ತಮ್ಮ ಅದ್ಭುತ ಹಾಸ್ಯ ನಟನೆಯಿಂದ ಕನ್ನಡದಲ್ಲಿ ಕಾಮಿಡಿ ಕಿಂಗ್ ಎಂದೇ ಗುರುತಿಸಿಕೊಂಡಿರುವ ಸಾಧು ಕೋಕಿಲಾ ಬಹುಮುಖ ಪ್ರತಿಭೆ. ಸಂಗೀತ ನಿರ್ದೇಶಕನಾಗಿ ಸಿನಿಜರ್ನಿ ಆರಂಭಿಸಿದರೂ, ನಟನಾಗಿ ನಿರ್ವಹಿಸಿದ ಹಾಸ್ಯ ಪಾತ್ರಗಳು ಸಾಕಷ್ಟು ಖ್ಯಾತಿ ನೀಡಿದವು. ನಂತರ ಚಿತ್ರ ನಿರ್ದೇಶನಕ್ಕೆ ಇಳಿದು ರಕ್ತ ಕಣ್ಣೀರು, ಸುಂಟರಗಾಳಿ, ಅನಾಥರು, ಶೌರ್ಯ ಮುಂತಾದ ಚಿತ್ರಗಳಿಗೆ ಆ್ಯಕ್ಸನ್ ಕಟ್ ಹೇಳಿದರು. ಸಾಧು ಕೋಕಿಲಾ ನಿರ್ದೇಶನದ ಎಲ್ಲ ಚಲನಚಿತ್ರಗಳು ಇಲ್ಲಿವೆ..
ಸಾಧು ಕೋಕಿಲಾ ನಿರ್ದೇಶನದ ಮೊದಲ ಚಿತ್ರ ತಮಿಳಿನ ರಿಮೇಕ್ ಆದ ರಕ್ತ ಕಣ್ಣೀರು. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾದ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿದ್ದರು. ಈ ಚಿತ್ರ ಅಭೂತಪೂರ್ವ ಯಶಸ್ಸನ್ನು ಕಂಡು 2003 ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರವಾಯಿತು.
ಶಿವರಾಜಕುಮಾರ್ ನಾಯಕನಾಗಿ ನಟಿಸಿದ ರಾಕ್ಷಸ ಚಿತ್ರವನ್ನು 2005 ರಲ್ಲಿ ನಿರ್ದೇಶನ ಮಾಡಿದರು. ಚಿತ್ರ ಬಾಕ್ಸಾಫೀಸಿನಲ್ಲಿ ಹಿಟ್ ಆಗುವುದರ ಜೊತೆಗೆ ಸಾಧು ಕೋಕಿಲಾರವರಿಗೆ ಕರ್ನಾಟಕ ರಾಜ್ಯ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ತಂದು ಕೊಟ್ಟಿತು.
2006 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಕ್ಷಿತಾ ಮುಖ್ಯ ಭೂಮಿಕೆಯಲ್ಲಿದ್ದ ಸುಂಟರಗಾಳಿ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರ ಕೂಡ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು. ಈ ಚಿತ್ರದಲ್ಲಿ ಜಿ.ಪಿ.ರಾಜರತ್ನಂರವರ `ನೀ ನನ್ನಟ್ಟಿ' ಹಾಡನ್ನು ಬಳಸಿಕೊಳ್ಳಲಾಗಿತ್ತು.