'ವಾರ್- 2' ತೆಲುಗಿನಲ್ಲಿ ಗೆಲ್ತಾ? ಸೋಲ್ತಾ? ನಷ್ಟದ ಪೈಸಾ ಪೈಸಾ ಲೆಕ್ಕ ಕೊಟ್ಟ ವಿತರಕ
ದೊಡ್ಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದಾಗ ವಿತರಕರು, ಪ್ರದರ್ಶಕರು ನಷ್ಟ ಅನುಭವಿಸುತ್ತಾರೆ. ನಂಬಿಕೆ ಇಟ್ಟು ಕೋಟಿ ಕೋಟಿ ಕೊಟ್ಟು ರೈಟ್ಸ್ ಖರೀದಿಸಿದವರು ಸಿನಿಮಾ ಗೆದ್ರೆ ಸಂಭ್ರಮಿಸುತ್ತಾರೆ. ಸೋತ್ರೆ ತಲೆಮೇಲೆ ಕೈಇಟ್ಟುಕೊಳ್ಳುತ್ತಾರೆ. ಈ ವರ್ಷ ಬಾಲಿವುಡ್ ಸಿನಿಮಾ 'ವಾರ್- 2' ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು.
ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ ಸ್ಪೈ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು. ತೆಲುಗು ನಟ ಜ್ಯೂ. ಎನ್‌ಟಿಆರ್ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ತೆಲುಗು ರೈಟ್ಸ್ ಭಾರೀ ಬೆಲೆಗೆ ಮಾರಾಟವಾಗಿತ್ತು. 'ವಾರ್- 2' ಸಿನಿಮಾ ಸೋತಿದ್ದನ್ನು ಸ್ವತಃ ಹೃತಿಕ್ ರೋಷನ್ ಒಪ್ಪಿಕೊಂಡಿದ್ದಾರೆ. ಇನ್ನು ತೆಲುಗಿನಲ್ಲಿ ಕೂಡ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತಾರಕ್ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಆಂಧ್ರ, ತೆಲಂಗಾಣದಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಲಾಗಿತ್ತು.

ಆಗಸ್ಟ್ 14ರಂದು ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಎದುರು 'ವಾರ್-2' ಸಿನಿಮಾ ತೆರೆಗಪ್ಪಳಿಸಿತ್ತು. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಾಗವಂಶಿ ಚಿತ್ರದ ತೆಲುಗು ರೈಟ್ಸ್ ಕೊಂಡುಕೊಂಡಿದ್ದರು. ಅಂದಾಜು 100 ಕೋಟಿ ರೂ.ಗೆ ವ್ಯವಹಾರ ನಡೆದಿತ್ತು. ಸಿನಿಮಾ ಸೋತು ಭಾರೀ ನಷ್ಟ ಅನುಭವಿಸಿದ್ದಾರೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಆಗಿತ್ತು. ಈ ಬಗ್ಗೆ ಸ್ವತಃ ನಾಗವಂಶಿ ಸ್ಪಷ್ಟನೆ ನೀಡಿದ್ದಾರೆ.
ಅಯಾನ್ ಮುಖರ್ಜಿ ನಿರ್ದೇಶನದ 'ವಾರ್- 2' ಚಿತ್ರದಲ್ಲಿ ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದರು. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡಿತ್ತು. ಅಶುತೋಷ್ ರಾಣಾ ಹಾಗೂ ಅನಿಲ್ ಕಪೂರ್ ಕೂಡ ಚಿತ್ರದ ತಾರಾಗಣದಲ್ಲಿದ್ದರು. 'ವಾರ್- 2' ಚಿತ್ರದ ತೆಲುಗು ರೈಟ್ಸ್ ಬಗ್ಗೆ ಗ್ರೇಟ್ ಆಂಧ್ರ. ಕಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿತರಕ ನಾಗವಂಶಿ ಮಾತನಾಡಿದ್ದಾರೆ.
"ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಚರ್ಚೆ ಆಗುತ್ತದೆ. ಅದೆಲ್ಲಾ ನಿಜ ಅಲ್ಲ. 'ವಾರ್- 2' ಚಿತ್ರವನ್ನು ನಾವು ಜಿಎಸ್‌ಟಿ ಬಿಟ್ಟು 68 ಕೋಟಿ ರೂ.ಗೆ ಕೊಂಡುಕೊಂಡಿದ್ದೆವು. 35ರಿಂದ 40 ಕೋಟಿ ರೂ. ಶೇರ್ ಬಂದಿತ್ತು. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಕರೆದು ನನಗೆ 18 ಕೋಟಿ ರೂ. ವಾಪಸ್ ಕೊಟ್ರು. ಮೊದ್ಲೆ ಷರತ್ತುಬದ್ಧ ಒಪ್ಪಂದ ಮಾಡಿಕೊಂಡಿದ್ದೆವು. ಹಾಗಾಗಿ ಅವ್ರದ್ದು ಮುಂಬೈ ಕಂಪನಿ, ಕಾರ್ಪೋರೆಟ್ ಕಂಪನಿ ಆಗಿದ್ರು ಕರೆದು ನನಗೆ ಹಣ ಕೊಟ್ಟುಬಿಟ್ರು" ಎಂದು ನಾಗವಂಶಿ ತಿಳಿಸಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲೇ 'ವಾರ್- 2' ಸಿನಿಮಾ ಬಂದಿತ್ತು. ಹೃತಿಕ್ ಹಾಗೂ ಟೈಗರ್ ಶ್ರಾಫ್ ನಟನೆಯ 'ವಾರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ದಕ್ಷಿಣದ ಪ್ರೇಕ್ಷಕರನ್ನು ಸೆಳೆಯಲು ತೆಲುಗು ನಟ ತಾರಕ್ ಅವರನ್ನು ಸೀಕ್ವೆಲ್‌ನಲ್ಲಿ ಬಳಸಿಕೊಂಡಿದ್ದರು. ಆದರೆ ಲೆಕ್ಕಾಚಾರ ಉಲ್ಟಾ ಆಗಿತ್ತು. ಟೀಸರ್, ಟ್ರೈಲರ್, ಸಾಂಗ್ಸ್ ಯಾವ್ದು ಕೂಡ ಸಿನಿಮಾ ನೋಡಬೇಕು ಎಂಬ ಕುತೂಹಲ ಮೂಡಿಸಿರಲಿಲ್ಲ.
ಹೃತಿಕ್ ಎದುರು ತಾರಕ್ ಸಪ್ಪೆ ಎನಿಸಿಬಿಟ್ಟರು. ಹಾಗಾಗಿ ತೆರೆಮೇಲೆ ಇಬ್ಬರ ಕಾಂಬಿನೇಷನ್ ಮ್ಯಾಜಿಕ್ ಕ್ರಿಯೇಟ್ ಮಾಡಲಿಲ್ಲ. ಆದರೂ ತಾರಕ್ ಅಭಿಮಾನಿಗಳು ಸಿನಿಮಾ ನೋಡಿ ಕೈಹಿಡಿದಿದ್ದರು. ಮಿಶ್ರಪ್ರತಿಕ್ರಿಯೆ ಸಿಕ್ಕಿ ಸಾಮಾನ್ಯ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಾರದೇ 'ವಾರ್- 2' ಸಿನಿಮಾ ಆಂಧ್ರ, ತೆಲಂಗಾಣದಲ್ಲಿ ಸೋಲುವಂತಾಗಿತ್ತು. ಹೈದರಾಬಾದ್‌ನಲ್ಲಿ ನಡೆದು ಪ್ರೀ ರಿಲೀಸ್ ಈವೆಂಟ್‌ನಲ್ಲಿ ಹೃತಿಕ್ ರೋಷನ್ ಸಹ ಭಾಗವಹಿಸಿದ್ದರು.
ಹೊಂಬಾಳೆ ಫಿಲ್ಮ್ಸ್ ಜೊತೆ ಹೃತಿಕ್ ಸಿನಿಮಾ ಘೋಷಣೆಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ನಟಿಸುತ್ತಿದ್ದಾರೆ.


Click it and Unblock the Notifications











