"ನನ್ನ ಚಿತ್ರಕ್ಕೆ ತೆಲುಗು ಪ್ರೇಕ್ಷಕರಿಂದಲೇ ಬ್ಯಾಡ್ ಟಾಕ್ ಬಂದಾಗ ಡಿಪ್ರೆಷನ್‌ಗೆ ಹೋಗಿದ್ದೆ"; ರಾಜಮೌಳಿ
ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಸೂಪರ್ ಹಿಟ್ ಸಿನಿಮಾಗಳ ಸರದಾರ. 100% ಸಕ್ಸಸ್ ರೇಟ್ ಹೊಂದಿರುವ ಫಿಲ್ಮ್ ಮೇಕರ್ಸ್. ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳನ್ನು ಮಾಡಿ ಗೆದ್ದ ಜಾದೂಗಾರ. ದೊಡ್ಡ ದೊಡ್ಡ ಕನಸುಗಳನ್ನು ಕಂಡು ಅದನ್ನು ಸಾಕಾರಗೊಳಿಸಿ ಹಾಲಿವುಡ್ ಮಂದಿ ಕೂಡ ಮೆಚ್ಚುವಂತಹ ಚಿತ್ರಗಳನ್ನು ಜಕ್ಕಣ್ಣ ಕಟ್ಟಿಕೊಟ್ಟಿದ್ದಾರೆ.
ಎಸ್. ಎಸ್ ರಾಜಮೌಳಿ ಸಿನಿಮಾ ಅಂದರೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುತ್ತದೆ. ಬ್ಲಾಕ್‌ಬಸ್ಟರ್ 'RRR' ಬಳಿಕ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಜಕ್ಕಣ್ಣ ಸಿನಿಮಾ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಸಿನಿಮಾ ಶುರುವಾಗಲಿದೆ. ಈ ಭಾರಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

ಕರ್ನಾಟಕ ಮೂಲದ ರಾಜಮೌಳಿ ಪ್ರತಿಭೆ ಬಗ್ಗೆ ದೂಸ್ರಾ ಮಾತಿಲ್ಲ. ಆದರೆ ಆ ದಿನ ತಮ್ಮ ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಅಕ್ಷರಶಃ ರಿಪ್ರೆಶನ್‌ಗೆ ಹೋಗುವಂತಾಗಿತ್ತು ಎಂದು ಜಕ್ಕಣ್ಣ ಶಾಕಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಕಳೆದ ವರ್ಷ ಸಂದರ್ಶನವೊಂದರಲ್ಲಿ ಮೌಳಿ ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗುತ್ತಿದೆ. 'ಬಾಹುಬಲಿ'-1 ರಿಲೀಸ್ ದಿನ ನನಗೆ ಅಂತಹ ಅನುಭವ ಆಗಿತ್ತು ಎಂದು ಹೇಳಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸಿನಿಮಾ ಬಾಹುಬಲಿ ಸರಣಿ. ಪ್ಯಾನ್ ಇಂಡಿಯಾ ಎನ್ನುವ ಕಾನ್ಸೆಪ್ಟ್ ಹುಟ್ಟು ಹಾಕಿ ಸೌತ್ ಸಿನಿದುನಿಯಾ ದಿಕ್ಕು ಬದಲಿಸಿದವರು ಜಕ್ಕಣ್ಣ. ಆದರೆ ಅದೇ ಚಿತ್ರಕ್ಕೆ ಮೊದಲ ದಿನ ತೆಲುಗು ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಮೌಳಿ ಶಾಕ್ ಆಗಿದ್ದರು. ಕಾರಣ ಚಿತ್ರಕ್ಕೆ ಆಂಧ್ರ, ತೆಲಂಗಾಣದಲ್ಲಿ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಬಳಿಕ ಸಿನಿಮಾ ನಿಧಾನವಾಗಿ ಗೆದ್ದು ಬೀಗಿತ್ತು.
ಪ್ರಭಾಸ್ ನಟನೆಯ 'ಬಾಹುಬಲಿ'-1 ಸಿನಿಮಾ 2015ರ ಜುಲೈ 10ರಂದು ತೆರೆಗೆ ಬಂದಿತ್ತು. ರಾಜಮೌಳಿ ಕಟ್ಟಿಕೊಟ್ಟ ಮಾಹಿಷ್ಮತಿ ಪ್ರಪಂಚ ಕಂಡು ಪ್ರೇಕ್ಷಕರು ಹುಬ್ಬೇರಿಸಿದ್ದರು. ಹಾಲಿವುಡ್ ಚಿತ್ರಗಳಲ್ಲಿ ಇಂತಹದ್ದು ಬಹಳ ನೋಡಿದ್ದರೂ ನಮ್ಮ ಸಿನಿಮಾದಲ್ಲಿ ಅದು ಅದ್ಭುತ ಪ್ರಯತ್ನವೇ ಆಗಿತ್ತು. ಇನ್ನು ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ ಅಭಿನಯವಂತೂ ಚಿತ್ರಕ್ಕೆ ಜೀವಾಳವಾಗಿತ್ತು. ಅವತ್ತಿನ ಕಾಲಕ್ಕೆ ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತೆರೆಗೆ ಬಂದಿತ್ತು.
'ಬಾಹುಬಲಿ'-1 ಸಿನಿಮಾ ಅಂದಾಜು 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ದೇಶ ವಿದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸಿ ಸದ್ದು ಮಾಡಿತ್ತು. ದೇಶಾದ್ಯಂತ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಆಂಧ್ರದಲ್ಲಿ ಮೊದಲ ಒಂದ ವಾರ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಪ್ರಭಾಸ್ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಹೋದವರು ನಿರಾಸೆಗೊಂಡಿದ್ದರು. ಆದರೆ ಬಳಿಕ ಫ್ಯಾಮಿಲಿ ಆಡಿಯೆನ್ಸ್ ಬಂದು ಸಿನಿಮಾ ಹೊತ್ತು ಮೆರೆಸಿದರು.
ನಿಮ್ಮ 22 ವರ್ಷಗಳ ಸಿನಿ ಬದುಕಿನಲ್ಲಿ ಬಹಳ ಕುಗ್ಗಿದ್ದು ಡಿಪ್ರೆಷನ್‌ಗೆ ಹೋದಂತ ಅನುಭವ ಆಗಿದ್ದು ಯಾವಾಗ ಎನ್ನುವ ಪ್ರಶ್ನೆಗೆ 'ಬಾಹುಬಲಿ'-1 ರಿಲೀಸ್ ದಿನ ಎಂದು ರಾಜಮೌಳಿ ಹೇಳಿದ್ದಾರೆ. " ಅದು ಫಸ್ಟ್ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ನಾವು ದೇಶ ವಿದೇಶಗಳಲ್ಲಿ ಸಿನಿಮಾ ರಿಲೀಸ್ ಮಾಡಿದ್ದೆವು. ಎಲ್ಲಾ ಕಡೆ ನಮಗೆ ಪಾಸಿಟಿವ್ ಟಾಕ್ ಬಂದಿತ್ತು. ಆದರೆ ಹೆಚ್ಚು ಹಣ ಬರಬೇಕಿದ್ದ ಆಂಧ್ರ, ತೆಲಂಗಾಣದಲ್ಲೇ ಬ್ಯಾಡ್ ಟಾಕ್ ಬಂದಿತ್ತು" ಎಂದು ಮೌಳಿ ನೆನಪಿಸಿಕೊಂಡಿದ್ದಾರೆ.
"ಮೊದಲ ದಿನ 'ಬಾಹುಬಲಿ-1' ಸಿನಿಮಾ ನೋಡಿದ ತೆಲುಗು ಪ್ರೇಕ್ಷಕರು ಇದು ಡಿಸಾಸ್ಟರ್ ಸಿನಿಮಾ ಎಂದುಬಿಟ್ಟಿದ್ದರು. ನಿರ್ಮಾಪಕರು ಸಾಕಷ್ಟು ಹಣ ಹಾಕಿದ್ದರು. ನನ್ನನ್ನು 3 ವರ್ಷ ನಂಬಿದ್ದ ನಿರ್ಮಾಪಕ ಕುಸಿದು ಹೋಗಿದ್ದರು. ಮತ್ತೆ ಮೇಲೆ ಏಳುವ ಸಾಧ್ಯವಿಲ್ಲ ಎನ್ನುವಂತೆ ಆಗಿತ್ತು. ಅದು ನನ್ನ ಡಿಪ್ರೆಷನ್ ಮೊಮೆಂಟ್" ಎಂದು ಮೌಳಿ ವಿವರಿಸಿದ್ದರು.


Click it and Unblock the Notifications











