ಬಾಗಲಕೋಟೆ ಕೆರಕಲಮಟ್ಟಿಯಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು

'ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮದ ಬಗ್ಗೆ ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಸ್ಪಂದಿಸಿದ್ದರು. ಈ ಶೋದಿಂದಾಗಿ ಶಿವಮೊಗ್ಗ ಜಿಲ್ಲೆಯ ಕುಗ್ರಾಮ ಪುರದಾಳು ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಅಕುಲ್ ಬಾಲಜಿ ಅವರನ್ನು ಬಿಗ್ ಕನ್ನಡ ಟೆಲಿವಿಷನ್ ಅವಾರ್ಡ್ ಸಂಸ್ಥೆ ಉತ್ತಮ ನಿರೂಪಕ ಎಂದು ಗುರುತಿಸಿದೆ. ಈಗ ಭಾಗ 2ಕ್ಕೂ ಅಕುಲ್ ಬಾಲಾಜಿ ಅವರೇ ನಿರೂಪಕರು.
ಈ ಕಾರ್ಯಕ್ರಮದಲ್ಲಿ 12 ಮಂದಿ ಪೇಟೆ ಹುಡ್ಗೀರು ಭಾಗವಹಿಸಲಿದ್ದಾರೆ. ಈ ಬಾರಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೋಳದ ರೊಟ್ಟಿ, ತಲೆಗೆ ರುಮಾಲು, ವಾಡೆಯ ಪ್ರತಿಷ್ಠೆಯ ಹಳ್ಳಿ. ಅಪ್ಪಟ ಗ್ರಾಮೀಣ ಭಾಗ. ಉತ್ತರ ಕರ್ನಾಟಕದ ಅಪ್ಪಟ ಮಣ್ಣಿನಲ್ಲಿ 12 ಮಂದಿ ಪ್ಯಾಟೆ ಹುಡ್ಗೀರು 65 ದಿನಗಳ ಕಾಲ ಹೊಂದಿಕೊಂಡು ಇರಬೇಕಾಗುತ್ತದೆ.
ಈ ಕಾರ್ಯಕ್ರಮ ಜನರಂಜನೀಯವಾಗಿ ಆರು ಕೋಟಿ ಕನ್ನಡಿಗರ ನಿರೀಕ್ಷೆ ಸುಳ್ಳಾಗದಂತೆ ಸೀಸನ್ 2 ಮೂಡಿಬರಲಿದೆ ಎಂದಿದ್ದಾರೆ ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನೂಪ್ ಚಂದ್ರಶೇಖರ್. ಈ ಕಾರ್ಯಕ್ರಮದ ಮೂಲಕ ಉತ್ತರ ಕರ್ನಾಟಕದ ಭಾಷೆ, ಹಳ್ಳಿಯ ಸೊಗಡು, ಜನಪದ ಸಂಸ್ಕೃತಿಯನ್ನು ಪ್ರೇಕ್ಷಕರ ಮುಂದೆ ತರುವುದೇ ನಮ್ಮ ಉದ್ದೇಶ ಎಂದಿದ್ದಾರೆ ನಾನ್ ಫಿಕ್ಷನ್ ಹೆಡ್ ರಾಘವೇಂದ್ರ ಹುಣಸೂರು.


Click it and Unblock the Notifications











