twitter
    X
    Home ಚಲನಚಿತ್ರಗಳ ಒಳನೋಟ

    ಕೋಕಿಲ TO ರಾಮ ಶಾಮ ಭಾಮ: ಕಮಲ್ ಹಾಸನ್ ಅಭಿನಯದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

    Author Sowmya Bairappa | Updated: Tuesday, November 7, 2023, 10:31 AM [IST]

    ಕಮಲ್ ಹಾಸನ್ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. ತಮಿಳು ನಟರಾದರೂ ಕೂಡ ತೆಲುಗು, ಹಿಂದಿ, ಮಲಯಾಳಂ, ಕನ್ನಡ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟ, ನಿರ್ದೇಶಕ, ಗಾಯಕ, ನಿರ್ಮಾಪಕ, ಗೀತ ಸಾಹಿತಿ, ಚಿತ್ರಕಥೆ, ಸಂಭಾಷಣೆ, ನೃತ್ಯ ಸಂಯೋಜಕೆ ಹೀಗೆ ಹಲವಾರು ಪ್ರಕಾರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಕಮಲ್‌ ಹಾಸನ್‌ ಚಂದನವನ ಪ್ರವೇಶಿಸಿದ್ದು 1977ರಲ್ಲಿ ತೆರೆಕಂಡ 'ಕೋಕಿಲ' ಚಿತ್ರದ ಮೂಲಕ. ಅದು ಸೇರಿ ಒಟ್ಟು ಐದು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆ ಎಲ್ಲ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

    cover image
    ಕೋಕಿಲ

    ಕೋಕಿಲ

    1

    'ಕೋಕಿಲ' ಕಮಲ್ ಹಾಸನ್ ನಟನೆಯ ಮೊದಲ ಕನ್ನಡ ಸಿನಿಮಾ. ಬಾಲು ಮಹೇಂದ್ರ ನಿರ್ದೇಶನದ ಈ ಚಿತ್ರ 1977ರಲ್ಲಿ ತೆರೆಕಂಡಿತು. 'ಕೋಕಿಲ' ಚಿತ್ರದಲ್ಲಿ ಕಮಲ್‌ ವಿಜಯ್‌ಕುಮಾರ್ ಅನ್ನೋ ಪಾತ್ರ ನಿರ್ವಹಿಸಿದ್ದರು. ಕಮಲ್ ಅವರಿಗೆ ಜೋಡಿಯಾಗಿ ಶೋಭಾ ನಟಿಸಿದ್ದರು. ಈ ಚಿತ್ರದಲ್ಲಿ ಅಭಿನಯಿಸಬೇಕಾದರೆ ಕಮಲ್ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಆದರೂ ಅವರೇ ಡಬ್ ಮಾಡಿರುವುದು ವಿಶೇಷ. ಇದೇ ಚಿತ್ರ ಮಲಯಾಳಂ ಭಾಷೆಗೆ 'ಊಮ ಕುಯಿಲ್‌' ಎಂದು ರಿಮೇಕ್‌ ಆದರೆ, ಹಿಂದಿಗೆ 'ಔರ್ ಏಕ್‌ ಪ್ರೇಮ್‌ ಕಹಾನಿ' ಹೆಸರಿನಲ್ಲಿ ರಿಮೇಕ್ ಆಗಿತ್ತು. ನಟ ರಮೇಶ್‌ ಅರವಿಂದ್ ಹಿಂದಿ ರಿಮೇಕ್‌ನಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದು ವಿಶೇಷ.  ವಿಶೇಷವೆಂದರೆ, ಈ ಸಿನಿಮಾಗೆ ಅತ್ಯುತ್ತಮ ಛಾಯಾಗ್ರಹಣ ರಾಷ್ಟ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಚಿತ್ರಕಥೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. 

    ತಪ್ಪಿದ ತಾಳ

    ತಪ್ಪಿದ ತಾಳ

    2

    ಕಮಲ್‌ ಹಾಸನ್‌ ವೃತ್ತಿ ಜೀವನದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ ಕೀರ್ತಿ ನಿರ್ದೇಶಕ ಕೆ. ಬಾಲಚಂದರ್‌ ಅವರದ್ದು. ಕಮಲ್‌ ರೀತಿಯೇ ರಜನಿಕಾಂತ್ ಅವರಿಗೂ ಸಹ. ಬಾಲಚಂದರ್ ಕನ್ನಡ-ತಮಿಳಿನಲ್ಲಿ ಏಕಕಾಲಕ್ಕೆ 'ತಪ್ಪಿದ ತಾಳ' ಸಿನಿಮಾ ಮಾಡಿದ್ದರು. ಇದರಲ್ಲಿ ರಜನಿಕಾಂತ್‌ ಹೀರೋ, ಸರಿತಾ ನಾಯಕಿಯಾಗಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅಮ್ರಿತ್ ಲಾಲ್‌ ಅನ್ನೋ ಸಣ್ಣ ಪಾತ್ರವೊಂದಕ್ಕೆ ಕಮಲ್ ಬಣ್ಣ ಹಚ್ಚಿದ್ದರು. ಆ ಪಾತ್ರಕ್ಕೆ ಅವರೇ ಡಬ್‌ ಮಾಡಿರುವುದು ವಿಶೇಷ. 70ರ ದಶಕದಲ್ಲಿ ಕಮಲ್‌ ಸ್ಟಾರ್ ನಟ. ಹೀಗಿದ್ದರೂ ಈ ಸಿನಿಮಾದಲ್ಲಿ ಸಣ್ಣ ಪಾತ್ರವೊಂದನ್ನು ನಿಭಾಯಿಸಿದ್ದು ವಿಶೇಷ. 

     

    ಮರಿಯಾ ಮೈ ಡಾರ್ಲಿಂಗ್

    ಮರಿಯಾ ಮೈ ಡಾರ್ಲಿಂಗ್

    3

    1980ರಲ್ಲಿ ತೆರೆಕಂಡ ಮತ್ತೊಂದು ದ್ವಿಭಾಷಾ ಚಿತ್ರ 'ಮರಿಯಾ ಮೈ ಡಾರ್ಲಿಂಗ್'. ದುರೈ ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ಗೆ ಜೋಡಿಯಾಗಿ ಶ್ರೀಪ್ರಿಯಾ ನಟಿಸಿದ್ದರು. ಅವರಿಗಿಲ್ಲಿ ದ್ವಿಪಾತ್ರ ಅನ್ನೋದು ವಿಶೇಷ. ಅಲ್ಲದೆ, ಈ ಚಿತ್ರದ ಟೈಟಲ್ ಸಾಂಗ್ ಸಾಕಷ್ಟು ಜನಪ್ರಿಯಗೊಂಡಿತ್ತು. ಇದರ ಕನ್ನಡ ವರ್ಷನ್‌ನಲ್ಲಿ ಬಾಲಕೃಷ್ಣ, ವಜ್ರಮುನಿ, ಎಂ.ಪಿ. ಶಂಕರ್, ಶಿವರಾಮ್ ಮುಂತಾದವರು ನಟಿಸಿದ್ದರು. ದುರೈ ನಿರ್ದೇಶನದ ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ಸಂಯೋಜಿಸಿದ್ದರು.  

    ಬೆಂಕಿಯಲ್ಲಿ ಅರಳಿದ ಹೂವು

    ಬೆಂಕಿಯಲ್ಲಿ ಅರಳಿದ ಹೂವು

    4

    ಸುಹಾಸಿನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ  'ಬೆಂಕಿಯಲ್ಲಿ ಅರಳಿದ ಹೂವು' ಚಿತ್ರವನ್ನು  ಕೆ. ಬಾಲಚಂದರ್ ನಿರ್ದೇಶನ ಮಾಡಿದ್ದರು. ಚಂದುಲಾಲ್ ಜೈನ್ ನಿರ್ಮಿಸಿದ್ದರು. 
    ಈ ಚಿತ್ರದಲ್ಲಿ ಬಸ್‌ ಕಂಡಕ್ಟರ್ ಪಾತ್ರವೊಂದನ್ನು ಕಮಲ್ ನಿಭಾಯಿಸಿದ್ದರು. ಜೊತೆಗೆ 'ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ..' ಎಂಬ ಹಾಡು ಕಮಲ್‌ಗೆ ಇತ್ತು. ಈ ಹಾಡು ಈಗಲೂ ಜನಪ್ರಿಯ. ಇದೇ ಚಿತ್ರದ ಮತ್ತೊಂದು ಜನಪ್ರಿಯ ಗೀತೆ ತಾಳಿ ಕಟ್ಟುವ ಶುಭವೇಳೆ. ಈ ಸಿನಿಮಾ ತಮಿಳಿನಲ್ಲಿ ಬಾಲಚಂದರ್ ಅವರೇ ನಿರ್ದೇಶಿಸಿದ್ದ 'ಅವಳ್‌ ಓರು ತೋಡರ್ ಕಥೈ' ಚಿತ್ರದ ರಿಮೇಕ್ ಆಗಿತ್ತು.

     

    ರಾಮ ಶಾಮ ಭಾಮ

    ರಾಮ ಶಾಮ ಭಾಮ

    5

    ಬೆಂಕಿಯಲ್ಲಿ ಅರಳಿದ ಹೂವು ಚಿತ್ರದ ನಂತರ ನಟ ಕಮಲ್ ಹಾಸನ್ ಕನ್ನಡ ಸಿನಿಮಾರಂಗದಿಂದ ದೂರ ಉಳಿದಿದ್ದರು. 22 ವರ್ಷಗಳ ಬಳಿಕ ಅವರು 'ರಾಮ ಶಾಮ ಭಾಮ' ಚಿತ್ರದ ಮೂಲಕ ಕನ್ನಡಕ್ಕೆ ಮರಳಿದರು. ರಮೇಶ್‌ ಅರವಿಂದ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ನಟಿ ಶ್ರುತಿಗೆ ಜೋಡಿಯಾಗಿ ಕಮಲ್ ನಟಿಸಿದ್ದರು. ಸಖತ್ ಹಾಸ್ಯಮಯವಾಗಿದ್ದ ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ತಮಿಳಿನ ಸತಿ ಲೀಲಾವತಿ ಚಿತ್ರದ ರೀಮೇಕ್. ಗುರುಕಿರಣ್ ಸಂಗೀತವಿರುವ ಚಿತ್ರದ ಪಾತ್ರವರ್ಗದಲ್ಲಿ ಶ್ರುತಿ, ಡೈಸಿ ಬೋಪಣ್ಣ, ಊರ್ವಶಿ, ಅನಿರುದ್ಧ್ ಅಭಿನಯಿಸಿದ್ದರು. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X