ಪ್ರಭಾಸ್ ಜೊತೆ ಆ ಚಿತ್ರದಲ್ಲಿ 2ನೇ ನಾಯಕಿಯಾಗಿ ಸ್ವೀಟಿ; ಅಭಿಮಾನಿಗಳಿಗೆ ಗುಡ್‌ನ್ಯೂಸ್
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಸೂಪರ್ ಹಿಟ್ ಜೋಡಿ. ಅವರಿಬ್ಬರನ್ನು ಮತ್ತೆ ಒಟ್ಟಿಗೆ ನೋಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 'ಬಾಹುಬಲಿ'-2 ಬಳಿಕ ಇಬ್ಬರೂ ಒಟ್ಟಿಗೆ ನಟಿಸಲಿಲ್ಲ. ಸ್ವೀಟಿ ಸಿನಿಮಾಗಳಲ್ಲಿ ನಟಿಸೋದನ್ನೇ ಕಮ್ಮಿ ಮಾಡಿದ್ದಾರೆ.
ಇದೀಗ ಡಾರ್ಲಿಂಗ್ ಹಾಗೂ ಸ್ವೀಟಿ ಮತ್ತೆ ಒಟ್ಟಿಗೆ ನಟಿಸೋದು ಖಚಿತ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಆಗುತ್ತಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಬಹಳ ದಿನಗಳಿಂದ ಈ ಕಾಂಬಿನೇಷನ್‌ಗಾಗಿ ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಜೊತೆ 3 ಸಿನಿಮಾ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಪ್ರಭಾಸ್ ನಟಿಸುವ ಒಂದು ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಾರೆ ಎಂದು ಇತ್ತೀಚೆಗೆ ಗುಲ್ಲಾಗಿತ್ತು. ಆದರೆ ಹೊಸ ಸಮಾಚಾರ ಏನಪ್ಪಾ ಅಂದ್ರೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ಸ್ವೀಟಿ ನಟಿಸೋ ಸಾಧ್ಯತೆಯಿದೆ ಎನ್ನಲಾಗ್ತಿದೆ. ದೀಪಿಕಾ ಪಡುಕೋಣೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಬಹುದು. 2ನೇ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಆಯ್ಕೆ ಆಗಬಹುದು ಎಂದು ತೆಲುಗು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
'ಅರ್ಜುನ್ ರೆಡ್ಡಿ', 'ಅನಿಮಲ್' ಸಿನಿಮಾಗಳ ಖ್ಯಾತಿಯ ಸಂದೀಪ್ ರೆಡ್ಡಿ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಶೀಘ್ರದಲ್ಲೇ ಸಿನಿಮಾ ಶುರುವಾಗಲಿದೆ. ಚಿತ್ರದಲ್ಲಿ 2ನೇ ನಾಯಕಿಯ ಪಾತ್ರಕ್ಕೆ ಅವಕಾಶವಿದೆಯಂತೆ. ಅದಕ್ಕೆ ದಕ್ಷಿಣದ ನಟಿ ಬೇಕು ಎಂದು ಸಂದೀಪ್ ಭಾವಿಸುತ್ತಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ಆ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರುತ್ತದೆ. ಹಾಗಾಗಿ ಆ ಪಾತ್ರ ಅನುಷ್ಕಾ ಶೆಟ್ಟಿ ಮಾಡಬೇಕು ಎಂದು ಸಂದೀಪ್ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
'ಬಿಲ್ಲಾ' ಚಿತ್ರದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಆ ಚಿತ್ರದಲ್ಲಿ ಸ್ವೀಟಿ ಕೊಂಚ ಬೋಲ್ಡ್ ಆಗಿಯೇ ದರ್ಶನ ಕೊಟ್ಟಿದ್ದರು. ಬಳಿಕ 'ಮಿರ್ಚಿ' ಚಿತ್ರದಲ್ಲಿ ಇಬ್ಬರೂ ನಟಿಸಿ ಗಮನ ಸೆಳೆದರು. ಪ್ರಭಾಸ್‌ಗೆ ಹೇಳಿಮಾಡಿಸಿದ ಜೋಡಿ ಎಂದು ಅಭಿಮಾನಿಗಳು ಫಿಕ್ಸ್ ಆಗಿಬಿಟ್ಟರು. ಎರಡೂ ಸಿನಿಮಾಗಳು ಹಿಟ್ ಲಿಸ್ಟ್ ಸೇರಿತು.
ಬಳಿಕ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ದೇವಸೇನಾ ಆಗಿ ಸ್ವೀಟಿಗೆ ಪವರ್‌ಫುಲ್ ರೋಲ್ ಸಿಕ್ಕಿತ್ತು. ಅಷ್ಟರಲ್ಲಾಗಲೇ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತ ಇಬ್ಬರೂ ಹೇಳಿದ್ದರು. ಹೀಗೆ ನಟ, ನಟಿ ಒಟ್ಟಿಗೆ ನಟಿಸಿದರೆ ಇಬ್ಬರ ಕೆಮೆಸ್ಟ್ರಿ ಚೆನ್ನಾಗಿದ್ದರೆ ಸಹಜವಾಗಿಯೇ ಅಭಿಮಾನಿಗಳು ಈ ರೀತಿ ಭಾವಿಸುತ್ತಾರೆ.
ಪ್ರಭಾಸ್, ಅನುಷ್ಕಾ ಶೆಟ್ಟಿ ಮದುವೆ ಆಗುತ್ತಾರೆ ಎನ್ನುವ ಊಹಾಪೋಹ ಕೂಡ ಶುರುವಾಗಿತ್ತು. ಆದರೆ ಆ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಲಿಲ್ಲ. ವಯಸ್ಸು 40 ದಾಟಿದ್ರು ಇಬ್ಬರೂ ಮದುವೆ ಆಗುವ ಬಗ್ಗೆ ಯೋಚಿಸಿದಂತೆ ಕಾಣುತ್ತಿಲ್ಲ. ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬಾಹುಬಲಿ' ಸರಣಿ ಸಿನಿಮಾಗಳ ಬಳಿಕ ಮದುವೆ ಆಗುವುದಾಗಿ ಪ್ರಭಾಸ್ ಹೇಳಿದ್ದರು. ಆದರೆ ಆ ಸಿನಿಮಾ ಬಂದೋಗಿ 8 ವರ್ಷ ಕಳೆದರೂ ಮದುವೆ ಮಾತೇಯಿಲ್ಲ.
ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಭಾಸ್ ನೋಡೋಣ, ಸಲ್ಮಾನ್ ಖಾನ್ ಮದುವೆ ಆದಮೇಲೆ ನನ್ನ ಮದುವೆ ಎಂದು ಹಾರಿಕೆಯ ಉತ್ತರ ನೀಡಿದ್ದರು. ಸದ್ಯ ಪ್ರಭಾಸ್ 'ರಾಜಾಸಾಬ್', 'ಫೌಜಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂದೆ ಸಲಾರ್-2 ಹಾಗೂ ಕಲ್ಕಿ 2898AD ಸೀಕ್ವೆಲ್‌ನಲ್ಲಿ ಕೂಡ ಯಂಗ್ ರೆಬಲ್ ಸ್ಟಾರ್ ನಟಿಸಬೇಕಿದೆ.


Click it and Unblock the Notifications











