ನಾಗ ಚೈತನ್ಯ ಮತ್ತು ಶೋಭಿತಾ ನಡುವೆ ಇರುವ ವಯಸ್ಸಿನ ಅಂತರ ಎಷ್ಟು..?
ನಾಗಚೈತನ್ಯ ಬದುಕಿನಲ್ಲಿ ಈಗ ಶೋಭಿತಾ ಪ್ರವೇಶವಾಗಿದೆ. ನಿನ್ನೆ ನಿಶ್ಚಿತಾರ್ಥ ಸಮಾರಂಭ ಕೂಡ ನೆರವೇರಿದೆ. ಸಹಜವಾಗಿ ಸಮಂತಾ ಅವರತ್ತ ಎಲ್ಲರ ಚಿತ್ತ ಇದೆ. ಎರಡನೇ ಮದ್ವೆಗೆ ಸಿದ್ಧವಾದ ಮಾಜಿ ಪತಿಯ ಕುರಿತು ಸಮಂತಾ ಪರೋಕ್ಷವಾಗಿ ಏನಾದರೂ ಹೇಳ್ತಾರಾ ಅನ್ನುವ ಪ್ರಶ್ನೆ ಕೂಡ ಅನೇಕರಲ್ಲಿದೆ. ಇದರ ನಡುವೆ ನಾಗ ಚೈತನ್ಯ ಮತ್ತು ಶೋಭಿತಾ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಹೌದು, ಅಸಲಿಗೆ ನಾಗಚೈತನ್ಯ ಮತ್ತು ಸಮಂತಾ ನಡುವೆ ವಯಸ್ಸಿನ ಅಂತರ ಇರಲಿಲ್ಲ. ಇದ್ದಿದ್ದು ಕೇವಲ ಐದು ತಿಂಗಳಿನ ಅಂತರವಷ್ಟೇ. ಆದರೆ .. ನಾಗ ಚೈತನ್ಯ ಮತ್ತು ಶೋಭಿತಾ ನಡುವೆ ಐದು ವರ್ಷಗಳ ಅಂತರ ಇದೆ. ನಾಗಚೈತನ್ಯ ಅವರಿಗೆ ಈಗ 37 ವರ್ಷವಾದರೆ, ಶೋಭಿತಾ ಅವರಿಗೆ ಈಗ 32 ವರ್ಷ.

ಇನ್ನೂ ವಯಸ್ಸಿನಲ್ಲಿ ನಾಗಚೈತನ್ಯ ಅವರಿಗಿಂತ ಶೋಭಿತಾ ಚಿಕ್ಕವರಾದರೂ, ಚಿತ್ರರಂಗದಲ್ಲಿ ಶೋಭಿತಾ ಮಾಡಿರುವ ಸಾಧನೆ ದೊಡ್ಡದು. ನಾಗಚೈತನ್ಯ ಅವರಂತೆ ಇವರಿಗೆ ಸಿನಿಮಾ ಹಳೆಯದ್ದಲ್ಲ ಬದಲಿಗೆ ಹೊಸದು. ಇವರ ಕುಟುಂಬದಲ್ಲಿ ಸಿನಿಮಾ ಹಿನ್ನೆಲೆ ಹೊಂದಿರುವವರು ಯಾರು ಇಲ್ಲ. ಆದರೂ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದವರು ಶೋಭಿತಾ.
2013ರಲ್ಲಿ 'ಫೆಮಿನಾ ಮಿಸ್ ಇಂಡಿಯಾ ಅರ್ಥ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಶೋಭಿತಾ, 'ಮಿಸ್ ಫೋಟೋಜೆನಿಕ್', 'ಮಿಸ್ ಬ್ಯೂಟಿ ಫಾರ್ ಎ ಕಾಸ್', 'ಮಿಸ್ ಬ್ಯೂಟಿಫುಲ್ ಫೇಸ್', ಮಿಸ್ 'ಟ್ಯಾಲೆಂಟ್' ಬಿರುದುಗಳನ್ನೂ ಪಡೆದಿದ್ದಾರೆ. ವೋಗ್‌ನ 'ಫೋರ್ಸ್ ಆಫ್ ಫ್ಯಾಶನ್' ಸೇರಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. GQ ಇಂಡಿಯಾದಿಂದ 'ಎಮರ್ಜಿಂಗ್ ಸ್ಟಾರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಕೂಡ ಶೋಭಿತಾ ಪಡೆದಿದ್ದಾರೆ.

ಇನ್ನೂ ಶೈಕ್ಷಣಿಕ ವಿಚಾರಕ್ಕೆ ಬಂದರೆ, ಎಚ್.ಆರ್. ಕಾಲೇಜ್ ಆಫ್ ಕಾಮರ್ಸ್ & ಎಕನಾಮಿಕ್ಸ್‌ನಲ್ಲಿ ಶೋಭಿತಾ ದುಲಿಪಲಾ ವಿದ್ಯಾಭ್ಯಾಸ ಮಾಡಿದ್ದಾರೆ. ಮುಂಬೈ ನ ವಿಶ್ವವಿದ್ಯಾಲಯದಲ್ಲಿ ಕಾರ್ಪೊರೇಟ್ ಲಾ ಶಿಕ್ಷಣವನ್ನು ಶೋಭಿತಾ ಪಡೆದಿದ್ದಾರೆ. ಇಷ್ಟೇ ಅಲ್ಲ ಕೂಚಿಪೂಡಿ ಮತ್ತು ಭರತನಾಟ್ಯದಲ್ಲಿ ಕೂಡ ಶೋಭಿತಾ ಪರಿಣಿತಿಯನ್ನೂ ಪಡೆದಿದ್ಧಾರೆ.
ಇಂಥಾ ಶೋಭಿತಾ ಅನುರಾಗ್ ಕಶ್ಯಪ್ ನಿರ್ದೇಶನದ ರಮಣ್ ರಾಘವ್ 2.0 ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಆ ನಂತರ ಗೂಢಾಚಾರಿ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮ ಪ್ರಯಾಣ ಶುರು ಮಾಡಿದ ಶೋಭಿತಾ 'ಮೇಜರ್', 'ಪೊನ್ನಿಯನ್ ಸೆಲ್ವನ್ ಭಾಗ 1 ಮತ್ತು 2' , 'ದಿ ನೈಟ್ ಮ್ಯಾನೇಜರ್', 'ಕುರುಪ್', 'ಮಂಕಿ ಮ್ಯಾನ್' ಹೀಗೆ ಒಂದಾದ ಮೇಲೊಂದು ಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಕೇವಲ ಹಿಂದಿ, ತೆಲುಗು, ತಮಿಳು, ಮಲಯಾಳಂ ಮಾತ್ರವಲ್ಲದೇ ಇಂಗ್ಲಿಷ್ ಚಿತ್ರದಲ್ಲಿ ಕೂಡ ಅಭಿನಯಿಸಿ ಶೋಭಿತಾ ಸೈ ಎನಿಸಿಕೊಂಡಿದ್ದಾರೆ.

ಹೀಗೆ ದೇಶ ವಿದೇಶದೆಲ್ಲೆಡೆ ತಮ್ಮ ಅಭಿನಯದಿಂದ ಛಾಪು ಮೂಡಿಸಿದ ಶೋಭಿತಾ ಸದ್ಯ ನಾಗಚೈತನ್ಯ ಜೊತೆ ಹೊಸ ಬದುಕಿಗೆ ಮುನ್ನುಡಿ ಬರೆದಿದ್ಧಾರೆ. ಸದ್ಯದಲ್ಲಿಯೇ ನಾಗಚೈತನ್ಯ ಜೊತೆ ಹಸೆಮಣೆ ಏರಲಿದ್ದಾರೆ.


Click it and Unblock the Notifications











