twitter
    X
    Home ಚಲನಚಿತ್ರಗಳ ಒಳನೋಟ

    Independence Day 2023: ಸ್ವಾತಂತ್ರ್ಯದ ಕುರಿತು ಮೈನವಿರೇಳಿಸುವ ಕನ್ನಡದ ಈ ದೇಶಭಕ್ತಿ ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!

    Author Administrator | Updated: Monday, August 14, 2023, 04:51 PM [IST]

    ಕನ್ನಡದಲ್ಲಿ ದೇಶಭಕ್ತಿ ಸಾರುವ ಹಲವಾರು ಚಿತ್ರಗಳು ತೆರೆಕಂಡಿವೆ, ಕೆಲವು ಚಿತ್ರಗಳು ತಮ್ಮ ಸೌಮ್ಯವಾದದಿಂದಲೇ ದೇಶಪ್ರೇಮದ ಬೋಧನೆ ಮಾಡಿದರೆ, ಕೆಲವು ಚಿತ್ರಗಳು ಪರಕೀಯರಿಂದ ನಮ್ಮ ದೇಶದ ಮೇಲೆ ಆಕ್ರಮಣವಾದಾಗ ಅದಕ್ಕೆ ಭಾರತೀಯರು ನೀಡಿದ ದಿಟ್ಟ ಪ್ರತಿಕ್ರಿಯೆ ಮೇಲೆ ಆದರಿಸಿವೆ. ಬ್ರಿಟಿಷ್ ಕಾಲದಲ್ಲಿ ಸ್ವಾತಂತ್ರಕ್ಕಾಗಿ ಹೋರಾಡಿದ ಘಟನೆಗಳಿಂದ ಹಿಡಿದು ಸ್ವಾತಂತ್ರಾನಂತರ ನೆಡೆದ ಯುದ್ಧಗಳ ಮೇಲೂ ಚಿತ್ರ ಬಂದಿವೆ.. ಹಾಗೆಂದ ಮಾತ್ರಕ್ಕೆ ಕೇವಲ ಯುದ್ಧದ ಚಿತ್ರಗಳೇ ದೇಶಪ್ರೇಮಗಳ ಚಿತ್ರಗಳಾಗಬೇಕಿಂದಲ್ಲ, ನಮ್ಮ ದೇಶದ ಮಹೋನ್ನತಿಗೆ ಸಂದೇಶ ನೀಡುವ ಚಿತ್ರಗಳು ದೇಶಭಕ್ತಿಯ ಚಿತ್ರಗಳೇ. ಕೆಳಗೆ ಕೆಲವು ಆಯ್ಡು ಚಿತ್ರಗಳನ್ನು ನೀಡಲಾಗಿದೆ.

    cover image
    ಕಿತ್ತೂರು ಚೆನ್ನಮ್ಮ

    ಕಿತ್ತೂರು ಚೆನ್ನಮ್ಮ

    1

    ಬಿ.ಆರ್.ಪಂತಲು ನಿರ್ದೇಶನ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರದಲ್ಲಿ  ಬಿ.ಸರೋಜಾದೇವಿ, ಡಾ.ರಾಜಕುಮಾರ್ ಮತ್ತು ಎಂ.ವಿ.ರಾಜಮ್ಮ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಲೀಲಾವತಿ, ನರಸಿಂಹರಾಜು, ಬಾಲಕೃಷ್ಣ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಬಂದಾಗ ದಿಟ್ಟವಾಗಿ ಎದುರಿಸಿದ ರಾಣಿ ಚೆನ್ನಮ್ಮನ ಕಥೆಯನ್ನು ಚಿತ್ರ ಹೇಳುತ್ತದೆ. ಬಿ.ಸರೋಜಾದೇವಿ ಚೆನ್ನಮ್ಮನ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರ 9 ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು.    

    ವೀರ ಸಿಂಧೂರ ಲಕ್ಷ್ಮಣ

    ವೀರ ಸಿಂಧೂರ ಲಕ್ಷ್ಮಣ

    2

    ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಬಸವರಾಜ್, ಕೆ,ಎಸ್.ಅಶ್ವಥ್, ಸುಧೀರ್, ವಜ್ರಮುನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಮಂಜುಳಾ, ಅನುರಾಧಾ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನೀಡಿದರು. ಈ ಚಿತ್ರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗ ಸಿಂದೂರಿನಲ್ಲಿ  ಜನಿಸಿದ ಸ್ವಾತಂತ್ರ ಹೋರಾಟಗಾರ ಲಕ್ಷ್ಮಣನ ಕಥೆ ಹೇಳುತ್ತದೆ. ತನ್ನದೇ ಒಂದು ತಂಡ ಕಟ್ಟಿಕೊಂಡು ಬ್ರಿಟಿಷ್ ಕಚೇರಿಗಳನ್ನು ಲೂಟಿ ಮಾಡಿ ಬಡವರಿಗೆ ಹಂಚುತ್ತಿದ್ದ. ಬ್ರಿಟಿಷರು ಹೊಂಚು ಹಾಕಿ ರಾತ್ರಿ ಊಟ ಮಾಡುವಾಗ ಮೋಸದಿಂದ ಕೊಂದರು. ಕೇವಲ 24 ನೆ ವಯಸ್ಸಿನಲ್ಲಿ ಮಡಿದ ಈ ಸ್ವಾತಂತ್ರ ಹೋರಾಟಗಾರನ ಕುರಿತು ಹಲವಾರು ನಾಟಕ ಮತ್ತು ಜಾನಪದ ಸಾಹಿತ್ಯಗಳು ಮೂಡಿಬಂದಿವೆ.

    ಮುತ್ತಿನ ಹಾರ

    ಮುತ್ತಿನ ಹಾರ

    3

    ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ  ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಜಯಮಾಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಾಮಕುಮಾರ್, ಪ್ರಕಾಶ್ ರಾಜ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಕೇವಲ ಹೋರಾಟವಲ್ಲದೇ, ಒಬ್ಬ ಸೈನಿಕನ ಕೌಟುಂಬಿಕ ಜೀವನದ ಮೇಲೆ ಕೂಡ ಚಿತ್ರ ಬೆಳಕು ಚೆಲ್ಲಿತು.ಈ ಚಿತ್ರದ ಸಂದರ್ಭದಲ್ಲಿ ಹೆಲಿಕಾಪ್ಟರ್ ನಿಂದ ಜಿಗಿಯುವಾಗ ವಿಷ್ಣುವರ್ಧನ್ ರವರಿಗೆ ಆಘಾತವಾಗಿತ್ತು. ಕೊಡಗಿನ ವೀರ ಸೈನಿಕ  ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಅವನ ಸುಂದರ ದಾಂಪತ್ಯದೊಂದಿಗೆ ಯುದ್ಧ ಹೇಗೆ ಅವನ ಕುಟುಂಬವನ್ನು ನಾಶ ಮಾಡುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಯುಧ್ಧದ ಇನ್ನೊಂದು ಮುಖವನ್ನು ತೆರೆದಿಟ್ಟ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆಯಿತು.

    ಮೈಸೂರ ಮಲ್ಲಿಗೆ

    ಮೈಸೂರ ಮಲ್ಲಿಗೆ

    4

    ಟಿ.ಎಸ್.ನಾಗಾಭರಣ ನಿರ್ದೇಶನದ ಈ ಚಿತ್ರದಲ್ಲಿ  ಗಿರೀಶ್ ಕಾರ್ನಾಡ್, ಮಂಜು ಮತ್ತು ಸುಧಾರಾಣಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಸುಂದರರಾಜ್, ದತ್ತಣ್ಣ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಸ್ಫೂರ್ತಿಯಿಂದಲೇ ಹಿಂದಿಯಲ್ಲಿ ಅನಿಲ್ ಕಪೂರ್ ನಾಯಕನಾಗಿ ನಟಿಸಿದ 1942: ಎ ಲವ್ ಸ್ಟೋರಿ ಚಿತ್ರ ನಿರ್ಮಾಣವಾಯಿತು. ಕೆ.ಎಸ್.ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಕೃತಿಯಲ್ಲಿನ ಗೀತೆಗಳ ಹಿನ್ನಲೆಯಲ್ಲಿ ಚಿತ್ರದ ಕಥೆ ಸಾಗುತ್ತದೆ. ಒಬ್ಬ ನವವಿವಾಹಿತ ಸಾಮಾನ್ಯ ಶಿಕ್ಷಕ ಸ್ವಾತಂತ್ರ ಹೋರಾಟಗಾರನಾಗುವ ಕತೆಯನ್ನು ಚಿತ್ರ ಹೊಂದಿದೆ.

    ತಾಯಿ ಸಾಹೇಬ

    ತಾಯಿ ಸಾಹೇಬ

    5

    ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರದಲ್ಲಿ  ಜಯಮಾಲಾ ಮುಖ್ಯ ಪಾತ್ರದಲ್ಲಿ ನಟಿಸುವದರೊಂದಿಗೆ ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಸುರೇಶ್ ಹುಬ್ಳಿಕರ್, ಶಿವರಾಮ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಂಗನಾಥ್ ಶ್ಯಾಮ ರಾವ್ ರವರು ಬರೆದಿರುವ ಇದೇ ಹೆಸರಿನ ಕಾದಂಬರಿ ಮೇಲೆ ಚಿತ್ರದ ಕತೆ ರೂಪುಗೊಂಡಿದೆ. ಅಪ್ಪಾ ಸಾಹೇಬ ಎಂಬ ಸ್ವಾತಂತ್ರ ಹೋರಾಟಗಾರ ಮತ್ತು ಅವನ ಎರಡನೇ ಹೆಂಡತಿ ನರ್ಮದಾ ತಾಯಿಯವರ ಜೀವನದ ಕತೆ ಚಿತ್ರ ಹೇಳುತ್ತದೆ. ಸ್ವಾತಂತ್ರ ಪೂರ್ವ ಕಾಲದಿಂದ ಹಿಡಿದು ನಂತರ ಬಂದ ಭೂ ಚಳುವಳಿವರೆಗೆ ಚಿತ್ರದ ಕತೆ ಸಾಗಿ ಬರುತ್ತದೆ.

    ವೀರಪ್ಪ ನಾಯಕ

    ವೀರಪ್ಪ ನಾಯಕ

    6

    ಎಸ್.ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ  ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಶೃತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹೇಮಾ ಚೌಧರಿ,  ಸುಧೀರ್, ಶೋಭರಾಜ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದರು. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಗಾಂಧಿವಾದಿ ನಾಯಕನ ಜೀವನವನ್ನು ಚಿತ್ರ ಹೇಳುತ್ತದೆ. ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗ್ರಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಟಟ ದೇಶಾಭಿಮಾನಿಯ ಕಥೆ ಈ ಚಿತ್ರದಲ್ಲಿದೆ.

    ಹಗಲುವೇಷ

    ಹಗಲುವೇಷ

    7

    ಬರಗೂರು ರಾಮಚಂದ್ರಪ್ಪ ನಿರ್ದೇಶನದ `ಹಗಲುವೇಷ' ಚಿತ್ರವು ಬ್ರಿಟಿಷ್ ಆಳ್ವಿಕೆ ವಿರುದ್ಧ ದಂಗೆಯೇಳುವ ಸ್ವಾತಂತ್ರ ಹೋರಾಟಗಾರನ ಕಥೆ ಹೊಂದಿದೆ. ಸೆಂಚುರಿ ಸ್ಟಾರ್ ಶಿವಣ್ಣ ಮುಖ್ಯಪಾತ್ರದಲ್ಲಿರುವ ಈ ಚಿತ್ರದಲ್ಲಿ ರೇ‍ಷ್ಮಾ,ತಾರಾ ನಾಸ್ಸರ್,ಜೈ ಜಗದೀಶ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ಉತ್ತಮ ಕಥೆ ಮತ್ತು ಸಾಹಿತ್ಯ ವಿಭಾಗದಲ್ಲಿ ಎರಡು ರಾಜ್ಯ ಪ್ರಶಸ್ತಿ ಪಡೆಯಿತು. ಗಾಂಧಿನಗರದ `ನರ್ತಕಿ' ಮುಖ್ಯ ಚಿತ್ರಮಂದಿರವಾಗಿತ್ತು.  

    ವಂದೇ ಮಾತರಂ

    ವಂದೇ ಮಾತರಂ

    8

    ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ  ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ವಿಜಯಶಾಂತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.ವಿನೋದ್ ರಾಜ್,  ರವಿತೇಜಾ, ಕುಮಾರ ಗೋವಿಂದ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು. ನವಪೀಳೀಗೆಯ ಯುವಕರನ್ನು ಹೇಗೆ ಬ್ರೇನ್ ವಾಷ್ ಮಾಡಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ ಎಂಬುದರ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ. ಅಂಬರೀಶ್ ಮತ್ತು ವಿಜಯಶಾಂತಿ ಖಾಕಿಯಲ್ಲಿ ಮಿಂಚಿದರು.

    ಸೈನಿಕ

    ಸೈನಿಕ

    9

    ಮಹೇಶ್ ಸುಖಧರೆ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ  ಸಿ.ಪಿ.ಯೋಗೇಶ್ವರ್ ಮತ್ತು ಸಾಕ್ಷಿ ಶಿವಾನಂದ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ದೇವ ಸಂಗೀತ ನೀಡಿದ್ದರು. ಆಗ ತಾನೇ ಮದುವೆಯಾದ ಸೈನಿಕನೊಬ್ಬ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಮಾರಣಾಂತಿಕವಾಗಿ ಗಾಯಗೊಳ್ಳುತ್ತಾನೆ. ನಂತರ ಅವನು ಮಡಿದನೆಂದು ತಿಳಿದು ಅವನ ಕುಟಂಬ ಅವನನ್ನು ಮರೆತಾಗ, ಬೇರೆಯದೇ ಮುಖಚರ್ಯೆಯಿಂದ ಬಂದ ಅವನ್ನು ಒಪ್ಪಲು ಅವನ ಕುಟುಂಬ ಕೂಡ ನಿರಾಕರಿಸುತ್ತದೆ.

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

    10

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ದರ್ಶನ್  ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಕಿತ ತುಕ್ರಲ್, ಜಯಪ್ರದ, ಉಮಾಶ್ರಿ, ಶ್ರೀನಿವಾಸ್ ಮೂರ್ತಿ, ಶಶಿಕುಮಾರ್, ಗಿರಿಜಾ ಲೋಕೇಶ್, ಅವಿನಾಶ್, ದೊಡ್ಡಣ್ಣ, ರಮೇಶ್ ಭಟ್, ಸೌರವ್, ಧರ್ಮ, ಎಂ.ಎನ್.ಲಕ್ಷ್ಮಿದೇವಿ, ಸಿ ಆರ್ ಸಿಂಹ, ಶೋಭಾ ರಾಜ್, ಕರಿ ಬಸವಯ್ಯ, ಬಿರಾದರ್, ಮೊದಲಾದವರ ತಾರಾ ಬಳಗವೇ ಚಿತ್ರದಲ್ಲಿದೆ. ನಾಗಣ್ಣ ಅವರ ನಿರ್ದೇಶನದಲ್ಲಿ ಮತ್ತು ಯಶೋವರ್ದನ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

    1944

    1944

    11

    ಈ ಚಿತ್ರ ಎನ್.ಎಸ್.ರಾವ್ ನಿರ್ದೇಶಿಸಿರುವ ರೊಟ್ಟಿ ಋಣ ನಾಟಕ ಆಧರಿಸಿದ ಈ ಚಿತ್ರ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನೆಡೆಯುವ ಸ್ವಾತಂತ್ರ ಹೋರಾಟದ ಕತೆಯನ್ನು ಹೇಳುತ್ತದೆ.  

    ಶಿಕಾರಿ

    ಶಿಕಾರಿ

    12

    ಅಭಯ್ ಸಿಂಹ ನಿರ್ದೇಶನದ ಕನ್ನಡ ಮತ್ತು ಮಲಯಾಳಂ `ಶಿಕಾರಿ' ದ್ವಿಭಾಷಾ ಚಿತ್ರದಲ್ಲಿ ಖ್ಯಾತ ಮಲಯಾಳಂ ನಟ ಮಮ್ಮೂಟಿ ಮತ್ತು ಪೂನಂ ಬಾಜ್ವಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಡೆಡ್ಲಿ ಆದಿತ್ಯ, ಶಂಕರ ಮೋಹನ್ ಇನ್ನಿತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಚಿತ್ರದಲ್ಲಿ ಮಮ್ಮೂಟಿ ಮತ್ತು ಪೂನಂ ಇಬ್ಬರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಪ್ರಸ್ತುತ ಕಾಲಘಟ್ಟದೊಂದಿಗೆ ಸಾಗುತ್ತಾ ಬ್ರಿಟಿಷ್ ಆಡಳಿತದ ಮೇಲೆ ಬೆಳಕು ಚೆಲ್ಲುತ್ತದೆ. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X