'ದಿ ಗರ್ಲ್‌ಫ್ರೆಂಡ್' ಸಿನಿಮಾ ನೋಡಿ ಆವೇಶದಿಂದ ದುಪ್ಪಟ್ಟಾ ಎತ್ತಿ ಬಿಸಾಕಿದ ಯುವತಿ
ಸಿನಿಮಾ ಅನ್ನೋದು ಬಹಳ ಶಕ್ತಿಶಾಲಿ ಮಾಧ್ಯಮ. ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು ಎನ್ನುವ ವಾದ ಇದೆ. ಸಿನಿಮಾ ನೋಡಿ ಭಾವಪರವಶರಾಗಿ ಕೆಲವರು ವಿಭಿನ್ನವಾಗಿ ವರ್ತಿಸುವುದನ್ನು ನೋಡಿದ್ದೇವೆ. ಸದ್ಯ ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ನೋಡಿ ಯುವತಿಯೊಬ್ಬಳು ಆವೇಶಭರಿತಳಾಗಿ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗ್ತಿದೆ.
ಸಾಕಷ್ಟು ಜನ ಸಿನಿಮಾ ನೋಡಿ ಬದಲಾಗಿದ್ದಾರೆ. ಕೆಲವರು ಭಾವನಾತ್ಮಕ ಸನ್ನಿವೇಶಗಳನ್ನು ನೋಡ್ತಾ ನೋಡ್ತಾ ಕಣ್ಣೀರು ಹಾಕುವುದು, ದೈವದ ಸಿನಿಮಾಗಳನ್ನು ನೋಡಿ ಭಕ್ತಪರವಶರಾಗಿ ನಡೆದುಕೊಳ್ಳು ನೋಡಿದ್ದೇವೆ. ಇತ್ತೀಚೆಗೆ ಬಾಲಿವುಡ್ 'ಸೈಯ್ಯಾರ' ಸಿನಿಮಾ ನೋಡಿ ಕಣ್ಣೀರು ಹಾಕಿದ್ದು ವೈರಲ್ ಆಗಿತ್ತು. ಇದೀಗ 'ದಿ ಗರ್ಲ್‌ಫ್ರೆಂಡ್' ಸಿನಿಮಾ ನೋಡಿದ ಈ ಯುವತಿಯ ಪ್ರತಿಕ್ರಿಯೆ ಬಗ್ಗೆ ಚರ್ಚೆ ನಡೀತಿದೆ.

ರಾಹುಲ್ ರವೀಂದ್ರನ್ ನಿರ್ದೇಶನದ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿದೆ. ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ಮಹಿಳಾ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಒಂದು ಸೂಕ್ಷ್ಮವಾದ ವಿಚಾರವನ್ನು ಸೊಗಸಾಗಿ ತೆರೆಗೆ ತಂದಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ರಶ್ಮಿಕಾ ಮಂದಣ್ಣ ನಟನೆಯನ್ನು ಕೊಂಡಾಡುತ್ತಿದ್ದಾರೆ.
ಕೆಲ ಸೆಲೆಬ್ರಿಟಿಗಳು ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಸಿನಿಮಾ ನೋಡಿ ಹಾಡಿ ಹೊಗಳಿಸಿದ್ದಾರೆ. ರಶ್ಮಿಕಾಗೆ ರಾಷ್ಟ್ರಪ್ರಶಸ್ತಿ ಸಿಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಚಿತ್ರದಲ್ಲಿ ಭೂಮಾ ದೇವಿ ಎಂಬ ಯುವತಿಯ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಆಕೆಯ ಪ್ರಿಯಕರ ವಿಕ್ರಮ್ ಆಗಿ ದೀಕ್ಷಿತ್ ಶೆಟ್ಟಿ ಮಿಂಚಿದ್ದಾರೆ.
ಕಾಲೇಜಿಗೆ ಓದಲು ಬರುವ ಮುಗ್ಧ ಯುವತಿ ಭೂಮಾ ದೇವಿ ಕಾಲೇಜಿನ ವಿಕ್ರಂ ಪ್ರೀತಿಯಲ್ಲಿ ಬೀಳುತ್ತಾಳೆ. ಆದರೆ ಬಳಿಕ ಆತನ ನಿಜಬಣ್ಣ ಗೊತ್ತಾಗುತ್ತದೆ. ಅದಾಗಲೇ ಪ್ರೀತಿಯಲ್ಲಿ ಆಳಕ್ಕೆ ಇಳಿದ ಆಕೆ ಅದರಿಂದ ಹೊರಬರಲು ನಡೆಸುವ ಹೋರಾಟ ಎಂಥದ್ದು ಪ್ರೀತಿ ವಿಚಾರ ತಂದೆಗೆ ಗೊತ್ತಾಗಿ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ. ಪ್ರಿಯಕರ ವಿಕ್ಕಿ ಹಾಗೂ ತಂದೆ ಇಬ್ಬರೂ ಕೂಡ ಆಕೆಯನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಬೇಕು ಎನ್ನುವ ಪುರುಷ ಅಹಂಕಾರದ ಸಂಘರ್ಷದಲ್ಲಿ ಭೂಮಾ ಹೇಗೆ ನರಕಯಾತನೆ ಅನುಭವಿಸುತ್ತಾಳೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಒಂದರ್ಥದಲ್ಲಿ ಫೆಮಿನಿಸಂ ವಿಚಾರಗಳು 'ದಿ ಗರ್ಲ್‌ಫ್ರೆಂಡ್' ಚಿತ್ರದಲ್ಲಿದೆ. ಇತ್ತೀಚೆಗೆ ಚಿತ್ರತಂಡ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದೆ. ಬಳಿಕ ನಿರ್ದೇಶಕ ರಾಹುಲ್ ರವೀಂದ್ರನ್ ಬಳಿ ಯುವತಿಯೊಬ್ಬಳು ಮಾತನಾಡಿರುವ ವೀಡಿಯೋ ವೈರಲ್ ಆಗ್ತಿದೆ. "ಈ ಸಿನಿಮಾ ನೋಡಲು ನಾನು ನಮ್ಮ ಸ್ನೇಹಿತೆಯರು, ರಶ್ಮಿಕಾ ರೀತಿ ಹೀಗೆ ಸಲ್ವಾರ್ ಧರಿಸಿ ಬಂದಿದ್ದೀವಿ. ಕ್ಲೈಮ್ಯಾಕ್ಸ್ ನೋಡಿದ ಬಳಿಕ ದುಪ್ಪಟ್ಟಾ ತೆಗೆಯಬೇಕು ಎಂದುಕೊಂಡಿದ್ದೀನಿ, ಜೀವನವನ್ನು ಎದುರಿಸಬೇಕು ಎನ್ನುವ ಧೈರ್ಯ ಬಂದಿದೆ. ಇಂತಹ ಅದ್ಭುತ ಸಿನಿಮಾ ಕೊಟ್ಟಿದ್ದೀರಾ" ಎಂದು ನಿರ್ದೇಶಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟ ದೀಕ್ಷಿತ್ ಶೆಟ್ಟಿ ಅವರನ್ನು ನೋಡಿ ನೀವು ಅದ್ಭುತವಾಗಿ ನಟಿಸಿದ್ದೀರಾ? ಆದರೆ ನಾವೆಲ್ಲಾ ನಿಮ್ಮನ್ನು ದ್ವೇಷಿಸುತ್ತೇವೆ" ಎಂದು ಅವರು ಮಾಡಿರುವ ಟಾಕ್ಸಿಕ್ ಬಾಯ್‌ಫ್ರೆಂಡ್ ಪಾತ್ರದ ಬಗ್ಗೆ ಆ ಯುವತಿ ಕೊಂಡಾಡಿದ್ದಾರೆ. ಈ ವೀಡಿಯೋವನ್ನು ಗೀತಾ ಆರ್ಟ್ಸ್ ಸಂಸ್ಥೆ ಹಂಚಿಕೊಂಡಿದ್ದಾರೆ. ಇದಕ್ಕೆ ತರಹೇವಾರಿ ಪ್ರತಿಕ್ರಿಯೆ ಬರ್ತಿದೆ.
'ದಿ ಗರ್ಲ್‌ಫ್ರೆಂಡ್' ಚಿತ್ರದ ಕಥೆಗೂ ಸಿನಿಮಾ ನೋಡಿದ ಬಳಿಕ ಯುವತಿ ಹೀಗೆ ದುಪಟ್ಟಾ ತೆಗೆದು ಬಿಸಾಕ್ತೀನಿ ಎನ್ನುವುದಕ್ಕೂ ಏನು ಸಂಬಂಧ? ಇದೇನಾ ಫಿಮಿನಿಸಂ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಆಕೆ ಸಿನಿಮಾ ನೋಡಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾಳೆ. ಅದರಲ್ಲಿ ತಪ್ಪೇನಿದೆ ಎಂದು ಕೆಲವರು ಬೆಂಬಲ ಸೂಚಿಸಿದ್ದಾರೆ. ಒಟ್ಟಾರೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತದೆ.


Click it and Unblock the Notifications











