'ಟಾಕ್ಸಿಕ್' ಬದ್ಲು 'ಪೆದ್ದಿ'; ಯಶ್ ಸಿನಿಮಾ ಪೋಸ್ಟ್‌ಪೋನ್ ವಿಚಾರ ಬುಚ್ಚಿಬಾಬುಗೆ ಮೊದ್ಲೆ ಗೊತ್ತಿತ್ತಾ?
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗಿದೆ. ಯಾವಾಗ ಎನ್ನುವುದು ಸ್ವತಃ ಚಿತ್ರತಂಡಕ್ಕೂ ಗೊತ್ತಿಲ್ಲ. ಆದರೆ ಜೂನ್ 4ಕ್ಕೆ ರಾಯ ಹಾಗೂ ಟಿಕೆಟ್ ಬರಲ್ಲ ಎನ್ನುವುದು ಚಿತ್ರರಂಗದಲ್ಲಿ ಕೆಲವರಿಗೆ ಗೊತ್ತಾಗಿತ್ತು. ಮುಖ್ಯವಾಗಿ 'ಪೆದ್ದಿ' ಚಿತ್ರತಂಡಕ್ಕೆ ಅದರ ಸುಳಿವು ಸಿಕ್ಕಿತ್ತು.
ಏಪ್ರಿಲ್ 30ಕ್ಕೆ ಬರಬೇಕಿದ್ದ 'ಪೆದ್ದಿ' ಚಿತ್ರವನ್ನು ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಡೇಟ್ ಕನ್ಫರ್ಮ್ ಆಗಿರಲಿಲ್ಲ. ಜೂನ್ ಕೊನೆಯ ವಾರ ಅಂದ್ರೆ 'ಟಾಕ್ಸಿಕ್' ಹವಾ ತಣ್ಣಗಾದ ಬಳಿಕ ರಾಮ್‌ಚರಣ್ ಸಿನಿಮಾ ಬರಬಹುದು ಎನ್ನುವ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ 'ಟಾಕ್ಸಿಕ್' ಮತ್ತೆ ಪೋಸ್ಟ್‌ಪೋನ್ ಎನ್ನುವುದು ಎಲ್ಲರಿಗೂ ಶಾಕ್ ತಂದಿದೆ.

ಸಾಮಾನ್ಯ ಪ್ರೇಕ್ಷಕರಿಗೆ ಗೊತ್ತಾಗುವ ಮುನ್ನ ಇಂತಹ ವಿಚಾರಗಳು ಚಿತ್ರರಂಗದ ಒಳಗೆ ಇರುವವರಿಗೆ ಗೊತ್ತಾಗುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳ ಬಿಡುಗಡೆ ದಿನಾಂಕ ನಿಗದಿ ಮಾಡುವಾಗ ಇಂತಹ ಚರ್ಚೆಗಳು ನಡೆಯುತ್ತವೆ. 'ಟಾಕ್ಸಿಕ್' ಆಂಧ್ರ, ತೆಲಂಗಾಣ ರೈಟ್ಸ್ 120 ಕೋಟಿ ರೂ.ಗೆ ಸೇಲ್ ಆಗಿದೆ. ಹಾಗಾಗಿ ತೆಲುಗು ರಾಜ್ಯಗಳಲ್ಲಿ ಸಿನಿಮಾ ಬಗ್ಗೆ ನಿರೀಕ್ಷೆಯಿದೆ. ಹಾಗಾಗಿ ಸಿನಿಮಾ ಅಪ್‌ಡೇಟ್ ಅನ್ನು ಇಂಡಸ್ಟ್ರಿ ಒಳಗಿರುವವವರು ಪಡೆಯುತ್ತಾರೆ.
'ಟಾಕ್ಸಿಕ್' ಸಿನಿಮಾ ಬಿಡುಗಡೆ ಒಂದು ತಿಂಗಳು ಬಾಕಿ ಇದ್ದರೂ ಯಾವುದೇ ಅಪ್‌ಡೇಟ್ ಸಿಗದೇ ಇದ್ದಿದ್ದು ಅನುಮಾನ ಮೂಡಿಸಿತ್ತು. ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಅದನ್ನು ಯಾರೂ ನಂಬಲಿಲ್ಲ. ಕಾರಣ ಈಗಾಗಲೇ ಪದೇ ಪದೆ ರಿಲೀಸ್ ಡೇಟ್ ಬದಲಿಸಿದ್ದ ಯಶ್ ಈ ಬಾರಿ ಆ ತಪ್ಪು ಮಾಡಲ್ಲ ಎಂದೇ ಎಲ್ಲರೂ ಭಾವಿಸಿದ್ದರು.

ಜೂನ್ 4ಕ್ಕೆ 'ಪೆದ್ದಿ' ಸಿನಿಮಾ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಅಧಿಕೃತವಾಗಿ ರಿಲೀಸ್ ಡೇಟ್ ಘೋಷಣೆ ಮಾಡಲಿಲ್ಲ. ಜೂನ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗಿತ್ತು. ಸದ್ಯ 'ಟಾಕ್ಸಿಕ್' ಬರುವುದು ತಡ ಎನ್ನುವುದು ಈಗ ಅಧಿಕೃತವಾಗಿ ಗೊತ್ತಾಗಿದೆ. ಹಾಗಾಗಿ ಜೂನ್ ಮೊದಲ ವಾರ 'ಪೆದ್ದಿ' ರಿಲೀಸ್ ಪ್ಲ್ಯಾನ್ ಜೋರಾಗಿದೆ. ಈ ಬಗ್ಗೆ ಫಿಲ್ಮ್ ನಗರ್‌ನಲ್ಲಿ ಭಾರೀ ಚರ್ಚೆ ಶುರುವಾಗಿದೆ.
ಮೇ 31ಕ್ಕೆ ಐಪಿಎಲ್ ಟೂರ್ನಿಗೆ ತೆರೆ ಬೀಳಲಿದೆ. ಆ ಬಳಿಕ ದೊಡ್ಡ ಸಿನಿಮಾಗಳು ಬಿಡುಗಡೆ ಆಗಲಿವೆ. ಜನ ಐಪಿಎಲ್ ಗುಂಗಿನಿಂದ ಹೊರ ಬಂದು ಚಿತ್ರಮಂದಿರಗಳಿಗೆ ಬರಲು ಮನಸ್ಸು ಮಾಡುತ್ತಾರೆ. ಹಾಗಾಗಿ ಅದೇ ಸಮಯದಲ್ಲಿ 'ಟಾಕ್ಸಿಕ್' ಸಿನಿಮಾ ರಿಲೀಸ್ ಪ್ರಯತ್ನ ನಡೆದಿತ್ತು. ಆದರೆ ಅದು ಸಾಧ್ಯವಾಗ್ತಿಲ್ಲ. ಹಾಗಾಗಿ ಆ ದಿನಾಂಕವನ್ನು 'ಪೆದ್ದಿ' ಚಿತ್ರತಂಡ ಆಯ್ಕೆ ಮಾಡಿಕೊಳ್ಳುವುದು ಖಚಿತ ಎನ್ನಲಾಗ್ತಿದೆ.
'ಟಾಕ್ಸಿಕ್' ಸಿನಿಮಾ ಪೋಸ್ಟ್ ಪೋನ್ ಎನ್ನುತ್ತಿದ್ದಂತೆ ಜೂನ್ ಮೊದಲ ವಾರದಲ್ಲೇ 'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆ ಮಾಡುವುದಾಗಿ ಸುದೀಪ್ ಘೋಷಿಸಿದ್ದಾರೆ. ರಾಮ್‌ಚರಣ್ ಕೂಡ ಅದೇ ಲೆಕ್ಕಾಚಾರ ಮಾಡುವ ಸಾಧ್ಯತೆ ದಟ್ಟವಾಗಿದೆ. ಬುಚ್ಚಿಬಾಬು ನಿರ್ದೇಶನದ ಚಿತ್ರದ ಬಹುತೇಕ ಚಿತ್ರೀರಣ ಮುಗಿದಿದೆ. ಸದ್ಯ ರಾಮ್‌ಚರಣ್ ಜೊತೆ ಶ್ರುತಿ ಹಾಸನ್ ಹೆಜ್ಜೆ ಹಾಕುತ್ತಿರುವ ಸ್ಪೆಷಲ್ ಸಾಂಗ್ ಶೂಟ್ ನಡೀತಿದೆ.
ರಾಮ್‌ಚರಣ್ ಜೋಡಿಯಾಗಿ ಜಾನ್ವಿ ಕಪೂರ್ 'ಪೆದ್ದಿ' ಚಿತ್ರದಲ್ಲಿ ನಟಿಸಿದ್ದಾರೆ. ಚರಣ್ ಗುರುವಿನ ಪಾತ್ರದಲ್ಲಿ ಶಿವಣ್ಣ ನಟಿಸಿರುವುದು ವಿಶೇಷ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣದ ಚಿತ್ರಕ್ಕೆ ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕ್ರಿಕೆಟರ್ ಹಾಗೂ ಕುಸ್ತಿ ಪೈಲ್ವಾನ್ ಹೀಗೆ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಚರಣ್ ನಟಿಸಿದ್ದಾರೆ.


Click it and Unblock the Notifications