸೋಲಿನ ಸುಳಿಗೆ ಸಿಲುಕುವಂತೆ ಮಾಡಿತ್ತು. ಇದೀಗ ಮತ್ತೆ ಫೀನಿಕ್ಸ್ ರೀತಿ ಎದ್ದು ಬರಲು ಹೊರಟಿದ್ದಾರೆ.


Click it and Unblock the Notifications











