ಪ್ರಭಾಸ್ ಕಳುಹಿಸಿದ ಭಕ್ಷ್ಯ ಭೋಜನವನ್ನು ಬಕಾಸುರನಂತೆ ತಿಂದು ಕುಂಭಕರ್ಣನಂತೆ ಮಲಗಿದ ನಟ!
ತೆಲುಗು ನಟ ಪ್ರಭಾಸ್ ತಮ್ಮ ಸರಳ, ಸಜ್ಜನ ವ್ಯಕ್ತಿತ್ವದಿಂದ ಆಪ್ತರಿಗೆ ಡಾರ್ಲಿಂಗ್ ಆಗಿಬಿಟ್ಟಿದ್ದಾರೆ. ಅಭಿಮಾನಿಗಳು ಡಾರ್ಲಿಂಗ್ ಎಂದೇ ಸಂಬೋಧಿಸುತ್ತಾರೆ. ಪ್ರಭಾಸ್ ಅಂದ್ರೆ ಸ್ನೇಹ, ಸಹಾಯ, ಭಕ್ಷ್ಯ ಭೋಜನ ಎಂದು ಆಪ್ತರು ಹೇಳುತ್ತಲೇ ಇರುತ್ತಾರೆ. ಯಂಗ್ ರೆಬಲ್ ಸ್ಟಾರ್ ಊಟೋಪಚಾರ ದೊಡ್ಡದಾಗಿರುತ್ತದೆ ಎನ್ನುತ್ತಾರೆ.
ಪ್ರಭಾಸ್ ಜೊತೆ ಕೆಲಸ ಮಾಡುವ ಪ್ರತಿಯೊಬ್ಬರು, ಆಪ್ತರು ಅವರ ಭೋಜನ ಪ್ರೀತಿ ಬಗ್ಗೆ ಮಾತನಾಡುತ್ತಾರೆ. ಯಾರೇ ಭೇಟಿಗೆ ಹೋದರೂ ಹೊಟ್ಟೆ ತುಂಬಾ ತಿಂದು ಬರಬೇಕು ಅದು ಪ್ರಭಾಸ್ ಪಾಲಿಸಿ. ಇನ್ನು ಆಪ್ತರಿಗೆ ಪದೇ ಪದೆ ಭಕ್ಷ್ಯ ಭೋಜನವನ್ನು ಪ್ರಭಾಸ್ ಕೊಟ್ಟು ಕಳುಹಿಸುತ್ತಾರೆ. ಸದ್ಯ ಪ್ರಭಾಸ್ ಕಳುಹಿಸಿದ ಊಟ ಸವಿದು ನಟ ಗಡದ್ದು ನಿದ್ದೆ ಮಾಡಿದ್ದಾರೆ.

ಬಹುಭಾಷಾ ನಟ ಜಗಪತಿ ಬಾಬು ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. 'ರಾಬರ್ಟ್' ಸೇರಿ ಕನ್ನಡದ ಕೆಲ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಒಂದ್ಕಾಲದಲ್ಲಿ ಹೀರೊ ಆಗಿ ತೆಲುಗು ಚಿತ್ರರಂಗದಲ್ಲಿ ಮಿಂಚಿದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದಾರೆ. ಹೀರೊ ಆಗಿ ಮಾತ್ರವಲ್ಲ ನೆಗೆಟಿವ್ ಪಾತ್ರಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
'ದೇವರ' ಚಿತ್ರೀಕರಣಕ್ಕೆ ಬಂದಿದ್ದೆ. ನಾನು ಇರುವ ಸ್ಥಳಕ್ಕೆ ಪ್ರಭಾಸ್ ಕಳುಹಿಸಿ ಕೊಟ್ಟಿರುವ ಭಕ್ಷ್ಯ ಭೋಜನ ಇದು ಎಂದು ಜಗಪತಿ ಬಾಬು ವೀಡಿಯೋ ಮಾಡಿ ತೋರಿಸಿದ್ದಾರೆ. ಒಬ್ಬರಿಗೆ ಪ್ರಭಾಸ್ ಕಳುಹಿಸಿರುವ ಊಟ ಪ್ರಮಾಣ ನೋಡಿದರೆ ಎಂಥಹವರು ಶಾಕ್ ಆಗುತ್ತಾರೆ. ವೆಜ್, ನಾನ್‌ವೆಜ್‌ನಲ್ಲಿ ಹಲವು ಬಗೆಯ ಐಟಂಗಳು ಇವೆ.
ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು ಎಂಬ 'ಮಾಯಾಬಜಾರ್' ಹಾಡಿನೊಂದಿಗೆ ವೀಡಿಯೋ ಹಂಚಿಕೊಂಡಿದ್ದಾರೆ. ಬಳಿಕ ಬಕಾಸುರನಂತೆ ಊಟ ಮಾಡಿದೆ, ಕುಂಬಕರ್ಣನಂತೆ ನಿದ್ದೆ ಮಾಡ್ತಿನಿ ಎಂದು ಹೇಳಿ ಜಗಪತಿ ಬಾಬು ನಿದ್ದೆ ಜಾರಿದ್ದಾರೆ. ಸದ್ಯ ವೀಡಿಯೋ ವೈರಲ್ ಆಗುತ್ತಿದೆ. ಅಂದಹಾಗೆ ಇದು ಹಳೇ ವೀಡಿಯೋ ಎನ್ನುವುದು ಗೊತ್ತಾಗುತ್ತಿದೆ. ಆದರೆ ಈಗ ಹಂಚಿಕೊಂಡಿದ್ದಾರೆ.
ಸದ್ಯ ನಟ ಜಗಪತಿ ಬಾಬು ಪೋಸ್ಟ್‌ಗೆ ಪ್ರಭಾಸ್ ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. "ಇಷ್ಟು ಊಟ ಒಬ್ಬರೇ ತಿಂತೀರಾ?", "ಒಬ್ಬರಿಗೆ ಇಷ್ಟು ಊಟನಾ? ಏನಪ್ಪಾ ಪ್ರಭಾಸ್ ಇದು" ಎಂದು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು 'ಸಲಾರ್-2' ಅಪ್‌ಡೇಟ್ ಕೇಳಿದ್ದಾರೆ. 'ಸಲಾರ್' ಚಿತ್ರದಲ್ಲಿ ರಾಜ ಮನ್ನಾರ್ ಪಾತ್ರದಲ್ಲಿ ಜಗಪತಿ ಬಾಬು ಅಬ್ಬರಿಸಿದ್ದರು.
ಚೆನ್ನೈನಲ್ಲಿ ಹುಟ್ಟಿದರೂ ಪ್ರಭಾಸ್ ಪೋಷಕರು ಭೀಮಾವರಂನಲ್ಲಿ ಮೂಲದವರು. ಹಾಗಾಗಿ ತಮ್ಮ ಊರಿಗೆ ಯಾರೇ ಆಪ್ತರು ಬಂದ ವಿಚಾರ ಗೊತ್ತಾದರೂ ಪ್ರಭಾಸ್ ಇದೇ ರೀತಿ ಊಟದ ವ್ಯವಸ್ಥೆ ಮಾಡುತ್ತಾರೆ. ಅವರು ಇರುವ ಸ್ಥಳಕ್ಕೆ ಊಟದ ಕ್ಯಾರಿಯರ್ ಹೋಗಿ ತಲುಪುತ್ತದೆ. ಹೀಗೆ ಹತ್ತಾರು ಬಗೆಯ ಐಟಂಗಳು ಇರುತ್ತದೆ. ಈ ಹಿಂದೆ ಕೂಡ ಪ್ರಭಾಸ್ ಊಟೋಪಚಾರದ ಬಗ್ಗೆ ಸಾಕಷ್ಟು ನಟ, ನಟಿಯರು ಹೇಳಿಕೊಂಡಿದ್ದಾರೆ.
ದೊಡ್ಡಪ್ಪ ನಟ ಕೃಷ್ಣರಾಜು ಪುಣ್ಯಸ್ಮರಣೆ ಸಮಯದಲ್ಲಿ ಸಾವಿರಾರು ಅಭಿಮಾನಿಗಳಿಗೆ ಪ್ರಭಾಸ್ ಊಟದ ವ್ಯವಸ್ಥೆ ಮಾಡಿದ್ದರು. ವೆಜ್, ನಾನ್ ವೆಜ್‌ನಲ್ಲಿ ವಿವಿಧ ಬಗೆಯ ಭಕ್ಷ್ಯಗಳನ್ನು ತಮ್ಮ ಡಾರ್ಲಿಂಗ್ಸ್‌ಗೆ ಉಣಬಡಿಸಿದ್ದರು. ಪ್ರಭಾಸ್ ಭೋಜನಪ್ರೀತಿ ಇಷ್ಟಕ್ಕೆ ಮುಗಿಯಲ್ಲ. ವೈಯಕ್ತಿಕವಾಗಿ ಪ್ರಭಾಸ್ ತಿಂಡಿಪೋತ.
'ಬಾಹುಬಲಿ' ಚಿತ್ರದ ವೇಳೆ ತಮ್ಮ ಡಯೆಟ್, ವರ್ಕೌಟ್ ಹೇಗಿತ್ತು ಎಂದು ಪ್ರಭಾಸ್ ಹೇಳಿಕೊಂಡಿದ್ದರು. ಡಯೆಟ್ ಮುಗಿದ ಮೇಲೆ ಪ್ರಭಾಸ್ ಹೇಗೆ ಊಟ ಮಾಡುತ್ತಾರೆ ಎಂದು ಹೇಳಿ ಅನುಷ್ಕಾ ಶೆಟ್ಟಿ ಕಣ್ಣರಳಿಸಿದ್ದರು. ತಾವು ಮಾತ್ರವಲ್ಲ, ತಮ್ಮ ಜೊತೆ ಇರುವ ಎಲ್ಲರೂ ಅದೇ ರೀತಿ ತಿನ್ನಬೇಕು ಎಂದು ಎಲ್ಲರಿಗೂ ಪ್ರಭಾಸ್ ಊಟ ತರಿಸುತ್ತಾರೆ. ಸಾಕಷ್ಟು ಸಮಯದಲ್ಲೇ ತಮ್ಮ ಮನೆಯಲ್ಲೇ ಅಡುಗೆ ಮಾಡಿ ಆಪ್ತರಿಗೆ ಊಟೋಪಚಾರ ಮಾಡುತ್ತಾರೆ.
ಸದ್ಯ 'ದಿ ರಾಜಾ ಸಾಬ್' ಹಾಗೂ 'ಫೌಜಿ' ಚಿತ್ರಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಬಳಿಕ 'ಸಲಾರ್'-2 ಸಿನಿಮಾ ಶುರುವಾಗಲಿದೆ. ಹೊಂಬಾಳೆ ಫಿಲ್ಮ್ಸ್ ಜೊತೆ 3 ಚಿತ್ರಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಚಿತ್ರಕ್ಕೆ ರಿಷಬ್ ಶೆಟ್ಟಿ ಕತೆ ಬರೆಯುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











