'ಪೆದ್ದಿ' ಚಿತ್ರದಲ್ಲಿ ಗೌರ್ನಾಯ್ಡು ಶಿವಣ್ಣನ ದೃಶ್ಯಗಳಿಗೆ ಕತ್ತರಿ ಹಾಕಿ ಮತ್ತೆ ಸೆನ್ಸಾರ್; ಫ್ಯಾನ್ಸ್ ಬೇಸರ
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಭಾರೀ ಸುದ್ದಿ ಆಗ್ತಿದೆ. ನಾಯಕಿಯ ಪಾತ್ರ ಪೋಷಣೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ. ಈ ಬಗ್ಗೆ ನಿರ್ದೇಶಕರು ಕ್ಷಮೆ ಕೇಳಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿದ್ದಾರೆ. ಅದೇ ರೀತಿ ಶಿವಣ್ಣನ ಫ್ಲಾಶ್‌ಬ್ಯಾಕ್ ದೃಶ್ಯವನ್ನು ಟ್ರಿಮ್ ಮಾಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.
'ಪೆದ್ದಿ' ಸಿನಿಮಾ ಕಾಲಾವಧಿ ಬಹಳ ಹೆಚ್ಚಾಗಿದೆ. 3 ಗಂಟೆಗೂ ಹೆಚ್ಚು ಕಾಲ ಸಿನಿಮಾ ನೋಡುವುದು ಕಷ್ಟ ಕಷ್ಟ ಎಂದು ಕೆಲವರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಒಂದಷ್ಟು ದೃಶ್ಯಗಳನ್ನು ಕೈಬಿಟ್ಟು ಹೊಸದಾಗಿ ಕೆಲ ದೃಶ್ಯಗಳನ್ನು ಸೇರಿಸಿ ಮತ್ತೆ ಸೆನ್ಸಾರ್ ಮಾಡಿಸಿ ಸಿನಿಮಾ ಪ್ರದರ್ಶನ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಜಗಪತಿ ಬಾಬು ಇತ್ತೀಚೆಗೆ ತಮ್ಮ ದೃಶ್ಯಗಳಿಗೆ ಕತ್ತರಿ ಹಾಕಿದ್ದ ಬಗ್ಗೆ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದರು. ಹಾಗಾಗಿ ಶಿವಣ್ಣನ ದೃಶ್ಯ ಕೈಬಿಟ್ಟು ಜಗಪತಿ ಬಾಬು ದೃಶ್ಯ ಸೇರಿಸಲು ಚಿತ್ರತಂಡ ಮುಂದಾಗಿದೆ ಎನ್ನುವ ಮಾತುಗಳು ಫಿಲ್ಮ್ ನಗರ್‌ನಲ್ಲಿ ಕೇಳಿಬರ್ತಿದೆ.

ಚಿತ್ರದಲ್ಲಿ ರಾಮ್‌ಚರಣ್ ಹಳ್ಳಿ ಕ್ರಿಕೆಟರ್ ಹಾಗೂ ಕುಸ್ತಿ ಪೈಲ್ವಾನ್ ಆಗಿ ನಟಿಸಿದ್ದಾರೆ. ಹಣಕ್ಕಾಗಿ ಕೂಲಿ ಕ್ರಿಕೆಟ್ ಆಟಗಾರನಾಗಿದ್ದ 'ಪೆದ್ದಿ'ಗೆ ಯಾವುದೇ ಐಡೆಂಟಿಟಿ ಇರಲ್ಲ. ಹಾಗಾಗಿ ತನ್ನ ಐಡೆಂಟಿಟಿ ಹಾಗೂ ಊರಿಗೆ, ಅಲ್ಲಿನ ಜನರಿಗೆ ಐಡೆಂಟಿಟಿ ತಂದು ಕೊಡಲು 'ಪೆದ್ದಿ' ಕುಸ್ತಿ ಪೈಲ್ವಾನ್ ಆಗಲು ಮನಸ್ಸು ಮಾಡುತ್ತಾನೆ. ಆಗ ಗೌರ್ನಾಯ್ಡು ಗರಡಿಯಲ್ಲಿ ತಾಲೀಮು ನಡೆಸುತ್ತಾನೆ. ಮೊದ ಮೊದಲು ಆತನನ್ನು ಪರೀಕ್ಷಿಸುವ ಉಸ್ತಾದ್ ಬಳಿಕ ತನ್ನ ಶಿಷ್ಯನಿಗಾಗಿ ತನ್ನ ಗೌರವವನ್ನೇ ಪಣವಾಗಿ ಇಡುತ್ತಾನೆ.
ಗೌರ್ನಾಯ್ಡು ಫ್ಲಾಶ್‌ಬ್ಯಾಕ್ ಸನ್ನಿವೇಶ ಚಿತ್ರದಲ್ಲಿದೆ. ಯವ್ವನದಲ್ಲಿ ಸಿಸೋಡಿಯಾನನ್ನು ಸೋಲಿಸಿ ಗೌರ್ನಾಯ್ಡು ಕಾಲ್ಗಡಗವನ್ನು ಬಹುಮಾನವಾಗಿ ಗೆಲ್ಲುವ ಸಣ್ಣ ಝಲಕ್ ಇದೆ. ಚಿತ್ರದಲ್ಲಿ ಬಹಳ ಮುಖ್ಯವಾದ ಸನ್ನಿವೇಶ ಇದು. ಸದ್ಯ ಅದೇ ದೃಶ್ಯಕ್ಕೆ ಕತ್ತರಿ ಹಾಕುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅದು ಬಹಳ ಮುಖ್ಯವಾದ ಸನ್ನಿವೇಶ, ಅದನ್ನು ತೆಗೆದರೆ ಮುಂದಿನ ದೃಶ್ಯಕ್ಕೆ ಲಿಂಕ್ ಕೊಡುವುದು ಹೇಗೆ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

'ಪೆದ್ದಿ' ಚಿತ್ರದಲ್ಲಿ ಅಪ್ಪಲಸೂರಿ ಎನ್ನುವ ಮತ್ತೊಂದು ಪ್ರಮುಖ ಪಾತ್ರದಲ್ಲಿ ಜಗಪತಿ ಬಾಬು ನಟಿಸಿದ್ದಾರೆ. ಊರಿಗೆ ರೈಲು ನಿಲ್ದಾಣ ಬೇಕು ಎಂದು ದಶಕಗಳ ಕಾಲ ಹೋರಾಡಿ ಕೊನೆಗೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪಾತ್ರ ಇದು. ಆದರೆ ಪೆದ್ದಿ ಹಾಗೂ ಅಪ್ಪಲಸೂರಿ ಪಾತ್ರಗಳ ನಡುವೆ ಅನ್ಯೋನ್ಯ ಅನುಬಂಧ ಇರುವಂತಹ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಆದರೆ ಕಾಲಾವಧಿ ಹೆಚ್ಚಾಯ್ತು ಎನ್ನುವ ಕಾರಣಕ್ಕೆ ಅದಕ್ಕೆ ಕತ್ತರಿ ಹಾಕಿದ್ದರು. ಜಗಪತಿ ಬಾಬು ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
'ಪೆದ್ದಿ' ಜೊತೆ ಒಂದೇ ಬೀಡಿ ಸೇದುವುದು, ಅವನಿಗೆ ಮದುವೆ ಮಾಡಬೇಕು ಎಂದು ಹುಡುಗಿಯನ್ನು ಹುಡುಕಲು ಹೋಗುವುದೇ, ನಾನೇ ಹುಡುಗಿ ಬೇಡ ಎಂದು ಮಾತುಕತೆ ಕ್ಯಾನ್ಸಲ್ ಮಾಡುವುದು, ಬಳಿಕ ನನ್ನನ್ನು ಬಿಟ್ಟು ಮತ್ತೊಮ್ಮೆ ಪೆದ್ದಿ ಹುಡುಗಿ ನೋಡಲು ಹೋಗುವಾಗ ಸಿಕ್ಕಿಬೀಳುವಂತಹ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಅದನ್ನು ಯಾಕೆ ತೆಗೆದರು ಗೊತ್ತಿಲ್ಲ. ಕೊನೆ ಪಕ್ಷ ಆ ವೀಡಿಯೊ ಕೊಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕ್ತೀನಿ ಎಂದು ಜಗಪತಿ ಬಾಬು ಚಿತ್ರತಂಡವನ್ನು ಕೇಳಿರುವುದಾಗಿ ಹೇಳಿದ್ದಾರೆ.
ಹೇಗಿದ್ದರೂ ಜಾನ್ವಿ ಕಪೂರ್ ನಟನೆಯ ಕೆಲ ದೃಶ್ಯಗಳನ್ನು ತೆಗೆಯಲು ಚಿತ್ರತಂಡ ಮುಂದಾಗಿದೆ. ಅದೇ ಸಮಯದಲ್ಲಿ ಮತ್ತಷ್ಟು ದೃಶ್ಯಗಳನ್ನು ತೆಗೆದು ಜಗಪತಿ ಬಾಬು ಹೇಳಿದ ದೃಶ್ಯಗಳನ್ನು ಸೇರಿಸೋಣ ಎಂದು ಚಿತ್ರತಂಡ ಮನಸ್ಸು ಮಾಡಿದೆ. ಮತ್ತೆ ಸೆನ್ಸಾರ್ ಮಾಡಿಸಿ ಇನ್ನೆರಡು ದಿನಗಳಲ್ಲಿ ಮತ್ತೆ ಚಿತ್ರವನ್ನು ಯುಎಫ್‌ಒ ಹಾಗೂ ಕ್ಯೂಬ್‌ಗೆ ಅಪ್‌ಲೋಡ್ ಮಾಡಲು ಸಿದ್ಧತೆ ನಡೀತಿದೆ. ಇದರಿಂದ ಮತ್ತೆ ಬಂದು ಪ್ರೇಕ್ಷಕರು ಸಿನಿಮಾ ನೋಡುವ ಸಾಧ್ಯತೆಯಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications