'ಆಪರೇಷನ್ ಸಿಂಧೂರ್'; ಎಲ್ಲದ್ದಕ್ಕೂ ಕಾರಣ ಹಿಂದಿನ ಕಾಂಗ್ರೆಸ್ ಸರ್ಕಾರ ಎಂದ ವಿಜಯಶಾಂತಿ!
ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ಸೇನೆ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಗೆ ಭಾರೀ ಸ್ವಾಗತ ಸಿಕ್ಕಿದೆ. ಸಾಕಷ್ಟು ಜನ ನಮ್ಮ ಸರ್ಕಾರದ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಗಡಿಯಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಇನ್ನು ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಸೇನೆಯ ಕಾರ್ಯಾಚರಣೆಯ ಬಗ್ಗೆ ಕೆಲವರು ಚಕಾರ ಎತ್ತಿದ್ದಾರೆ.
ಸದ್ಯ ತೆಲುಗು ನಟಿ, ತೆಲಂಗಾಣ ಕಾಂಗ್ರೆಸ್ ಎಂಎಲ್‌ಸಿ ವಿಜಯಶಾಂತಿ ಕೂಡ 'ಆಪರೇಷನ್ ಸಿಂಧೂರ್' ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಆಕೆಯ ಪೋಸ್ಟ್ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹೊಗಳಿ ವಿಜಯಶಾಂತಿ ಟ್ವೀಟ್ ಮಾಡಿದ್ದಾರೆ. ಆದರೆ ಇದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇತಿಹಾಸ ಗೊತ್ತಿಲ್ಲದೇ ಮಾತನಾಡಬೇಡಿ ಎಂದು ತಿರುಗೇಟು ಕೊಟ್ಟಿದ್ದಾರೆ.

"ಭಾರತದ ವಿರುದ್ಧ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವ ಪಾಕಿಸ್ತಾನವನ್ನು ಹತ್ತಿಕ್ಕುವಲ್ಲಿ ಕಾಂಗ್ರೆಸ್ ಸರ್ಕಾರ ಆರಂಭದಿಂದಲೂ ಮುಂಚೂಣಿಯಲ್ಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. 1965 ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧ ಪ್ರಾರಂಭವಾದಾಗ, ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಮ್ಮ ಸೈನ್ಯವನ್ನು ಪಾಕಿಸ್ತಾನದ ಹೃದಯಭಾಗದವರೆಗೆ ಕರೆದೊಯ್ದು ಭಯವನ್ನು ಹುಟ್ಟಿಸಿತ್ತು. ನಂತರ 1971ರಲ್ಲಿ, ಪೂರ್ವ ಪಾಕಿಸ್ತಾನದ ಪ್ರತ್ಯೇಕತೆ ಮತ್ತು ಇಂದಿನ ಬಾಂಗ್ಲಾದೇಶದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ" ಎಂದು ವಿಜಯಶಾಂತಿ ಟ್ವೀಟ್ ಮಾಡಿದ್ದಾರೆ.
"ಈ ಎರಡೂ ಸಂದರ್ಭಗಳ ಬಳಿಕ ಭಾರತೀಯ ಸರ್ಕಾರಗಳು ಅವರಿಂದ ಸ್ಫೂರ್ತಿ ಪಡೆದು ಇಂದಿಗೂ ಮತ್ತು ಭವಿಷ್ಯದಲ್ಲಿಯೂ ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎಂಬುದು ನಿಜ. ಆದಾಗ್ಯೂ, ಕೆಲವರು ಸಾಮಾಜಿಕ ಮಾಧ್ಯಮದ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದರೂ, ಯಾರೂ ಈ ವಿಷಯವನ್ನು ರಾಜಕೀಯ ದೃಷ್ಟಿಕೋನದಿಂದ ನೋಡುತ್ತಿಲ್ಲ ಎಂಬುದನ್ನು ಆ ಕೆಲವರು ಅರ್ಥಮಾಡಿಕೊಳ್ಳಬೇಕು ಎಂದು ನಾನು ನಂಬುತ್ತೇನೆ. ಹರಹರ ಮಹಾದೇವ್, ಜೈ ಜವಾನ್, ಜೈ ಹಿಂದ್" ಎಂದು ವಿಜಯಶಾಂತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ವಿಜಯಶಾಂತಿ ಟ್ವೀಟ್ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. "ಮೇಡಂ ಇದು ರಾಜಕೀಯ ಮಾಡುವ ಸಮಯ ಅಲ್ಲ. ಇದಕ್ಕಿಂತ ಮುಖ್ಯವಾದ ಕೆಲಸಗಳು ಬೇರೆ ಇವೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ನಿಮಗೆ ನಾಚಿಕೆ ಆಗುವುದಿಲ್ಲದೇ ಇಂತಹ ಸಮಯದಲ್ಲಿ ರಾಜಕೀಯ ಮಾಡುತ್ತಾ ಕೂರುವುದಕ್ಕೆ" ಎಂದು ಮತ್ತೊಬ್ಬರು ರಿಪ್ಲೇ ಮಾಡಿದ್ದಾರೆ.
1998ರಲ್ಲಿ ಬಿಜೆಪಿ ಪಕ್ಷ ಸೇರಿದ್ದ ನಟಿ ವಿಜಯಶಾಂತಿ ಬಳಿಕ ತಲ್ಲಿ ತೆಲಂಗಾಣ ಎಂಬ ಪಕ್ಷ ಸ್ಥಾಪಿಸಿದ್ದರು. ನಂತರ ಆ ಪಕ್ಷವನ್ನು ಬಿಆರ್‌ಎಸ್ ಜೊತೆ ವಿಲೀನಗೊಳಿಸಿದ್ದರು. ಎಂಪಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 2014ರಲ್ಲಿ ಆಕೆ ಕಾಂಗ್ರೆಸ್ ಪಕ್ಷ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿಯನ್ನು ಭಯೋತ್ಪಾದಕನಿಗೆ ಹೋಲಿಸಿ ಅವರು "ಸರ್ವಾಧಿಕಾರಿಯಂತೆ ಆಳುತ್ತಿದ್ದಾರೆ" ಎಂದು ವಿಜಯಶಾಂತಿ ಹೇಳಿಕೆ ನೀಡಿದ್ದು ಭಾರೀ ವಿವಾದ ಸೃಷ್ಟಿಸಿತ್ತು.
2020ರಲ್ಲಿ ವಿಜಯಶಾಂತಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಸೇರಿದ್ದರು. ಬಿಜೆಪಿಗೆ ಮರುಸೇರ್ಪಣೆಗೊಂಡಿದ್ದರು. 2023ರಲ್ಲಿ ಮತ್ತೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದರು. ಆಕೆ ಮಾರ್ಚ್ 13, 2025 ರಂದು ತೆಲಂಗಾಣ ವಿಧಾನ ಪರಿಷತ್ತಿನ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.
ಒಂದ್ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ತೆಲುಗು ಚಿತ್ರರಂಗದಲ್ಲಿ ವಿಜಯಶಾಂತಿ ಮೆರೆದಿದ್ದರು. ಆದರೆ ರಾಜಕೀಯರಂಗದಲ್ಲಿ ಬ್ಯುಸಿಯಾದ ಬಳಿಕ ಸಿನಿಮಾಗಳಿಂದ ದೂರಾಗಿದ್ದರು. 5 ವರ್ಷಗಳ ಹಿಂದೆ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಟಿಸಿ ಕಂಬ್ಯಾಕ್ ಮಾಡಿದ್ದರು. 14 ವರ್ಷಗಳ ಬಳಿಕ ಬಣ್ಣ ಹಚ್ಚಿ ನಟಿಸಿದ್ದರು. ಇತ್ತೀಚೆಗೆ ಬಂದ 'ಅರ್ಜುನ್ ಸನ್ ಆಫ್ ವಿಜಯಶಾಂತಿ' ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಮಿಂಚಿದ್ದರು.


Click it and Unblock the Notifications











