ಆರ್ ಆರ್ ಆರ್ ದಾಖಲೆ ಹೊಡೆದುರುಳಿಸಿದ ಚಿರಂಜೀವಿ 'ವಾಲ್ತೇರು ವೀರಯ್ಯ'
ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಗೊಂಡ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಸಿನಿಮಾಗಳ ನಡುವೆ ತೆಲುಗಿನ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ವಿನ್ನರ್ ಎನಿಸಿಕೊಂಡಿದೆ. ಕಳೆದ ಚಿತ್ರಗಳಲ್ಲಿ ಗೆಲುವು ಕಾಣದೇ ಮಂಕಾಗಿದ್ದ ಚಿರಂಜೀವಿ ಗಟ್ಟಿಯಾಗಿ ಕಮ್‌ಬ್ಯಾಕ್ ಮಾಡಿದ್ದು, ಸಿನಿಮಾ ಈಗಾಗಲೇ 250 ಕೋಟಿ ಕ್ಲಬ್ ಸೇರಿದೆ.
ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿ ಎನಿಸಿಕೊಂಡಿರುವ ನಿರ್ದೇಶಕ ಬಾಬಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಮೆಗಾ ಬ್ಲಾಕ್‌ಬಸ್ಟರ್ ನೀಡಿದ್ದಾರೆ. ವಿಂಟೇಜ್ ಚಿತ್ರಗಳಲ್ಲಿ ಇದ್ದಂತಹ ಚಿರಂಜೀವಿ ನಟನೆ, ರವಿತೇಜಾ ಚಿತ್ರದಲ್ಲಿ ಇದ್ದದ್ದು, ತೆಲುಗು ಸಿನಿ ರಸಿಕರಿಗೆ ಇಷ್ಟವಾಗುವಂತಹ ಚಿತ್ರಕಥೆಯನ್ನು ಹೊಂದಿದ್ದ ವಾಲ್ತೇರು ವೀರಯ್ಯ ಗೆಲುವಿಗೆ ಕಾರಣವಾಗಿವೆ.
ಇನ್ನು ವಾಲ್ತೇರು ವೀರಯ್ಯ ವಿಶಾಖಪಟ್ಟಣದಲ್ಲಿರುವ ಜಗದಾಂಬ ಎಂಬ ಜನಪ್ರಿಯ ಚಿತ್ರಮಂದಿರದಲ್ಲಿ ಆರ್ ಆರ್ ಆರ್ ಚಿತ್ರದ ದಾಖಲೆಯನ್ನು ಹೊಡೆದುರುಳಿಸಿದ್ದು ಈ ಚಿತ್ರಮಂದಿರದ ಇತಿಹಾಸದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ರಾಜಮೌಳಿ ನಿರ್ದೇಶನ, ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ರೀತಿಯ ಬಿಗ್ಗೆಸ್ಟ್ ಸ್ಟಾರ್ ನಟರಿದ್ದ ಆರ್ ಆರ್ ಆರ್ ಈ ಚಿತ್ರಮಂದಿರದಲ್ಲಿ 1,12,92,330 ರೂಪಾಯಿಗಳನ್ನು ಗಳಿಸಿತ್ತು. ಈಗ ವಾಲ್ತೇರು ವೀರಯ್ಯ ಸಿನಿಮಾ 31 ದಿನಗಳ ಪ್ರದರ್ಶನದಲ್ಲಿ 1,13,42,875 ರೂಪಾಯಿಗಳನ್ನು ಗಳಿಸಿದೆ.

ಇನ್ನು ವಾಲ್ತೇರು ವೀರಯ್ಯ ಚಿತ್ರಕ್ಕಿಂತ ದುಪ್ಪಟ್ಟು ಟಿಕೆಟ್ ದರವನ್ನು ಆರ್ ಆರ್ ಆರ್ ಚಿತ್ರಕ್ಕೆ ವಿಧಿಸಿದ್ದರೂ ಸಹ ಚಿರಂಜೀವಿ ಸಿನಿಮಾ ಈ ಪರಿ ಕಲೆಕ್ಷನ್ ಮಾಡಿರುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಚಿತ್ರದಲ್ಲಿ ಚಿರಂಜೀವಿ 'ಯಾವ ದಾಖಲೆಯಲ್ಲೂ ನನ್ನ ಹೆಸರು ಇಲ್ಲ. ನನ್ನ ಹೆಸರಿನ ಮೇಲೆಯೇ ದಾಖಲೆಗಳಿವೆ' ಎಂದು ಹೇಳಿದ್ದ ಡೈಲಾಗ್‌ಗೆ ಇದೀಗ ನಿಜಕ್ಕೂ ಅರ್ಥ ಬಂದಂತಾಗಿದೆ ಎಂದು ಮೀಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.


Click it and Unblock the Notifications











