3 ದಿನಕ್ಕೆ 25 ಕೋಟಿ ರೂ. ಕೊಟ್ರು ಆ ಕೆಲಸಕ್ಕೆ ಪ್ರಭಾಸ್ ಒಲ್ಲೆ ಎನ್ನುವುದು ಏಕೆ?
ಈ ಕಾಲದಲ್ಲಿ ಹಣ ಕೊಡ್ತೀವಿ ಅಂದ್ರೆ ಯಾರು ಬೇಡ ಅಂತಾರೆ ಹೇಳಿ? ಮೂರ್ನಾಲ್ಕು ದಿನ ಕೆಲಸ ಮಾಡಿದರೆ 25 ಕೋಟಿ ರೂ. ಎಣಿಸ್ತೀವಿ ಅಂದ್ರೆ ನಿರಾಕರಿಸೋದು ಉಂಟೆ. ಆದರೆ ಪ್ರಭಾಸ್ ಒಲ್ಲೆ ಎಂದಿದ್ದಾರಂತೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸ್ತಿರೋ ಪ್ರಭಾಸ್ ಇಂತಾದೊಂದು ಅಫರ್‌ಗೆ ನೋ ಹೇಳಿರುವುದಾಗಿ ಗುಲ್ಲಾಗಿದೆ.
ಬಾಹುಬಲಿ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಕ್ಕಿಂತ ಒಂದು ದೊಡ್ಡ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 'ರಾಜಾಸಾಬ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಬಳಿಕ 'ಫೌಜಿ' ಸಿನಿಮಾ ತೆರೆಗೆ ಬರಲಿದೆ. ಜುಲೈನಲ್ಲಿ 'ಸ್ಪಿರಿಟ್' ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಳಿಕ 'ಸಲಾರ್' 2 ಬರಬೇಕಿದೆ.

ಹೊಂಬಾಳೆ ಫಿಲ್ಮ್ಸ್ ಜೊತೆ 3 ಸಿನಿಮಾಗಳಲ್ಲಿ ನಟಿಸೋಕೆ ಪ್ರಭಾಸ್ ಒಪ್ಪಂದ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಸಿಗುತ್ತಿದೆ. ಅಂದಾಜು 1000 ಕೋಟಿ ರೂ. ಬಜೆಟ್‌ನಲ್ಲಿ ಈ 3 ಸಿನಿಮಾಗಳು ನಿರ್ಮಾಣವಾಗಿ ಬಿಡುಗಡೆ ಆಗಲಿದೆ. ಅದರಲ್ಲಿ 'ಸಲಾರ್'-2 ಕೂಡ ಒಂದಾಗಿರಲಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಪ್ರಶಾಂತ್ ವರ್ಮ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಬರುವ ಸಾಧ್ಯತೆಯಿದೆ.
ವಯಸ್ಸು 40 ದಾಟಿದರೂ ಪ್ರಭಾಸ್ ಮದುವೆ ಬಗ್ಗೆ ಕೂಡ ಆಲೋಚಿಸುತ್ತಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಬಿಟ್ಟರೆ ಸ್ನೇಹಿತರ ಜೊತೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಪ್ರಭಾಸ್ ಯಾವುದೇ ಉತ್ಪನ್ನದ ಜಾಹೀರಾತುಗಳಲ್ಲಿ ಇತ್ತೀಚೆಗೆ ನಟಿಸುತ್ತಿಲ್ಲ. ಅವರ ಕ್ರೇಜ್ ನೋಡಿ ಸಾಕಷ್ಟು ಜಾಹೀರಾತು ಸಂಸ್ಥೆಗಳು ಸಂಪರ್ಕಿಸಿವೆ. ಆದರೆ ಅದಕ್ಕೆ ಪ್ರಭಾಸ್ ನೋ ಹೇಳುತ್ತಾ ಬರುತ್ತಿದ್ದಾರೆ.
ಪ್ರಭಾಸ್ ಒಪ್ಪಿದರೆ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು 25 ಕೋಟಿ ರೂ. ಕೊಡುವವರು ಸಿದ್ಧರಿದ್ದಾರೆ. ಒಂದು ದಿನ ಫೋಟೊಶೂಟ್, ಮತ್ತೊಂದು ದಿನ ಜಾಹೀರಾತು ಚಿತ್ರೀಕರಣ, ಮೂರನೇ ದಿನ ಪ್ರಚಾರ ಮಾಡಿದರೆ ಸಾಕು. ಆದರೆ ಆತ ಮಾತ್ರ ಜಾಹೀರಾತುಗಳಿಂದ ದೂರವೇ ಉಳಿದಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ಆಗುತ್ತಿದೆ.
ಮಹೇಶ್ ಬಾಬು, ರಾಮ್‌ಚರಣ್, ಜ್ಯೂ. ಎನ್‌ಟಿಆರ್, ಅಲ್ಲು ಅರ್ಜುನ್ ರೀತಿಯ ತೆಲುಗಿನ ಸ್ಟಾರ್ ನಟರು ಕೆಲ ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ. ಕೋಟಿ ಕೋಟಿ ಹಣ ಗಳಿಸುತ್ತಿದ್ದಾರೆ. ಆದರೆ ಗುಟ್ಕಾ ಪಾನ್ ಮಸಾಲಾ ರೀತಿಯ ಜಾಹೀರಾತಿನಲ್ಲಿ ನಟಿಸೋಕೆ ಒಲ್ಲೆ ಎನ್ನುತ್ತಿದ್ದಾರೆ. ಆದರೆ ಪ್ರಭಾಸ್ ಮಾತ್ರ ಜಾಹೀರಾತು ಸಹವಾಸವೇ ಬೇಡ ಎನ್ನುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಪ್ರಭಾಸ್ ನಟಿಸಿದ 'ಕಲ್ಕಿ 2898AD' ಸಿನಿಮಾ ಕೊನೆಯದಾಗಿ ತೆರೆಗೆ ಬಂದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅದಕ್ಕೂ ಮುನ್ನ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸಿದ್ದರು. 'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ಸಣ್ಣ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಎಲ್ಲವೂ ಪ್ಯಾನ್ ಇಂಡಿಯಾ ಸಿನಿಮಾಗಳೇ. ಸಿನಿಮಾ ಬಜೆಟ್ 200 300 ಕೋಟಿ ಎನ್ನುವಂತಾಗಿದೆ.
ಚಿತ್ರವೊಂದಕ್ಕೆ ಪ್ರಭಾಸ್ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಹಾಗಾಗಿಯೇ ಜಾಹೀರಾತುಗಳ ಸಹವಾಸವೇ ಬೇಡ ಎನ್ನುತ್ತಾರೆ ಎನ್ನುವ ವಾದವೂ ಇದೆ. ಇನ್ನು ಪದೇ ಪದೆ ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ಮದುವೆ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಆದರೆ ಈವರೆಗೆ ಆ ಸುದ್ದಿ ಖಚಿತವಾಗಲಿಲ್ಲ.


Click it and Unblock the Notifications











