ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾದ ಕನ್ನಡದ ನಟ-ನಟಿಯರಿವರು

  ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾರೆ. ಮದುವೆ ಎಂದರೆ ಸಂಭ್ರಮ. ಎರಡು ಮನೆಗಳ ಮನಗಳ ಬೆಸುಗೆ. ಮೂರು ಗಂಟಿನ ಬಂಧ, ಅನುಬಂಧ. ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ. ಐದು ಪಂಚಭೂತಗಳ ಸಾಕ್ಷಿ. ಆರು ರುಚಿಯ ಭೋಜನ, ಏಳು ಹೆಜ್ಜೆಗಳನ್ನು ಏಳೇಳು ಜನ್ಮಗಳಿಗೆ ಹಾಕುವುದು ಎಂದು ಅರ್ಥ.  ಮದುವೆ ಎಂಬುದು ವೈಯಕ್ತಿಕ ವಿಷಯವಾಗಿದ್ದು, ಎಲ್ಲರಿಗೂ ತಮ್ಮ ಸಂಗಾತಿಯ ಆಯ್ಕೆ ವಿಚಾರದಲ್ಲಿ ಸಂಪೂರ್ಣ ಸ್ವತಂತ್ರವಿರುತ್ತದೆ. ಕೆಲವೊಮ್ಮೆ ಕುಟುಂಬಸ್ಥರೇ ನೋಡಿ ಮದುವೆ ಮಾಡಿದ್ದರೂ ಕಾರಾಣಾಂತರಗಳಿಂದ ಆ ಮದುವೆ ಮುರಿದು ಬೀಳುತ್ತದೆ. ಇನ್ನು ಕೆಲವೊಮ್ಮೆ ಪ್ರೀತಿಸಿ ಮದುವೆಯಾದ ಜೋಡಿಗಳು ಕೂಡ ಮುರಿದು ಬೀಳುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಚಿತ್ರರಂಗದಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಒಬ್ಬರ ನಂತರ ಒಬ್ಬ ಸೆಲೆಬ್ರಿಟಿ ವಿಚ್ಛೇದನ ಪಡೆಯುತ್ತಿರುವ ವಿಚಾರ ಹೊರಬಂದು, ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇನ್ನೂ ಕೆಲವು ನಟ-ನಟಿಯರು ತಮ್ಮ ಜೀವನದಲ್ಲಿ ನಡೆದಂತಹ ಕಹಿ ಘಟನೆಗಳನ್ನೆಲ್ಲಾ ಮರೆತು ಬೇರೆ ಮದುವೆಯಾಗಿ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಹೀಗೆ ಕಾರಣಾಂತರಗಳಿಂದ ಒಂದಕ್ಕಿಂತ ಹೆಚ್ಚು ಮದುವೆಯಾದ ಕನ್ನಡದ ನಟ-ನಟಿಯರ ಮಾಹಿತಿ ಇಲ್ಲಿದೆ.

  ಕನ್ನಡ ಖ್ಯಾತ ನಟಿ ಅನು ಪ್ರಭಾಕರ್ 1999ರಲ್ಲಿ ಹೃದಯ ಹೃದಯ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆನಂತರ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. 2002ರಲ್ಲಿ ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ವರಿಸಿದ್ದ ಅನು ಪ್ರಭಾಕರ್, 2014ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು. ನಂತರ 2016ರಲ್ಲಿ ನಟ ಕಮ್ ಮಾಡೆಲ್ ರಘು ಮುಖರ್ಜಿ ಅವರನ್ನು ಮದುವೆಯಾದರು. ನಟಿ ಅನು ಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ, ನಟ ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆ. ಸದ್ಯ ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ. 

  ದುನಿಯಾ ವಿಜಯ್ 1999ರಲ್ಲಿ ನಾಗರತ್ನ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಈ ದಂಪತಿ ಹಲವು ಭಿನ್ನಾಭಿಪ್ರಾಯಗಳ ನಂತರ ಅವರು 2016ರಲ್ಲಿ ವಿಚ್ಛೇದನ ಪಡೆದರು. ಕೆಲವು ವರ್ಷದ ಹಿಂದೆ ನಟಿಯೊಬ್ಬರ ಹೆಸರಲ್ಲಿ ನಾಗರತ್ನ ಮತ್ತು ವಿಜಯ್ ಮಧ್ಯೆ ವಿರಸ ತೀವ್ರಗೊಂಡು ಪೊಲೀಸ್ ಠಾಣೆ, ಕೋರ್ಟ್‌ವರೆಗೂ ತಲುಪಿತ್ತು. ನಂತರ 2016ರಲ್ಲೇ ದುನಿಯಾ ವಿಜಯ್ ಕೀರ್ತಿಯವರನ್ನು ಎರಡನೇ ಮದುವೆಯಾದರು. ಈ ದಂಪತಿಗೆ ಒಂದು ಮಗುವಿದೆ.  

  ನಟಿ ಸುಧಾರಾಣಿ ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ನಟನೆ ಬಿಟ್ಟು 1996ರಲ್ಲಿ ಮದುವೆಯಾಗಿ ಅಮೇರಿಕಾ ಸೇರಿದರು. ಆದರೆ, ನಟಿ ಸುಧಾರಾಣಿಗೆ ದಾಂಪತ್ಯದ ಸುಖ ಸಿಗಲೇ ಇಲ್ಲ. ಬದಲಾಗಿ ಪತಿ ಡಾ.ಸಂಜಯ್ ಅವರಿಂದ ಪ್ರಾಣ ಬೆದರಿಕೆ ಇತ್ತು. 1998ರಲ್ಲಿ ಅಮೇರಿಕಾದಲ್ಲಿ ಚಿತ್ರಹಿಂಸೆ ನೀಡಿದ ಡಾ.ಸಂಜಯ್ ಗೆ ವಿಚ್ಛೇದನ ನೀಡಿದ ನಟಿ ಸುಧಾರಾಣಿ, ಭಾರತಕ್ಕೆ ಮರಳಿದ ಮೇಲೆ ಹೊಸ ಜೀವನ ಆರಂಭಿಸಿದರು. ತಮ್ಮ ಕುಟುಂಬಕ್ಕೆ ತೀರಾ ಆಪ್ತರಾಗಿದ್ದ, ತಮಗೆ ಮಾನಸಿಕ ಸ್ಥೈರ್ಯ ತುಂಬಿದ್ದ ಗೋವರ್ಧನ್ ಎಂಬುವರರನ್ನ ಮದುವೆ ಆದರು. ಇವರಿಗೆ ನಿಧಿ ಎಂಬ ಮುದ್ದಾದ ಮಗಳಿದ್ದಾಳೆ.

   

  ಮನಮಿಡಿಯುವ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟಿ ಶ್ರುತಿ ಮೊದಲು ಚಿತ್ರ ನಿರ್ದೇಶಕ ಮಹೇಂದರ್ ಅವರನ್ನು ಮದುವೆಯಾಗಿದ್ದರು. ಅವರೊಂದಿಗೆ 12 ವರ್ಷ ದಾಂಪತ್ಯ ಜೀವನ ನಡೆಸಿ, ಕಾರಣಾಂತರಗಳಿಂದ ಪರಸ್ಪರ ದೂರವಾದರು. ಈ ದಂಪತಿಗೆ ಒಬ್ಬಳು ಮಗಳಿದ್ದಾಳೆ.  ನಂತರ 2013ರಲ್ಲಿ ಹೊಳೆನರಸೀಪುರದ ಚಂದ್ರಚೂಡ ಚಕ್ರವರ್ತಿ ಅವರನ್ನು ಮದುವೆಯಾಗಿದ್ದರು. 

  Complete: Shruti Biography

  ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ ಆಳಿದ ನಟಿ ರಾಧಿಕಾ ಕುಮಾರಸ್ವಾಮಿ. ಆಟೋಶಂಕರ್​, ಹಠವಾದಿ, ನಿನಗಾಗಿ, ತವರಿಗೆ ಬಾ ತಂಗಿ ಸಿನಿಮಾಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದರು. ಎಲ್ಲರ ಮನಸ್ಸು ಗೆದ್ದಿದ್ದರು. ರಾಧಿಕಾ ಅವರು 14 ವರ್ಷ ಇದ್ದಾಗಲೇ ರತನ್ ಕುಮಾರ್ ಎಂಬುವವರ ಜೊತೆ ಮದುವೆಯಾಗಿತ್ತು. ಆದರೆ, 2002ರಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ನಂತರ 2006ರಲ್ಲಿ ರಾಧಿಕಾ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮದುವೆಯಾದರು. ಈ ದಂಪತಿಗೆ ಶಮಿಕಾ ಎಂಬ ಮಗಳಿದ್ದಾರೆ. 

   

  ಪೋಷಕನಟ, ಖಳ ನಾಯಕ, ನಾಯಕ ನಟ, ಛಾಯಾಗ್ರಾಹಕ, ನಿರ್ಮಾಪಕ, ನಿರ್ದೇಶಕರಾಗಿಯೂ ಚಿತ್ರರಂಗಕ್ಕೆ ಟೈಗರ್ ಪ್ರಭಾಕರ್ ನೀಡಿದ ಕೊಡುಗೆ ದೊಡ್ಡದು. ಸುಮಾರು 450 ಚಿತ್ರಗಳಲ್ಲಿ ನಟಿಸಿದ್ದ ಪ್ರಭಾಕರ್ ಅವರಿಗೆ 'ಪ್ರಚಂಡ ನಟ', 'ಸಾಹಸ ಚಕ್ರವರ್ತಿ' ಎಂಬ ಬಿರುದು ಸಿಕ್ಕಿದೆ. ಆದರೆ ಪ್ರೇಕ್ಷಕರು ಮಾತ್ರ 'ಟೈಗರ್' ಎಂಬ ಹೆಸರಿನಿಂದಲೇ ಪ್ರೀತಿಯಿಂದ ಅವರನ್ನು ಕರೆಯುತ್ತಾರೆ. ಟೈಗರ್ ಪ್ರಭಾಕರ್ ಮೂರು ಬಾರಿ ವಿವಾಹವಾಗಿದ್ದರು. ಇವರ ಮೊದಲ ಪತ್ನಿ ಅಲ್ಫೊನ್ಜಾ ಮೇರಿ. ಇವರಿಗೆ ಗೀತಾ, ಭಾರತಿ ಎಂಬ ಇಬ್ಬರು ಹೆಣ್ಣು ಮಕ್ಕಳು ಹಾಗೂ ವಿನೋದ್ ಪ್ರಭಾಕರ್ ಎಂಬ ಮಕ್ಕಳಿದ್ದಾರೆ. ನಂತರ ಅವರು ಅಲ್ಫೋಜಾ ಮೇರಿ ಅವರಿಗೆ ವಿಚ್ಛೇದನ ನೀಡಿ, ನಟಿ ಜಯಮಾಲಾ ಅವರನ್ನು ವಿವಾಹವಾದರು. ಟೈಗರ್ ಮತ್ತು ಜಯಮಾಲಾ ದಂಪತಿಗೆ ಸೌಂದರ್ಯ ಎಂಬ ಮಗಳಿದ್ದಾಳೆ. ಪ್ರಭಾಕರ್ ಜಯಮಾಲಾ ಅವರಿಗೂ ವಿಚ್ಛೇದನ ನೀಡಿ, ನಟ ನಟಿ ಅಂಜು ಅವರೊಂದಿಗೆ ಮೂರನೇ ಬಾರಿಗೆ ವಿವಾಹವಾದರು. ಈ ದಂಪತಿಗೆ ಅರ್ಜುನ್ ಎಂಬ ಮಗನಿದ್ದಾನೆ. 


  ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು ಎಂದು ಗುರುತಿಸಿಕೊಂಡಿರುವ ನಿರ್ದೇಶಕ, ನಟ ಓಂಪ್ರಕಾಶ್,  ಮೊದಲು ರೇಖಾ ದಾಸ್ ಅವರನ್ನು ಮದುವೆಯಾಗಿದ್ದರು. ನಂತರ 2002ರಲ್ಲಿ ಭವ್ಯಾ ಪ್ರೇಮಯ್ಯ ಎಂಬುವವರನ್ನು ವಿವಾಹವಾದರು. ನಂತರ ಅವರಿಂದಲೂ ಬೇರೆಯಾಗಿ 2012ರಲ್ಲಿ ಡೆನಿಸ್ಸಾ ಎಂಬುವವರನ್ನು ವಿವಾಹವಾಗಿದ್ದಾರೆ.

   

  ಪ್ರಕಾಶ್ ರಾಜ್ ಜನಪ್ರಿಯ ನಟ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಿರೂಪಕ ಮತ್ತು ರಾಜಕಾರಣಿ. ಇವರನ್ನು ಬಹುಮುಖ ಪ್ರತಿಭೆ ಎಂದೇ ಕರೆಯಲಾಗುತ್ತದೆ. ಪ್ರಕಾಶ್ ರಾಜ್ ಅವರು ಯಾವುದೊ ಒಂದು ಚಿತ್ರರಂಗ ಅಲ್ಲ. ಭಾರತದ ಬಹುತೇಕ ಚಿತ್ರರಂಗಗಳಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್ 1994ರಲ್ಲಿ ಲಲಿತಾ ಕುಮಾರಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಇವರ ಪುತ್ರ ಸಿದ್ದು 5 ವರ್ಷದವನಿದ್ದಾಗ 2004ರಲ್ಲಿ ಫಾರ್ಮ್ ಹೌಸ್‌ ಕಟ್ಟಡದಿಂದ ಆಕಸ್ಮಿಕವಾಗಿ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಪುತ್ರ ನಿಧನ ಹೊಂದಿದ ಬಳಿಕ ಪ್ರಕಾಶ್ ರಾಜ್, ಮೊದಲ ಪತ್ನಿಯಿಂದ ದೂರಾದರು.  2010ರ ಆಗಸ್ಟ್ 24ರಂದು ನೃತ್ಯ ಸಂಯೋಜಕಿ ಪೋನಿ ವರ್ಮಾ ಅವರೊಂದಿಗೆ ವಿವಾಹವಾದರು. ಈ ದಂಪತಿಗೆ 2015ರಲ್ಲಿ ಗಂಡು ಮಗು ಜನಿಸಿದ್ದು, ಮಗನಿಗೆ ವೇದಾಂತ್ ಎಂದು ನಾಮಕರಣ ಮಾಡಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X