'ಪುಷ್ಪ'-2 ಐಟಂ ಸಾಂಗ್‌ನಲ್ಲಿ ಕುಣಿಯಲು ಸಿಕ್ಕ ಸಂಭಾವನೆ ಎಷ್ಟು?; ಶ್ರೀಲೀಲಾ ಪ್ರತಿಕ್ರಿಯೆ
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಸಿನಿಮಾ ಬಿಡುಗಡೆಗೆ ಒಂದು ವಾರ ಬಾಕಿ ಇರುವಾಗ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ ಚಿತ್ರತಂಡ. ಇನ್ನು ಇತ್ತೀಚೆಗೆ ರಿಲೀಸ್ ಆಗಿರುವ 'ಕಿಸ್ಸಿಕ್' ಸಾಂಗ್ ಸಖತ್ ಸದ್ದು ಮಾಡ್ತಿದೆ.
'ಪುಷ್ಪ' ಚಿತ್ರದಲ್ಲಿ 'ಊ ಅಂಟಾವಾ' ಸಾಂಗ್ ಸೂಪರ್ ಹಿಟ್ ಆಗಿತ್ತು. ಸಮಂತಾ ಬಿಂದಾಸ್ ಆಗಿ ಸ್ಟೆಪ್ಸ್ ಹಾಕಿ ರಂಗೇರಿಸಿದ್ದರು. ಎಲ್ಲಾ ಭಾಷೆಗಳಲ್ಲಿ ಈ ಸಾಂಗ್ ಸದ್ದು ಮಾಡಿದ್ದು ಗೊತ್ತೇಯಿದೆ. ಇದೀಗ ಸೀಕ್ವೆಲ್‌ನಲ್ಲಿ ಅಂತದ್ದೇ ಡ್ಯಾನ್ಸಿಂಗ್ ನಂಬರ್ ಇದೆ. ಅಲ್ಲು ಅರ್ಜುನ್ ಜೊತೆ ಈ ಬಾರಿ ಬೆಂಗಳೂರು ಬೆಡಗಿ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.

'ಕಿಸ್ಸಿಕ್' ಸಾಂಗ್ ಹುಕ್ ಸ್ಟೆಪ್ ವೈರಲ್ ಆಗುತ್ತಿದೆ. 'ಗುಂಟೂರು ಖಾರಂ' ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದರು. ಆದರೆ ಹಾಡೊಂದಕ್ಕೆ ಮಹೇಶ್ ಬಾಬು ಜೊತೆ ಇದೇ ರೀತಿ ಬಿಂದಾಸ್ ಡ್ಯಾನ್ಸ್ ಮಾಡಿದ್ದರು. ಆದರೆ ಈ ಬಾರಿ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಅಂದರೆ ಚಿತ್ರದಲ್ಲಿ ನಟಿಸದೇ ಇದ್ದರೂ ಹಾಡಿನಲ್ಲಿ ಮಾತ್ರ ಕುಣಿದಿದ್ದಾರೆ.
ಒಂದ್ಕಾಲದಲ್ಲಿ ಸ್ಪೆಷಲ್ ಸಾಂಗ್ಸ್‌ಗೆ ಹೆಜ್ಜೆ ಹಾಕಲು ಬೇರೆ ಕಲಾವಿದರು ಇರುತ್ತಿದ್ದರು. ಜ್ಯೋತಿ ಲಕ್ಷ್ಮಿ, ಸಿಲ್ಕ್ ಸ್ಮಿತಾ, ಡಿಸ್ಕೋ ಶಾಂತಿ ರೀತಿಯ ನಟಿಯರು ಇಂತಹ ಹಾಡುಗಳಿಗೆ ಮಾದಕವಾಗಿ ಕುಣಿಯುತ್ತಿದ್ದರು. ಬಳಿಕ ಬಾಲಿವುಡ್‌ನಲ್ಲಿ ಸ್ಟಾರ್ ನಟಿಯರೇ ಐಟಂ ಸಾಂಗ್‌ಗಳಿಗೆ ಸ್ಟೆಪ್ಸ್ ಹಾಕಲು ಆರಂಭಿಸಿದರು. ಇದು ನಿಧಾನವಾಗಿ ಸೌತ್ ಸಿನಿಮಾಗಳಲ್ಲಿ ಶುರುವಾಯಿತು. ಶ್ರೀಲೀಲಾ ಸದ್ಯಕ್ಕೆ ನಾನು ಸ್ಪೆಷಲ್ ಸಾಂಗ್ಸ್‌ಗೆ ಹೆಜ್ಜೆ ಹಾಕಲ್ಲ ಎಂದು ಕಳೆದ ವರ್ಷ ಹೇಳಿದ್ದರು. ಆದರೆ 'ಪುಷ್ಪ'-2 ಚಿತ್ರಕ್ಕಾಗಿ ಆ ನಿಯಮ ಮೀರಿದ್ದಾರೆ.
ಅಷ್ಟಕ್ಕೂ 'ಪುಷ್ಪ'-2 ಚಿತ್ರದ ಐಟಂ ಸಾಂಗ್ ಒಪ್ಪಿದ್ಯಾಕೆ? ಸಿಕ್ಕ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಶ್ರೀಲೀಲಾ ಪ್ರತಿಕ್ರಿಯಿಸಿದ್ದಾರೆ. ತೆಲುಗಿನ 'ರಾಬಿನ್‌ಹುಡ್' ಸಿನಿಮಾ ಪ್ರಚಾರದ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇನ್ನು 'ಪುಷ್ಪ'-2 ಸಿನಿಮಾವನ್ನು ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. 'ಕಿಸ್ಸಿಕ್' ಸಾಂಗ್‌ಗಾಗಿ ಶ್ರೀಲೀಲಾಗೆ ಕೊಟ್ಟ ಸಂಭಾವನೆ ಬಗ್ಗೆ ನಿರ್ಮಾಪಕರು ಮಾತನಾಡಿದ್ದಾರೆ.

ಶ್ರೀಲೀಲಾ ಮಾತನಾಡಿ "ಇದು ಆವರೇಜ್ ಐಟಂ ಸಾಂಗ್ ಅಲ್ಲ. ಇದಕ್ಕೂ ಮುನ್ನ ಸಾಕಷ್ಟು ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್‌ಗೆ ಕುಣಿಯುವಂತೆ ಕೇಳಿದ್ದರು. ಆದರೆ ಈವರೆಗೆ ನಾನು ಮಾಡಿರಲಿಲ್ಲ. ಆದರೆ 'ಕಿಸ್ಸಿಕ್' ಸಾಂಗ್ ಒಪ್ಪಿಕೊಳ್ಳಲು ಬಲವಾದ ಕಾರಣವಿದೆ. ಡಿಸೆಂಬರ್ 5ರಂದು ಸಿನಿಮಾ ಬಿಡುಗಡೆ ಆದ ಬಳಿಕ ಅದು ಏನು ಎಂದು ಎಲ್ಲರಿಗೂ ಗೊತ್ತಾಗುತ್ತದೆ " ಎಂದಿದ್ದಾರೆ.
ಬಹುಕೋಟಿ ವೆಚ್ಚದ ಸಿನಿಮಾ 'ಪುಷ್ಪ'-2. ಹಾಗಾಗಿ ಚಿತ್ರದ ಐಟಂ ಸಾಂಗ್‌ಗೆ ಕುಣಿಯಲು ಶ್ರೀಲೀಲಾ ಭಾರೀ ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿದೆ. ಬಿಂದಾಸ್ ಆಗಿ ಹೆಜ್ಜೆ ಹಾಕಲು ಅಂದಾಜು 2 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಶ್ರದ್ಧಾ ಕಪೂರ್ ಈ ಸಾಂಗ್‌ಗೆ ಡ್ಯಾನ್ಸ್ ಮಾಡಬೇಕಿತ್ತು. ಆಕೆ 5 ಕೋಟಿ ರೂ. ಸಂಭಾವನೆ ಕೇಳಿದ್ದರು. ಹಾಗಾಗಿ ಶ್ರೀಲೀಲಾಗೆ 2 ಕೋಟಿ ರೂ. ಕೊಟ್ಟು ಒಪ್ಪಿಸಿದ್ದಾರೆ ಎನ್ನುವ ಅಂತೆಕಂತೆ ಸುದ್ದಿ ಕೇಳಿಬಂದಿತ್ತು. ಇದೇ ವಿಚಾರದ ಬಗ್ಗೆ ಕೇಳಿದ್ದಕ್ಕೆ ಶ್ರೀಲೀಲಾ ಉತ್ತರಿಸಿದ್ದಾರೆ.
ನಿಜ ಹೇಳಬೇಕು ಅಂದ್ರೆ ಈವರೆಗೆ ಸಂಭಾವನೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಶ್ರೀಲೀಲಾ ಹಾಗೂ ನಿರ್ಮಾಪಕರ ನವೀನ್ ಹೇಳಿದ್ದಾರೆ. "ಅಷ್ಟು ಇಷ್ಟು ಎಂದು ಅಂದುಕೊಂಡಿಲ್ಲ. ಅವಕಾಶ ಬಂತು ಹಾಡಿಗೆ ಹೆಜ್ಜೆ ಹಾಕಿದ್ದೀನಿ. ಇನ್ನು ಹಣದ ವಿಚಾರ ಚರ್ಚೆ ಆಗಿಲ್ಲ" ಎಂದು ಶ್ರೀಲೀಲಾ ಹೇಳಿದ್ದಾರೆ.
ಶ್ರೀಲೀಲಾ ಸಂಭಾವನೆ ಬಗ್ಗೆ ಮಾತನಾಡಿದ ನಿರ್ಮಾಪಕ ನವೀನ್ "ಸಂಭಾವನೆ ಟಾಪಿಕ್ ಬಗ್ಗೆ ಶ್ರೀಲೀಲಾ ಮಾತನಾಡಿಲ್ಲ. ಆದರೆ ನೀವು ಅಂದುಕೊಂಡಷ್ಟು ಸಂಭಾವನೆ ಅಂತೂ ಕೊಟ್ಟಿಲ್ಲ" ಎಂದು ವಿವರಿಸಿದ್ದಾರೆ. ಅವರು ಅಧಿಕೃತವಾಗಿ ಹೇಳದೇ ಇದ್ದರೂ ಕ್ರೇಜ್‌ಗೆ ತಕ್ಕಂತೆ ಸಂಭಾವನೆ ಸಿಕ್ಕಿದೆ ಎಂದು ಚರ್ಚೆ ಆಗುತ್ತಿದೆ.


Click it and Unblock the Notifications










