ಮಹೇಶ್ ಬಾಬು ಚಿತ್ರದಲ್ಲಿ ನಟಿಸಿ ನನ್ನ ಕರಿಯರ್ ಹಾಳಾಯ್ತು, ಅದೊಂದು ದೃಶ್ಯದಲ್ಲಿ ನಟಿಸಬಾರದಿತ್ತು
ಬಹುಭಾಷಾ ನಟಿ ರಾಶಿ ಕನ್ನಡ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್, ಶಿವರಾಜ್‌ಕುಮಾರ್ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆಕೆ ಸಿನಿಮಾಗಳಲ್ಲಿ ಅಷ್ಟಾಗಿ ನಟಿಸುತ್ತಿಲ್ಲ. ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ನನ್ನ ಕರಿಯರ್ ಹಾಳಾಯ್ತು ಎಂದು ಆಕೆ ಹೇಳಿದ್ದಾರೆ.
ಸಿನಿಮಾ ಅಂದಮೇಲೆ ಎಲ್ಲ ತರಹದ ಪಾತ್ರಗಳಲ್ಲಿ ನಟಿಸಬೇಕು ಎಂದು ಕಲಾವಿದರು ಬಯಸುತ್ತಾರೆ. ಆದರೆ ಕೆಲ ಪಾತ್ರಗಳು ವಿವಾದ ಹುಟ್ಟಿ ಹಾಕಿಬಿಡುವ ಸಾಧ್ಯತೆಯಿದೆ. ಆಂಧ್ರದ ಗೋದಾವರಿಯಲ್ಲಿ ಹುಟ್ಟಿ ಬೆಳೆದ ನಟಿ ರಾಶಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. 1996ರಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. 2003ರಲ್ಲಿ ಬಂದಿದ್ದ ತೆಲುಗಿನ 'ನಿಜಂ' ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಆಕೆ ಬಣ್ಣ ಹಚ್ಚಿದ್ದರು.

ತೇಜಾ ನಿರ್ದೇಶನದ 'ನಿಜಂ' ಚಿತ್ರದಲ್ಲಿ ಮಹೇಶ್ ಬಾಬು ಹೀರೊ ಆಗಿ ನಟಿಸಿದ್ದರು. ಗೋಪಿಚಂದ್ ವಿಲನ್ ಆಗಿ ಅಬ್ಬರಿಸಿದ್ದರು. ಆತನ ಜೊತೆ ನೆಗೆಟಿವ್ ರೋಲ್‌ನಲ್ಲಿ ರಾಶಿ ಕಾಣಿಸಿಕೊಂಡಿದ್ದರು. ಮಲ್ಲಿ ಎಂಬ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆಕೆಯ ನಟನೆಗೆ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ನಾಯಕಿಯಾಗಿ ಮಿಂಚುತ್ತಿದ್ದ ಸಮಯದಲ್ಲೇ ಇಂತಾದೊಂದು ಪಾತ್ರ ಬೇಡವಾಗಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. ಆ ಬಳಿಕ ನಾಯಕಿಯಾಗಿ ಆಕೆಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ರಾಶಿ ನಿಜಂ ಚಿತ್ರದಲ್ಲಿ ನಾನು ನಟಿಸಬಾರದಿತ್ತು. ಅದರಿಂದಲೇ ನನ್ನ ಕರಿಯರ್ ಮುಳುಗಿ ಹೋಯಿತು ಎಂದಿದ್ದಾರೆ. ಹೇಳಿದ್ದೇ ಒಂದು ಕೊಟ್ಟ ಪಾತ್ರವೇ ಮತ್ತೊಂದು ಎಂದು ಬೇಸರ ವ್ಯಕ್ತಪಡಿಸಿದ್ದರು. "ನೀವು ಗೋಪಿಚಂದ್‌ಗೆ ಜೋಡಿಯಾಗಿ ಕಾಣಿಸಿಕೊಳ್ತೀರಾ, ಬಳಿಕ ಮಹೇಶ್ ಬಾಬು ಎಂಟ್ರಿ ಆಗುತ್ತದೆ ಎಂದಿದ್ರು. ಹಾಗಾಗಿ ಇಷ್ಟಪಟ್ಟು ಒಪ್ಪಿಕೊಂಡಿದ್ದೆ" ಎಂದು ರಾಶಿ ಆ ಚಿತ್ರಕ್ಕೆ ಆಯ್ಕೆ ಆಗಿದ್ದ ಬಗ್ಗೆ ಬಿಗ್‌ಟಿವಿ ಸ್ಟುಡಿಯೋ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದರು.

"ಮೇಕಪ್ ಹೆಚ್ಚು ಇರಲಿಲ್ಲ. ಬರೀ ಲಿಪ್‌ಸ್ಟಿಕ್, ಕಾಜಲ್ ಮಾತ್ರ ಹಾಕಿಕೊಂಡಿದ್ದೆ. ಕಣ್ಣಿಗೆ ಲೆನ್ಸ್ ಹಾಕಿದ್ದೆ. ಮೊದಲ ದಿನ ಚಿತ್ರೀಕರಣಕ್ಕೆ ಹೋದಾಗಲೇ ಆ ದೃಶ್ಯ ಇತ್ತು. ಇಷ್ಟವಿರಲಿಲ್ಲ. ಫಸ್ಟ್ ಶಾಟ್ ಬಳಿಕ ಪಿಆರ್‌ಓಗೆ ಹೇಳ್ದೆ. ನನಗಿಷ್ಟ ಇಲ್ಲ ಮಾಡಲ್ಲ ಅಂತ. ನನಗೆ ಇಂತಹ ದೃಶ್ಯಗಳು ಇರುತ್ತದೆ ಎಂದು ಹೇಳಿರಲಿಲ್ಲ. ಹಾಗಾಗಿ ನಾನು ಮಾಡಲ್ಲ ಅಂದೆ. ಮೇಕಪ್ ಹಾಕಿಕೊಂಡು ಬಳಿಕ ನೀವು ಹೊರಟು ಹೋದ ಉದಾಹರಣೆ ಇಲ್ಲ. ಹಾಗಾಗಿ ಮಾಡಲೇಬೇಕು ಅಂದ್ರು. ಹಾಗಾಗಿ ನಟಿಸಿದೆ. ಡಬ್ಬಿಂಗ್ ಮುಗಿಸಿದ ಬಳಿಕ ನಿರ್ದೇಶಕ ತೇಜಾ ಫೋನ್ ಮಾಡಿ ಕ್ಷಮೆ ಕೇಳಿದ್ರು" ಎಂದು ರಾಶಿ ನೆನಪಿಸಿಕೊಂಡಿದ್ದರು.
ಚಿತ್ರರಂಗದಲ್ಲಿ ಯಾರನ್ನು ಮರೆತು ಹೋಗಲು ಇಷ್ಟಪಡ್ತೀರಾ ಅಂದಾಗ ನಿರ್ದೇಶಕ ತೇಜಾ ಹೆಸರು ಹೇಳ್ದೆ. ಆತನ ಜೊತೆ ಉತ್ತಮ ಒಡನಾಟ ಇದೆ. ಆದರೆ ಅದೊಂದು ಸಿನಿಮಾ, ಪಾತ್ರ ಬೇಡವಾಗಿತ್ತು ಎಂದು ರಾಶಿ ಹೇಳಿದ್ದಾರೆ. "ನನಗೆ ಬೇಸರವಾಗಿದ್ದರೆ ಪರವಾಗಿಲ್ಲ. ಆ ಚಿತ್ರದಿಂದ ನನ್ನ ಅಭಿಮಾನಿಗಳಿಗೆ ಬೇಸರವಾಗಿತ್ತು. ಆ ಬಳಿಕ ನಾನು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಇತ್ತೀಚೆಗೆ ಕೂಡ ತೇಜಾ ಫೋನ್ ಮಾಡಿ ಮತ್ತೊಂದು ಸಿನಿಮಾ ಇದೆ, ಪಾತ್ರ ಇದೆ ಎಂದ್ರು. ಹಾಗಾಗಿ ಅವರೊಟ್ಟಿಗೆ ಒಳ್ಳೆ ಬಾಂಧವ್ಯ ಮುಂದುವರೆದಿದೆ ಎಂದು ರಾಶಿ ವಿವರಿಸಿದ್ದಾರೆ.
ಇದೇ ವಿಚಾರದ ಬಗ್ಗೆ ಸಾಕ್ಷಿ ಟಿವಿ ವಾಹಿನಿ ಸಂದರ್ಶನದಲ್ಲಿ ಕೂಡ ರಾಶಿ ಮಾತನಾಡಿದ್ದರು. "ನನ್ನ ಮಹಿಳಾ ಅಭಿಮಾನಿಯೊಬ್ಬರು 'ನಿಜಂ' ಸಿನಿಮಾ ನೋಡಿ ಬೇಸರ ವ್ಯಕ್ತಪಡಿಸಿದ್ದರು. ಚಿತ್ರಮಂದಿರದಲ್ಲಿ ಆ ಸಿನಿಮಾ ನೋಡುವಾಗ ಆಕೆಗೆ ಜ್ವರ ಬಂದು ಬಿಟ್ಟಿತ್ತಂತೆ. ಆ ವಿಷಯ ಗೊತ್ತಾಗಿ ನನಗೆ ಬೇಸರವಾಗಿತು. ನನ್ನ ಸಿನಿಮಾ ನೋಡಿ ಜನ ಖುಷಿಯಾಗಬೇಕು, ಒಬ್ಬರಿಗೆ ಜ್ವರ ಬಂದಿದೆ ಎಂದರೆ ಬೇಸರವಾಗದೇ ಇರದು, ಹಾಗಾಗಿ ನಟಿಸೋದು ಕಮ್ಮಿ ಮಾಡಿದೆ" ಎಂದು ರಾಶಿ ಹೇಳಿದ್ದರು.


Click it and Unblock the Notifications











