twitter
    X
    Home ಚಲನಚಿತ್ರಗಳ ಒಳನೋಟ

    ಹ್ಯಾಪಿ ಬರ್ತ್​ಡೇ ದರ್ಶನ್ : ಬಾಕ್ಸಾಫೀಸ್ ಧೂಳೆಬ್ಬಿಸಿರುವ ಡಿ-ಬಾಸ್ ಟಾಪ್ 10 ಸಿನಿಮಾಗಳು

    Author Administrator | Updated: Thursday, February 16, 2023, 12:28 PM [IST]

    ಮೆಜೆಸ್ಟಿಕ್ ಚಿತ್ರದಿಂದ ನಾಯಕನಾಗಿ ಸಿನಿಪಯಣ ಆರಂಭಿಸದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಸ್ತುತ 50 ಚಿತ್ರಗಳ ಗಡಿಯನ್ನು ದಾಟಿದ್ದಾರೆ. ಇವುಗಳಲ್ಲಿ ಹಲವು ಚಿತ್ರಗಳು ಕನ್ನಡ ಬಾಕ್ಸಾಫೀಸಿನಲ್ಲಿ ದಾಖಲೆ ಬರೆದಿವೆ. ಇಲ್ಲಿ ಬಾಕ್ಸಾಫೀಸ್ ದೃಷ್ಟಿಯಿಂದ ಅತಿ ಹೆಚ್ಚು ಗಳಿಕೆ ಕಂಡ ದರ್ಶನ್ ರ ಟಾಪ್ 10 ಚಿತ್ರಗಳನ್ನು ನೀಡಲಾಗಿದೆ.

    cover image
    ಕುರುಕ್ಷೇತ್ರ

    ಕುರುಕ್ಷೇತ್ರ

    1

    ಕನ್ನಡದ ಅತ್ಯಂತ ಅದ್ಧೂರಿ ಪೌರಾಣಿಕ ಚಿತ್ರವಾದ ಕುರುಕ್ಷೇತ್ರವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದರು. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 50ನೇ ಸಿನಿಮಾ. ಒಂದು ಕಾಲದಲ್ಲಿ ದರ್ಶನ್ ಬರೀ ಹೀರೋಯಿಸಂ ಪಾತ್ರಗಳನ್ನೇ ಮಾಡುತ್ತಾ ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಂಡಿದ್ದರು ಎಂಬ ಆರೋಪವಿತ್ತು. ಆದರೆ, ಅಂತಹ ಮಾತುಗಳಿಗೆ ದರ್ಶನ್ 'ಕುರುಕ್ಷೇತ್ರ' ಸಿನಿಮಾ ಮೂಲಕ ಉತ್ತರ ಕೊಟ್ಟಿದ್ದರು. ಈ ಸಿನಿಮಾದಲ್ಲಿ ದರ್ಶನ್ ಅವರು ದುರ್ಯೋಧನ ಪಾತ್ರ ನಿರ್ವಹಿಸಿದ್ದು,  ಈ ಪಾತ್ರ ಚಾಲೆಂಜಿಂಗ್ ಸಿನಿಬದುಕಿನ ಬೆಸ್ಟ್ ಪಾತ್ರಗಳಲ್ಲಿ ಒಂದಾಗಿದೆ. ದುರ್ಯೋಧನನ ಪಾತ್ರದ ಮೂಲಕ ತೆರೆಯಮೇಲೆ ದರ್ಶನ್ ಅಬ್ಬರಿಸಿದ್ದರು. ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನ್ ಸರ್ಜಾ ಕರ್ಣನ ಪಾತ್ರ, ರವಿಶಂಕರ್ ಶಕುನಿ, ಅಂಬರೀಷ್ ಭೀಷ್ಮ, ರವಿಚಂದ್ರನ್ ಕೃಷ್ಣ, ಮೇಘನಾ ರಾಜ್ ಭಾನುಮತಿ ಮತ್ತು ಖ್ಯಾತ ತಮಿಳು ನಟಿ ಸ್ನೇಹಾ ದ್ರೌಪದಿ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾ 3Dಯಲ್ಲಿ ಬಿಡುಗಡೆಯಾಗಿತ್ತು.  ಕುರುಕ್ಷೇತ್ರ ಚಿತ್ರವನ್ನು 50 ಕೊಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 110 ಕೋಟಿ ಗಳಿಕೆ ಕಂಡಿತ್ತು. 

    ಯಜಮಾನ

    ಯಜಮಾನ

    2

    ವಿ.ಹರಿಕೃಷ್ಣ ನಿರ್ದೇಶನ 'ಯಜಮಾನ' ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಸಿನಿಮಾ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್ ನಾಯಕಿಯರಾಗಿ ಅಭಿನಯಿಸಿದ್ದರು. ಬೆಳೆ ಬೆಳೆದ ರೈತನೇ ನಿಜವಾದ 'ಯಜಮಾನ' ಎಂದು ಹೇಳುವ ಈ ಸಿನಿಮಾ ಕೆಲ ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿತ್ತು. ಜೊತೆಗೆ ಮಜಾ ನೀಡೋ ಹಾಡು, ಥ್ರಿಲ್ ನೀಡುವ ಫೈಟುಗಳ ಜೊತೆಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ 'ಯಜಮಾನ' ಪ್ರೇಕ್ಷಕರನ್ನು ಸೆಳೆದಿತ್ತು. ಯಜಮಾನ ರೈತರ ಸಮಸ್ಯೆಗಳ ಕುರಿತಾಗಿದ್ದು, ಈ ಚಿತ್ರ ಶತದಿನೋತ್ಸವ ಪೂರೈಸಿ ಐವತ್ತು ಕೋಟಿಗೂ ಅಧಿಕ ಗಳಿಸಿದೆ.

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

    3

    'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಮೂಲಕ ದರ್ಶನ್ ಮೊದಲ ಬಾರಿಗೆ ಐತಿಹಾಸಿಕ  ಸಿನಿಮಾದಲ್ಲಿ ನಟಿಸಿದರು. ಕಿತ್ತೂರಿನ ಸ್ವಾತಂತ್ರದ ಕಿಚ್ಚನ್ನು ಈ ಸಿನಿಮಾ ಬಿತ್ತರಿಸಿತ್ತು. ಭಾರತದ ಪ್ರಥಮ ಸ್ವಾತಂತ್ಯ ಸಂಗ್ರಾಮ, ಆಂಧ್ರದಲ್ಲಿ ಸೈರಾ ನರಸಿಂಹ ರೆಡ್ಡಿ ಹೋರಾಟಕ್ಕೂ ಮೊದಲೇ ಬ್ರಿಟಿಷರ ವಿರುದ್ಧ ತೊಡೆತಟ್ಟಿದ ಸೇನಾನಿ ರಾಯಣ್ಣನ ಬದುಕನ್ನು ಚಿತ್ರ ಮನೋಘ್ನವಾಗಿ ಬಿತ್ತರಿಸಿತ್ತು. ದರ್ಶನ್ ಸಿನಿ ಕರಿಯರ್ ನಲ್ಲಿ ೩೦ ಕೋಟಿ ಬಂಡವಾಳ ಹೂಡಿದ ಮೊದಲ ಸಿನಿಮಾ ಇದು. ದರ್ಶನ್ ರಾಯಣ್ಣಬಾಗಿ ಮಿಂಚಿದ್ದ ಈ ಸಿನಿಮಾ ಬಾಕ್ಸಾಫೀಸಿನಲ್ಲಿ 50 ಕೋಟಿಗೂ ಅಧಿಕ ಗಳಿಸಿತ್ತು.  

    ಜಗ್ಗುದಾದಾ

    ಜಗ್ಗುದಾದಾ

    4

    ರಾಘವೇಂದ್ರ ಹೆಗಡೆ ನಿರ್ದೇಶಿಸಿ, ನಿರ್ಮಿಸಿದ್ದ 'ಜಗ್ಗುದಾದಾ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ದೀಕ್ಷಾ ಸೇಠ್ ನಾಯಕಿಯಾಗಿ ನಟಿಸಿದ್ದರು. ರಚಿತಾ ರಾಮ್, ಪ್ರಣೀತಾ ಸುಭಾಷ್ ಮತ್ತು ದೀಪಿಕಾ ಕಾಮಯ್ಯ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. 'ಜಗ್ಗುದಾದಾ' ಸಿನಿಮಾದ ಎರಡು ಹಾಡುಗಳನ್ನು ಇಟಲಿಯಲ್ಲಿ ಚಿತ್ರಿಕರಿಸಲಾಗಿತ್ತು. ತನ್ನ ತಾತನ ಅಸೆಯಂತೆ ಒಂದು ಒಳ್ಳೆಯ ಹುಡುಗಿಯನ್ನು ಮದುವೆಯಾಗಲು ಖ್ಯಾತಿ ಡಾನ್ ಜಗ್ಗು ದಾದಾ ಬೇರೆ ಹೆಸರಿನಿಂದ ತನ್ನ ಗೆಳೆಯರ ಜೊತೆ ಮುಂಬೈ ಸೇರುತ್ತಾನೆ. ಅಲ್ಲಿ ಒಬ್ಬ ಮ್ಯಾರೇಜ್ ಬ್ಯೂರೋ ಯುವತಿ ಗೌರಿ ಸಹಾಯದಿಂದ ವಧು ಅನ್ವೇಷಣೆಯಲ್ಲಿ ತೊಡುಗುತ್ತಾನೆ. ಬೇರೆ ಬೇರೆ ಹುಡುಗಿಯರನ್ನು ನೋಡುವ ಜಗ್ಗು ದಾದಾ ಕೊನೆಗೆ ಮ್ಯಾರೇಜ್ ಬ್ಯೂರೋ ಗೌರಿ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅವನ ನಿಜ ಹಿನ್ನಲೆ ಗೊತ್ತಾದಾಗ, ಗೌರಿ ಹೇಗೆ ಪ್ರತಿಕ್ರಿಯಿಸುತ್ತಾಳೆ ಮತ್ತು ಮುಂಬೈನಲ್ಲಿ ಅವನು ಎದುರಿಸುವ ಸವಾಲುಗಳೇನು ಎಂಬುದು ಚಿತ್ರದ ಕಥೆ. ಈ ಸಿನಿಮಾವನ್ನು 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಬಾಕ್ಸಾಫೀಸ್ ನಲ್ಲಿ 35 ಕೋಟಿ ರೂ. ಗಳಿಕೆ ಕಂಡಿತ್ತು.  

    ಸಾರಥಿ

    ಸಾರಥಿ

    5

    ಸಾರಥಿ ಸಿನಿಮಾದಲ್ಲಿ ದರ್ಶನ್ ಆಟೋ ಚಾಲಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ರಾಜ ಅನ್ನೋ ಪಾತ್ರದಲ್ಲಿ ಮಿಂಚಿದ್ದರು.  ಚಿತ್ರದ ಪಂಚಿಂಗ್ ಡೈಲಾಗ್ಸ್, ಲವ್ ಸ್ಟೋರಿ, ಫ್ಲ್ಯಾಶ್ ಬ್ಯಾಕ್ ಕಥೆ ಎಲ್ಲವೂ ಸಿನಿಪ್ರಿಯರಿಗೆ ಇಷ್ಟವಾಗಿತ್ತು. ಈ ಸಿನಿಮಾದ ನಾಯಕಿಯಾಗಿ ದೀಪಾ ಸನ್ನಿಧಿ ನಟಿಸಿದ್ದರು. ಇದು ಅವರ ಮೊದಲ ಸಿನಿಮಾವಾಗಿದ್ದು, ಮೊದಲ ಸಿನಿಮಾದಲ್ಲೇ ದೊಡ್ಡ ಸಕ್ಸಸ್ ಕಂಡಿದ್ದರು. 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ 12 ಕೋಟಿ ರೂ. ಗಳಿಕೆ ಕಂಡಿತ್ತು.   

    ಬುಲ್ ಬುಲ್

    ಬುಲ್ ಬುಲ್

    6

    ದರ್ಶನ್ ತಮ್ಮದೇ ಬ್ಯಾನರ್ ಅಡಿಯಲ್ಲಿ 15 ಕೋಟಿ ಬಜೆಟ್ ಖರ್ಚು ಮಾಡಿ 'ಬುಲ್ ಬುಲ್' ಸಿನಿಮಾವನ್ನು ಮಾಡಿದ್ದರು. ಸಿನಿಮಾದಲ್ಲಿ ದರ್ಶನ್ ಮತ್ತು ರಚಿತಾ ರಾಮ್ ಕಾಂಬಿನೇಷನ್ ಸಖತ್ ಆಗಿ ಮೂಡಿಬಂದಿದ್ದು, ಸಿನಿಮಾ ಸೂಪರ್ ಹಿಟ್ ಆಗಿತ್ತು. ರಚಿತಾ ರಾಮ್ ಅವರ ಅಭಿನಯದ ಮೊದಲ ಸಿನಿಮಾ ಇದು. ಮಾಸ್ ಹೀರೋ ಅನ್ನಿಸಿಕೊಂಡಿದ್ದ ದರ್ಶನ್ ಇಲ್ಲಿ ಲವರ್ ಬಾಯ್ ಪಾತ್ರದಲ್ಲಿ ಮಿಂಚಿದ್ದಾರೆ. ಕಾಮಿಡಿ ಸನ್ನಿವೇಶಗಳನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಉದ್ದೇಶದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದ್ದು, ಕಾಮಿಡಿ, ಭರ್ಜರಿ ಫೈಟ್ಸ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್, ತಂದೆ-ಮಗನ ಅನುಬಂಧವಿತ್ತು. ಈ ಸಿನಿಮಾ 25 ಕೋಟಿ ಗಳಿಕೆ ಕಂಡಿತ್ತು.   

    ತಾರಕ್

    ತಾರಕ್

    7

    ದರ್ಶನ್ ತಮ್ಮ ರೆಗ್ಯೂಲರ್ ಸಿನಿಮಾಗಳಿಂದ ಹೊರಬಂದು 'ತಾರಕ್' ಸಿನಿಮಾ ಮಾಡಿದ್ದರು. ಇದೊಂದು ಕಂಪ್ಲೀಟ್ ಫ್ಯಾಮಿಲಿ ಸಿನಿಮಾ. ಮಾಸ್ ಡೈಲಾಗ್ಸ್, ಬಿಲ್ಡಪ್ ಫೈಟ್ಸ್, ಐಟಂ ಸಾಂಗ್ ಏನೂ ಈ ಚಿತ್ರದಲ್ಲಿರಲಿಲ್ಲ. ಈ ಸಿನಿಮಾದಲ್ಲಿ ಕಾರಣಾಂತರಗಳಿಂದ ದೂರವಿರುವ ತಾತ-ಮೊಮ್ಮಗನ ಕಥೆಯಿತ್ತು. ವಿದೇಶದಲ್ಲಿರುವ ಮೊಮ್ಮಗನ ಆಗಮನಕ್ಕಾಗಿ ಹಂಬಲಿಸುತ್ತಿರುವ ತಾತ, ತಾತ ಮೊಮ್ಮಗನ ಜುಗಲ್ ಬಂದಿಯ ಜೊತೆ ಮುದ್ದಾದ ಪ್ರೇಮಕಥೆ ಕೂಡ ಇತ್ತು. ಈ ಚಿತ್ರದಲ್ಲಿ ದರ್ಶನ್ ಲವರ್ ಬಾಯ್ ಆಗಿ, ಜವಾಬ್ದಾರಿಯುತ ಯುವಕನಾಗಿ, ಒಬ್ಬ ಯಶಸ್ವಿ ಬಿಸ್ ನೆಸ್ ಮ್ಯಾನ್ ಆಗಿ ಅಚ್ಚುಕಟ್ಟಾಗಿ ಅಭಿನಯಿಸಿದ್ದರು. 15 ಕೋಟಿ ವವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ 30 ಗಳಿಸಿತ್ತು.   

    ರಾಬರ್ಟ್

    ರಾಬರ್ಟ್

    8

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 53ನೇ ಚಿತ್ರವಾದ ರಾಬರ್ಟ್ ಅನ್ನು ಅಂದಾಜು 50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈ ಸಿನಿಮಾವನ್ನು ನಿರ್ದೇಶಕ ತರುಣ್ ಸುಧೀರ್ ನಿರ್ದೇಶಿಸಿದ್ದು, ಹೆಬ್ಬುಲಿ ಉಮಾಪತಿ ಶ್ರೀನಿವಾಸ ಚಿತ್ರಕ್ಕೆ ಬಂಡವಾಳ ಹೂಡಿದ್ದರು.  ಕೆಜಿಎಫ್ ಖ್ಯಾತಿ ಚಂದ್ರಮೌಳಿ ಮತ್ತು ಅಮ್ಮಾ ಐ ಲವ್ ಯು ಖ್ಯಾತಿ ರಾಜಶೇಖರ್ ಈ ಚಿತ್ರಕ್ಕೆ ಡೈಲಾಗ್ ಬರೆದಿದ್ದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 102 ಕೋಟಿ ಗಳಿಸಿತ್ತು. 

     

    ಚಕ್ರವರ್ತಿ

    ಚಕ್ರವರ್ತಿ

    9

    ಚಕ್ರವರ್ತಿ ಸಿನಿಮಾದಲ್ಲಿ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಅದ್ಭುತವಾಗಿತ್ತು. ಗಂಭೀರ ಮುಖಭಾವ, ನಡೆಯುವ ಸ್ಟೈಲ್, ಕಿಲ್ಲಿಂಗ್ ಸ್ಮೈಲ್, ಸೂಪರ್ ಸ್ಟಂಟ್ಸ್ ಎಲ್ಲದರಲ್ಲೂ ದಚ್ಚು ಬೆಸ್ಟ್ ಎನ್ನುವಂತಿತ್ತು. ಈ ಚಿತ್ರದಲ್ಲಿ ದರ್ಶನ್ ಮೂರು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದರು. ಭೂಗತ ಲೋಕದ ಕಥೆಗಳನ್ನ ಅನೇಕ ಸಿನಿಮಾಗಳಲ್ಲಿ ನೋಡಿದ್ದ ಜನರಿಗೆ 'ಚಕ್ರವರ್ತಿ' ಚಿತ್ರ ಅಂಡರ್ ವರ್ಲ್ಡ್ ಸ್ಟೋರಿ ಜೊತೆಗೆ ದೇಶಪ್ರೇಮ ಕೂಡ ತೋರಿಸಿತ್ತು. ಈ ಸಿನಿಮಾ 30 ಕೋಟಿ ಗಳಿಸಿತ್ತು. 

    ಒಡೆಯ

    ಒಡೆಯ

    10

    ದರ್ಶನ್ ನಟನೆಯ 'ಒಡೆಯ' ಮಾಸ್ ಹಾಗೂ ಕ್ಲಾಸ್ ಸಿನಿಮಾ. ಇದು 'ವೀರಂ' ಸಿನಿಮಾ ರಿಮೇಕ್ ಆಗಿದ್ದು, ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್ ಆಗಿತ್ತು. ದರ್ಶನ್ ಈ ಚಿತ್ರದಲ್ಲಿ ಪ್ರೀತಿಯ ಅಣ್ಣನಾಗಿ, ರೌಡಿಗಳಿಗೆ ಸಿಂಹಸ್ವಪ್ನನಾಗಿ ಈ ಎರಡು ಶೇಡ್ ಅಭಿನಯಿಸಿದ್ದರು. 15 ಕೋಟಿ ಬಂಡವಾಳದಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ 26 ಕೋಟಿ ಗಳಿಸಿತ್ತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X