Pushpa 2: The Rule: 'ಪುಷ್ಪ'ಣ್ಣ ಬದ್ಕೇ ಇದ್ದಾನಯ್ಯಾ: ಇನ್ನೇನಿದ್ರು 'ಪುಷ್ಪ'ಗಾನ್ ರೂಲು
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ ಬರ್ತ್‌ಡೇ ಸ್ಪೆಷಲ್ ಆಗಿ 'ಪುಷ್ಪ' -2 ಚಿತ್ರದ ಸ್ಪೆಷಲ್ ಝಲಕ್ ರಿವೀಲ್ ಆಗಿದೆ. ಬುಲೆಟ್ ಗಾಯಗಳೊಂದಿಗೆ ತಿರುಪತಿ ಜೈಲಿನಿಂದ ತಪ್ಪಿಸಿಕೊಂಡಿದ್ದ 'ಪುಷ್ಪ' ಎಲ್ಲಿ? ಎನ್ನುವ ವಿಡಿಯೋ ಇತ್ತೀಚೆಗೆ ರಿಲೀಸ್ ಆಗಿತ್ತು. ಆ ಪ್ರಶ್ನೆಗೆ ಉತ್ತರ ಎನ್ನುವಂತೆ ಹುಲಿಗಳ ನಡುವೆ ಕಾಡಿನಲ್ಲಿ ಓಡಾಡಿಕೊಂಡಿರುವ 'ಪುಷ್ಪ'ನ ದರ್ಶನ ಮಾಡಿಸಿದೆ ಚಿತ್ರತಂಡ.
ಎರಡು ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಹಿಂದಿ ಬೆಲ್ಟ್‌ನಲ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅಂದಿನಿಂದಲೇ ಸೀಕ್ವೆಲ್ ಬಗ್ಗೆ ಕುತೂಹಲ ಮೂಡಿತ್ತು. ಇದೀಗ ಸಣ್ಣ ಝಲಕ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ನಿರೀಕ್ಷೆ ಹುಚ್ಚುವಂತೆ ಮಾಡಲಾಗಿದೆ. ಸಿನಿಮಾ ಕಥೆ ಏನಿರಬಹುದು ಎನ್ನುವ ಸಣ್ಣ ಸುಳಿವನ್ನು ಕೂಡ ಚಿತ್ರತಂಡ ಕೊಟ್ಟಿದೆ. ಪ್ರೀಕ್ವೆಲ್‌ನಲ್ಲಿ 'ಪುಷ್ಪ'ರಾಜ್ ರಕ್ತ ಚಂದನ ಸ್ಮಗ್ಲರ್ ಆಗಿದ್ದೇಗೆ ಎನ್ನುವ ಕಥೆ ಹೇಳಲಾಗಿತ್ತು. ಸೀಕ್ವೆಲ್‌ನಲ್ಲಿ ಆ ಕಥೆ ಮುಂದುವರೀತಿದೆ.

ಪೊಲೀಸರ ಗುಂಡೇಟಿನಿಂದ 'ಪುಷ್ಪ'ರಾಜ್ ಸತ್ತೇ ಹೋಗಿದ್ದಾನೆ ಎನ್ನುವ ವದಂತಿ ಹಬ್ಬಿರುತ್ತದೆ. ಪೊಲೀಸರು ಶೇಷಾಚಲ ಅರಣ್ಯದಲ್ಲಿ 'ಪುಷ್ಪ'ನಿಗಾಗಿ ಕೂಂಬಿಂಗ್ ಆರಂಭಿಸಿದ್ದಾರೆ. ಇತ್ತ ಮಾಧ್ಯಮದವರು ಕೂಡ ಆತನ ಹುಡುಕಾಟ ನಡೆಸುತ್ತದೆ. ಮತ್ತೊಂದು ಕಡೆ 'ಪುಷ್ಪ'ನ ಬೆಂಬಲಿಗರು ಚಿತ್ತೂರು ಮತ್ತು ತಿರುಪತಿಯಲ್ಲಿ ಪ್ರತಿಭಟನೆ, ಗಲಾಟೆ ಆರಂಭಿಸುತ್ತಿರುತ್ತಾರೆ. ಎಸ್‌ಪಿ ಬನ್ವರ್ ಸಿಂಗ್ ಶೇಖಾವತ್ ವಿರುದ್ಧ ತಿರುಗಿ ಬೀಳ್ತಾರೆ. ಒಂದು ತಿಂಗಳಾದರೂ 'ಪುಷ್ಪ'ನ ಸುಳಿವು ಸಿಗಲ್ಲ. ಆತ ಜಪಾನ್, ಮಲೇಷಿಯಾಗೆ ಪಾಲಾಯನ ಮಾಡಿದ್ದಾನೆ ಎನ್ನುವ ಚರ್ಚೆ ಶುರುವಾಗಿರುತ್ತದೆ.
ಈ ನಡುವೆ ಕಾಡಿನಲ್ಲಿ ಹುಲಿಗಳ ಚಲನ ವಲನ ಗಮನಿಸಲು ಅಳವಡಿಸಿದ ನೈಟ್ ವಿಷನ್ ಕ್ಯಾಮರಾದಲ್ಲಿ 'ಪುಷ್ಪ'ರಾಜ್ ಕೂಡ ಸೆರೆಯಾಗಿರುತ್ತಾನೆ. 'ಪುಷ್ಪ' ಸತ್ತಿಲ್ಲ ಬದುಕಿದ್ದಾನೆ ಎಂದು ಆತನ ಅನುಯಾಯಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಇನ್ಮೇಲೆ ಪುಷ್ಪಂದೇ ರೂಲು ಅಂತ ಪೊಲೀಸ್ ಸ್ಟೇಷನ್‌ನಲ್ಲಿ ಕೂತು ಡೈಲಾಗ್ ಹೊಡೆಯೋದ್ರ ಮೂಲಕ ಟೀಸರ್ ವಿಡಿಯೋ ಕಂಪ್ಲೀಟ್ ಆಗುತ್ತದೆ. ಈ ಹಿಂದೆ 'ಪುಷ್ಪ- 2' ಚಿತ್ರದ್ದೇ ಎಂದು ಡೈಲಾಗ್‌ವೊಂದು ಲೀಕ್ ಆಗಿತ್ತು. ಆ ಡೈಲಾಗ್ ಈ ಟೀಸರ್‌ನಲ್ಲಿದೆ.

"ಕಾಡಲ್ಲಿ ಪ್ರಾಣಿಗಳು ಎರಡು ಹೆಜ್ಜೆ ಹಿಂದೆ ಇಟ್ಟಿವೆ ಅಂದ್ರೆ ಹುಲಿ ಬಂದಿದೆ ಅಂತ ಅರ್ಥ.. ಅದೇ ಹುಲಿನೇ ಎರಡು ಹೆಜ್ಜೆ ಹಿಂದೆ ಇಟ್ರೆ 'ಪುಷ್ಪ' ಬಂದಿದ್ದಾನೆ ಅಂತ ಅರ್ಥ" ಎನ್ನುವ ಡೈಲಾಗ್ ಅಭಿಮಾನಿಗಳ ಗಮನ ಸೆಳೀತಿದೆ. ಅಂದಹಾಗೆ ಟೀಸರ್‌ನಲ್ಲೇ ಸೀಕ್ವೆಲ್ ಕಥೆ ಏನಿರಬಹುದು ಎನ್ನುವ ಸುಳಿವನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ. ಹಾಗ್ ನೋಡಿದ್ರೆ ಮೊದಲ ಚಿತ್ರದಲ್ಲೇ ಸಿನಿಮಾ ಕಥೆ ಮುಗಿಸಬಹುದಿಲ್ಲ. ಸೀಕ್ವೆಲ್ ಯಾಕೆ ಎನ್ನುವ ಪ್ರಶ್ನೆ ಎದ್ದಿತ್ತು. 2ನೇ ಭಾಗದಲ್ಲಿ ಏನು ಕಥೆ ಇರುತ್ತೆ ಎನ್ನುವ ಪ್ರಶ್ನೆ ಮೂಡುವುದು ಸಹಜ.
'ಪುಷ್ಪ' ಸ್ಮಗ್ಲಿಂಗ್ ಮಾಡಿ ಗಳಿಸಿದ ಹಣವನ್ನು ಕಷ್ಟದಲ್ಲಿರುವವರಿಗೆ ನೀಡಿದ್ದಾನೆ. ಇದರಿಂದ ಆತ ಈಗ ರಾಬಿನ್ ಹುಡ್‌ನಂತಾಗಿದ್ದಾನೆ. ಪೊಲೀಸರ ಅಂಕೆಗೂ ನಿಲುಕದೇ ಅಟ್ಟಹಾಸ ಮುಂದುವರೆಸಿದ್ದಾನೆ. ಈಗ ಆತನನ್ನು ಪೊಲೀಸರು ಮಟ್ಟ ಹಾಕುವುದು ಅಷ್ಟು ಸುಲಭವಲ್ಲ. ಜಪಾನ್, ಮಲೇಷಿಯಾದಲ್ಲೂ ಅವನ ನೆಟ್‌ವರ್ಕ್ ಇದೆ. ಪೊಲೀಸರ ಗುಂಡೇಟಿನಿಂದ ಹಸಿದ ಹುಲಿಯಂತಾಗಿದ್ದಾನೆ. ಎಸ್‌ಪಿ ಬನ್ವರ್ ಸಿಂಗ್ ಶೇಖಾವತ್ ಎದುರು ಮತ್ತಷ್ಟು ಆರ್ಭಟಿಸಲಿದ್ದಾನೆ ಅನ್ನೋದನ್ನು ಈ ಸ್ಪೆಷಲ್ ವಿಡಿಯೋದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಸೀಕ್ವೆಲ್ ಕೂಡ ನಿರ್ಮಾಣವಾಗ್ತಿದೆ. ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಫಸ್ಟ್ ಪಾರ್ಟ್‌ಗೆ ಸಿಕ್ಕ ರೆಸ್ಪಾನ್ಸ್‌ನಿಂದ 2ನೇ ಭಾಗವನ್ನು ಮತ್ತಷ್ಟು ಅದ್ಧೂರಿಯಾಗಿ ಅಷ್ಟು ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ರಶ್ಮಿಕಾ ಮಂದಣ್ಣ 'ಪುಷ್ಪ'ರಾಜ್ ಮಡದಿ ಶ್ರೀವಲ್ಲಿಯಾಗಿ ಈ ಚಿತ್ರದಲ್ಲಿ ಮುಂದುವರೆಯಲಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯಿದೆ.


Click it and Unblock the Notifications











