ಹಣ ಕೊಡಲಿಲ್ಲ ಅಂತ ಚಿತ್ರಕ್ಕೆ ನೆಗೆಟಿವ್ ರಿವ್ಯೂ; ಯೂಟ್ಯೂಬರ್ ಬಂಧನ
ಒಂದ್ಕಾಲದಲ್ಲಿ ಸಿನಿಮಾ ರಿವ್ಯೂ ಗೊತ್ತಾಗುವುದು ಕಷ್ಟವಾಗ್ತಿತ್ತು. ಈಗ ಸಿನಿಮಾ ಮಾರ್ನಿಂಗ್ ಶೋ ಮುಗಿಯುವ ವೇಳೆಗೆ ರಿವ್ಯೂ ಬರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಪಾಸಿಟಿವ್ ನೆಗೆಟಿವ್ ಮಾತನಾಡುವವರ ಸಂಖ್ಯೆ ಜಾಸ್ತಿ ಆಗ್ತಿದೆ. ಇದೇ ರೀತಿ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಕೊಟ್ಟ ಯೂಟ್ಯೂಬರ್ ಬಂಧನವಾಗಿದೆ.
ಪುಲಾ ಚೊಕ್ಕಾ ನವೀನ್ ಎಂಬ ತೆಲುಗು ಯೂಟ್ಯೂಬರ್ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಯೂಟ್ಯೂಬ್‌ನಲ್ಲಿ ಸಿನಿಮಾಗಳ ಬಗ್ಗೆ ತಮ್ಮ ವಿಮರ್ಶೆಯಿಂದ ಅವರು ಜನಪ್ರಿಯತೆ ಸಾಧಿಸಿದ್ದರು. ಇದೀಗ ಹೈದರಾಬಾದ್ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಉದ್ದೇಶಪೂರ್ವಕವಾಗಿ ನವೀನ್ ನೆಗೆಟಿವ್ ರಿವ್ಯೂ ಕೊಟ್ಟಿದ್ದಾನೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಹಾಗಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ವಾರ 'ವರ್ಜಿನ್ ಬಾಯ್ಸ್' ಎಂಬ ತೆಲುಗು ಸಿನಿಮಾ ಬಿಡುಗಡೆ ಆಗಿತ್ತು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗೀತಾನಂದ್, ಮಿಶ್ರ ಶರ್ಮಾ, ಶ್ರೀಹಾನ್ ಚಿತ್ರದ ತಾರಾಗಣದಲ್ಲಿದ್ದಾರೆ. ದಯಾನಂದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಾಜ್ ಗುರು ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ರಾಜಾ ದಾರಪುನೇನಿ ಎಂಬುವವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಕೂಡ ಮಾಡಿ ಮಾಧ್ಯಮಗಳ ಮುಂದೆ ಸಂತಸ ಹಂಚಿಕೊಂಡಿತ್ತು.
ಸಕ್ಸಸ್ ಮೀಟ್‌ನಲ್ಲೇ ನಿರ್ಮಾಪಕರು ತಮ್ಮ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಕೊಟ್ಟವರ ಬಗ್ಗೆ ಅಸಮಾಧಾನ ಹಾಕಿದ್ದರು. "ನಾನು ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ್ದೇವೆ. ಪ್ರೇಕ್ಷಕರಿಗೆ ಸಿನಿಮಾ ಎಷ್ಟು ಇಷ್ಟ ಆಗಿದೆ ಎನ್ನುವುದು ನಮಗೆ ಗೊತ್ತಿದೆ. ಆದರೆ ಪೂಲ ಚೊಕ್ಕ ನವೀನ್ ರೀತಿಯ ಕೆಲ ವಿಮರ್ಶಕರು ನಮ್ಮ ಬಳಿಕ ಹಣ ಕೇಳಿದ್ದರು. ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ದ್ವೇಷ ಸಾಧಿಸಿ ನೆಗೆಟಿವ್ ರಿವ್ಯೂ ಕೊಟ್ಟಿದ್ದಾರೆ. ನಮ್ಮ ಸಿನಿಮಾಗೆ ಹಿನ್ನಡೆ ಆಗುವಂತೆ ಮಾಡಿದ್ದಾರೆ. ಆತನ ಜೊತೆ ಮತ್ತೆ ಕೆಲ ಯೂಟ್ಯೂಬರ್‌ಗಳು ಸಿನಿಮಾ ಬಿಡುಗಡೆಗೂ ಮುನ್ನ ನೆಗೆಟಿವ್ ರಿವ್ಯೂ ಕೊಟ್ಟಿದ್ದರು. ಈಗಾಗಲೇ ಅವರ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದೇವೆ. ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದರು.
ರಾಜಾ ದಾರಪುನೇನಿ ನೀಡಿದ ದೂರು ಆಧರಿಸಿ ಯೂಟ್ಯೂಬರ್ ಪೂಲ ಚೊಕ್ಕ ನವೀನ್ ಬಂಧನವಾಗಿದೆ ಎಂದು ವರದಿಯಾಗಿದೆ. "40 ಸಾವಿರ ರೂ. ಕೊಟ್ಟರೆ ಪಾಸಿಟಿವ್ ರಿವ್ಯೂ ಕೊಡ್ತೀನಿ, ಇಲ್ಲದಿದ್ದರೆ ನೆಗೆಟಿವ್ ಮಾಡ್ತೀನಿ" ಎಂದು ನವೀನ್ ಹೇಳಿದ್ದ ಎನ್ನುವ ಆರೋಪ ಕೇಳಿಬಂದಿದೆ. ಫಿಲ್ಮ್ ನಗರ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆದರೂ ಯೂಟ್ಯೂಬ್ ಪ್ರಚಾರ ಸದ್ದು ಮಾಡುತ್ತದೆ. ಇದು ಸಿನಿಮಾ ಸೋಲು ಗೆಲುವನ್ನು ಕೆಲವೊಮ್ಮೆ ನಿರ್ಧರಿಸಿಬಿಡುತ್ತದೆ. ಈ ಹಿಂದೆ ತಮಿಳಿನ 'ಕಂಗುವ' ಸಿನಿಮಾ ಬಿಡುಗಡೆಯಾದಾಗ ನಿರ್ಮಾಪಕರು ಯೂಟ್ಯೂಬರ್‌ಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದರು. ಬೇಕಂತಲೇ ತಮ್ಮ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಹಾಕಿದರು ಎಂದು ಆರೋಪಿಸಿದ್ದರು. ಸಿನಿಮಾ ಬಿಡುಗಡೆ ದಿನ ಚಿತ್ರಮಂದಿರಗಳ ಅಂಗಳಲ್ಲಿ ಯೂಟ್ಯೂಬರ್‌ಗಳಿಗೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದ್ದರು.


Click it and Unblock the Notifications











