twitter
    X
    Home ಚಲನಚಿತ್ರಗಳ ಒಳನೋಟ

    ನೀವು ಮಿಸ್ ಮಾಡದೆ ನೋಡಲೇಬೇಕಾದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿದೇಶನದ ಈ ಸಿನಿಮಾಗಳಿವು!

    Author Sowmya Bairappa | Updated: Friday, December 1, 2023, 11:31 AM [IST]

    ಸಿನಿಮಾ ಕ್ಷೇತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಪಾತ್ರ ಅಪಾರ. ನಿರ್ದೇಶನದಲ್ಲಿ, ಕಥೆಯ ಆಯ್ಕೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಕೀರ್ತಿ ಪುಣ್ಣನವರದ್ದು. ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್. ಕನ್ನಡದಲ್ಲಿ ಅಮೋಘವಾದ ಸಿನಿಮಾಗಳನ್ನು ನೀಡಿ ಕನ್ನಡ ಸಿನಿಮಾಗಳನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಮಹಾನ್ ವ್ಯಕ್ತಿ. ತಮ್ಮ ವಿಭಿನ್ನ ಕಾದಂಬರಿ ಆಧಾರಿತ ಸಂದೇಶಭರಿತ ಚಿತ್ರಗಳಿಂದಲೇ ಪ್ರಸಿದ್ಧರಾಗಿರುವ ಇವರು ಕನ್ನಡ ಚಿತ್ರರಂಗದಲ್ಲಿ ಚಿತ್ರಬ್ರಹ್ಮನೆಂದೇ ಕರೆಸಿಕೊಳ್ಳುತ್ತಾರೆ. ಕನ್ನಡದಲ್ಲಿ ಸುಮಾರು 24 ಚಿತ್ರಗಳನ್ನು ನಿರ್ದೇಶಿಸಿರುವ ಇವರ ಚಿತ್ರಗಳನ್ನು ಕೇವಲ ಮಹಿಳಾ ಕೇಂದ್ರಿತ ಚಿತ್ರಗಳು ಎಂದು ಕೆಲವರು ಟೀಕಿಸಿದಾಗ ಸ್ವತಃ ಪುಟ್ಟಣ್ಣನವರೇ ಇದನ್ನು ಅಲ್ಲಗೆಳೆದಿದ್ದರು. ಇವರು ಚಿತ್ರಗಳು ಕಲಾತ್ಮಕ ಚಿತ್ರಗಳು ಮತ್ತು ಕಮರ್ಷಿಯಲ್ ಚಿತ್ರಗಳಿಗೆ ಸೇತುವೆಯಂತಿದ್ದವು. ಸಾಮಾಜಿಕ ಸಂದೇಶವನ್ನು ಪಾತ್ರಗಳ ಗಟ್ಟಿಯಾದ ಅಭಿನಯ, ಪರಿಣಾಮಕಾರಿ ದೃಶ್ಯಗಳ ಮೂಲಕ ತೋರಿಸುತ್ತಿದ್ದರು. ಪುಟ್ಟಣ್ಣರಿಗಿಂತ ಹಿರಿಯರಾದ ತಮಿಳಿನ ಪ್ರಸಿದ್ಧ ನಿರ್ದೇಶಕ ಕೆ.ಬಾಲಚಂದರ್ ಇವರನ್ನು ಗುರುಗಳೆಂದು ಪರಿಗಣಿಸುತ್ತಿದಿದ್ದು ಇವರ ಕ್ರಿಯಾತ್ಮಕತೆಗೆ ಹಿಡಿದ ಕನ್ನಡಿ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನೀವು ಮಿಸ್ ಮಾಡದೆ ನೋಡಬೇಕಾದ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image
    ಎಡಕಲ್ಲು ಗುಡ್ಡದ ಮೇಲೆ

    ಎಡಕಲ್ಲು ಗುಡ್ಡದ ಮೇಲೆ

    1

    ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಆರತಿ, ಜಯಂತಿ ಮತ್ತು ಚಂದ್ರಶೇಖರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಇದೇ ಹೆಸರಿನ ಭಾರತಿಸುತ ಆವರ ಕಾದಂಬರಿ ಆಧಾರಿತವಾಗಿದೆ. ಭಾರತಿಸುತರವರು ಒಂದು ಇಂಗ್ಲೀಷ್ ಕಾದಂಬರಿಯ ಆಧಾರದ ಮೇಲೆ ಇದನ್ನು ರಚಿಸಿದ್ದರು. ಒಬ್ಬ ಮಾಜಿ ಯೋಧ ಮತ್ತು ಅವನ ಪಕ್ಕದ ಮನೆಯವನ ಮೇಲೆ ಮೋಹಿತಳಾಗುವ ಯೋಧನ ಪತ್ನಿಯ ಕ್ಲಿಷ್ಟ ಕಥೆಯನ್ನು ಚಿತ್ರ ಹೊಂದಿತ್ತು. 

     

    ಧರ್ಮಸೆರೆ

    ಧರ್ಮಸೆರೆ

    2

    ಧರ್ಮಸೆರೆ ಚಿತ್ರದಲ್ಲಿ ಶ್ರೀನಾಥ್ ಮತ್ತು ಆರತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆರತಿ ನಾಯಕಿಯಾಗಿ ನಟಿಸುವುದರೊಂದಿಗೆ ಚಿತ್ರವನ್ನು ನಿರ್ಮಾಣ ಮಾಡಿದ್ದರು. ವಿಜಯ ನಾರಸಿಂಹ ಸಾಹಿತ್ಯದಲ್ಲಿ ಮೂಡಿಬಂದ ಗೀತೆಗಳಿಗೆ ಉಪೇಂದ್ರಕುಮಾರ್ ಸಂಗೀತ ನೀಡಿದ್ದರು. ಸತ್ಯಪ್ರಿಯಾ, ಸತ್ಯಭಾಮಾ, ಮುಸರಿ ಕೃಷ್ಣಮೂರ್ತಿ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.

     

    ರಂಗನಾಯಕಿ 1981

    ರಂಗನಾಯಕಿ 1981

    3

    ರಂಗನಾಯಕಿ ಚಿತ್ರದಲ್ಲಿ ಅರತಿ,ರಾಮಕೃಷ್ಣ, ಅಶೋಕ್ ಮತ್ತು ಅಂಬರೀಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅಶ್ವಥ್ ರವರ `ರಂಗನಾಯಕಿ' ಕಾದಂಬರಿ ಆಧಾರಿತವಾಗಿದೆ. ರಂಗಭೂಮಿಯಲ್ಲಿನ ಮುಖ್ಯ ಕಲಾವಿದೆಯ ಬದುಕಿನ ಕಥೆಯನ್ನು ಹೇಳಿತು. ಭಾರತೀಯ ಚಿತ್ರರಂಗದಲ್ಲಿ ಈಡಿಪಸ್ ಕಾಂಪ್ಲೆಕ್ಸ್ ನ ಮೇಲೆ ಬೆಳಕು ಚೆಲ್ಲಿದ ಚಿತ್ರವಿದು ಎಂದರೂ ತಪ್ಪಾಗಲಾರದು. ನಾಟಕ ರಂಗದಿಂದ ಚಲನಚಿತ್ರಗಳವರೆಗಿನ ರಂಗನಾಯಕಿಯ ಪಯಣ ಮತ್ತು ಅವಳ ಬಾಳಿನಲ್ಲಿ ಬರುವ ನಾಲ್ಕು ವ್ಯಕ್ತಿಗಳ ಕಥೆಯನ್ನು ಚಿತ್ರ ಹೇಳಿತ್ತು. 

    ಬೆಳ್ಳಿ ಮೋಡ

    ಬೆಳ್ಳಿ ಮೋಡ

    4

    ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ ಬೆಳ್ಳಿ ಮೋಡ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಮತ್ತು ಕಲ್ಪನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಇದೇ ಹೆಸರಿನ ತ್ರೀವೇಣೀಯವರ ಆವರ ಕಾದಂಬರಿ ಆಧಾರಿತವಾಗಿದೆ. ಇಂದಿರಾ (ಕಲ್ಪನಾ) ಬೆಳ್ಳಿಮೋಡ ಎಸ್ಟೇಟ್ ಮಾಲೀಕನ ಒಬ್ಬಳೇ ಮಗಳು. ಈ ಎಸ್ಟೇಟ್ ಆಸೆಗಾಗಿ ಅವಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮೋಹನ್ (ಕಲ್ಯಾಣ ಕುಮಾರ್) ಅಮೇರಿಕಾಗೆ ವಿಧ್ಯಾಭ್ಯಾಸಕ್ಕೆ ಹೋಗುತ್ತಾನೆ. ಅವನು ಮರಳಿ ಬಂದಾಗ ಇಂದಿರಾ ತಾಯಿ ತಂದೆಗೆ ಗಂಡು ಮಗುವೊಂದು ಹುಟ್ಟಿರುತ್ತದೆ. ಇನ್ನು ತನಗೆ ಆಸ್ತಿ ಸಿಗುವುದಿಲ್ಲವೆಂದರಿತ ಮೋಹನ್ ಇಂದಿರಾಳ ಜೊತೆಗಿನ ಮದುವೆಯನ್ನು ರದ್ದುಗೊಳಿಸುತ್ತಾನೆ. ಕೆಲ ದಿನಗಳ ನಂತರ ಮೋಹನ್ ಒಂದು ಬೆಟ್ಟದಿಂದ ಕೆಳಗೆ ಬಿದ್ದು ಗಾಯಗೊಳ್ಳುತ್ತಾನೆ. ಆಗ ಇಂದಿರಾಳೆ ಅವನನ್ನು ಆರೈಕೆ ಮಾಡುತ್ತಾಳೆ. ಈ ಸಮಯದಲ್ಲಿ ಮೋಹನ್ ಗೆ ಅವಳ ಮೇಲೆ ನಿಜವಾದ ಪ್ರೀತಿ ಮೂಡುತ್ತದೆ. ಇಂದಿರಾಳ ಮೇಲೆ ಪ್ರೀತಿ ಮೂಡಿ ಮದುವೆಯಾಗಲು ಮೋಹನ್ ಮರು ಪ್ರಸ್ತಾಪಿಸಿದಾಗ, ಈ ಮೊದಲು ಕೇವಲ ತನ್ನ ಆಸ್ತಿಗಾಗಿ ಹಂಬಲಿಸಿದ್ದ ಮೋಹನ್ ಅನ್ನು ಇಂದಿರಾ ತಿರಸ್ಕರಿಸುತ್ತಾಳೆ ಎಂಬುದು ಚಿತ್ರದ ಕಥೆ. 

     

    ಗೆಜ್ಜೆ ಪೂಜೆ

    ಗೆಜ್ಜೆ ಪೂಜೆ

    5

    ಎಂ.ಕೆ.ಇಂದಿರಾರವರ ಗೆಜ್ಜೆ ಪೂಜೆ ಕಾದಂಬರಿ ಆಧಾರಿತ ಈ ಚಿತ್ರವು ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ಕಲ್ಪನಾ, ಗಂಗಾಧರ್ ಮತ್ತು ಲೀಲಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ದೇವದಾಸಿ ಪದ್ಧತಿಯ ಅನಿಷ್ಟವನ್ನು ಈ ಚಿತ್ರ ಹೇಳುತ್ತದೆ. ಚಂದ್ರ ಎಂಬ ದೇವದಾಸಿಯ ಪುತ್ರಿ, ಉನ್ನತ ಶಿಕ್ಷಣ ಪಡೆದು ಈ ಪದ್ಧತಿಯ ಸಂಕೋಲೆಗೆ ಸಿಲುಕಬಾರದೆಂದು ಪ್ರಯತ್ನಿಸುತ್ತಾಳೆ. ಆದರೆ, ಅವಳು ಪ್ರೀತಿಸಿದವನು ಅವಳನ್ನು ಶಂಕಿಸಿ, ಬೇರೆಯವಳನ್ನು ಮದುವೆ ಆಗುತ್ತಾನೆ. ನಂತರ ಅನಿವಾರ್ಯವಾಗಿ ಗೆಜ್ಜೆ ಪೂಜೆ ಮಾಡಿ ದೇವದಾಸಿಯಾಗಲು ಮನಸ್ಸಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂಬುದು ಚಿತ್ರದ ಕಥೆ.  

     

    ಶರಪಂಜರ

    ಶರಪಂಜರ

    6

    ತ್ರಿವೇಣಿಯವರ ಶರಪಂಜರ ಕಾದಂಬರಿ ಆಧಾರಿತ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದರು. ಕಲ್ಪನಾ, ಗಂಗಾಧರ್, ಲೀಲಾವತಿ ಮತ್ತು ಕೆ.ಎಸ್.ಅಶ್ವಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ಈ ಚಿತ್ರ ಕರ್ನಾಟಕ ರಾಜ್ಯ ಪ್ರಶಸ್ತಿಯೊಂದಿಗೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆಯಿತು. ವೈವಾಹಿಕ ಸಂಬಂಧ, ಮತ್ತು ಅನೈತಿಕೆ ಮುಂತಾದ ವಿಷಯಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ.

     

    ನಾಗರಹಾವು

    ನಾಗರಹಾವು

    7

    ವಿಷ್ಣುವರ್ಧನ್ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನಾಗರಹಾವು ಚಿತ್ರ ತರಾಸುರವರ ಕಾದಂಬರಿ ಆಧಾರಿತವಾಗಿದೆ. ಒಬ್ಬ ಮುಂಗೋಪಿ ಯುವಕ ಮತ್ತು ಅವನನ್ನು ಮಾರ್ಗದರ್ಶನದ ಮೂಲಕ ತಿದ್ದಲೆತ್ನಿಸುವ ಮೇಷ್ಟ್ರ ಕಥೆಯನ್ನು ಚಿತ್ರ ಹೇಳುತ್ತದೆ. ಈ ಸಿನಿಮಾ ವಿಷ್ಣುವರ್ಧನ್ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ಈ ಸಿನಿಮಾದ ಹಾಡುಗಳು ಇಂದಿಗೂ ಪ್ರಸ್ತುತ. 

     

    ಕಥಾಸಂಗಮ 1976

    ಕಥಾಸಂಗಮ 1976

    8

    ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾಸಂಗಮ ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಮೊದಲ ಚಿತ್ರ ಮತ್ತು ಅವರ ಸಿನಿ ಬದುಕಿನ ಎರಡನೇ ಚಿತ್ರ. ಈ ಚಿತ್ರದಲ್ಲಿ ಪುಟ್ಟಣ್ಣನವರು ಒಂದು ಚಿತ್ರದಲ್ಲಿ ಮೂರು ಭಿನ್ನ ಉಪಕಥೆಗಳನ್ನು ಸೇರಿಸಿ ಚಿತ್ರ ಮಾಡಿದ್ದರು. ಭಾರತೀಯ ಚಿತ್ರರಂಗದಲ್ಲೇ ಇದೊಂದು ಅಭೂತಪೂರ್ವ ಪ್ರಯೋಗವಾಗಿತ್ತು. ಚಿತ್ರದಲ್ಲಿ ಕಲ್ಯಾಣ ಕುಮಾರ್, ಬಿ.ಸರೋಜಾದೇವಿ, ರಜಿನಿಕಾಂತ್, ಆರತಿ, ಗಂಗಾಧರ್ ಮತ್ತು ಲೀಲಾವಾತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರ ಹಂಗು, ಅತಿಥಿ ಮತ್ತು ಮುನಿತಾಯಿ ಎಂಬು ಮೂರು ಕಥಾಸರಣಿ ಹೊಂದಿತ್ತು. ಚಿತ್ರದಲ್ಲಿ ರಜನಿಕಾಂತ್ ಮುನಿತಾಯಿ ಕಥಾಭಾಗದಲ್ಲಿ ನಟಿಸಿದ್ದರು.

     

    ಅಮೃತ ಘಳಿಗೆ

    ಅಮೃತ ಘಳಿಗೆ

    9

    1984ರಲ್ಲಿ ಬಿಡುಗಡೆಯಾದ ಅಮೃತ ಘಳಿಗೆ ಎಂಬ ರೋಮ್ಯಾಂಟಿಕ್ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು. ಇದು ದೊಡ್ಡೇರಿ ವೆಂಕಟಗಿರಿ ರಾವ್ ಅವರ ಅವಧಾನ ಕಾದಂಬರಿಯನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಮಕೃಷ್ಣ, ಪದ್ಮಾ ವಾಸಂತಿ ಮತ್ತು ಶ್ರೀಧರ್ ನಟಿಸಿದ್ದಾರೆ. ಈ ಸಿನಿಮಾ ಹದಿಹರೆಯದ ಗರ್ಭಧಾರಣೆಯ ಕಾರಣ ಮತ್ತು ಪರಿಣಾಮಗಳ ಕುರಿತು ತಿಳಿಸುತ್ತದೆ.  ಬಡ ಹಿನ್ನೆಲೆಯಿಂದ ಬಂದ ಹುಡುಗಿ (ಪದ್ಮವಾಸಂತಿ) ಒಬ್ಬ ಶ್ರೀಮಂತ ಯುವಕನನ್ನು (ರಾಮಕೃಷ್ಣ) ಪ್ರೀತಿಸುತ್ತಾಳೆ. ಯುವಕ ಆಕೆಯನ್ನು ಗರ್ಭಾವತಿಯನ್ನಾಗಿ ಮಾಡಿ, ಅರ್ಧದಲ್ಲಿ  ಕೈ ಬಿಡುತ್ತಾನೆ. ಈ ವೇಳೆ ಆ ಹುಡುಗಿಯ ಸಹಪಾಠಿಯೊಬ್ಬ ಆಕೆಯನ್ನು ಮದುವೆಯಾಗಲು ಹಾಗೂ ಅವಳ ಮಗುವಿಗೆ ತಂದೆಯಾಗಲು ಮುಂದೆ ಬರತ್ತಾನೆ. ದುರದೃಷ್ಟವಶಾತ್, ಸಹಪಾಠಿ ಇದೇ ವೇಳೆ ಅನಾರೋಗ್ಯದಿಂದ ಸಾಯುತ್ತಾನೆ. ಈ ಸಮಯದಲ್ಲಿ ಹುಡುಗಿಗೆ ಕೈಕೊಟ್ಟು ಹೋಗಿದ್ದ ಯುವಕ ಅನಿರೀಕ್ಷಿತವಾಗಿ ತನ್ನ ಮಗನನ್ನು ಭೇಟಿಯಾಗುತ್ತಾನೆ. ಕೊನೆಗೆ ಯುವಕ ನಾಯಕಿಯನ್ನು ಒಪ್ಪಿಕೊಳ್ಳುತ್ತಾನೆ. ಇದು ಚಿತ್ರದ ಕಥೆ. ಈ ಚಿತ್ರವು ತುಂಬಾ ಒಳ್ಳೆಯ ಹಾಡುಗಳು ಮತ್ತು ಉತ್ತಮ ಸಾಹಿತ್ಯವನ್ನು ಹೊಂದಿದೆ. 

    ಶುಭಮಂಗಳ 1975

    ಶುಭಮಂಗಳ 1975

    10

    ವಾಣಿಯವರ ಶುಭಮಂಗಳ ಕಾದಂಬರಿ ಆಧಾರಿತ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದರು. ಶ್ರೀನಾಥ್, ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಅಂಬರೀಶ್, ಶಿವರಾಮ್, ಕೆ.ಎಸ್.ಅಶ್ವಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿಯೇ ಆರತಿ ಮತ್ತು ಪುಟ್ಟಣ್ಣ ನಡುವೆ ಪ್ರೀತಿ ಮೂಡಿ ಮುಂದೆ ಮದುವೆಯಾದರು. ಈ ಚಿತ್ರದ ಸಂಭಾಷಣೆ ಖ್ಯಾತ ಹಾಸ್ಯ ಲೇಖಕ ಬೀಚಿ ಬರೆದಿದ್ದರು. 

    ಮಾನಸ ಸರೋವರ

    ಮಾನಸ ಸರೋವರ

    11

    ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿರುವ ಮಾನಸ ಸರೋವರ ಚಿತ್ರದಲ್ಲಿ ಶ್ರೀನಾಥ್, ಪದ್ಮಾವಾಸಂತಿ ಮತ್ತು ರಾಮಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕಥೆ, ಸಂಭಾಷಣೆ ಬರೆಯುವುದರೊಂದಿಗೆ ಚಿತ್ರದ ಸಹ ನಿರ್ಮಾಣ ಕೂಡ ಮಾಡಿದ್ದರು. ಕೆಲವು ಊಹೆಗಳ ಪ್ರಕಾರ ಪುಟ್ಟಣ್ಣ ಈ ಚಿತ್ರದಲ್ಲಿ ತಮ್ಮ ಮತ್ತು ಆರತಿ ದಾಂಪತ್ಯದ ಸಾಂಕೇತಿಕವಾಗಿ ಚಿತ್ರಿಸಿದ್ದಾರೆ. 2018ರಲ್ಲಿ ಉದಯ ಟಿವಿಯಲ್ಲಿ ಈ ಚಿತ್ರದ ಮುಂದುವರೆದ ಭಾಗವಾಗಿ `ಮಾನಸ ಸರೋವರ' ಧಾರಾವಾಹಿ ಮೂಡಿಬಂದಿದೆ.

    ಸಾಕ್ಷಾತ್ಕಾರ

    ಸಾಕ್ಷಾತ್ಕಾರ

    12

    ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿರುವ ಸಾಕ್ಷಾತ್ಕಾರ ಚಿತ್ರದಲ್ಲಿ ಡಾ.ರಾಜಕುಮಾರ್ ಮತ್ತು ಜಮುನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನ ಪ್ರಪ್ರಥಮ ಚಲನಚಿತ್ರ ನಾಯಕನೆಂದೇ ಪ್ರಸಿದ್ಧಿ ಪಡೆದಿರುವ ಪೃಥ್ವಿರಾಜ್ ಕಪೂರ್, ರಾಜ್ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಕುಣಿಗಲ್ ಪ್ರಭಾಕರ್ ರಾವ್ ಚಿತ್ರದ ಕಥೆ, ಸಂಭಾಷಣೆ ಮತ್ತು ಚಿತ್ರಕತೆ ಬರೆದಿದ್ದಾರೆ. 

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X