ತಮ್ಮ ಪತ್ನಿಗೆ ವಿಚ್ಛೇದನ ನೀಡಿ ಸಮಂತಾ ಜೊತೆ ಸಪ್ತಪದಿ ತುಳಿಯುತ್ತಾರಾ ಈ ನಿರ್ದೇಶಕ ?
ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೆ ಮದುವೆ ಎನ್ನುವುದು ಒಂದೆರಡು ದಿನದ ಆಟ ಅಲ್ಲ, ಜೀವನ ಪೂರ್ತಿ ಸಂಗಾತಿಯ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ.ಆದರೆ ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿ ಕೈಮೀರಿ ಹೋಗಿರುತ್ತವೆ.
ಆಗ ವಿಚ್ಛೇದನ ಪಡೆಯದೇ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ಬರುತ್ತೆ. ನಿರೀಕ್ಷೆಯಂತೆ ಸಂಬಂಧ ಕೂಡ ಮುರಿದು ಬೀಳುತ್ತೆ. ಹೀಗೆ ದಾಂಪತ್ಯ ಅಂತ್ಯವಾದಾಗ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ.

ಇನ್ನು ಕೆಲವರು ಅಳೆದು ತೂಗಿ ಹೊಸ ಭರವಸೆಯ ಜೊತೆ ಹೊಸ ಬದುಕಿಗೆ ಇನ್ನೊಮ್ಮೆ ಮುನ್ನುಡಿ ಬರೆಯಲು ಅಣಿಯಾಗುತ್ತಾರೆ. ಸಮಂತಾ ಇದೇ ಸಾಲಿಗೆ ಸೇರಲು ಹವಣಿಸುತ್ತಿದ್ದಾರಾ ಗೊತ್ತಿಲ್ಲ ಆದರೆ ಸದ್ಯ ಸಮಂತಾ ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಸಮಂತಾ ನಡಾವಳಿ ಕೂಡ ಈ ಮಾತುಗಳನ್ನು ಪುಷ್ಠಿಕರಿಸುವಂತೆ ಇದೆ.
ಹೌದು, ಅಸಲಿಗೆ ನಾಗಚೈತನ್ಯ ಅವರನ್ನು ಆರು ವರ್ಷ ಹುಚ್ಚರಂತೆ ಪ್ರೀತಿ ಮಾಡಿ,ಆ ನಂತರ ಅದ್ಧೂರಿ ಮದುವೆಯಾಗಿ ನಾಲ್ಕು ವರ್ಷಗಳ ದಾಂಪತ್ಯ ಗೀತೆಯನ್ನು ಹಾಡಿದ ಸಮಂತಾ, ಸದ್ಯ ತಮ್ಮ ಹಳೆಯ ಪ್ರೇಮವನ್ನು ಮರೆತು ಮುನ್ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ಅನುಮಾನ ಕಳೆದ ಅನೇಕ ದಿನಗಳಿಂದ ಅನೇಕರನ್ನು ಕಾಡುತ್ತಿದೆ. ಇದಕ್ಕೆ ತಕ್ಕಂತೆ ದಿ ಫ್ಯಾಮಿಲಿ ಮ್ಯಾನ್ ನಿರ್ಮಾಪಕ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಹೆಸರು ತಳುಕು ಹಾಕಿಕೊಂಡಿದೆ. ಅನೇಕ ಸಭೆ ಸಮಾರಂಭಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಇದೆ.
ಹೀಗಿರುವಾಗ ಇದೀಗ ಸಮಂತಾ ಇದೇ ರಾಜ್ ನಿಡಿಮೋರು ಜೊತೆ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸದ್ಯ ರಾಜ್ ನಿಡಮೋರು ಮತ್ತೆ ಸಮಂತಾ ತಿರುಪತಿಯಲ್ಲಿ ಓಡಾಡುತ್ತಿರುವ ಫೋಟೊಗಳು ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇಬ್ಬರ ಸಂಬಂಧದ ಕುರಿತು ಅನೇಕರಲ್ಲಿರುವ ಅನುಮಾನ ಕೂಡ ಹೆಚ್ಚಾಗಿದೆ.
ಇನ್ನು ಸಮಂತಾ ಈಗ ಕೇವಲ ನಾಯಕಿ ಮಾತ್ರ ಅಲ್ಲ. ಬದಲಿಗೆ ನಿರ್ಮಾಪಕಿ ಕೂಡ ಹೌದು. ಶುಭಂ ಎಂಬ ಚಿತ್ರವನ್ನು ಸಮಂತಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಮೇ 9ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಸಮಂತಾ ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಆದರೆ ಈ ಸಮಯದಲ್ಲಿ ಇವರ ಜೊತೆ ರಾಜ್ ನಿಡಿಮೋರು ಕಾಣಿಸಿಕೊಂಡಿದ್ದಾರೆ. ಇದು ಈಗ ಚರ್ಚೆಗೆ ಕಾರಣವಾಗಿದೆ. ಸಮಂತಾ ಮತ್ತು ರಾಜ್ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿದೆ.
ಅಂದ್ಹಾಗೇ ನಿಮಗೆ ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ನಿಮಗೆ ನೆನಪಿರಬೇಕು. ಸಮಂತಾ ಅವರನ್ನು ಟಾಲಿವುಡ್‌ನಿಂದ ಬಾಲಿವುಡ್ಡಿಗೆ ಕರೆದೊಯ್ದ ಸಿನಿಮಾ ಇದು. 'ರಾಜಿ' ಪಾತ್ರದಲ್ಲಿ ಸಮಂತಾ ಅವರನ್ನು ಈ ಸರಣಿಯಲ್ಲಿ ನೋಡಿ ಅನೇಕರು ಬೆಕ್ಕಸ ಬೆರಗಾಗಿದ್ದರು.
ಯಾಕೆಂದರೆ ಹಿಂದೆಂದೂ ಕಾಣಿಸದ ರೂಪದಲ್ಲಿ ಸ್ಯಾಮ್ ಇಲ್ಲಿ ಕಾಣಿಸಿಕೊಂಡಿದ್ದರು.ತಮ್ಮ ಸಾಹಸಗಾಥೆಯಿಂದ ಜನ ಮನ ಗೆದ್ದಿದ್ದರು. ಸದ್ಯಕ್ಕೆ ಸಮಂತಾ ಅವರ ಜೊತೆ ಥಳುಕು ಹಾಕಿಕೊಂಡಿರುವ ರಾಜ್ ನಿಡಿಮೋರು ಇದೇ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಸೃಷ್ಟಿಕರ್ತ ಕೂಡ ಹೌದು. ನಿರ್ಮಾಪಕ ಕೂಡ ಹೌದು.
ಕೃಷ್ಣ ಡಿ.ಕೆ ಜೊತೆ ಸೇರಿ ರಾಜ್ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಮಾಡುವಾಗ, ಸಮಂತಾ ಇವರ ಪಾಲಿಗೆ ಕೇವಲ ಸ್ನೇಹಿತೆಯಾಗಿದ್ದರು. ಇಬ್ಬರು ನಡುವೆ ನಿರ್ದೇಶಕ ಮತ್ತು ನಟಿಯ ನಡುವೆ ಇರಬೇಕಾದ ಸಂಬಂಧವೇ ಇತ್ತು.
ಆದರೆ, ಅದ್ಯಾವಾಗ ರಾಜ್ ಮತ್ತೊಮ್ಮೆ ಸಮಂತಾ ಅವರನ್ನೇ ನಾಯಕಿಯ ಸ್ಥಾನದಲ್ಲಿ ಕೂರಿಸಿ 'ಸಿಟಾಡೆಲ್ ಹನಿ ಬನ್ನಿ' ಶುರುಮಾಡಿದರೋ ಅಲ್ಲಿಂದಾಚೆ ಎಲ್ಲವೂ ಬದಲಾಯಿತು. ಇಬ್ಬರ ನಡುವೆ ಇದ್ದ ಸ್ನೇಹದ ಸೇತುವೆ ಮರೆಯಾಗಿ ಪ್ರೇಮದ ಗೋಡೆ ಎದ್ದು ನಿಂತುಕೊಂಡಿತು ಎನ್ನುವುದು ಇವರ ಸಂಬಂಧದ ಕುರಿತು ಹಿಂದೆ ಕೇಳಿ ಬಂದಿದ್ದ ಸುದ್ದಿ.
ಇನ್ನೂ ವಿಶೇಷ ಅಂದರೆ ರಾಜ್ ಈಗಾಗಲೇ ವಿವಾಹಿತ. ಮೊನ್ನೆಯವರೆಗೆ ಬಾಲಿವುಡ್‌ನವರ ಕಣ್ಣಿಗೆ ರಾಜ್ ಆದರ್ಶ ವ್ಯಕ್ತಿಯಂತೆ ಕಾಣುತ್ತಿದ್ದರು. ರಾಜ್ ಮತ್ತು ಅವರ ಪತ್ನಿಯನ್ನು ಅನೇಕರು ಹಾಡಿ ಹೊಗಳುತ್ತಿದ್ದರು. ಆದರೆ ಈಗ ರಾಜ್ ಮತ್ತು ಸಮಂತಾ ನಡುವೆ ಕುಚ್ ಕುಚ್ ನಡೆಯುತ್ತಿದೆ ಅನ್ನುವ ವಿಚಾರ ಎಲ್ಲರ ಬಾಯಿಗೆ ಆಹಾರವಾಗಿದೆ.
ಇದಕ್ಕೆ ಪೂರಕವಾಗಿ ಈಗ ತಿರುಪತಿಯಲ್ಲಿ ಇಬ್ಬರು ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಮಂತಾ ಮತ್ತು ರಾಜ್ ನಿಡಿಮೋರು ಅವರ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚರ್ಚೆಗೀಡಾಗುತ್ತಿವೆ.
ಇನ್ನು ಸಮಂತಾ ರಕ್ತ ಬ್ರಹ್ಮಾಂಡ ಎಂಬ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಈ ರಾಜ್ ನಿಡಿಮೋರು ಅವರದ್ದೇ ಸಾರಥ್ಯ ಇರುವುದು ಮತ್ತೊಂದು ವಿಶೇಷ. ಇನ್ನುಳಿದಂತೆ ಪ್ರೇಮಿಗಳ ದಿನದಂದುಸಮಂತಾ ಪ್ರೀತಿಯ ಬಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದರು. ಒಂದು ಡಜನ್ ಫೋಟೊಗಳನ್ನು ಶೇರ್ ಮಾಡಿದ್ದರು. ಅನಾಮಿಕ ವ್ಯಕ್ತಿಯ ಜೊತೆ ರೊಮ್ಯಾಂಟಿಕ್ ಡಿನ್ನರ್ ಡೇಟ್‌ಗೆ ತೆರಳಿದಂತೆ, ಹೃದಯದ ಸಿಂಬಲ್ ಇರುವ ಫೋಟೊವನ್ನು ಹಂಚಿಕೊಂಡಿದ್ದರು.
ಇದಕ್ಕೂ ಮೊದಲು ಚೆನ್ನೈನಲ್ಲಿ ಪಿಕಲ್ ಬಾಲ್ ಪಂದ್ಯಾವಳಿ ನಡೆದಿತ್ತು. ಈ ಟೂರ್ನಾಮೆಂಟ್‌ನಲ್ಲಿ ಚೆನ್ನೈ ಸೂಪರ್ ಚಾಂಪ್ಸ್‌ನ ಒಡತಿಯಾದ ಸಮಂತಾ ತಮ್ಮ ತಂಡಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಹೋಗಿದ್ದರು. ಆದರೆ ಈ ಸಮಯದಲ್ಲಿ ಇವರ ಜೊತೆ ರಾಜ್ ನಿಡಿಮೋರು ಕೂಡ ಇದ್ದರು.
ಇನ್ನು ಸಮಂತಾ ಮನಸಾರೆ ನಕ್ಕು ನಲಿಯುವುದನ್ನು ಅವರ ಅಭಿಮಾನಿಗಳು ಕಂಡು ಅನೇಕ ವರ್ಷಗಳೇ ಆಗಿತ್ತು. ಈ ಕೊರಗನ್ನು ಕೂಡ ಈ ಟೂರ್ನಾಮೆಂಟ್‌ನಲ್ಲಿ ದೂರ ಮಾಡಿದ್ದ ಸಮಂತಾ ಪಿಕಲ್ ಬಾಲ್ ಪಂದ್ಯವನ್ನು ತುಂಬಾನೇ ಎಂಜಾಯ್ ಮಾಡಿದ್ದರು.
ಸಮಂತಾ ಖುಷಿಯನ್ನು ಕಂಡು ರಾಜ್ ನಿಡಿಮೋರುಗೆ ಆದ ಖುಷಿ ಫೋಟೊದಲ್ಲಿ ಕೂಡ ಎದ್ದು ಕಂಡಿತ್ತು. ಇದಲ್ಲದೇ ಮತ್ತೊಂದು ಕಡೆ ಇಬ್ಬರು ಕೈ ಕೈ ಹಿಡಿದು ಕ್ರೀಡಾಂಗಣದ ಪ್ರದಕ್ಷಣೆಯನ್ನು ಹಾಕಿದ್ದರು. ಇನ್ನು ತೀರಾ ಇತ್ತೀಚೆಗೆ ಸಮಂತಾ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದರು. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರವಾಸದ ಕುರಿತು ಮಾಹಿತಿಯನ್ನು ಹಂಚಿಕೊಂಡು ಫೋಟೊಗಳನ್ನು ಕೂಡ ಶೇರ್ ಮಾಡಿದ್ದರು.
ಆಗಲೂ ಕೂಡ ಅನೇಕರು ಸಮಂತಾ ಜೊತೆ ರಾಜ್ ನಿಡಿಮೋರು ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಇದೆಲ್ಲದರಿಂದ ಸಮಂತಾ ಮತ್ತು ರಾಜ್ ನಿಡಿಮೋರು ಅವರ ಸ್ನೇಹ ಮತ್ತು ಪ್ರೀತಿಯ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಗಲೂ ವ್ಯಾಪಕ ಚರ್ಚೆ ನಡೆದಿತ್ತು. ಈಗಲೂ ನಡೆಯುತ್ತಿದೆ.
ಒಟ್ನಲ್ಲಿ ಸದ್ಯ ಸಮಂತಾ ಮತ್ತು ರಾಜ್ ನಿಡಿಮೋರು ಸಂಬಂಧದ ಕುರಿತು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.ನಿಜಕ್ಕೂ ಸಮಂತಾ ಮತ್ತು ರಾಜ್ ನಿಡಿಮೋರು ಪ್ರೀತಿಸುತ್ತಿದ್ದಾರಾ ? ಇಬ್ಬರು ಮದುವೆಯಾಗ್ತಾರಾ ? ಉತ್ತರ ಸರಿಯಾದ ಸಮಯ ಬಂದಾಗಲೇ ಗೊತ್ತಾಗಲಿದೆ.


Click it and Unblock the Notifications











