ದೊಡ್ಡ ಬಜೆಟ್ ಇಲ್ಲ, ಸ್ಟಾರ್‌ಗಳಿಲ್ಲ, ಕೋಟಿ ಗಳಿಕೆಗೇನು ಕಮ್ಮಿ ಇಲ್ಲ; ಟಾಲಿವುಡ್‌ನಲ್ಲಿ ಸದ್ಯಕ್ಕೆ ಈ ಎರಡು ಚಿತ್ರಗಳದ್ದೇ ಅಬ್ಬರ!
ಈ ವರ್ಷದ ಆರಂಭದಲ್ಲಿಯೇ ಮೆಗಾಸ್ಟಾರ್ ಚಿರಂಜೀವಿ ಹಾಗೂ ಮಾಸ್ ಮಹಾರಾಜ ರವಿತೇಜಾ ನಟನೆಯ ವಾಲ್ತೇರು ವೀರಯ್ಯ ಮೂಲಕ ಅಬ್ಬರಿಸಿ 200 ಕೋಟಿ ಕ್ಲಬ್ ಸೇರುವ ಮೂಲಕ ಭರ್ಜರಿ ಆರಂಭ ಪಡೆದುಕೊಂಡ ಟಾಲಿವುಡ್ ಬಳಿಕ ಅನೇಕ ದೊಡ್ಡ ದೊಡ್ಡ ಹಿಟ್ ಚಿತ್ರಗಳು ಹಾಗೂ ದೊಡ್ಡ ಫ್ಲಾಪ್ ಚಿತ್ರಗಳನ್ನೂ ಸಹ ನೀಡಿ ಮಿಶ್ರ ಫಲಿತಾಂಶವನ್ನು ಪಡೆದುಕೊಂಡಿದೆ.
ಇನ್ನು ಈ ವರ್ಷದಲ್ಲಿ ಇಲ್ಲಿಯವರೆಗೂ ತೆರೆಗೆ ಬಂದಿರುವ ತೆಲುಗು ಚಿತ್ರಗಳ ಪೈಕಿ ಸ್ಟಾರ್ ನಟರ ಚಿತ್ರಗಳು ಸದ್ದು ಮಾಡಿದ್ದಕ್ಕಿಂತ ಯುವ ನಟರ ಚಿತ್ರಗಳೇ ಸದ್ದು ಮಾಡಿದ್ದೇ ಹೆಚ್ಚು. ಸ್ಟಾರ್‌ಗಳಾದ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಹಾಗೂ ನಾನಿ ನಟನೆಯ ದಸರಾ ಚಿತ್ರಗಳನ್ನು ಹೊರತುಪಡಿಸಿದರೆ ತಮಿಳಿನ ಸ್ಟಾರ್ ನಟ ಧನುಷ್ ನಟನೆಯ ಸರ್, ತೆಲುಗಿನ ಯುವ ನಟರ ಚಿತ್ರಗಳಾದ ಬಳಗಂ, ರೈಟರ್ ಪದ್ಮಭೂಷಣ್, ವಿರೂಪಾಕ್ಷ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡಿವೆ.

ಮಹೇಶ್ ಬಾಬು, ರಾಮ್ ಚರಣ್, ಎನ್‌ಟಿಆರ್ ಹಾಗೂ ಅಲ್ಲು ಅರ್ಜುನ್ ರೀತಿಯ ಸ್ಟಾರ್ ನಟರ ಚಿತ್ರಗಳು ಈ ವರ್ಷ ಇಲ್ಲಿಯವರೆಗೂ ಬಿಡುಗಡೆಯಾಗದೇ ಇದ್ದರೂ ಸಹ ಟಾಲಿವುಡ್ ಸಕ್ಸರ್ ರೇಟ್ ಅನ್ನು ಹಿಟ್ ಆಗುವ ಮೂಲಕ ಚೆನ್ನಾಗಿಯೇ ನಿಭಾಯಿಸಿವೆ ಯುವ ನಟರ ಚಿತ್ರಗಳು.
ಈ ಯುವ ನಟರ ಹಿಟ್ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ಸಾಮಜವರಗಮನ ಹಾಗೂ ಬೇಬಿ ಚಿತ್ರ. ಹೌದು, ಕಳೆದ ಜೂನ್ 29ರಂದು ಬಿಡುಗಡೆಯಾದ ಸಾಮಜವರಗಮನ ಬಾಕ್ಸ್ ಆಫೀಸ್ ಧೂಳೆಬ್ಬಿಸುವಂತಹ ಕಲೆಕ್ಷನ್ ಮಾಡಿ ಹೆಸರನ್ನು ಮಾಡಿರುವ ಕಲಾವಿದರ ಚಿತ್ರಗಳೇ ನಾಚುವ ಹಾಗೆ ಕಲೆಕ್ಷನ್ ಮಾಡಿತ್ತು. ಈ ಚಿತ್ರ 20 ದಿನಗಳ ಓಟವನ್ನು ಪೂರೈಸುವ ಸನಿಹಕ್ಕೆ ಬರುತ್ತಿದ್ದಂತೆಯೇ ಜುಲೈ 14ರಂದು ತೆರೆಗೆ ಬಂದ ಬೇಬಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಚಾರ್ಚ್ ಸ್ವೀಕರಿಸಿದೆ. ಹೀಗೆ ಕಳೆದೊಂದು ತಿಂಗಳಿನಲ್ಲಿ ತೆಲುಗು ಬಾಕ್ಸ್ ಆಫೀಸ್‌ನಲ್ಲಿ ಯುವ ನಟರ ಚಿತ್ರಗಳೇ ಸದ್ದು ಮಾಡ್ತಿವೆ.
ಸಾಮಜವರಗಮನ ಭರ್ಜರಿ ಕಲೆಕ್ಷನ್: ಚಿತ್ರದಲ್ಲಿ ನಾಯಕ ಬಾಲು ಹೈದರಾಬಾದ್‌ನ ಮಲ್ಟಿಪ್ಲೆಕ್ಸ್‌ವೊಂದರಲ್ಲಿ ಟಿಕೆಟ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾನೆ. ಆತನ ತಂದೆಗೆ ಪದವಿ ಪಡೆದಿದ್ದರೆ ಮಾತ್ರ ಪಿತ್ರಾರ್ಜಿತ ಆಸ್ತಿ ಸೇರಲಿದೆ ಎಂದು ಬರೆದಿರಲಾಗಿರುತ್ತದೆ. ಆದರೆ ಬಾಲುವಿನ ತಂದೆ ಡಿಗ್ರಿ ಮುಗಿಸದ ಕಾರಣ ಅ ವಯಸ್ಸಿನಲ್ಲಿ ಆಸ್ತಿ ಪಡೆಯುವ ಸಲುವಾಗಿ ಡಿಗ್ರಿ ಪಡೆಯಲು ಓದಲು ಮುಂದಾಗ್ತಾರೆ. ಇನ್ನು ಇದೇ ವೇಳೆ ಬಾಲುವಿನ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ನಾಯಕಿ ಸರಾಯು ಬಾಡಿಗೆಗೆ ಇರುತ್ತಾಳೆ. ಇನ್ನು ನಾಯಕ ತನ್ನ ತಂದೆ ಹಾಗೂ ನಾಯಕಿ ಇಬ್ಬರಿಗೂ ಸಹ ಡಿಗ್ರಿ ಟ್ಯೂಷನ್ ಹೇಳಿಕೊಡುತ್ತಾನೆ. ಈ ಎಲ್ಲಾ ಸಂಗತಿಗಳೂ ಸಹ ಕಾಮಿಡಿಯೊಂದಿಗೆ ಸಾಗಲಿವೆ.
ಹೀಗಿರುವಾಗ ಬಾಲು ಹಾಗೂ ಸರಾಯು ಪ್ರೀತಿಯಲ್ಲಿ ಒಡಕು ಮೂಡುತ್ತೆ. ಈ ಇಬ್ಬರ ಪ್ರೀತಿ ಸರಿ ಹೋಗುತ್ತಾ ಹಾಗೂ ಬಾಲು ತಂದೆ ಪದವಿ ಪಾಸ್ ಆಗ್ತಾರಾ ಎಂಬುದೇ ಚಿತ್ರದ ಕಥೆ. ಒಟ್ಟಿನಲ್ಲಿ ಸರಳ ಕಥೆಯುಳ್ಳ ಕಾಮಿಡಿ ಎಂಟರ್‌ಟೈನರ್ ಸಾಮಜವರಗಮನ ಜನರ ಮನಸ್ಸನ್ನು ಗೆದ್ದು ಬಾಕ್ಸ್ ಆಫೀಸ್‌ನಲ್ಲಿ ಜಯ ಗಳಿಸಿದೆ. 8 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 17 ದಿನಗಳಲ್ಲಿ 47.24 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಬೇಬಿ ಬಾಕ್ಸ್ ಆಫೀಸ್ ಲೂಟಿ: ಶಾಲಾ ದಿನಗಳಿಂದ ಓರ್ವನನ್ನು ಪ್ರೀತಿಸುವ ಸ್ಲಂನಲ್ಲಿ ಬೆಳೆದ ಹುಡುಗಿ ಕಾಲೇಜು, ಶ್ರೀಮಂತ ಸ್ನೇಹಿತರು ಸಿಕ್ಕಾಗ ಕಾಲಕ್ಕೆ ತಕ್ಕ ಹಾಗೆ ಹೇಗೆ ಬದಲಾಗ್ತಾಳೆ ಎಂಬ ಒಂದು ಸರಳ ಎಳೆಯ ಮೇಲೆ ರಚಿಸಲಾಗಿರುವ ಈ ಚಿತ್ರವನ್ನು ನೋಡಲು ಸಿನಿ ರಸಿಕರ ದಂಡೇ ಚಿತ್ರಮಂದಿರದತ್ತ ಬರುತ್ತಿದೆ.
ಹೀಗೆ ದೊಡ್ಡ ತಾರಾಗಣವಿಲ್ಲದೇ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. 10 ಕೋಟಿ ವೆಚ್ಚದ್ಲಲಿ ತಯಾರಾಗಿದ್ದ ಈ ಚಿತ್ರ ಎರಡೇ ದಿನಗಳಲ್ಲಿ ಬರೋಬ್ಬರಿ 14.3 ಕೋಟಿ ಗಳಿಕೆಯನ್ನು ಮಾಡಿದೆ. ಈ ಮೂಲಕ ಬೇಬಿ ಚಿತ್ರ ಎರಡೇ ದಿನಕ್ಕೆ ಲಾಭ ಗಳಿಸಲು ಆರಂಭಿಸಿದೆ.


Click it and Unblock the Notifications











