ನ.8ರಿಂದ ಸುವರ್ಣದಲ್ಲಿ ಪ್ಯಾಟೆ ಮಂದಿ ಕಾಡಿಗ್ ಬಂದ್ರು
ಈಗಾಗಲೆ ತನ್ನ ವೈವಿಧ್ಯಮಯ ರಿಯಾಲಿಟಿ ಶೋಗಳಿಗೆ ಹೆಸರಾಗಿರುವ ಸುವರ್ಣ ವಾಹಿನಿಯಲ್ಲಿ ಮತ್ತೊಂದು ವಿನೂತನ ರಿಯಾಲಿಟಿ ಶೋ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ನವೆಂಬರ್ 8ರಿಂದ ಪ್ರಸಾರವಾಗಲಿದೆ. ಈ ರಿಯಾಲಿಟಿ ಶೋ ನವೆಂಬರ್ 8ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 8 ರಿಂದ 9 ಗಂಟೆಗೆ ನಡೆಯಲಿದೆ.
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಮತ್ತು 'ಹಳ್ಳಿ ಹೈದ ಪ್ಯಾಟೆಗೆ ಬಂದ' ಭರ್ಜರಿ ಯಶಸ್ಸಿನ ನಂತರ ಅದೇ ಮಾದರಿಯ ಮೂರನೇ ರಿಯಾಲಿಟಿ ಶೋ ಇದಾಗಿದೆ. ಪೇಟೆಯ ಯುವಕ ಯುವತಿಯರು ದಟ್ಟ ಕಾಡಿನ ಮಧ್ಯೆ ಜೀವನ ನಡೆಸುತ್ತಾ ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವುದೇ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಕಾರ್ಯಕ್ರಮದ ತಿರುಳು.
ನಟ ಹಾಗೂ ನೃತ್ಯ ಪಟು ಅಕುಲ್ ಬಾಲಾಜಿ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಹಾಗೂ 'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಅದೇ ಸಂತಸದಲ್ಲಿ ಮೂರನೇ ರಿಯಾಲಿಟಿ ಶೋ ನಡೆಸುತ್ತಿರುವುದಾಗಿ ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನೂಪ್ ಚಂದ್ರಶೇಖರ್ ತಿಳಿಸಿದ್ದಾರೆ.
ನಗರದ ಐಶಾರಾಮಿ ಜೀವನದಲ್ಲಿ ಬೆಳೆದ ಯುವಕ ಯುವತಿಯರು ಕಾಡಿನ ಅನಿವಾರ್ಯ ಪರಿಸ್ಥಿತಿಗಳಿಗೆ ಹೇಗೆ ಸ್ಪಂದಿಸುತ್ತಾರೆ ಹಾಗೂ ಅಲ್ಲಿನ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಿ ಜೀವ ಸಾಗಿಸುತ್ತಾರೆ. ಈ ಒಂದು ಕಾನ್ಸೆಪ್ಟ್ ಇಟ್ಟುಕೊಂಡು ಈ ಕಾರ್ಯಕ್ರಮವನ್ನು ರೂಪಿಸಿರುವುದಾಗಿ ಸುವರ್ಣ ವಾಹಿನಿಯ ಫಿಕ್ಷನ್ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.


Click it and Unblock the Notifications











