ಜ್ಯೂ. ಎನ್‌ಟಿಆರ್ ದಿಢೀರ್ ತೂಕ ಇಳಿಸಿದ್ದೇಗೆ? ಗೊಂದಲ ಸೃಷ್ಟಿಸಿದ ನಟನ ಹೇಳಿಕೆಗಳು
ಸಿನಿಮಾ ನಟ, ನಟಿಯರು ತೆಳ್ಳಗೆ ಬೆಳ್ಳಗೆ ಇರಬೇಕು ಎನ್ನುವ ಅಲಿಖಿತ ನಿಯಮವೊಂದು ಚಿತ್ರರಂಗದಲ್ಲಿದೆ. ತೂಕ ಹೆಚ್ಚಾದ ಕಾರಣಕ್ಕೆ ಕೆಲವರು ಚಿತ್ರರಂಗದಿಂದ ದೂರಾಗಿರುವ ಉದಾಹರಣೆಗಳಿವೆ. ಅದಕ್ಕಾಗಿ ಕಲಾವಿದರು ಮಾಡೋ ಸರ್ಕಸ್ ಅಷ್ಟಿಷ್ಟಲ್ಲ. ಒಂದ್ಕಾಲದಲ್ಲಿ ಬಹಳ ದಪ್ಪ ಇದ್ದ ತೆಲುಗು ನಟ ಜ್ಯೂ. ಎನ್‌ಟಿಆರ್ ಇದ್ದಕ್ಕಿದಂತೆ ತೆಳ್ಳಗಾಗಿ ಶಾಕ್ ಕೊಟ್ಟಿದ್ದರು.
'ಸ್ಟೂಡೆಂಟ್ ನಂಬರ್ 1' ಚಿತ್ರದಲ್ಲಿ ಹೀರೊ ಆಗಿ ತಾರಕ್ ಗೆದ್ದಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ತಾತ ಎನ್‌ಟಿಆರ್‌ಗಿ ತಕ್ಕ ಮೊಮ್ಮಗ ಎನಿಸಿಕೊಂಡರು. ಆದರೆ ನಿಧಾನವಾಗಿ ದಪ್ಪಗಾಗಿದ್ದರು. 'ರಾಖಿ' ಎನ್ನುವ ಚಿತ್ರದಲ್ಲಿ ನಟಿಸುವ ವೇಳೆಗೆ ದೇಹದ ತೂಕ 100 ಕೆಜಿಗೆ ಏರಿತ್ತು. ಇದೇ ಕಾರಣಕ್ಕೆ ಸಾಕಷ್ಟು ಟ್ರೋಲ್ ಎದುರಿಸಬೇಕಾಯಿತು.

'ರಾಖಿ' ಬಳಿಕ ರಾಜಮೌಳಿ ನಿರ್ದೇಶನದ 'ಯಮದೊಂಗ' ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ನಟಿಸಿದ್ದರು. ಹೆಚ್ಚು ಕಮ್ಮಿ 25 ಕೆಜಿ ತೂಕ ಇಳಿಸಿಕೊಂಡು ಶಾಕ್ ಕೊಟ್ಟಿದ್ದಾರೆ. ಯಂಗ್ ಯಮ ಆಗಿ ಅಬ್ಬರಿಸಿದ್ದರು. ತಾರಕ್ ನಟನೆಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಸಿನಿಮಾ ವಿಚಾರ ಪಕ್ಕಕ್ಕಿಟ್ಟರೆ ಜ್ಯೂ. ಎನ್‌ಟಿಆರ್ ಇಷ್ಟು ಬೇಗ ಹೇಗೆ ತೂಕ ಇಳಿಸಿಕೊಂಡರು ಎಂದು ಅಭಿಮಾನಿಗಳು ಶಾಕ್ ಆಗಿದ್ದರು. ಮುಂದೆ 'ಟೆಂಪರ್' ಹಾಗೂ 'ಅರವಿಂದ ಸಮೇತ' ಚಿತ್ರಗಳಲ್ಲಿ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಮಾಡಿ ಗಮನ ಸೆಳೆದರು.
ಒಮ್ಮೆ ತೂಕ ಹೆಚ್ಚಾದರೆ ಇಳಿಸುವುದು ಅಷ್ಟು ಸುಲಭ ಅಲ್ಲ. ಇದಕ್ಕಾಗಿ ಜನ ಮಾಡುವ ಕಸರತ್ತು ಅಷ್ಟಿಷ್ಟಲ್ಲ. ಜಿಮ್, ಡಯೆಟ್ ಅಂತ ಏನೇನೋ ಪ್ರಯತ್ನಿಸುತ್ತಿದ್ದಾರೆ. ಕೆಲವರು ಸರ್ಜರಿಗೆ ಒಳಗಾಗಿ ದೇಹದ ಕೊಬ್ಬು ಕರಗಿಸುವುದು ಇದೆ. ಲಿಪೋಸೆಕ್ಷನ್ ಸರ್ಜರಿಯಿಂದ ಸಿನಿಮಾ ತಾರೆಯರು ಕೂಡ ತೂಕ ಇಳಿಸಿದ್ದಾರೆ. ನಟ ಜ್ಯೂ. ಎನ್‌ಟಿಆರ್ ತಾವು ತಮ್ಮ ದೇಹದ ತೂಕ ಇಳಿಸಿದ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡಿದ್ದರು.

ಬಹಳ ಹಿಂದೆ ತಾರಕ್ ತಾವು ತೂಕ ಇಳಿಸಿದ್ದು ಹೇಗೆ ಎಂದು ಹೇಳಿದ್ದರು. ಆದರೆ ಎರಡು ಬೇರೆ ಬೇರೆ ಸಂದರ್ಶನಗಳಲ್ಲಿ ವಿಭಿನ್ನ ಹೇಳಿಕೆ ನೀಡಿದ್ದರು. ಅದು ಈಗ ವೈರಲ್ ಆಗುತ್ತಿದೆ. ಬೇರೆ ನಟರ ಅಭಿಮಾನಿಗಳು ಈ ಎರಡು ವೀಡಿಯೋಗಳನ್ನು ಸೇರಿಸಿ ಈಗ ಟ್ರೋಲ್ ಮಾಡುತ್ತಿದ್ದಾರೆ. ಯಾವುದು ಸತ್ಯ? ಯಾವುದು ಸುಳ್ಳು? ಎಂದು ವ್ಯಂಗ್ಯವಾಡುತ್ತಿದ್ದಾರೆ.
ದಶಕದ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜ್ಯೂ. ಎನ್‌ಟಿಆರ್ ಲಿಪೋಸೆಕ್ಷನ್ ಸರ್ಜರಿ ಮಾಡಿಸಿಕೊಂಡು ತೆಳ್ಳಗಾದೆ ಎಂದು ಹೇಳಿದ್ದರು. 'ರಾಖಿ' ಸಿನಿಮಾ ಸಮಯದಲ್ಲಿ ನನ್ನ ದೇಹ ನಟಿಸೋಕೆ ಸ್ಪಂದಿಸುತ್ತಿರಲಿಲ್ಲ. ವಿಚಿತ್ರವಾಗಿ ನಾನು ಕಾಣಿಸುತ್ತಿದ್ದೆ. ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆ, ಆಕ್ಟ್ ಮಾಡ್ತಾನೆ, ಆದರೆ ಬಾಡಿ ಯಾಕೆ ಹೀಗೆ ಎನ್ನುತ್ತಿದ್ದರು. ಆಗ ನಾನು ತೂಕ ಇಳಿಸುವ ನಿರ್ಧಾರಕ್ಕೆ ಬಂದೆ ಎಂದು ಹೇಳಿದ್ದರು.
ಬಳಿಕ ಮತ್ತೊಂದು ಸಂದರ್ಶನದಲ್ಲಿ ನಟ ಜ್ಯೂ. ಎನ್‌ಟಿಆರ್ ನಾನು ಡಯೆಟ್, ವರ್ಕೌಟ್ ಮಾಡಿ ತೂಕ ಇಳಿಸಿದ್ದೆ. ಒಂದು ವೇಳೆ ನಾನು ಸರ್ಜರಿ ಮಾಡಿಸಿಕೊಂಡಿದ್ದರೆ ನನ್ನ ಆಪ್ತರ ಮೂಲಕ ವಿಷಯ ಬಹಿರಂಗ ಆಗುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದರು. ನಾನು ಸಿಕ್ಕಾಪಟ್ಟೆ ತಿನ್ನುತ್ತಿದ್ದೆ. ಆದರೆ ಸಣ್ಣ ಆಗಬೇಕು ಎಂದು ನಿರ್ಧರಿಸಿದ್ದಾಗ ದಿಢೀರ್ ಹೆಚ್ಚು ತಿನ್ನುವುದು ನಿಲ್ಲಿಸಿಬಿಟ್ಟೆ ಅಷ್ಟೆ. ತೂಕ ತಿನ್ನುವುದು ಕಮ್ಮಿ ಮಾಡಿದರೆ ಸಾಕು ಎಲ್ಲಾ ಸರಿ ಹೋಗುತ್ತದೆ.
ಎಲ್ಲವೂ ನಾನು ಸೇವಿಸುವ ಊಟದ ಮೇಲೆ ನಿರ್ಧಾರವಾಗಿರುತ್ತದೆ. ಈಗ ಬಹಳ ಶಿಸ್ತಿನಿಂದ ಊಟ ಮಾಡುತ್ತೇನೆ. ಈ ಮೊದಲು ಒಂದ್ಕಡೆ ಒಳ್ಳೆ ಬಿರಿಯಾನಿ ಸಿಗುತ್ತಿತ್ತು. ಫ್ಯಾಮಿಲಿ ಪ್ಯಾಕ್, 4 ಜನ ತಿನ್ನುವುದನ್ನು ನಾನು ಒಬ್ಬನೇ ತಿನ್ನುತ್ತಿದ್ದೆ. ಈಗ ಒಂದು ಪೀಸ್ ತಿನ್ನುವುದು ಕಷ್ಟವಾಗುತ್ತಿದೆ ಎಂದು ತಾರಕ್ ವಿವರಿಸಿದ್ದರು. ಈ ಎರಡೂ ವೀಡಿಯೋಗಳನ್ನು ಕೊಲಾಜ್ ಮಾಡಿ ಈಗ ವೈರಲ್ ಮಾಡ್ತಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಇತ್ತೀಚೆಗೆ ತಾರಕ್ ನಟಿಸಿದ 'ದೇವರ' ಸಿನಿಮಾ ತೆರೆಗೆ ಬಂದಿತ್ತು. ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ದ್ವಿಪಾತ್ರದಲ್ಲಿ ತಾರಕ್ ನಟಿಸಿದ್ದರು. ತಕ್ಕ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದ ಸಿನಿಮಾ ಕಳೆದ ವಾರ ಓಟಿಟಿಗೆ ಬಂದಿದೆ.


Click it and Unblock the Notifications











