ಲುಗರ್ ಅಂದ್ರೆ ಅರ್ಥ ಏನು? 'ಡ್ರ್ಯಾಗನ್' ದೇಶಭಕ್ತಿ ಸಿನಿಮಾನಾ? ಮುಂದೆ ಕತ್ತಲೆ ಸಿನಿಮಾ ಮಾಡಲ್ವಾ ನೀಲ್?
ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಸಿನಿಮಾ 'ಡ್ರ್ಯಾಗನ್' ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. 'ಕೆಜಿಎಫ್', 'ಸಲಾರ್' ಸಿನಿಮಾಗಳನ್ನೇ ಇದು ನೆನಪಿಸುವಂತಿದ್ದರೂ ಇದೇ ಬೇರೆಯದ್ದೇ ಕಥೆ ಎಂದು ನೀಲ್ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಲುಗರ್ ಎಂಬ ಪಾತ್ರದಲ್ಲಿ ಜ್ಯೂ. ಎನ್‌ಟಿಆರ್ ನಟಿಸಿದ್ದಾರೆ.
ಪ್ರಶಾಂತ್ ನೀಲ್ ತಮ್ಮ ಸಿನಿಮಾ ಟೈಟಲ್, ಪಾತ್ರಗಳ ಹೆಸರು, ಕಥೆಯಲ್ಲಿನ ಊರು, ಜಾಗಕ್ಕೆ ಭಿನ್ನ ವಿಭಿನ್ನ ಹೆಸರುಗಳನ್ನು ಹುಡುಕುತ್ತಾರೆ. 'ಕೆಜಿಎಫ್' ಸರಣಿಯಲ್ಲಿ ಗರುಡ, ಅಧೀರ, ವಾನರಂ, ರುಗ್ಗಾ ಹೀಗೆ ವಿಭಿನ್ನ ಪಾತ್ರಗಳು ನರಾಚಿ ಎಂಬ ಚಿನ್ನದ ಗಣಿ ಹೀಗೆ ವಿಭಿನ್ನ ಹೆಸರುಗಳಿದ್ದವು. ಇನ್ನು 'ಸಲಾರ್' ಎಂಬ ಸಿನಿಮಾ ಟೈಟಲ್ ಬಹಳ ವಿಶೇಷ ಅನ್ನಿಸಿತ್ತು. ಪರ್ಷಿಯನ್ ಮತ್ತು ಉರ್ದು ಮೂಲದ ಈ ಪದಕ್ಕೆ ನಾಯಕ, ಸೇನಾಧಿಪತಿ ಎನ್ನುವ ಅರ್ಥ ಇದೆ.

ಇನ್ನು ವರದರಾಜ್ ಮನ್ನಾರ್, ಭಾರವ, ರಿಂದ, ಬಾಚಿ ರಾಜಾ ಮನ್ನಾರ್, ಚೀಕಾ ಹೀಗೆ 'ಸಲಾರ್' ಚಿತ್ರದಲ್ಲಿ ಕೂಡ ವಿಚಿತ್ರ ಹೆಸರಿನ ಪಾತ್ರಗಳಿದ್ದವು. 'ಡ್ರ್ಯಾಗನ್' ಚಿತ್ರದಲ್ಲಿ ಕೂಡ ಇದನ್ನು ಪ್ರಶಾಂತ್ ನೀಲ್ ಮುಂದುವರೆಸಿದ್ದಾರೆ. ಅಫ್ಗನ್ ಕಂಪನಿಯಲ್ಲಿ ಹತ್ತಾರು ವಿಲನ್‌ಗಳಿದ್ದಾರೆ. ಲುಗರ್ ಎಂಬ ಬಹಳ ಖತರ್ನಾಕ್ ವಿಲನ್ ಕೂಡ ಇದ್ದಾನೆ. ಆ ಪಾತ್ರವನ್ನು ತಾರಕ್ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಹೀರೊ ಹಾಗೂ ವಿಲನ್ ಆಗಿ ಜ್ಯೂ. ಎನ್‌ಟಿಆರ್ ಎರಡು ಪಾತ್ರ ನಿಭಾಯಿದ್ದಾರಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅಷ್ಟಕ್ಕೂ ಲುಗರ್ ಅರ್ಥ ಏನು ಎಂದು ಕೆಲವರು ಹುಡುಕಾಟ ಆರಂಭಿಸಿದ್ದಾರೆ.
ಜರ್ಮನ್ ಲುಗರ್ ಪಿಪಿ 08 ಪಿಸ್ತೂಲ್ ಹೆಸರಿನಿಂದ 'ಡ್ರ್ಯಾಗನ್' ಚಿತ್ರದಲ್ಲಿ ತಾರಕ್ ಪಾತ್ರದ ಹೆಸರು ತೆಗೆದುಕೊಳ್ಳಲಾಗಿದೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. 1947ರಲ್ಲಿ ತನ್ನ 10ನೇ ವಯಸ್ಸಿನಲ್ಲಿ ಅಫ್ಘಾನಿಸ್ತಾನಕ್ಕೆ ಹೋಗಿ ಅಫ್ಘಾನ್ ಟ್ರೇಡಿಂಗ್ ಕಂಪನಿಯ ಮುಖ್ಯ ಅಮಲುದಾರನಾಗಿ ಸೇವೆ ಸಲ್ಲಿಸಲು ತರಬೇತಿ ಪಡೆದ ಕಿರಾತಕನ ಪಾತ್ರ ಇದು ಎಂದು Variety ಮ್ಯಾಗಜೀನ್ ಸಂದರ್ಶನದಲ್ಲಿ ಪ್ರಶಾಂತ್ ನೀಲ್ ಹೇಳಿದ್ದಾರೆ. ಇದೇ ರೀತಿಯಲ್ಲಿ ಚಿತ್ರದಲ್ಲಿ ಇನ್ನು ಕೆಲ ಪಾತ್ರಗಳಿಗೆ ವಿಭಿನ್ನ ಹೆಸರುಗಳು ಇಟ್ಟಿರುವುದು ಗೊತ್ತಾಗುತ್ತಿದೆ.
ಡಾರ್ಕ್ ಥೀಮ್ ಸಿನಿಮಾಗಳನ್ನು ಮುಂದೆ ಮಾಡಲ್ಲ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. 'ಕೆಜಿಎಫ್', 'ಸಲಾರ್' ಹಾಗೂ 'ಡ್ರ್ಯಾಗನ್' ಚಿತ್ರಗಳಿಗೆ ಈ ಥೀಮ್ ಮುಗೀತು. ಮುಂದೆ ಕಲರ್‌ಫುಲ್ ಸಿನಿಮಾಗಳನ್ನು ಮಾಡ್ತೀನಿ, ಲವ್ ಸ್ಟೋರಿ ಚಿತ್ರ ಕಟ್ಟಿಕೊಡುತ್ತೀನಿ. ಒಂದು ಮೈಥಾಲಜಿ ಸಿನಿಮಾ ಮಾಡಲು ಕಥೆ ಸಿದ್ಧಪಡಿಸುತ್ತಿದ್ದೇನೆ ಎಂದು ಗಲಾಟ ಪ್ಲಸ್ ಸಂದರ್ಶನದಲ್ಲಿ ಹೇಳಿದ್ದಾರೆ. 'ಡ್ರ್ಯಾಗನ್' ಬಳಿಕ 'ಸಲಾರ್- 2' ಸಿನಿಮಾ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇದೇ ಸಂದರ್ಶನದಲ್ಲಿ 'ಡ್ರ್ಯಾಗನ್' ಅಂತಿಮವಾಗಿ ಅತಿದೊಡ್ಡ ದೇಶಭಕ್ತಿ ಸಿನಿಮಾ ಎನಿಸಿಕೊಳ್ಳುತ್ತದೆ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ನಿರೂಪಕ ಕೂಡ ಈ ಮಾತು ಕೇಳಿ ಅಚ್ಚರಿಗೊಂಡಿದ್ದಾರೆ. ಅದು ಹೇಗೆ ಎಂದು ಕೇಳಿದ್ದಕ್ಕೆ ಮುಂದೆ ಗೊತ್ತಾಗಲಿದೆ ಎಂದು ಪ್ರಶಾಂತ್ ನೀಲ್ ಹೇಳಿ ಕುತೂಹಲ ಮೂಡಿಸಿದ್ದಾರೆ. ಬ್ರಿಟೀಷರು ಭಾರತ ಬಿಟ್ಟು ಹೋದ ಬಳಿಕ ಅಫ್ಘನ್ ಟ್ರೇಡಿಂಗ್ ಕಂಪನಿ ಹಾಗೂ ಗೋಲ್ಡನ್ ಟ್ರೇಡಿಂಗ್ ಕಂಪನಿ ಸುತ್ತಾ ನಡೆದ ನಡೆಯುವ ಒಂದು ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಬರೀ ವಿಲನ್‌ಗಳು, ಒಬ್ಬರಿಗಿಂತ ಒಬ್ಬರು ರಾಕ್ಷಸರು. ಯುದ್ಧ ಮಾಡಿ ನೆತ್ತರ ಕೋಡಿ ಹರಿಸುವಂತೆ ಕಾಣ್ತಿದೆ. ಇದರಲ್ಲಿ ದೇಶಭಕ್ತಿ ಹೇಗೆ ಬರುತ್ತೆ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಆ ಪ್ರಶ್ನೆಗಳಿಗೆ ತೆರೆಮೇಲೆ ಉತ್ತರ ಸಿಗಲಿದೆ.
ದೊಡ್ಡ ಸಿನಿಮಾಗಳ ಕಾನ್ಸೆಪ್ಟ್, ಕಥೆಯನ್ನು ಅಷ್ಟು ಸುಲಭವಾಗಿ ಫಿಲ್ಮ್ ಮೇಕರ್ಸ್ ಬಿಟ್ಟುಕೊಡಲ್ಲ. 'ಕೆಜಿಎಫ್' ಹಾಗೂ 'ಸಲಾರ್' ಚಿತ್ರಗಳಲ್ಲಿ ಕೂಡ ಇದೇ ಮಾಡಲಾಗಿತ್ತು. ಆದರೆ ವರ್ಷಕ್ಕೂ ಮುನ್ 'ಡ್ರ್ಯಾಗನ್' ಚಿತ್ರದ ಥೀಮ್, ಹಿನ್ನೆಲೆ ಏನು ಎನ್ನುವುದನ್ನು ಪ್ರಶಾಂತ್ ನೀಲ್ ರಿವೀಲ್ ಮಾಡಿದ್ದಾರೆ. ಫಸ್ಟ್ ಗ್ಲಿಂಪ್ಸ್‌ನಲ್ಲೇ ಎಲ್ಲಾ ಹೇಳಿದ್ದಾರೆ. ಎಲ್ಲವನ್ನು ಹೇಳಿ ಈ ಬಾರಿ ಪ್ರೇಕ್ಷಕರನ್ನು ಹೇಗೆ ರಂಜಿಸುತ್ತೇವೆ ಎನ್ನುವುದು ಮುಖ್ಯ. ಇದು ಹೊಸ ಪ್ರಯತ್ನ ಎಂದು ವಿವರಿಸಿದ್ದಾರೆ.


Click it and Unblock the Notifications