twitter
    X
    Home ಚಲನಚಿತ್ರಗಳ ಒಳನೋಟ

    ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲು ಅರ್ಹವಾಗಿದ್ದ 10 ಸ್ಯಾಂಡಲ್‌ವುಡ್ ಸಿನಿಮಾಗಳಿವು!

    Author Sowmya Bairappa | Updated: Wednesday, August 23, 2023, 05:51 PM [IST]

    ಸದ್ಯ ಕನ್ನಡ ಸಿನಿಮಾಗಳು ಕರ್ನಾಟಕ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಗುರುತಿಸಿಕೊಳ್ಳುತ್ತಿವೆ. ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತ ಸಿನಿಮಾಗಳು ಮುಂದೆ ಮಕಾಡೆ ಮಲಗಿವೆ. ಕನ್ನಡ ಚಿತ್ರಗಳು ಉತ್ತಮ, ಗಟ್ಟಿತನದ ಕಥೆ, ಅದ್ಧೂರಿ ಮೇಕಿಂಗ್ ಜೊತೆಗೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಅದರಲ್ಲೂ ಕಳೆದ ವರ್ಷ ತೆರೆಕಂಡ ಕನ್ನಡದ ಸಿನಿಮಾಗಳು ಬೇರೆ ಚಿತ್ರರಂಗದ ಸ್ಟಾರ್ ನಟರು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿವೆ. ಇತ್ತೀಚಿನ ದಿನಗಳಲ್ಲಂತೂ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಕಾರುಬಾರು. ಆದರೆ, ಈ ಹಿಂದೆ ಕೂಡ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಅರ್ಹವಾದ ಸಿನಿಮಾಗಳು ಬಿಡುಗಡೆಯಾಗಿದ್ದವು. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image
    ಎ

    1

    'ಎ' ಸಿನಿಮಾಗೆ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಈ ಚಿತ್ರದ ನಾಯಕನ ಪಾತ್ರಕ್ಕೂ ಉಪ್ಪಿ ಅವರೇ ಜೀವ ತುಂಬಿದ್ದರು. ಚಾಂದಿನಿ ನಾಯಕಿಯಾಗಿ ಅಭಿನಯಿಸಿದ್ದರು. ಚಿತ್ರದ ಸ್ಕ್ರೀನ್ ಪ್ಲೇ ಆಗಿನ ಕಾಲದಲ್ಲಿ ಸಖತ್ ಸದ್ದು ಮಾಡಿತ್ತು. 'ಎ' ಸಿನಿಮಾ ವಿಭಿನ್ನವಾದ ನಿರೂಪಣೆಯಿಂದ ಇಡೀ ಭಾರತೀಯ ಚಿತ್ರವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿತ್ತು. ಗಲ್ಲಾ ಪೆಟ್ಟಿಗೆಯಲ್ಲೂ ಉತ್ತಮ ಗಳಿಗೆ ಕಂಡು ಯಶಸ್ವಿ ೨೫ ವಾರ ಪೂರೈಸಿತ್ತು. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲೂ ಡಬ್ ಆಗಿತ್ತು. ಉಪೇಂದ್ರ ನಾಯಕನಾಗಿ ನಟಿಸಿದ ಮೊದಲ ಚಿತ್ರವೇ ಹಿಟ್ ಆಗಿದ್ದು ವಿಶೇಷವಾಗಿತ್ತು.  

    ಉಪೇಂದ್ರ

    ಉಪೇಂದ್ರ

    2

    ಉಪೇಂದ್ರ ನಿರ್ದೇಶನದ 'ಉಪೇಂದ್ರ' ಹೆಸರಿನ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಬಿಡುಗಡೆಗೆ ಅರ್ಹವಾಗಿತ್ತು. 1999ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಉಪೇಂದ್ರ, ಪ್ರೇಮಾ, ದಾಮಿನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾವು ಮನುಷ್ಯನ ಭಾವನೆಯನ್ನು ಓರ್ವ ನಾಯಕ ಮತ್ತು ಮೂವರು ನಾಯಕಿಯರ ನಡುವಿನ ಸಂಬಂಧದ ಮೂಲಕ ತೋರಿಸುತ್ತದೆ. ಈ ಸಿನಿಮಾಗೆ 1999ರ ಫಿಲ್ಮ್ ಫೇರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.  

    ಉಳಿದವರು ಕಂಡಂತೆ

    ಉಳಿದವರು ಕಂಡಂತೆ

    3

    ರಕ್ಷತ್ ಶೆಟ್ಟಿ ನಿರ್ದೇಶನದ ಮೊದಲ ಉಳಿದವರು ಕಂಡಂತೆ. ಮೊದಲ ಪ್ರಯತ್ನದಲ್ಲೇ ಅವರು ಯಶಸ್ವೀ ನಿರ್ದೇಶಕ ಎನಿಸಿಕೊಂಡರು. ಈ ಸಿನಿಮಾದಲ್ಲಿ  ರಕ್ಷತ್ ಶೆಟ್ಟಿ ಮತ್ತು ಯಜ್ಞ ಶೆಟ್ಟಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ ಹಾಗೂ ಕಿಶೋರ್, ಶೀತಲ್ ಶೆಟ್ಟಿ, ತಾರಾ, ಅಚ್ಯುತ್ ಕುಮಾರ್, ರಿಶಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಅರುಣ್ ಪ್ರಕಾಶ್, ಮಾಸ್ಟರ್ ಸೋಹನ್ ಇವರುಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದವರು ಕಂಡಂತೆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಪ್ರಭಾವ ಬೀರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಇದೊಂದು ಕನ್ನಡದ ಕಲ್ಟ್ ಚಿತ್ರವಾಗಿ ಬದಲಾಯಿತು. ತಮಿಳು ಭಾಷೆಯಲ್ಲೂ ರಿಮೇಕ್ ಆಯಿತು. ಚಿತ್ರದ ನಿರ್ದೇಶನಕ್ಕಾಗಿ ರಕ್ಷಿತ್ ಫಿಲ್ಮಫೇರ್ ಮತ್ತು ಕರ್ನಾಟಕ ರಾಜ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.

    ಉಗ್ರಂ

    ಉಗ್ರಂ

    4

    ಉಗ್ರಂ ಚಿತ್ರದಲ್ಲಿ ಶ್ರೀ ಮುರಳಿ ಅವರು ನಾಯಕನಾಗಿ ಮತ್ತು ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಿಲಕ್, ಜೈ ಜಗದೀಶ್, ಅವಿನಾಶ್, ಅತುಲ್ ಕುಲ ಕರ್ಣಿ,ಪದ್ಮಜಾ ರಾವ್, ಮೊದಲಾದವರ ತಾರಬಳಗವೇ ಚಿತ್ರದಲ್ಲಿದೆ. ಇದು ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಹಾಗೂ ಶ್ರೀಮುರುಳಿ ಅವರಿಗೆ ಜೀವಕೊಟ್ಟ ದೊಡ್ಡ ಹಿಟ್ ಸಿನಿಮಾ.  ಭೂಗತಲೋಕವನ್ನು ಹೀಗೂ ತೋರಿಸಬಹುದು ಎಂದು ಈ ಸಿನಿಮಾ ಹೇಳಿಕೊಟ್ಟಿತ್ತು. 2014ರಲ್ಲಿ ಬಂದ ಈ ಸಿನಿಮಾ ದೊಡ್ಡ ಯಶಸ್ಸು ಕೊಟ್ಟಿತ್ತು. 

    ಟಗರು

    ಟಗರು

    5

    ದುನಿಯಾ ಸೂರಿ ನಿರ್ದೇಶನದ 'ಟಗರು' ಸಿನಿಮಾ ಪೊಲೀಸ್ ಹಾಗೂ ರೌಡಿಗಳ ನಡುವೆ ನಡೆಯುವ ಸಮರವನ್ನು ತೋರಿಸುತ್ತದೆ. ಈ ಸಿನಿಮಾದಲ್ಲಿ ಶಿವ ರಾಜ್ ಕುಮಾರ್, ಡಾಲಿ ಧನಂಜಯ್, ವಸಿಷ್ಠ ಸಿಂಹ, ಭಾವನಾ ಮೆನನ್, ಮಾನ್ವಿತಾ ಕಾಮತ್ ಸೇರಿದಂತೆ ಅನೇಕರ ತಾರಾ ಬಳಗವೇ ಇದೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಬಿಡುಗಡೆಗೆ ಅರ್ಹವಾಗಿದೆ ಎಂಬುದು ಹಲವರ ಅಭಿಪ್ರಾಯ.  

    ರಂಗಿತರಂಗ

    ರಂಗಿತರಂಗ

    6

    ರಂಗಿತರಂಗ ಚಿತ್ರದಲ್ಲಿ ನಿರುಪ್ ಭಂಡಾರಿ, ರಾಧಿಕ ಚೇತನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಂತಿಕಾ ಶೆಟ್ಟಿ, ಸಾಯಿ ಕುಮಾರ್, ಅರವಿಂದ್ ರಾವ್, ಶಿಲ್ಪಾ ಸಿಂಗ್, ಚೇತನ್ ರಾಜ್, ಅನುಪ್ ಭಂಡಾರಿ, ಶಂಕರ್ ಮತ್ತು ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅನುಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಚಿತ್ರ ಯಾರೂ ಊಹಿಸಲಾಗದ ಯಶಸ್ಸು ಕಂಡಿತ್ತು. 

     

    ನಿಷ್ಕರ್ಷ

    ನಿಷ್ಕರ್ಷ

    7

    ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಮೂಡಿಬಂದ ಸಸ್ಪೆನ್ಸ್ ಥ್ರಿಲ್ಲರ್ `ನಿಷ್ಕರ್ಷ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕಮಾಂಡೋ ಅಜಯಕುಮಾರ್ ಪಾತ್ರದಲ್ಲಿ ನಟಿಸಿದರು. ಅನಂತನಾಗ್ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದರೆ, ಬಿ.ಸಿ.ಪಾಟೀಲ್ ಖಳನಾಯಕನಾಗಿ ನಟಿಸಿದರು. ಕಮಾಂಡೋ ಪಡೆಗಳ ಆಪರೇಷನ್ ಮೇಲೆ ಬಂದ ಮೊದಲ ಕನ್ನಡ ಚಿತ್ರವಾದ ನಿಷ್ಕರ್ಷದಲ್ಲಿ ಯಾವುದೇ ನಾಯಕಿಯಿಲ್ಲ ಮತ್ತು ಚಿತ್ರ ಗೀತೆಗಳು ಇಲ್ಲ. ಈ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಚಿತ್ರ ಪ್ರಶಸ್ತಿಯೊಂದಿಗೆ ಮೂರು ಪ್ರಶಸ್ತಿ ಪಡೆಯಿತು. ಚಿತ್ರದ 95% ಶೂಟಿಂಗ್ ಒಂದೇ ಬಿಲ್ಡಿಂಗ್ ನಲ್ಲಿ ನಡೆಯಿತು. 1993 ಡಿಸೆಂಬರ್ 24 ರಂದು ಬಿಡುಗಡೆಯಾದ ಈ ಚಿತ್ರ ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪೂರೈಸಿತು. 

    ಲೂಸಿಯಾ

    ಲೂಸಿಯಾ

    8

    ಲೂಸಿಯಾ ಚಿತ್ರದಲ್ಲಿ ಸತೀಶ್ ನೀನಾಸಂ ನಾಯಕನಾಗಿ ಮತ್ತು ಶ್ರುತಿ ಹರಿಹರನ್ ನಾಯಕಿಯಾಗಿ ಮುಖ್ಯಪಾತ್ರದಲ್ಲಿ ತೆರೆಯ ಮೇಲೆ ಅಭಿನಯಿಸಿದ್ದಾರೆ.  ಈ ಸಿನಿಮಾವನ್ನು ಪವನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ತನ್ನ ವಿಭಿನ್ನ ಹಾಡುಗಳು ಹಾಗೂ ಮೇಕಿಂಗ್ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿದ್ದ ಚಿತ್ರ ಲೂಸಿಯಾ. ಕನ್ನಡ ಚಿತ್ರೋದ್ಯಮದಲ್ಲೂ ಸಾಕಷ್ಟು ನಿರೀಕ್ಷೆಗಳನ್ನು ಹಾಗೂ ಭರವಸೆಗಳನ್ನು ಹುಟ್ಟುಹಾಕಿದ ಚಿತ್ರ ಇದು.

    ಹಾಲಿವುಡ್

    ಹಾಲಿವುಡ್

    9

    2002ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್ ಸಿನಿಮಾವನ್ನು ದಿನೇಶ್ ಬಾಬು ಅವರು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ನಟ ಉಪೇಂದ್ರ ಅವರು ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ರೋಬೋಟ್ ತನ್ನ ಸೃಷ್ಟಿಕರ್ತನನ್ನು ಕೊಲ್ಲಲು ನಿರ್ಧರಿಸಿದಾಗ ಏನಾಗುತ್ತದೆ ಎಂಬುದರ ಈ ಸಿನಿಮಾದ ಕಥೆ ಸುತ್ತುತ್ತದೆ. ಈ ಸಿನಿಮಾದಲ್ಲಿ ಉಪೇಂದ್ರ ಅವರ ಅಭಿನಯಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು.   

    ಭಕ್ತ ಪ್ರಹ್ಲಾದ

    ಭಕ್ತ ಪ್ರಹ್ಲಾದ

    10

    ಭಕ್ತ ಪ್ರಹ್ಲಾದ ಚಿತ್ರದಲ್ಲಿ ವರನಟ ರಾಜ್ ಕುಮಾರ್, ಬಾಲ ನಟನಾಗಿ ಪುನೀತ್ ರಾಜ್ ಕುಮಾರ್, ಅನಂತ್ ನಾಗ್, ತೂಗುದೀಪ್ ಶ್ರೀನಿವಾಸ್ ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ವಿಜಯ್ ಅವರ ನಿರ್ದೇಶನದಲ್ಲಿ ಮತ್ತು ಟಿ ಜಿ ಲಿಂಗಪ್ಪ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ. ಈ ಸಿನಿಮಾದಲ್ಲಿ ಪ್ರತಿಯೊಬ್ಬರ ನಟನೆ ಮೆಚ್ಚುವಂಥದ್ದು. ಇಂತಹ ಪೌರಾಣಿಕ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಗೆ ಅರ್ಹವಾಗಿದೆ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X