ಮಳೆಯಲ್ಲಿ ನೆನೆಯುತ್ತಾ ನಟಿಸುವಾಗ ಆ ಹೀರೊ ಮಾತಿಗೆ ಬೇಸತ್ತು ಚಿತ್ರರಂಗ ತೊರೆದಿದ್ದೆ; ನಟಿ ಪ್ರಗತಿ
ತೆಲುಗು ನಟಿ ಪ್ರಗತಿ ಇತ್ತೀಚೆಗೆ ವೇಟ್ ಲಿಫ್ಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಒಂದ್ಕಾಲದಲ್ಲಿ ನಾಯಕಿಯಾಗಿ ಮಿಂಚಿದ ಪ್ರಗತಿ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಇತ್ತೀಚೆಗೆ ಸಿನಿಮಾ ಅವಕಾಶಗಳು ಕಮ್ಮಿ ಆಗ್ತಿದ್ದು ತಮ್ಮದೇ ಹಾದಿಯಲ್ಲಿ ಹೊಸ ಹೊಸ ಪ್ರಯೋಗಗಳಿಕೆ ಒಡ್ಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು ತಮ್ಮ ನೇರಾನೇರ ಮಾತುಗಳಿಂದ ಸದ್ದು ಮಾಡುತ್ತಾರೆ.
90ರ ದಶಕದ ಕೊನೆ ಕೊನೆಗೆ ತೆಲುಗು, ತಮಿಳು ಸಿನಿಮಾಗಳಲ್ಲಿ ಪ್ರಗತಿ ನಾಯಕಿಯಾಗಿ ನಟಿಸಿದ್ದರು. ಆದರೆ ಅದೊಂದು ಸಿನಿಮಾದಲ್ಲಿ ಮಳೆಯಲ್ಲಿ ನೆನೆಯುತ್ತಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಅದೇ ಸಮಯದಲ್ಲಿ ನಾಯಕ ನಟ ಆಡಿದ ಮಾತುಗಳು ಬೇಸರ ತಂದು ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದರು. ಬಳಿಕ ಮತ್ತೆ ಕೆಲಸ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾದಾಗ ಕಿರುತೆರೆ ಮೂಲಕ ವಾಪಸ್ ಆಗಿದ್ದಾಗಿ ಪ್ರಗತಿ ಹೇಳಿದ್ದಾರೆ. iDream Media ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ವಿಚಾರವನ್ನು ಆಕೆ ಹೇಳಿದ್ದಾರೆ. ಯಾವುದು ಆ ಸಿನಿಮಾ, ಯಾವುದು ಹಾಡು? ಯಾರು ಆ ನಟ ಎಂದು ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ.

ಸಿನಿಮಾ ಅವಕಾಶಗಳು ಕಮ್ಮಿ ಆಗಿರುವುದರಿಂದ ಆರ್ಥಿಕ ಸಮಸ್ಯೆ ಕಂಡಿತ ಇದೆ ಎಂದು ನಟಿ ಪ್ರಗತಿ ಒಪ್ಪಿಕೊಂಡಿದ್ದಾರೆ. ಹಣ ಇದ್ದಾಗ ಹೂಡಿಕೆ ಮಾಡಲಿಲ್ಲ, ಯಾವುದೇ ಸೇವಿಂಗ್ಸ್ ಕೂಡ ಇಲ್ಲ. ನನಗೂ ಜೀವನ ಕಷ್ಟ ಇದೆ. ಹಾಗಂತ ಎಲ್ಲಾ ಸಿನಿಮಾಗಳಲ್ಲಿ ನಟಿಸಲ್ಲ. ಚಿತ್ರೀಕರಣಕ್ಕೆ ಹೋದಾಗ ಮಾತ್ರ ಹಣ ಬರುತ್ತೆ. ಪವರ್ ಲಿಫ್ಟಿಂಗ್ ಮಾಡುವುದರಿಂದ ಯಾವುದೇಧ ಆದಾಯ ಇಲ್ಲ. ನಾವೇ ಹಣ ಕಟ್ಟಿ ಮಾಡಬೇಕು. ಪ್ಯಾಷನ್‌ಗಾಗಿ ಇದನ್ನು ಮಾಡ್ತಿದ್ದೀನಿ ಎಂದಿದ್ದಾರೆ.
ಮಳೆಯ ಹಾಡಿನಿಂದ ನಾನು ನಾಯಕಿಯಾಗಿ ನಟಿಸುವುದು ಬಿಟ್ಟಿದ್ದೆ ಎಂದು ಪ್ರಗತಿ ನೆನಪಿಸಿಕೊಂಡಿದ್ದಾರೆ. "ನಾನು ನಾಯಕಿಯಾಗಿ ನಟಿಸುತ್ತಿದ್ದಾಗ ಈ ಘಟನೆ ನಡೀತು. ನಾನು ನಾಯಕಿಯಾಗಿ ನಟಿಸಿದ ಕೊನೆಯ ಸಿನಿಮಾ ಅದು. ಒಂದು ಸಂದರ್ಭದಲ್ಲಿ ನಾಯಕ ನಟ ಸೆಟ್‌ನಲ್ಲಿ ಮಾತನಾಡಿದ ವಿಧಾನ ನನಗೆ ಇಷ್ಟವಾಗಲಿಲ್ಲ. ಇವನು ಯಾರು, ಹೀಗೆಲ್ಲಾ ಮಾತನಾಡ್ತಾನೆ, ಇಷ್ಟೆಲ್ಲಾ ಮಾತು ಕೇಳ್ಕೊಂಡು ಇರ್ಬೇಕಾ? ಅಂತ ಸಿನಿಮಾ ಬಿಟ್ಟೆ" ಎಂದು ತಿಳಿಸಿದ್ದಾರೆ.

ಆ ಸಿನಿಮಾ ಬಳಿಕ ನಾನು ಹೇಳಿಕೆ ಕೊಟ್ಟಿದ್ದೆ. ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಹೇಳಿ ಚಿತ್ರರಂಗ ತೊರೆದೆ. ನನಗೆ ಆತ್ಮಾಭಿಮಾನ ಹೆಚ್ಚು. ಯಾರಾದರೂ ಏನಾದೂ ಹೇಳಿದ್ರೆ, ಕೇಳಲ್ಲ. ತಪ್ಪು ಮಾಡಿದ್ರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಸುಳ್ಳು ಹೇಳಲ್ಲ, ಏನೇ ಕೆಲಸ ಮಾಡಿದ್ರು, ಸಂಪೂರ್ಣವಾಗಿ ತೊಡಗಿಸಿಕೊಳ್ತೀನಿ. ನಾನು ಅಷ್ಟು ಪ್ರಾಮಾಣಿಕವಾಗಿ ಇರುವಾಗ ಯಾರಾದರೂ ಏನಾದರೂ ಹೇಳಿದ್ರೆ, ನಾನು ಕೇಳಲ್ಲ" ಎಂದು ಪ್ರಗತಿ ವಿವರಿಸಿದ್ದಾರೆ.
ಹೀಗೆ ಸಿನಿಮಾ ಬಿಟ್ಟು ಹೋದೆ. ಬಳಿಕ ಅವಕಾಶಗಳು ಇಲ್ಲದೇ, ಬೇರೆ ದಾರಿಯಿಲ್ಲದೇ ಕಿರುತೆರೆಗೆ ಬಂದೆ. ನಿಧಾನವಾಗಿ ಒಂದೊಂದೇ ಮೆಟ್ಟಿಲು ಏರುತ್ತಾ ಮತ್ತೆ ಚಿತ್ರರಂಗದಲ್ಲಿ ಸಕ್ರಿಯಳಾದೆ. ನಾನು ಹೀಗೆ ಇರಬೇಕು ಎಂದು ಬಯಸಿದ್ದೆ. ಅದೇ ರೀತಿ ಬದುಕುತ್ತಿದ್ದೀನಿ. ನಾನು ಇರುವುದೇ ಹಾಗೆ, ಮಾತನಾಡುವುದೇ ಹಾಗೆ. ನಾನು ಹಿಂದೆ ಒಂದು, ಮುಂದೆ ಒಂದು ಮಾತಾಡಲ್ಲ. ನಾನು ಸಿಂಗಲ್ ವುಮೆನ್, ಸಿಂಗಲ್ ಮದರ್, ಸುಂದರವಾಗಿ ಇರ್ತೀನಿ. ಸಣ್ಣ ಪುಟ್ಟ ತಪ್ಪು ಆಗಿರಬಹುದು. ಅದು ಬಿಟ್ಟು ಯಾವುದೇ ಸಮಸ್ಯೆ ಎದುರಿಸಲಿಲ್ಲ ಎಂದು ವಿವರಿಸಿದ್ದಾರೆ.
ಆಂಧ್ರದ ಓಂಗೊಲದಲ್ಲಿ ಹುಟ್ಟಿ ಬೆಳೆದ ಪ್ರಗತಿ ತಮಿಳು, ತೆಲುಗಿನಲ್ಲಿ ನಾಯಕಿಯಾಗಿ ನಟಿಸಿದ್ದರು. 1994ರಲ್ಲಿ ಚಿತ್ರರಂಗ ಪ್ರವೇಶಿಸಿದ ಅವರು 1997ರಲ್ಲಿ ದಿಢೀರ್ ನಟನೆ ನಿಲ್ಲಿಸಿದ್ದರು. 5 ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ಕನ್ನಡದ 'ಪ್ರೇಮಕೈದಿ', 'ಹೃದಯವಂತ' ಹಾಗೂ 'ವಿನಾಯಕ ಗೆಳೆಯರ ಬಳಗ' ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. 1996ರಲ್ಲಿ ತಮಿಳಿನ 'ವಾಳಗ ಜನನಾಯಗಂ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಮನ್ಸೂರ್ ಅಲಿಖಾನ್ ಜೊತೆ ಮಳೆಯಲ್ಲಿ ನೆನೆಯುತ್ತಾ ಹಾಡೊಂದರಲ್ಲಿ ಮಿಂಚಿದ್ದರು. ಅದೇ ಸಿನಿಮಾ ಬಗ್ಗೆ ಪ್ರಗತಿ ಹೇಳಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications